ಹೆಣ್ಣು ಮಕ್ಕಳು ನಮ್ಮ ದೇಶದ ಮುಂದಿನ ಭವಿಷ್ಯ. ಕ್ರೀಡೆ ಸೇರಿದಂತೆ ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಕಾಲಿಡುತ್ತಿದ್ದಾರೆ. ಇದು ಆಶಾದಾಯಕ ಬೆಳೆವಣಿಗೆ ಎಂದು ಅರ್ಜುನ ಪ್ರಶಸ್ತಿ ಪುರಸ್ಕೃತೆ ಕ್ರೀಡಾಪಟು ಅಂಜು ಬಾಬಿ ಜಾರ್ಜ್ ತಿಳಿಸಿದರು.
ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ದಕ್ಷಿಣ ಪ್ರದೇಶ-II ವತಿಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಎರಡು ದಿನಗಳ ಅಂತರ-ಪ್ರಾದೇಶಿಕ ಅಥ್ಲೆಟಿಕ್ಸ್ ಕೂಟ 2025 ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪವರ್ ಗ್ರಿಡ್ ಸಂಸ್ಥೆಯ ವಿವಿಧ 11 ಪ್ರದೇಶಗಳ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಒಟ್ಟುಗೂಡಿಸಿ, ನೌಕರರಲ್ಲಿ ಸೌಹಾರ್ದತೆ, ಕ್ರೀಡಾ ಮನೋಭಾವ ಮತ್ತು ಆರೋಗ್ಯಕರ ಸ್ಪರ್ಧೆಯ ಮನೋಭಾವವನ್ನು ಬೆಳೆಸುತ್ತಿರುವುದು ಉತ್ತಮ ಬೆಳವಣಿಗೆ. ಕ್ರೀಡೆಯಲ್ಲಿ ಸೋಲು-ಗೆಲುವು ಇದ್ದದ್ದೇ. ಸೋಲನ್ನೇ ಸವಾಲಾಗಿ ಸ್ವೀಕರಿಸಿ ಉನ್ನತ ಸ್ಥಾನಕ್ಕೆ ಏರಬೇಕು. ವೃತ್ತಿಪರ ಜೀವನದಲ್ಲಿ ಕ್ರೀಡೆಗಳನ್ನು ಸಂಯೋಜಿಸುವುದು ಕೂಡ ಮಹತ್ವವಾದುದು ಎಂದು ಅಂಜು ಬಾಬಿ ಜಾರ್ಜ್ ಹೇಳಿದರು.

ಶಾಂತಿಯ ಸಂಕೇತವಾಗಿ ಕಾರ್ಯಕ್ರಮದಲ್ಲಿ ಪಾರಿವಾಳವನ್ನು ಹಾರಿಬಿಡಲಾಯಿತು. ಸಿಆರ್‌ಪಿಎಫ್ ಬ್ಯಾಂಡ್ ತಂಡದಿಂದ ಆಕರ್ಷಕ ಬ್ಯಾಂಡ್ ಪ್ರದರ್ಶನ ನಡೆಸಲಾಯಿತು.
ಕಾರ್ಯಕ್ರಮದಲ್ಲಿ SR-II ನ ಪ್ರಭಾರ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಂ.ಎಸ್. ಹೆಜಿಬ್, ರಮೇಶ್ ಬೇಬಿ, ಸಿಎಂ ಸೀನಿಯರ್ ಜಿಎಂ (ಎಫ್ & ಎ) ಟಾಫರ್ ಮೆಂಡೆಜ್, ಸಿಎಂ ಜಿಎಂ (ಎಚ್‌ಆರ್) ಅನ್ಶುಲಾ ಒಮೆಗಾ ಸಿಂಗ್, ಸಾರ್ವಜನಿಕ ಸಂಪರ್ಕಾಧಿಕಾರಿ – ಅಜಿತ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಾಗರ್ ಉದ್ಘಾಟನಾ ಸಮಾರಂಭವನ್ನು ನಿರೂಪಿಸಿದರು.

ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮಗ್ರ ಅಭಿವೃದ್ಧಿ ಮತ್ತು ಉದ್ಯೋಗಿಗಳ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸುವುದಕ್ಕಾಗಿ ಪವರ್ ಗ್ರಿಡ್ ಸಂಸ್ಥೆಯಿಂದ ಈ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿತ್ತು.



