ಹೊನ್ನಾವರ ಮತ್ತು ಅಂಕೋಲಾ ಉಪನೊಂದಾಣಿಧಿಕಾರಿಗಳ ಕಚೇರಿಯಲ್ಲಿ ಸ್ವತ್ತು ನೋಂದಣಿ, ಋಣಭಾರ ಪತ್ರ ಖರೀದಿ, ದಸ್ತಾವೇಜುಗಳ ದೃಢೀಕರಣ ಸೇರಿದಂತೆ ವಿವಿಧ ಸರ್ಕಾರಿ ಕೆಲಸಗಳಿಗಾಗಿ ಸಾರ್ವಜನಿಕರ ಹತ್ತಿರ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಿ ಹಾಗೂ ಖಾಸಗಿ ಮಧ್ಯವರ್ತಿಗಳ ಸಹಾಯದಿಂದ ಅಕ್ರಮವಾಗಿ ಹಣ ಸ್ವೀಕರಿಸುತ್ತಿರುವುದಾಗಿ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಕಡತ ಪರಿಶೀಲನೆ ನಡೆಸಿದರು.
ಸಾರ್ವಜನಿಕರಿಂದ ಬಂದಿರುವ ಈ ದೂರುಗಳಿಗೆ ಸಂಬಂಧಿಸಿದಂತೆ, ಯಾವುದೇ ಕ್ರಮವನ್ನು ಇಲಾಖೆಯ ಮೇಲ್ದರ್ಜೆಯ ಅಧಿಕಾರಿಗಳು ಕೈಗೊಂಡಿರದ ಕಾರಣ, ಕಾರವಾರ ಲೋಕಾಯುಕ್ತ ಕಚೇರಿಯ ಪೊಲೀಸ್ ಅಧೀಕ್ಷಕ ಕುಮಾರಚಂದ್ರರ ಮಾರ್ಗದರ್ಶನದಲ್ಲಿ ಡಿ.ವೈ.ಎಸ್.ಪಿ ಧನ್ಯಾ ಎನ್. ನಾಯಕ, ಪೊಲೀಸ್ ಇನ್ಸ್ಪೆಕ್ಟರ್ ರವಿ ಎನ್.ಎನ್, ವಿನಾಯಕ ಬಿಲ್ಲವ, ವಿಜಯ ಸದಾಶಿವ ಕಾಂಬ್ಳೆ ಹಾಗೂ ಸಿಬ್ಬಂದಿಗಳಿಂದಾದ ಎರಡು ತಂಡಗಳು ಸೆಪ್ಟೆಂಬರ್ 25 ರಂದು ಸಂಜೆ 5 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಏಕಕಾಲದಲ್ಲಿ ಹೊನ್ನಾವರ ಮತ್ತು ಅಂಕೋಲಾ ಉಪನೋಂದಣಾಧಿಕಾರಿಗಳ ಕಚೇರಿಗಳ ಮೇಲೆ ದಾಳಿ ನಡೆಸಿದರು
ಈ ಸುದ್ದಿ ಓದಿದ್ದೀರಾ? ಭಟ್ಕಳ | ಮುರುಡೇಶ್ವರದಲ್ಲಿ ಯುವಕನ ಪ್ರಾಮಾಣಿಕತೆ; ಕಳೆದುಹೋದ ಬ್ಯಾಗ್ ಹಸ್ತಾಂತರ
ಶೋಧನೆಯ ವೇಳೆ ಎರಡೂ ಕಚೇರಿಗಳ ಕರ್ತವ್ಯದಲ್ಲಿ ತೀವ್ರ ಅವ್ಯವಸ್ಥೆ, ನ್ಯೂನ್ಯತೆ ಹಾಗೂ ಕರ್ತವ್ಯಲೋಪ ಪತ್ತೆಯಾದ ಹಿನ್ನೆಲೆಯಲ್ಲಿ, ಈ ಕುರಿತು ಸಮಗ್ರ ವರದಿಯನ್ನು ತಯಾರಿಸಿ ಮುಂದಿನ ಕ್ರಮಕ್ಕಾಗಿ ಬೆಂಗಳೂರಿನ ಕರ್ನಾಟಕ ಲೋಕಾಯುಕ್ತರಿಗೆ ಸಲ್ಲಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.