ಗುಬ್ಬಿ | ಎಸ್ ಟಿ ಪಟ್ಟಿಗೆ ಅನ್ಯ ಜಾತಿ ಸೇರ್ಪಡೆ ವಿರೋಧಿಸಿ ವಾಲ್ಮೀಕಿ ಸಮಾಜದಿಂದ ಪ್ರತಿಭಟನೆ

Date:

Advertisements

 ಪರಿಶಿಷ್ಟ ಪಂಗಡದ ನಾಯಕ ತಳವಾರ ಹೆಸರಿನಲ್ಲಿ ಪ್ರವರ್ಗ 1 ರಲ್ಲಿ ಬೇರೆ ಸಮುದಾಯದವರು ಎಸ್ಟಿ ಜಾತಿ ಪ್ರಮಾಣ ಪತ್ರ ಮತ್ತು ಸಿಂಧುತ್ವ ಪ್ರಮಾಣ ಪತ್ರ ಪಡೆಯುತ್ತಿರುವ ಬಗ್ಗೆ ಹಾಗೂ ಅನ್ಯ ಜಾತಿಗಳನ್ನು ಎಸ್ಟಿ ಪಟ್ಟಿಗೆ ಸೇರ್ಪಡೆ ಮಾಡಲು ಮುಂದಾದ ಸರ್ಕಾರ ನಿಲುವು ಸರಿಯಲ್ಲ ಎಂದು ವಿರೋಧಿಸಿ ತಾಲ್ಲೂಕು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿದರು.

ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಬಂದ ವಾಲ್ಮೀಕಿ ಸಮಾಜದ ಬಂಧುಗಳು ಬುಡಕಟ್ಟಿನ ಪರ್ಯಾಯ ಹೆಸರುಗಳಾದ ಪರಿವಾರ, ತಳವಾರ ಬುಡಕಟ್ಟುಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ. ಆದರೆ ಉತ್ತರ ಕರ್ನಾಟಕದ ಹಲವು ಜಿಲ್ಲೆಯ ಹಿಂದುಳಿದ ವರ್ಗಗಳ ಬೆಸ್ತ, ಅಂಬಿಗ, ಕಬ್ಬಲಿಗ, ಕಬ್ಬೇರ, ಕೊಲಿ ಮುಂತಾದ ಜಾತಿಗಳನ್ನು ನಾಯಕ ತಳವಾರ ಹೆಸರಿನಲ್ಲಿ 2 ಲಕ್ಷಕ್ಕೂ ಅಧಿಕ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ್ದು ಸರ್ಕಾರದ ಸವಲತ್ತು ಪಡೆದಿದ್ದಾರೆ. ಈ ವಾಮಮಾರ್ಗದ ಬಗ್ಗೆ ಸರ್ಕಾರದ ಗಮನಕ್ಕೆ ತಂದರೂ ಹಗಲು ದರೋಡೆಗೆ ಕಡಿವಾಣ ಹಾಕಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಕಾರ್ಯದರ್ಶಿ ಎಚ್.ಆರ್.ರಾಮಚಂದ್ರಪ್ಪ ಮಾತನಾಡಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದ ಬಗ್ಗೆ ನ್ಯಾಯಾಲಯ ಮೆಟ್ಟಿಲೇರಿ ಕ್ರಮ ಕೈಗೊಂಡ ಬಗ್ಗೆ ಆದೇಶ ನೀಡಿದ್ದರೂ ಒಂದು ವರ್ಷ ಕಳೆದರೂ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ವಾಲ್ಮೀಕಿ ಸಮಾಜ ಖಂಡಿಸುತ್ತದೆ. ಈಗಾಗಲೇ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬ ರೀತಿ ಮೀಸಲಾತಿ ಪಡೆದ ಎಸ್ಟಿ ಪಟ್ಟಿಗೆ ಹಲವು ಜಾತಿಗಳನ್ನು ಸೇರಿಸಲು ಮುಂದಾಗಿರುವುದು ವಿಷಾದನೀಯ. ಬಲಾಢ್ಯ ಸಮುದಾಯಗಳು ನಮ್ಮ ಮೀಸಲಾತಿಗೆ ಬಂದರೆ ವಾಲ್ಮೀಕಿ ಸಮಾಜ ಎಲ್ಲಾ ಸವಲತ್ತುಗಳಿಂದ ವಂಚಿತವಾಗುತ್ತದೆ. ರಾಜ್ಯದಲ್ಲಿ ನಮ್ಮ ಸಮಾಜದ ಮೇಲೆ ದೌರ್ಜನ್ಯ ನಿರಂತರ ನಡೆದಿದೆ. ಈ ಬಗ್ಗೆ ಸರ್ಕಾರ ಗಂಭೀರ ಕಾನೂನು ಕ್ರಮ ಕೈಗೊಳ್ಳಬೇಕು. ಬ್ಯಾಕ್ ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿ ಎಸ್ಟಿ ಜನಾಂಗದ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ಜಿ.ಎನ್.ಅಣ್ಣಪ್ಪಸ್ವಾಮಿ ಮಾತನಾಡಿ ಪರಿಶಿಷ್ಟ ಪಂಗಡಕ್ಕೆ ಅನ್ಯ ಜಾತಿಗಳನ್ನು ಸೇರಿಸಿ ನಮ್ಮ ಹಕ್ಕು ಕಿತ್ತುಕೊಳ್ಳುವ ಪ್ರಯತ್ನ ನಡೆದಿದೆ. ಅಂಬೇಡ್ಕರ್ ಅವರ ಸಂವಿಧಾನ ಪ್ರಕಾರ ಪರಿಶಿಷ್ಟ ಪಂಗಡಕ್ಕೆ ಸೇರುವ ಸವಲತ್ತು ಬೇರೆ ಬಲಾಢ್ಯ ಜಾತಿಗೆ ನೀಡಿದರೆ ನಮಗೆ ಅನ್ಯಾಯ ಆಗುತ್ತದೆ. ತಟ್ಟೆಯ ಮುಂದೆ ಕುಳ್ಳಿರಿಸಿ ಊಟ ಬಡಿಸಿ ನಂತರ ತಟ್ಟೆ ಕಿತ್ತುಕೊಳ್ಳುವ ಪ್ರವೃತ್ತಿ ಸರಿಯಲ್ಲ. ನಮಗೆ ಸಿಗುವ ಅಲ್ಪ ಮೀಸಲಾತಿಯಲ್ಲಿ ಬೇರೆಯವರಿಗೂ ನೀಡಿದರೆ ಯಾರೂ ಬದುಕಲು ಸಾಧ್ಯವಿಲ್ಲ. ಅನ್ಯ ಜಾತಿಗಳನ್ನು ಎಸ್ಟಿ ಪಟ್ಟಿಗೆ ಸೇರಿಸಬಾರದು. ಈ ಕಾರ್ಯಕ್ಕೆ ವಾಲ್ಮೀಕಿ ಸಮಾಜದ ವಿರೋಧವಿದೆ. ಎಸ್ಟಿ ಜಾತಿ ಪ್ರಮಾಣ ಪತ್ರ ಹಾಗೂ ಸಿಂಧುತ್ವ ಪ್ರಮಾಣ ಪತ್ರವನ್ನು ಬೇರೆ ಜಾತಿಗಳಿಗೆ ನೀಡಿರುವ ಪ್ರಕರಣ ತನಿಖೆಗೆ ಒಳಪಡಿಸಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ರಾಜ್ಯದ ವಿವಿಧ ಭಾಗದಲ್ಲಿ ಅಪೂರ್ಣಗೊಂಡ ವಾಲ್ಮೀಕಿ ಭವನ ನಿರ್ಮಾಣ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ತಾಪಂ ಮಾಜಿ ಸದಸ್ಯ ಪುಟ್ಟರಾಜು ಮಾತನಾಡಿ ಒಂದು ಕೆಜಿ ಅಕ್ಕಿಯಲ್ಲಿ ಹತ್ತು ಜನ ಊಟ ಮಾಡಲು ಸಾಧ್ಯವಾದ ವಿಚಾರ. ಆದರೆ ಸರ್ಕಾರ ಒಂದು ಕೆಜಿ ಅಕ್ಕಿಗೆ ನೂರು ಜನರನ್ನು ಹಂಚಲು ಹೊರಟಿದೆ. ಇದರಲ್ಲಿ ನ್ಯಾಯ ಇಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಹಾಗಾಗಿ ಎಸ್ಟಿ ಪಟ್ಟಿಗೆ ಬೇರೆ ಯಾವ ಜಾರಿಯನ್ನು ಸೇರಿಸುವುದು ಸರಿಯಲ್ಲ. ಸಂವಿಧಾನ ವಿರುದ್ಧವಾಗಿ ಪರಿಶಿಷ್ಟ ಪಂಗಡಕ್ಕೆ ಯಾವ ಜಾತಿಯನ್ನು ಸೇರಿಸುವ ಸರ್ಕಾರದ ಕ್ರಮವನ್ನು ವಾಲ್ಮೀಕಿ ಸಮಾಜ ಖಂಡಿಸುತ್ತದೆ ಎಂದರು.

ಮುಖಂಡ ಮಂಚಲದೊರೆ ರಮೇಶ್ ಮಾತನಾಡಿ ಸಂವಿಧಾನ ಪ್ರಕಾರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ವಾಲ್ಮೀಕಿ ಸಮಾಜವನ್ನು ಮುಖ್ಯವಾಹಿನಿಗೆ ತರಲು ಅವಶ್ಯ ಮೀಸಲಾತಿಯನ್ನು ಮತ್ತಷ್ಟು ಜಾತಿಗೆ ಹಂಚುವ ಕೆಲಸ ಮಾಡಲು ಮುಂದಾಗುವುದು ಸರಿಯಲ್ಲ. ನಮ್ಮ ಸಮಾಜ ಇಂದಿಗೂ ಸಾಮಾಜಿಕ ಗಟ್ಟಿತನ ಕಂಡಿಲ್ಲ. ನಮ್ಮ ಪಾಲನ್ನು ಬೇರೆ ಜಾತಿಗೆ ಹಂಚುವುದು ಹಾಗೂ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ಬೇರೆ ಸಮುದಾಯಕ್ಕೆ ನೀಡುವುದು ಸರಿಯಲ್ಲ ಎಂದರು.

ಇದೇ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ ಶಶಿಕಲಾ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸಂಘದ ಅಧ್ಯಕ್ಷ ಜಿ.ಎನ್. ಅಡವೀಶಯ್ಯ, ಗೌರವಾಧ್ಯಕ್ಷ ಎ.ನರಸಿಂಹಮೂರ್ತಿ, ಸದಸ್ಯರಾದ ನಿಟ್ಟೂರು ಕೃಷ್ಣಮೂರ್ತಿ, ಜಿ.ಎಲ್.ರಂಗನಾಥ್, ಚೇತನ್ ನಾಯಕ್, ಹೇರೂರು ನಾಗರಾಜು, ಹೊಸಹಳ್ಳಿ ರಂಗನಾಥ್, ಸಿದ್ದರಾಜು, ಸೋಮಲಾಪುರ ಕೃಷ್ಣಮೂರ್ತಿ, ರಾಘವೇಂದ್ರ, ಜಿ.ಆರ್.ರವೀಶ್, ದೇವರಾಜ್, ಕರಿಯಪ್ಪ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

Download Eedina App Android / iOS

X