ತೆಲಂಗಾಣ ಹಾಗೂ ಉತ್ತರ ಒಳನಾಡಿನಲ್ಲಿ ಉಂಟಾದ ಕಡಿಮೆ ಒತ್ತಡ ಪ್ರದೇಶದ ಪರಿಣಾಮವಾಗಿ ರಾಯಚೂರು ಜಿಲ್ಲೆ ಸೇರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಜಿಟಿಜಿಟಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ನೀಡಿದ ಮಾಹಿತಿಯ ಪ್ರಕಾರ, ಮುಂದಿನ ಮೂರು ದಿನಗಳವರೆಗೆ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಮಧ್ಯಮ ಹಾಗೂ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ನಿರಂತರವಾಗಿ ಮಳೆ ಬರುವ ಕಾರಣ ಕೃಷ್ಣ ಹಾಗೂ ತುಂಗಭದ್ರಾ ನದಿಗಳಿಗೆ ಡ್ಯಾಂ ಮೂಲಕ ನೀರು ಬಿಡಲಾಗುತ್ತಿದ್ದು ನದಿ ತೀರದ ಗ್ರಾಮಸ್ಥರು ನದಿ ದಂಡೆಗೆ ಹೋಗಬಾರದು ಹಾಗೂ ಜಾನುವಾರುಗಳಿಗೆ ನದಿ ತಟದಲ್ಲಿ ಮೇಯಲು ಬಿಡಬಾರದು ಎಂದು ಜಿಲ್ಲಾಡಳಿತ ಹಾಗೂ ತಹಶೀಲ್ದಾರರು ಆಯಾ ತಾಲೂಕು ವ್ಯಾಪ್ತಿಯ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬಸ್ ಪಲ್ಟಿ : ಹಲವರಿಗೆ ಗಾಯ
ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಿಲ್ಲೆಯ ಕೆಲವು ಕಡೆ ಹೊಲಗಳಲ್ಲಿ ನೀರು ನಿಂತು ರೈತರಿಗೂ ಸಂಕಷ್ಟ ಎದುರಾಗಿದೆ. ಸಿರವಾರ ಹಾಗೂ ಸಿಂಧನೂರು ಭಾಗಗಳಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಗ್ಗು ಗುಂಡಿಗಳಲ್ಲಿ ಕೆಸರು ತುಂಬಿ, ಸವಾರರು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಕೆಲವೆಡೆ ವಾಹನಗಳು ಕೆಸರಿನಲ್ಲಿ ಸಿಲುಕಿ ತೊಂದರೆ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
