ಹಿರಿಯ ಪತ್ರಕರ್ತ ಪರಂಜಯ್ ಗುಹಾ ಠಾಕೂರ್ತಾ ಅವರು ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (ಎಇಎಲ್) ಬಗ್ಗೆ ವರದಿ ಮಾಡುವುದನ್ನು ತಡೆಯುವ ಎಕ್ಸ್-ಪಾರ್ಟೆ ಗ್ಯಾಗ್ ಆದೇಶವನ್ನು ಪಾಲಿಸಲು ಬಾಧ್ಯರಲ್ಲ ಎಂದು ದೆಹಲಿ ನ್ಯಾಯಾಲಯ ಗುರುವಾರ ಹೇಳಿದೆ.
ಹಿರಿಯ ಸಿವಿಲ್ ನ್ಯಾಯಾಧೀಶರು ಅವರ ಅರ್ಜಿಯನ್ನು ಆಲಿಸಿ ಹೊಸ ಆದೇಶವನ್ನು ಹೊರಡಿಸುವವರೆಗೆ ಠಾಕೂರ್ತಾ ಅವರು ಗ್ಯಾಗ್ ಆದೇಶವನ್ನು ಪಾಲಿಸಬೇಕಾಗಿಲ್ಲ ಎಂದು ಜಿಲ್ಲಾ ನ್ಯಾಯಾಧೀಶ ಸುನಿಲ್ ಚೌಧರಿ ಹೇಳಿದ್ದಾರೆ. ಈ ಮೂಲಕ ಅದಾನಿ ಬಗ್ಗೆ ವರದಿ ಮಾಡುವುದನ್ನು ನಿರ್ಬಂಧಿಸಿ ಸಿವಿಲ್ ನ್ಯಾಯಾಲಯ ವಿಧಿಸಿದ್ದ ನಿಷೇಧ ಆದೇಶವನ್ನು ದೆಹಲಿ ನ್ಯಾಯಾಲಯ ಗುರುವಾರ ತೆಗೆದುಹಾಕಿದೆ.
ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯವು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಮೇಲ್ಮನವಿದಾರ ಪರಂಜಯ್ ಗುಹಾ ಠಾಕೂರ್ತಾ ಮತ್ತು ಇತರ ಪ್ರತಿವಾದಿಗಳ ವಿಚಾರಣೆ ನಡೆಸುವಂತೆ ನಿರ್ದೇಶಿಸಲಾಗಿದೆ.
ಸೆಪ್ಟೆಂಬರ್ 6 ರಂದು ಸಿವಿಲ್ ನ್ಯಾಯಾಲಯವು ವಿಧಿಸಿದ ಗ್ಯಾಗ್ ಆದೇಶದಲ್ಲಿ ಠಾಕೂರ್ತಾ ಅವರು ಅದಾನಿ ಬಗ್ಗೆ ವರದಿ ಪ್ರಕಟಿಸದಂತೆ ನಿರ್ಬಂಧಿಸಿತ್ತು. ಇದನ್ನು ಪ್ರಶ್ನಿಸಿ ಠಾಕೂರ್ತಾ ಅವರು ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾಯಾಲಯದ ತಡೆಯಾಜ್ಞೆಯ ಮೇರೆಗೆ ಮಾನಹಾನಿಕರ ವಿಷಯವನ್ನು ತೆಗೆದುಹಾಕುವ ಕೇಂದ್ರ ಸರ್ಕಾರದ ಆದೇಶಗಳನ್ನು ನ್ಯೂಸ್ ಲಾಂಡ್ರಿ ಮತ್ತು ಪತ್ರಕರ್ತ ರವೀಶ್ ಕುಮಾರ್ ಕೂಡ ಪ್ರಶ್ನಿಸಿದ್ದಾರೆ.