ಕರ್ನಾಟಕ ರಾಜ್ಯದ ಜ್ವಲಂತ ಸಮಸ್ಯೆಗಳು ಹಾಗೂ ಜನ ಪ್ರತಿನಿಧಿಗಳ ನಿರ್ಲಕ್ಷ್ಯವನ್ನು ಸರಕಾರದ ಗಮನಕ್ಕೆ ತರಲು ಪಕ್ಷಾತೀತ ಹಾಗೂ ಜ್ಯಾತ್ಯತೀತವಾಗಿ, ಸರ್ವಧರ್ಮದ ಸರ್ವರು ಜಿಲ್ಲಾ ಕೇಂದ್ರಗಳಲ್ಲಿ ಜಾಥಾ ಹಮ್ಮಿಕೊಂಡು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ರೈತ ಮುಖಂಡ ಮುತ್ತಪ್ಪ ಕುಮಾರ ಕರೆ ಕೊಟ್ಟರು.
ಬಾಗಲಕೋಟೆ ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜ್ಯದ ಅಭಿವೃದ್ಧಿಯತ್ತ ಯುವ ಜನರ ಚಿತ್ತಹರಿಸಲು, ಪ್ರಜೆಗಳ ಆರೋಗ್ಯ, ಶಿಕ್ಷಣ, ಸಬಲೀಕರಣ, ಉದ್ಯೋಗದ ಮೂಲಕ ಯುವಜನರ ಹಾಗೂ ರೈತರ ಏಳಿಗೆಯೇ ರಾಜ್ಯದ ಏಳಿಗೆ ಎಂದು ಕರ್ನಾಟಕ ರಾಜ್ಯ ಸರಕಾರಕ್ಕೆ ಮನವರಿಕೆ ಮಾಡಲು ಬೀದರದಿಂದ ಬೆಂಗಳೂರು ವಿಧಾನಸೌಧದವರೆಗೂ 1200 ಕಿ.ಮೀ ಯುವ ಪರಿವರ್ತನಾ ಯಾತ್ರೆ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.
ಎಲ್ಲ ಜಿಲ್ಲೆಯ ಯುವ ಜನತೆ, ಮುಖಂಡರು, ಸಾರ್ವಜನಿಕರು ಹಾಗೂ ಮಾಧ್ಯಮ ಮಿತ್ರರು ಯುವ ಪರಿವರ್ತನೆ ಯಾತ್ರೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅವರು ವಿನಂತಿಸಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ | ಭಾರೀ ಮಳೆಯಿಂದ ಈರುಳ್ಳಿ ಬೆಳೆನಾಶ; ಪರಿಹಾರಕ್ಕೆ ಕಿಸಾನ್ ಸಂಘ ಆಗ್ರಹ
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಯಲ್ಲಪ ಹೆಗಡೆ, ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ, ಯಾತ್ರೆಯ ಸಂಚಾಲಕ ಶಿವಲಿಂಗೇಶ್ವರ ನಿಂಗನೂರ, ಭೀಮ ಆರ್ಮಿ ಭಾರತ ಏಕತಾ ಮಿಷನ್ ಮುಧೋಳ ತಾಲ್ಲೂಕು ಘಟಕದ ಅಧ್ಯಕ್ಷ ಶೇಖರ್ ಕಾಂಬಳೆ, ಸಂಚಾಲಕ ಆಸ್ಕರ್ ಸರಕಾವಸ್, ಪರಶು ನಾಯಿಕರ ಉಪಸ್ಥಿತರಿದ್ದರು.