ಸಹಕಾರ ಸಚಿವರಾಗಿದ್ದ ಕೆ ಎನ್ ರಾಜಣ್ಣರನ್ನು ಸಂಪುಟದಿಂದ ಕೈಬಿಟ್ಟ ಬಳಿಕ ಮತ್ತೋರ್ವ ಹಿರಿಯ ಕಾಂಗ್ರೆಸ್ ಶಾಸಕನಿಗೆ ಹೈಕಮಂಡ್ ಶಾಕ್ ನೀಡಿದೆ. ಪಕ್ಷ ವಿರೋಧಿ ಹಾಗೂ ಸರ್ಕಾರಕ್ಕೆ ಮುಜುಗರ ಉಂಟು ಮಾಡುವಂತಹ ಹೇಳಿಕೆ ನೀಡಿದ್ದ ಕಾಗವಾಡ ಶಾಸಕ ರಾಜು ಕಾಗೆ ಅವರನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಡಬ್ಲ್ಯೂಸಿ ಸಭೆಗೆಂದು ಬಿಹಾರ್ ತೆರಳಿದ ಸಂದರ್ಭದಲ್ಲೇ ರಾಜ್ಯದ ಒಟ್ಟು 39 ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರ ನೇಮಕ ಪಟ್ಟಿಯನ್ನು ಎಐಸಿಸಿ ಬಿಡುಗಡೆ ಮಾಡಿತ್ತು.
ಈ ಪಟ್ಟಿಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಅರುಣ್ ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ. ಇದರಿಂದ ಕಾಗವಾಡ ಶಾಸಕ ರಾಜು ಕಾಗೆ ಅವರನ್ನು ಏಕಾಏಕಿ ವಜಾಗೊಳಿಸಲಾಗಿದೆ.
“ಸರ್ಕಾರದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಎರಡು ದಿನದಲ್ಲಿ ನಾನು ರಾಜೀನಾಮೆ ಕೊಟ್ಟರೂ ಆಶ್ಚರ್ಯವಿಲ್ಲ. ಶಾಸಕ ಬಿ ಆರ್ ಪಾಟೀಲ್ ಹೇಳಿರುವುದು ಸುಳ್ಳಲ್ಲ” ಎಂದು ಹಿರಿಯ ಶಾಸಕ ರಾಜು ಕಾಗೆ ಸ್ವಪಕ್ಷ ವಿರುದ್ಧ ಕಳೆದ ಜೂನ್‌ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಆಳಂದ ಶಾಸಕ ಬಿ ಆರ್ ಪಾಟೀಲ್ ಎರಡು ತಿಂಗಳ ಹಿಂದೆ ವಸತಿ ಇಲಾಖೆಯ ಭ್ರಷ್ಟಾಚಾರ ಬಗ್ಗೆ ಧ್ವನಿ ಎತ್ತಿದ್ದರು. ಅದಾದ ನಂತರ, ಬಿ.ಆರ್ ಪಾಟೀಲರಂತೆಯೇ ನನ್ನ ಸ್ಥಿತಿಯೂ ಇದೆ ಎಂದು ರಾಜು ಕಾಗೆ ಹೇಳಿದ್ದರು.