ಈ ದಿನ ಸಂಪಾದಕೀಯ | ಧರ್ಮಸ್ಥಳ ಪ್ರಕರಣ; ಎಸ್‌ಐಟಿ ತನಿಖೆಯನ್ನು ಸರ್ಕಾರವೇ ಹಳ್ಳ ಹಿಡಿಸದಿರಲಿ

Date:

Advertisements

ಕಾಂಗ್ರೆಸ್‌ ಸರ್ಕಾರ ಈ ವಿಚಾರದಲ್ಲಿ ರಾಜಕೀಯ ಲೆಕ್ಕಾಚಾರ ಅಥವಾ ಓಲೈಕೆ ರಾಜಕಾರಣ ಎರಡನ್ನೂ ಮಾಡದೇ ತಟಸ್ಥವಾಗಿದ್ದು ಎಸ್‌ಐಟಿ ತನಿಖೆಯ ಮೇಲೆ ನಂಬಿಕೆ ಇಡಬೇಕಿದೆ. ಜನ ಈಗಾಗಲೇ ಧರ್ಮಸ್ಥಳ ಪ್ರಕರಣವನ್ನು ಜನತಾ ನ್ಯಾಯಾಲಯದ ತಕ್ಕಡಿಯಲ್ಲಿ ಇಟ್ಟಾಗಿದೆ. ಅದು ಸತ್ಯದ ಪರ ತೂಗುವಂತೆ ಮಾಡಬೇಕಿರುವ ಜವಾಬ್ದಾರಿ ಸರ್ಕಾರ, ತನಿಖಾ ಸಂಸ್ಥೆಗಳು ಮತ್ತು ನ್ಯಾಯಾಂಗದ ಮೇಲಿದೆ. 

ಮೂರು ತಿಂಗಳ ಹಿಂದೆ ದಿಢೀರನೆ ವ್ಯಕ್ತಿಯೊಬ್ಬ ಧರ್ಮಸ್ಥಳದಲ್ಲಿ ನೂರಾರು ಶವ ಹೂತು ಹಾಕಿದ್ದೇನೆ. ಪೊಲೀಸರ ಮುಂದೆ ಸಾಕ್ಷಿ ನುಡಿದು ಪಾಪಪ್ರಜ್ಞೆಯಿಂದ ಹೊರಬರುತ್ತೇನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಮುಂದೆ ಹೇಳಿಕೆ ನೀಡಿದ್ದು ರಾಜ್ಯ ಮಾತ್ರವಲ್ಲ ದೇಶದಲ್ಲೇ ಸಂಚಲನಕ್ಕೆ ಕಾರಣವಾಗಿತ್ತು. ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಧರ್ಮಸ್ಥಳ ಅಕ್ರಮ ಹೆಣ ಹೂತು ಹಾಕಿರುವ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡುವಂತೆ ಒತ್ತಾಯಿಸಿದ್ದರು. ಮಹಿಳಾಪರ ಹೋರಾಟಗಾರರು, ವಿವಿಧ ಸಂಘಟನೆಗಳು, ಪ್ರಗತಿಪರರು ಕೂಡ ಒತ್ತಡ ಹೇರಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್‌ಐಟಿ ರಚನೆ ಮಾಡಿ ದಕ್ಷ ಅಧಿಕಾರಿ ಪ್ರಣಬ್‌ ಮೊಹಂತಿ ಅವರನ್ನು ಮುಖ್ಯಸ್ಥರನ್ನಾಗಿ ಮಾಡಿದಾಗ ರಾಜ್ಯದ ಬಹುತೇಕ ಜನರು ಶ್ಲಾಘಿಸಿದ್ದರು. ಧರ್ಮಸ್ಥಳದಲ್ಲಿ ಕಳೆದ 20 ವರ್ಷಗಳಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವಿನ ಪ್ರಕರಣಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಅದಕ್ಕೂ ಮಹತ್ವದ ಇನ್ನೊಂದು ವಿಚಾರ ಧರ್ಮಸ್ಥಳದಲ್ಲಿ ಕಾಣೆಯಾದ ವ್ಯಕ್ತಿಗಳ ಬಗ್ಗೆ ರಾಜ್ಯದ ಯಾವುದೇ ಜಿಲ್ಲೆಯಿಂದ ದೂರುಗಳು ಬಂದರೂ ಅವುಗಳನ್ನು ಎಸ್‌ಐಟಿ ತನಿಖೆಗೆ ಒಳಪಡಿಸಬೇಕು ಎಂದು ಆದೇಶಿಸಲಾಗಿದೆ. ಈ ನಡೆದ ಸರ್ಕಾರದ ಬದ್ಧತೆ, ಕಾಳಜಿಯನ್ನು ತೋರಿಸಿತ್ತು. ಇದು ಸರ್ಕಾರದ ಮೇಲೆ ಜನರಿಗೆ ಹೆಚ್ಚಿನ ಭರವಸೆ ಮೂಡಿಸಿತ್ತು. ಆದರೆ,  ಸರ್ಕಾರದ ಒಳಗಿರುವ ಕೆಲವರು ಧರ್ಮಸ್ಥಳದಲ್ಲಿ ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳಿ ಸರ್ಕಾರದ ಮೇಲೆ ಸಂತ್ರಸ್ತ ಕುಟುಂಬಗಳು ಇಟ್ಟಿದ್ದ ಭರವಸೆಯನ್ನು ಸ್ವಲ್ಪ ಮಟ್ಟಿಗೆ ಕುಗ್ಗಿಸಿತ್ತು.

ಸಾಕ್ಷಿ ದೂರುದಾರ ಚಿನ್ನಯ್ಯ ತೋರಿಸಿದ್ದ ಜಾಗಗಳಲ್ಲಿ ಅಗೆದ ಎಸ್‌ಐಟಿಗೆ ಎರಡು ಜಾಗಗಳಲ್ಲಿ ಮಾತ್ರ ಅಸ್ಥಿಪಂಜರದ ಅವಶೇಷಗಳು ಸಿಕ್ಕಿ ಸ್ವಲ್ಪ ಮಟ್ಟಿಗೆ ನಿರಾಸೆ ಮೂಡಿಸಿತ್ತು. ಚಿನ್ನಯ್ಯ ತನ್ನ ಮೊದಲ ಹೇಳಿಕೆಗೆ ಬದ್ಧನಾಗದೇ ಸುಳ್ಳು ಹೇಳಿಕೆ ನೀಡಿರುವುದು ಸರ್ಕಾರದ ಮೇಲೆ ಮುಗಿ ಬೀಳಲು ವಿಪಕ್ಷಗಳಿಗೆ ಅಸ್ತ್ರ ಸಿಕ್ಕಿತ್ತು. ಎಸ್‌ಐಟಿ ತನಿಖೆಯನ್ನು ನಿಲ್ಲಿಸಬೇಕು ಎಂಬ ಒತ್ತಡ ಸರ್ಕಾರದ ಮೇಲೆ ಬಂದಿರುವುದು ಸುಳ್ಳಲ್ಲ. ಆದರೆ ಎಸ್‌ಐಟಿ ವರದಿ ನೀಡಬೇಕಿರುವುದು ಕೋರ್ಟ್ಗೆ, ಆದರೆ ಸರ್ಕಾರದ ಆದೇಶದ ಪ್ರಕಾರ ಇದರ ವ್ಯಾಪ್ತಿ ಬುರುಡೆ ಪ್ರಕರಣಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಸರ್ಕಾರವೇ ಮರೆತಂತಿದೆ.

ಆದರೆ ಎಸ್‌ಐಟಿಯ ಮುಂದೆ ಈಗ ಸುಮಾರು 30 ದೂರುಗಳು ದಾಖಲಾಗಿವೆ. ಅನುಮಾನಾಸ್ಪದವಾಗಿ ಸತ್ತ ವೇದವಲ್ಲಿ, ಪದ್ಮಲತಾ, ನಾರಾಯಣ ಕುಟುಂಬದವರು ನ್ಯಾಯದ ನಿರೀಕ್ಷೆಯಿಂದ ಮತ್ತೆ ದೂರು ಕೊಟ್ಟಿದ್ದಾರೆ. ಇನ್ಯಾರೋ ನನ್ನ ಸಹೋದರಿ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಳು ಎಂದು ದೂರು ಹೊತ್ತು ಬಂದಿದ್ದಾರೆ. ಸೌಜನ್ಯಳನ್ನು ಅಪಹರಣ ಮಾಡುತ್ತಿದ್ದುದನ್ನು ಪ್ರಕೃತಿ ಚಿಕಿತ್ಸಾ ಕೇಂದ್ರದ ಬಳಿ ನಿಂತಿದ್ದ ತಾನು ನೋಡಿರುವುದಾಗಿ ಮಂಡ್ಯದ ಮಹಿಳೆಯೊಬ್ಬರು ಎಸ್‌ಐಟಿಯ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಿದ್ದಾರೆ. ಸೌಜನ್ಯ ಕುಟುಂಬದವರು ಅನುಮಾನಿಸಿದ್ದ ಮೂವರಲ್ಲಿ ಒಬ್ಬನನ್ನು ಅಂದು ನೋಡಿ ಮಾತಾಡಿರುವ ಬಗ್ಗೆ ಆಕೆ ಹೇಳಿಕೊಂಡಿದ್ದಾರೆ. ಈ ದೂರಿನ ಆಧಾರದಲ್ಲಿ ಸೌಜನ್ಯ ಕೊಲೆಯ ಮರು ತನಿಖೆ ನಡೆಸಬೇಕು ಎಂದು ಸೌಜನ್ಯ ತಾಯಿ ಕುಸುಮಾವತಿ ಅವರೂ ಎಸ್‌ಐಟಿಗೆ ಮನವಿ ಮಾಡಿದ್ದಾರೆ. ಸೌಜನ್ಯ ಮಾವ ವಿಠಲ ತೋರಿಸಿದ ಬಂಗ್ಲೆಗುಡ್ಡ ಜಾಗದಲ್ಲಿ ಹತ್ತಾರು ಮನುಷ್ಯ ತಲೆ ಬುರುಡೆ, ಮೂಳೆಗಳು ಸಿಕ್ಕಿವೆ. ಆರಂಭದಲ್ಲಿ ಗ್ರಾಮಮಂಚಾಯ್ತಿ ಅಧ್ಯಕ್ಷ, ಮಾಜಿ ಉಪಾಧ್ಯಕ್ಷ, ವೈದ್ಯರೊಬ್ಬರು ಮಾಧ್ಯಮಗಳ ಮುಂದೆ ನೀಡಿದ್ದ ಹೇಳಿಕೆ ಹೀಗೆ ಎಲ್ಲವೂ ಚಿನ್ನಯ್ಯನ ಆರೋಪಕ್ಕೆ ಪೂರಕವಾಗಿವೆ. ಆದರೆ, ಈ ಹಂತದಲ್ಲಿ ಎಸ್‌ಐಟಿ ತನಿಖೆಯ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ತನಿಖೆಯನ್ನು ಅರ್ಧದಲ್ಲಿಯೇ ನಿಲ್ಲಿಸಲು ಸರ್ಕಾರದ ಮುಂದಾಗಿದೆಯೇ ಇಲ್ಲವೇ ಎಂಬ ಬಗ್ಗೆ ಸರ್ಕಾರದ ಯಾರಿಂದಲೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ, ಬಹುತೇಕ ಹೋರಾಟಗಾರರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಆತಂಕಗಳಿಗೆ ಎಸ್‌ಐಟಿ ಉತ್ತರಿಸಬೇಕಿದೆ. ಅದು ಇದುವರೆಗೂ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಿ ಅನುಮಾನಗಳಿಗೆ ಉತ್ತರಿಸುವ ಗೋಜಿಗೆ ಹೋಗಿಲ್ಲ. ಇದು ಜನಸಾಮಾನ್ಯರ ಅನುಮಾನಗಳಿಗೆ ಪುಷ್ಟಿ ನೀಡುತ್ತಿದೆ.

ಸೆ.25ರಂದು ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಬೆಂಗಳೂರಿನಲ್ಲಿ ನಡೆಸಿದ ‘ನ್ಯಾಯ ಸಮಾವೇಶ’ದಲ್ಲಿ ಸೇರಿದ್ದ ಎಲ್ಲ ಹೋರಾಟಗಾರರೂ ಎಸ್‌ಐಟಿ ತನಿಖೆ ಹಳ್ಳ ಹಿಡಿಸದಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಎಸ್‌ಐಟಿ ರಚನೆಯ ಉದ್ದೇಶ ಧರ್ಮಸ್ಥಳದಲ್ಲಿ ಅನುಮಾನಾಸ್ಪದವಾಗಿ  ಹೆಣ ಹೂತು ಹಾಕಿದ ಪ್ರಕರಣಗಳಿಗೆ ಮಾತ್ರ ಸೀಮಿತವಾಗಿಲ್ಲ. ಅತ್ಯಾಚಾರ, ಅಪಹರಣ, ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಶವಗಳ ಪರೀಕ್ಷೆ, ಸಾಕ್ಷಿ ಸಂಗ್ರಹ ಮಾಡದೇ ‘ಬಿ’ ರಿಪೋರ್ಟ್‌, ‘ಸಿ’ ರಿಪೋರ್ಟ್‌ ಹಾಕಿ ಪ್ರಕರಣವನ್ನು ಮುಗಿಸುತ್ತ ಬಂದಿರುವ ಆ ʼಧರ್ಮಸ್ಥಳದ ಮಾದರಿʼಯ ಬಗ್ಗೆ, ಅದರ ಹಿಂದಿರುವ ಕಾಣದ ಕೈಗಳ ಬಗ್ಗೆ ಈಗಲಾದರೂ ತನಿಖೆ ನಡೆದು ಸತ್ಯ ಹೊರ ಬರುವಂತೆ ಸರ್ಕಾರ ಮಾಡಬೇಕಿದೆ ಎಂಬುದು ಜೀವಪರ ಕಾಳಜಿ ಇರುವ ಎಲ್ಲರ ಒಕ್ಕೊರಲಿನ ಕೂಗು. ಈ ಕೂಗು ಸಿದ್ದರಾಮಯ್ಯ ಅವರ ಕಿವಿಗೆ ನಾಟಿ ಅವರು ನಿಜವಾಗಿಯೂ ಬಡವರ ಶೋಷಿತರ ಪರ ಎಂಬುದನ್ನು ಸಾಬೀತುಪಡಿಸಬೇಕಿದೆ.  

ಇದನ್ನೂ ಓದಿ ಧರ್ಮಸ್ಥಳ ಪ್ರಕರಣ; ಎಸ್ ಐಟಿ ತನಿಖೆ ಮತ್ತು ರಾಜಕೀಯ ಲೆಕ್ಕಾಚಾರ…!

ಸರ್ಕಾರ ಎಸ್‌ಐಟಿ ರಚನೆ ಮಾಡಿ ಪ್ರಣಬ್‌ ಮೊಹಂತಿ ಅವರಂತಹ ದಕ್ಷ ಅಧಿಕಾರಿಯನ್ನು ಅದರ ಮುಖ್ಯಸ್ಥರನ್ನಾಗಿ ನಿಯೋಜನೆ ಮಾಡಿದಾಗ ಜನ ಇಟ್ಟ ಭರವಸೆ ಹುಸಿಯಾದರೆ ಈ ಸರ್ಕಾರ ಐತಿಹಾಸಿಕ ಕಳಂಕ ಹೊತ್ತುಕೊಳ್ಳಲಿದೆ. ಒಂದು ವೇಳೆ ಸರ್ಕಾರದ ಒಳಗಿನವರ ಒತ್ತಡ, ಹೊರಗಿನವರ ಒತ್ತಡ ಎಲ್ಲವನ್ನೂ ಮೀರಿ ಮೊಹಂತಿ ಅವರಿಗೆ ಪೂರ್ಣ ಅಧಿಕಾರ ನೀಡಿ, ಸರ್ಕಾರವೂ ಬೆನ್ನಿಗೆ ನಿಂತರೆ ಐದಾರು ದಶಕಗಳಿಂದ ಧರ್ಮಸ್ಥಳದಲ್ಲಿ ವೀರೇಂದ್ರ ಹೆಗ್ಗಡೆ ಅವರ ಕುಟುಂಬ ಭಾಗಿಯಾಗಿದೆ ಎಂದು ಆರೋಪಿಸಲಾಗುತ್ತಿರುವ ಅಕ್ರಮ, ಹೆಣ್ಣುಮಕ್ಕಳ ಅಪಹರಣ, ಅತ್ಯಾಚಾರ, ಕೊಲೆ, ಭೂಕಬಳಿಕೆಯಿಂದ ಅನ್ಯಾಯಕ್ಕೊಳಗಾದ ಕುಟುಂಬಗಳಿಗೆ ನ್ಯಾಯ ಒದಗಿಸಿ, ತಪ್ಪಿತಸ್ಥರು ಎಷ್ಟೇ ದೊಡ್ಡವರಾಗಿದ್ದರೂ ಅವರನ್ನು ಕಂಬಿ ಹಿಂದೆ ನಿಲ್ಲಿಸಿದ ಕಾರಣಕ್ಕೆ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ. ಮೈಕ್ರೋ ಫೈನಾನ್ಸ್‌ ಹೆಸರಿನಲ್ಲಿ ನಡೆಯುತ್ತಿರುವ ಸುಲಿಗೆ, ಆ ಕಾರಣಕ್ಕೆ ಆಗುತ್ತಿರುವ ಆತ್ಮಹತ್ಯೆಗಳಿಗೆ ತಿಲಾಂಜಲಿ ನೀಡುವ ಕೆಲಸವೂ ಆಗಬೇಕಿದೆ. ಕಾಂಗ್ರೆಸ್‌ ಸರ್ಕಾರ ಈ ವಿಚಾರದಲ್ಲಿ ರಾಜಕೀಯ ಲೆಕ್ಕಾಚಾರ ಅಥವಾ ಓಲೈಕೆ ರಾಜಕಾರಣ ಎರಡನ್ನೂ ಮಾಡದೇ ತಟಸ್ಥವಾಗಿದ್ದು ಎಸ್‌ಐಟಿ ತನಿಖೆಯ ಮೇಲೆ ನಂಬಿಕೆ ಇಡಬೇಕಿದೆ.

ಜನ ಈಗಾಗಲೇ ಧರ್ಮಸ್ಥಳ ಪ್ರಕರಣವನ್ನು ಜನತಾ ನ್ಯಾಯಾಲಯದ ತಕ್ಕಡಿಯಲ್ಲಿ ಇಟ್ಟಾಗಿದೆ. ಅದು ಸತ್ಯದ ಪರ ತೂಗುವಂತೆ ಮಾಡಬೇಕಿರುವ ಜವಾಬ್ದಾರಿ ಸರ್ಕಾರ, ತನಿಖಾ ಸಂಸ್ಥೆಗಳು ಮತ್ತು ನ್ಯಾಯಾಂಗದ ಮೇಲಿದೆ. 

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ,...

ಈ ದಿನ ಸಂಪಾದಕೀಯ | ಬಸನಗೌಡ ಯತ್ನಾಳ್‌ ಒಪ್ಪಿಸಿದ್ದು ಮನುವಾದಿ ಗಿಳಿಪಾಠ

ನಾಡ ದೇವತೆ ಎಂದು ಕರೆಸಿಕೊಂಡ ಚಾಮುಂಡಿ ದೇವಿ ಹೆಣ್ಣಾಗಿ ದಲಿತ ಮಹಿಳೆಯಿಂದ...

ಈ ದಿನ ಸಂಪಾದಕೀಯ | ರಸ್ತೆ ಗುಂಡಿ ಮುಚ್ಚುವುದು ಸಚಿವ ಡಿ.ಕೆ. ಶಿವಕುಮಾರ್ ಕೆಲಸವೇ?

ಇತ್ತೀಚಿನ ದಿನಗಳಲ್ಲಿ ಆಳುವ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರಶ್ನಿಸುವ, ಪ್ರತಿಭಟಿಸುವ ಕೆಚ್ಚು...

Download Eedina App Android / iOS

X