ಯುಜಿಸಿ ಬಿಡುಗಡೆ ಮಾಡಿರುವ ಎಲ್ಒಸಿಎಫ್ ವಾಪಸು ಪಡೆದು ಸಾರ್ವಜನಿಕ ಶಿಕ್ಷಣ ಬಲಪಡಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು ನಗರದ ವಿಜಯ ವೃತ್ತದಲ್ಲಿ ಯುಜಿಸಿ ಕರಡು ಪ್ರತಿಯನ್ನು ಸುಟ್ಟು ಪ್ರತಿಭಟನೆ ನಡೆಸಲಾಯಿತು.
ಎಸ್‌ಎಫ್‌ಐ ರಾಜ್ಯ ಸಮಿತಿ ಸದಸ್ಯ ಶಿವರೆಡ್ಡಿ ಮಾತನಾಡಿ, “ಯುಜಿಸಿ ಬಿಡುಗಡೆ ಮಾಡಿದ ಪ್ರಾಚೀನ ಮತ್ತು ಅವೈಜ್ಞಾನಿಕ ಕಲಿಕಾ ಫಲಿತಾಂಶ ಆಧಾರಿತ ಪಠ್ಯಕ್ರಮ ಚೌಕಟ್ಟು ವಾಪಾಸ್ ಪಡೆಯಬೇಕು. ಸಂವಿಧಾನದ 51A(ಎಚ್) ವಿಧಿಯ ಪ್ರಕಾರ, ವೈಜ್ಞಾನಿಕ ಮನೋಭಾವ, ಮಾನವತಾವಾದ, ವಿಚಾರಣೆ ಮತ್ತು ಸುಧಾರಣೆಯ ಮನೋಭಾವವನ್ನು ಬೆಳೆಸುವುದು ನಾಗರಿಕರ ಮೂಲಭೂತ ಕರ್ತವ್ಯವಾಗಿದೆ. ಶಿಕ್ಷಣದಲ್ಲಿ ಅವೈಜ್ಞಾನಿಕ ಮತ್ತು ತರ್ಕಬದ್ಧವಲ್ಲದ ವಿಷಯಗಳನ್ನು ಸೇರಿಸುವ ಯುಜಿಸಿಯ ಪ್ರಯತ್ನವಾಗಿದೆ. ಅಲ್ಲದೆ, ಆರ್‌ಎಸ್‌ಎಸ್ ಕಾರ್ಯಸೂಚಿಯನ್ನು ಹಿಂಬಾಗಿಲಿನಿಂದ ಸ್ವೀಕರಿಸುವ ವಿಸ್ತರಿಸುವ ಉದ್ದೇಶವನ್ನು ಹೊಂದಿದೆ. ಸ್ವಾತಂತ್ರ್ಯ ಚಳವಳಿಯ ಕುರಿತಾದ ಕಲಿಕಾ ಪಟ್ಟಿಯಲ್ಲಿ ಸಾವರ್ಕರ್ ಅವರ ಪುಸ್ತಕವನ್ನು ಸೇರಿಸಿರುವುದು ಇದಕ್ಕೆ ಒಂದು ಉದಾಹರಣೆಯಾಗಿದೆ, ಇದು ವಿದ್ಯಾರ್ಥಿಗಳನ್ನು ಸ್ವಾತಂತ್ರ್ಯ ಹೋರಾಟದ ನೈಜ ಇತಿಹಾಸದಿಂದ ದಾರಿ ತಪ್ಪಿಸುವ ಉದ್ದೇಶವನ್ನು ಹೊಂದಿದೆ” ಎಂದು ಆರೋಪಿಸಿದರು.
“ಯುಜಿಸಿ ಬಿಡುಗಡೆ ಮಾಡಿದ ಕರಡು ಎಲ್‌ಒಸಿಎಫ್ ಬಿಜೆಪಿ ಸರ್ಕಾರ ಮಂಡಿಸಿದ ವಿನಾಶಕಾರಿ ಹೊಸ ಶಿಕ್ಷಣ ನೀತಿಯ ದೊಡ್ಡ ರಾಜಕೀಯದ ಭಾಗವಾಗಿದೆ. ಅವೈಜ್ಞಾನಿಕ ಎಲ್‌ಒಸಿಎಫ್ ಮತ್ತು ವಿನಾಶಕಾರಿ ಎನ್ಇಪಿ ವಿರುದ್ಧ ಎಸ್‌ಎಫ್‌ಐ ಪ್ರತಿಭಟನೆಗಳು ಮುಂದುವರಿಸುತ್ತದೆ. ಕ್ಯಾಂಪಸ್‌ಗಳ ವೈಜ್ಞಾನಿಕ ಮನೋಭಾವವನ್ನು ಅಪ್ರಯೋಜಕ ರೋಗಪೀಡಿತ ವ್ಯವಸ್ಥೆಗೆ ತಳ್ಳುವ ಪ್ರಯತ್ನಗಳನ್ನು ಮಾಡುವುದರಿಂದ ದೇಶಾದ್ಯಂತ ತಮ್ಮ ಸರ್ಕಾರ ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಸಂಡೂರು ಎಸ್‌ಎಫ್ಐ ಗುಣಶೇಖರ ಹಕ್ಕೊತ್ತಾಯ ಮಂಡಿಸಿ ಮಾತಾನಾಡಿ, “ಪ್ರಾಚೀನ ಮತ್ತು ಅವೈಜ್ಞಾನಿಕ ಕಲಿಕಾ ಫಲಿತಾಂಶ ಆಧಾರಿತ ಪಠ್ಯಕ್ರಮ ಚೌಕಟ್ಟು ವಾಪಾಸ್ ಪಡೆಯಬೇಕು. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕೊಡ ಮಾಡುವ ವಿದ್ಯಾರ್ಥಿಗಳ ಫೆಲೋಶಿಪ್ ಮತ್ತು ಸ್ಕಾಲರ್ಶಿಪ್ ಹೆಚ್ಚಿಸಿ ಕಾಲಕಾಲಕ್ಕೆ ಬಿಡುಗಡೆ ಮಾಡಬೇಕು. ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಕೊಡುವ ಸಂಶೋಧನಾ ಫಿಲೋಸಿಪ್‌ಗೆ ಎನ್ಇಟಿ ಕಡ್ಡಾಯವನ್ನು ಕೈಬಿಡಬೇಕು ಮತ್ತು ನೇರವಾಗಿ ಸಂಶೋಧನೆ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡಬೇಕು. ವಿಶ್ವವಿದ್ಯಾಲಯಗಳನ್ನು ಬಲಪಡಿಸಲು ರಾಜ್ಯ ಮತ್ತು ಕೇಂದ್ರ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಬಿಡುಗಡೆ ಮಾಡಬೇಕು” ಎಂದರು.
ಇದನ್ನೂ ಓದಿ: ಬಳ್ಳಾರಿ | ಸರ್ಕಾರ ಮಕ್ಕಳ ಕಾನೂನಾತ್ಮಕ ಹಕ್ಕುಗಳ ರಕ್ಷಕ: ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್
ಈ ವೇಳೆ ತಾಲೂಕು ಎಸ್‌ಎಫ್‌ಐ ಮುಖಂಡರಾದ ಗುಣಶೇಖರ್, ಲೋಕೇಶ್, ಚೇತನ್, ದರ್ಶನ್, ಅಕ್ಷಯ್ ಕುಮಾರ್, ಅವಿನಾಶ್, ರಿಯಾಜ್, ವಿದ್ಯಾರ್ಥಿಗಳು ಹಾಗೂ ಇತರರು ಇದ್ದರು.