ಭಾರತವು ಕೊರೋನ ಆಕ್ರಮಣಕ್ಕೆ ತುತ್ತಾದ ಬಳಿಕ, ಕಾರ್ಮಿಕ ಕಾರ್ಡ್‌ಗಳ ದುರ್ಬಳಕೆ ಹೆಚ್ಚಾಗಿದೆ ಕರ್ನಾಟಕ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹೇಳಿದೆ. ಧಾರವಾಡ ಜಿಲ್ಲೆಯಲ್ಲಿ 2023ರಿಂದ ಈವರೆಗೆ ಒಟ್ಟು 10,200 ಕಾರ್ಡ್‌ಗಳನ್ನು ರದ್ದುಪಡಿಸಿರುವುದಾಗಿ ತಿಳಿಸಿದೆ.
ಧಾರವಾಡ ಜಿಲ್ಲೆಯಲ್ಲಿ 2023ರಿಂದ ಇಲ್ಲಿಯವರೆಗೂ ಒಟ್ಟು 26,435 ಕಾರ್ಮಿಕರ ನೋಂದಣಿ ಆಗಿದೆ. ಅವರಲ್ಲಿ ಹೆಚ್ಚಿನವರು ಕಟ್ಟಡ ಮತ್ತು ಇತರೆ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅಸಂಘಟಿತ ಕಾರ್ಮಿಕರಾಗಿದ್ದಾರೆ ಎಂದು ಮಂಡಳಿ ತಿಳಿಸಿದೆ.
ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳ ಫಲಾನುಭವ ಪಡೆದುಕೊಳ್ಳಬೇಕೆಂದರೆ, ಕಾರ್ಮಿಕ ಕಾರ್ಡ್‌ಗಳನ್ನು ಹೊಂದಿರಬೇಕು. ಕೊರೋನ ಆಕ್ರಮಣಕ್ಕೂ ಮುನ್ನ ಕಾರ್ಮಿಕ ಕಾರ್ಡ್ ಮಾಡಿಸಿಕೊಳ್ಳುವಂತೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದರೂ, ಕಾರ್ಡ್‌ಗಳಿಗಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ತೀರಾ ಕಡಿಮೆ ಇತ್ತು. ಆದರೆ, ಕೊರೋನ ಆಕ್ರಮಣದ ಸಮಯದಲ್ಲಿ ಕಾರ್ಮಿಕ ಕಾರ್ಡ್‌ಗಾಗಿನ ಅರ್ಜಿಗಳು ಹೆಚ್ಚಾಗುತ್ತಿವೆ ಎಂದು ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ಸಚಿನ್ ಹಳೇಮನಿ ಹೇಳಿರುವುದಾಗಿ ‘ಪ್ರಜಾವಣಿ’ ವರದಿ ಮಾಡಿದೆ.
“ಕೊರೋನ ನಂತರದಲ್ಲಿ ಹೆಚ್ಚಿನ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಆರ್ಥಿಕ ತೊಂದರೆಗೆ ಸಿಲುಕಿದ್ದಾರೆ. ಹೀಗಾಗಿ, ನಕಲಿ ಕಾರ್ಮಿಕ ಕಾರ್ಡ್ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಪರಿಣಾಮವಾಗಿ, ಅರ್ಹ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ” ಎಂದು ಅವರು ಹೇಳಿದ್ದಾರೆ.
“ನಕಲಿ ಕಾರ್ಡ್‌ಗಳನ್ನು ಅಳಿಸಿ, ಅರ್ಹರಿಗೆ ಪ್ರಯೋಜನಗಳು ಸಿಗುವಂತೆ ಮಾಡಲು ಕಾರ್ಮಿಕ ಕಲ್ಯಾಣ ಮಂಡಳಿ ಮುಂದಾಗಿದೆ. ಅದಕ್ಕಾಗಿ, ಎರಡು/ಮೂರು ಹಂತದಲ್ಲಿ ಕಾರ್ಮಿಕ ಕಾರ್ಡ್ ಹೊಂದಿರುವವರ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ನಕಲಿ ಕಾರ್ಡ್‌ಗಳನ್ನು ರದ್ದು ಮಾಡಲಾಗುತ್ತಿದೆ” ಎಂದು ಸಚಿನ್ ಹಳೇಮನಿ ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಜಿಎಸ್‌ಟಿ ಕಡಿತ | ಬಿಜೆಪಿ ಸಂಭ್ರಮಿಸುವಂಥಾದ್ದು ಏನಿದೆ?
ವಾರ್ಷಿಕ ಕನಿಷ್ಠ 90 ದಿನಗಳ ಕಾಲ ಕಟ್ಟಡ ಅಥವಾ ಇತರೆ ನಿರ್ಮಾಣ ಕಾಮಕಾರಿಗಳಲ್ಲಿ ಕೆಲಸ ಮಾಡಿರುವ 18ರಿಂದ 60 ವರ್ಷದೊಳಗಿನ ಕಾರ್ಮಿಕರು ‘ಕಾರ್ಮಿಕ ಕಾರ್ಡ್’ಗಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಉದ್ಯೋಗ ದೃಢೀಕರಣ ಪತ್ರ, ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ, ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಸೇರಿದತೆ ಅಗತ್ಯ ದಾಖಲೆಗಳನ್ನು ಅರ್ಜಿ ಜೊತೆಗೆ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಸಲ್ಲಿಸಬೇಕು.
ಕಾರ್ಮಿಕ ಕಾರ್ಡ್ ಹೊಂದಿರುವವರು, ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಟೂಲ್ ಕಿಟ್, ಹೆರಿಗೆ, ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಸಹಾಯಧನ, ವೈದ್ಯಕೀಯ ಸಹಾಯಧನ, ಪಿಂಚಣಿ, ಕುಟುಂಬ ಪಿಂಚಣಿ, ದುರ್ಬಲತೆ ಪಿಂಚಣಿ, ಅಪಘಾತ ಪರಿಹಾರ, ಪ್ರಮುಖ ವೈದ್ಯಕೀಯ ವೆಚ್ಚ, ಮದುವೆ ಸಹಾಯಧನ, ತಾಯಿ ಮಗು ಸಹಾಯಹಸ್ತ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.