ನಿರಂತರ ಮಳೆ ಹಾಗೂ ಪ್ರವಾಹದಿಂದ ರೈತರು ಬೆಳೆದಿದ್ದ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಮಂತ್ರಿ ಚೆಲುವರಾಯಸ್ವಾಮಿ ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಜಿಲ್ಲೆಯ ಅತಿವೃಷ್ಟಿ ಹಾನಿ ವೀಕ್ಷಿಸಲು ಧಾವಿಸಬೇಕೆಂದು ಬಸವಕಲ್ಯಾಣ ಶಾಸಕ ಶರಣು ಸಲಗರ ಮನವಿ ಮಾಡಿದರು.
ಮಳೆಯಿಂದ ಹಾನಿಗೊಳಗಾಗಿದ್ದ ಹುಲಸೂರ, ಅಂಬೆವಾಡಿ, ಸೊಲದಾಬಕಾ, ಗೋವರ್ಧನ ತಾಂಡಾ ಮತ್ತು ಅಂತರಭಾರತಿ ತಾಂಡಾ ಗ್ರಾಮದ ರೈತರ ಜಮೀನುಗಳಿಗೆ ಗುರುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ವೀಕ್ಷಿಸಿ ಅವರು ಮಾತನಾಡಿದರು.
ʼಕಳೆದ ಮೇ ತಿಂಗಳಿಂದ ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿದೆ. ಬಸವಕಲ್ಯಾಣ ಮತಕ್ಷೇತ್ರದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಉದ್ದು, ಹೆಸರು, ತೊಗರಿ, ಹತ್ತಿ ಸೋಯಾಅವರೆ ಸೇರಿದಂತೆ ವಿವಿಧ ಬೆಳೆ ಸಂಪೂರ್ಣ ಹಾಳಾಗಿದೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಚಿಂತೆಗೀಡಾಗಿದ್ದಾರೆ. ಸರ್ಕಾರ, ಈ ಪ್ರದೇಶವನ್ನು ಅತಿವೃಷ್ಟಿ ಪೀಡಿತ ಎಂದು ಘೋಷಿಸಬೇಕು. ಪ್ರತಿ ಎಕರೆಗೆ ₹25 ಸಾವಿರ ರೈತರಿಗೆ ಪರಿಹಾರ ನೀಡಬೇಕುʼ ಎಂದು ಮನವಿ ಮಾಡಿದರು.
ʼನಮ್ಮ ಭಾಗದ ರೈತರು ಅತಿವೃಷ್ಟಿ-ಅನಾವೃಷ್ಟಿಗೆ ಸಿಲುಕಿ ಸದಾ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಭಾರಿಯೂ ಅತಿವೃಷ್ಟಿಯಿಂದ ರೈತ ಮತ್ತೆ ಕಂಗಲಾಗಿದ್ದಾನೆ. ಮುಖ್ಯಮಂತ್ರಿಗಳು, ಸಚಿವರು ಕೇವಲ ಬೆಂಗಳೂರು ವ್ಯಾಪ್ತಿಗೆ ಸೀಮಿತರಾಗದೆ ನಮ್ಮ ಭಾಗದಲ್ಲಿ ಅತಿವೃಷ್ಟಿಯಿಂದ ಆಗಿರುವ ಬೆಳೆ ಹಾನಿ, ರೈತರ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿ ರೈತರಿಗೆ ಆತ್ಮಸ್ಥೈರ್ಯ ತುಂಬಿ, ಸೂಕ್ತ ಪರಿಹಾರ ಘೋಷಿಸಬೇಕುʼ ಎಂದು ವಿನಂತಿಸಿದರು.
ಇದೇ ಸಂದರ್ಭದಲ್ಲಿ ಮಳೆ, ಚರಂಡಿ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿ ಹಾನಿಯುಂಟಾದ ಮನೆಗಳಿಗೆ ಭೇಟಿ ನೀಡಿದ ಶಾಸಕರು ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸಲು ಮತ್ತು ಪುನರ್ವಸತಿ ಕಾರ್ಯಕ್ಕೆ ಆದ್ಯತೆ ನೀಡಲು ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು. ಜತೆಗೆ ಗ್ರಾಮದ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ಮತ್ತು ಭವಿಷ್ಯದಲ್ಲಿ ಪ್ರವಾಹದ ತಡೆಗಟ್ಟುವ ಕ್ರಮಗಳ ಕುರಿತು ಚರ್ಚೆ ನಡೆಸಿದರು.

ಇದನ್ನೂ ಓದಿ : ಯಾದಗಿರಿ | ಕೊಡಲಿಯಿಂದ ಕೊಚ್ಚಿ ಇಬ್ಬರು ಮಕ್ಕಳನ್ನು ಕೊಲೆಗೈದ ತಂದೆ!
ಹುಲಸೂರ ತಾ.ಪಂ ಇಒ ಮಹಾದೇವ ಜಮ್ಮು, ಪಿಡಿಒ ರಮೇಶ ಮಿಲಿಂದಕರ, ಕಂದಾಯ ನಿರೀಕ್ಷಕ ನಾಗರಾಜ, ಸೇರಿದಂತೆ ಅಶೋಕ ವಕಾರೆ, ಓಂಕಾರ ಪಟ್ನೆ, ಸುಧೀರ ಕಾಡಾದಿ, ಗೋವಿಂದರಾವ ಸೋಮವಂಶಿ, ಸೋಮನಾಥ ನಂದಗೆ, ರಣಜೀತ ಗಾಯಕವಾಡ, ರಾಮ ಸಾಯಗಾಂವೆ, ರೂಪಾತಾಯಿ ಜಾಧವ, ರಮೇಶ ಧಬಾಲೆ, ಅರವಿಂದ ಹರಿಪಲ್ಲೆ, ಜಗದೀಶ ದೆಟ್ನೆ, ಚಂದ್ರಕಾಂತ ದೆಟ್ನೆ, ದೇವಿಂದ್ರ ಭೋಪಳೆ ರೈತರು ಇದ್ದರು.