ಸಹಾಯಕ್ಕಾಗಿ ಪೊಲೀಸರಿಗೆ ಕರೆ ಮಾಡಿದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸ್ ಕಾನ್‌ಸ್ಟೆಬಲ್ ಮತ್ತು ಗೃಹರಕ್ಷಕ ಅಧಿಕಾರಿಯನ್ನು ಬಂಧಿಸಲಾಗಿದೆ. ಘಟನೆಯು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.
ಚಿತ್ತೂರಿನ ಪುಂಗನೂರು ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಉಮಾಶಂಕರ್ ಮತ್ತು ಗೃಹರಕ್ಷಕ ಕಿರಣ್ ಕುಮಾರ್ ಬಂಧಿತ ಆರೋಪಿಗಳು. ಆರೋಪಿಗಳು ತನಗೆ ನಿದ್ರೆ ಔಷಧಿಯನ್ನು ಬೆರೆಸಿದ್ದ ಪಾನೀಯ ಕುಡಿಸಿ, ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಕೃತ್ಯದ ಬಗ್ಗೆ ಯಾರಿಗಾದರೂ ಹೇಳಿದರೆ, ಆಕೆಯ ಮಕ್ಕಳನ್ನು ಕೊಲ್ಲುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು ಎಂದು ವರದಿಯಾಗಿದೆ.
ಗೃಹರಕ್ಷಕ ಅಧಿಕಾರಿ ಕಿರಣ್ ಕುಮಾರ್ ನಿರಂತರವಾಗಿ ಫೋನ್ ಕರೆಗಳನ್ನು ಮಾಡುವ ಮೂಲಕ ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಜಿಎಸ್‌ಟಿ ಕಡಿತ | ಬಿಜೆಪಿ ಸಂಭ್ರಮಿಸುವಂಥಾದ್ದು ಏನಿದೆ?
ದೂರು ದಾಖಲಿಸಲು ಹಲವಾರು ಪೊಲೀಸ್ ಠಾಣೆಗಳನ್ನು ಸಂಪರ್ಕಿಸಿದರೂ, ಸುಮಾರು ಎರಡು ವಾರಗಳ ಕಾಲ ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ. ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ನ್ಯಾಯಕ್ಕಾಗಿ ಸಾರ್ವಜನಿಕವಾಗಿ ಮನವಿ ಮಾಡಿದ ನಂತರವೇ ಪೊಲೀಸರು ಅಂತಿಮವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.
“ನ್ಯಾಯಕ್ಕಾಗಿ ಮಹಿಳೆಯು ಮಾಧ್ಯಮದ ಮುಂದೆ ಸಾರ್ವಜನಿಕವಾಗಿ ಮನವಿ ಮಾಡಿದ ನಂತರ, ಬಂಗಾರುಪಾಳ್ಯಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ನಡೆಯುತ್ತಿದೆ” ಎಂದು ಪಲಮನೇರ್‌ನ ಉಪ ಪೊಲೀಸ್ ವರಿಷ್ಠಾಧಿಕಾರಿ ದೇಗಲ ಪ್ರಭಾಕರ್ ಹೇಳಿದ್ದಾರೆ.
ಗಮನಿಸಿ: ಅತ್ಯಾಚಾರವು ಒಂದು ಗಂಭೀರ ಸಾಮಾಜಿಕ ದುಷ್ಕೃತ್ಯ. ಈ ಕ್ರೂರ ಕೃತ್ಯವು ಸಮಾಜದ ನೈತಿಕತೆ ಮತ್ತು ಮಾನವೀಯತೆಯನ್ನು ಕುಂದಿಸುತ್ತದೆ. ಅತ್ಯಾಚಾರವನ್ನು ತಡೆಯುವುದು ಮತ್ತು ಅತ್ಯಾಚಾರ ಮುಕ್ತ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ. ಮಹಿಳೆಯರು ಭಯಮುಕ್ತವಾಗಿ ಬದುಕಲು ಹೆಣ್ಣುಮಕ್ಕಳ ಸುರಕ್ಷತೆ, ಗೌರವ ಮತ್ತು ನ್ಯಾಯವನ್ನು ಕಾಪಾಡಲು ನಾವು ಒಗ್ಗೂಡಿ ಹೋರಾಡಬೇಕು.ಅತ್ಯಾಚಾರದ ವಿರುದ್ಧ ಕಠಿಣ ಕಾನೂನು ಜಾರಿಯಾಗಬೇಕು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ನಮ್ಮ ಕುಟುಂಬಗಳಲ್ಲಿ, ಶಾಲೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳ ಜೊತೆ ಗೌರವ ಮತ್ತು ಸಂವೇದನೆಯಿಂದ ನಡೆದುಕೊಳ್ಳಬೇಕು. ಮಹಿಳೆಯರ ರಕ್ಷಣೆಯ ಹೊಣೆ ನಮ್ಮೆಲ್ಲರದ್ದಾಗಿದೆ.