ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಸಮೀಕ್ಷೆದಾರರಿಗೆ ದಸರಾ ರಜೆ ನೀಡುವುದು, ಸಮೀಕ್ಷೆಗಿರುವ ನ್ಯೂನತೆಗಳನ್ನು ಸರಿಪಡಿಸವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಎಂದು ಭಾಲ್ಕಿ ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ತಾಲೂಕು ಸರಕಾರಿ ನೌಕರರ ಸಂಘ ಒತ್ತಾಯಿಸಿದೆ.
ಈ ಕುರಿತು ಭಾಲ್ಕಿ ಪಟ್ಟಣದ ತಹಸೀಲ್ ಕಚೇರಿಯಲ್ಲಿ ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ ಮತ್ತು ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಬನ್ನಾಳೆ ನೇತೃತ್ವದಲ್ಲಿ ಶುಕ್ರವಾರ ತಹಸೀಲ್ದಾರಗೆ ಮನವಿ ಪತ್ರ ಸಲ್ಲಿಸಿದರು.
ʼಸಮೀಕ್ಷೆ ಕಾರ್ಯದಲ್ಲಿ ಕೈಗೊಂಡಿರುವ ಸಮೀಕ್ಷೆದಾರರು ಹಲವು ತಾಂತ್ರಿಕ ತೊಂದರೆ ಅನುಭವಿಸುತ್ತಿದ್ದಾರೆ. ಸಮೀಕ್ಷೆ ಕಾರ್ಯದಲ್ಲಿ ಇಂಟರ್‌ನೆಟ್ ಸಮಸ್ಯೆ ಎದುರಾಗುತ್ತಿದೆ. ಕುಟುಂಬ ಸದಸ್ಯರಿಗೆ ಒಟಿಪಿ ಸಮಸ್ಯೆ ಕಾಡುತ್ತಿದೆ. ಸಮೀಕ್ಷೆದಾರರಿಗೆ 150 ಮನೆಗಳನ್ನು ನಿಯೋಜಿಸಿರುವುದರಿಂದ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಹಾಗಾಗಿ ಮೇಲಾಧಿಕಾರಿಗಳು ಗಮನ ಹರಿಸಿ ಸಮೀಕ್ಷೆಗಿರುವ ಎಲ್ಲ ಅಡೆತಡೆಗಳನ್ನು ನಿವಾರಿಸುವುದರ ಜತೆಗೆ ಸಮೀಕ್ಷೆದಾರರಿಗೆ ಇರುವ ಮನೆಗಳನ್ನು ಕಡಿತಗೊಳಿಸಬೇಕು. ಸಮೀಕ್ಷೆಯಲ್ಲಿ ಬಹುತೇಕ ಶಿಕ್ಷಕರೇ ಇದ್ದಾರೆ. ಆದ್ದರಿಂದ ಸಮೀಕ್ಷೆದಾರರಿಗೆ ತಮ್ಮ ಸೇವೆಯ ವ್ಯಾಪ್ತಿಯಲ್ಲಿ ಸಮೀಕ್ಷೆ ಕೈಗೊಳ್ಳಲು ಅವಕಾಶ ಕಲ್ಪಿಸಬೇಕುʼ ಎಂದು ಮನವಿ ಮಾಡಿದರು.
ʼಬಹುತೇಕ ಸಮೀಕ್ಷೆದಾರರಿಗೆ ಇನ್ನೂ ಸಮೀಕ್ಷೆ ಕಿಟ್ ತಲುಪಿರುವುದಿಲ್ಲ. ಕೂಡಲೇ ಸಮೀಕ್ಷೆ ಕಿಟ್ ವಿತರಿಸುವುದರ ಜತೆಗೆ ಸಮೀಕ್ಷೆಯಲ್ಲಿ ಪಾಲ್ಗೊಂಡ ಸಮೀಕ್ಷೆದಾರರಿಗೆ ನಾಡಿನ ದೊಡ್ಡ ಹಬ್ಬ ಆಗಿರುವ ದಸರಾ ಹಬ್ಬದಲ್ಲಿ ನಾಲ್ಕೈದು ದಿವಸ ರಜೆ ನೀಡಬೇಕು ಎಂದು ವಿನಂತಿಸಿದರು.
ಇದನ್ನೂ ಓದಿ : ಬೀದರ್ | ಭಾರಿ ಮಳೆ : ಒಡೆದ ಐತಿಹಾಸಿಕ ತ್ರಿಪುರಾಂತ ಕೆರೆ
ತಾಲೂಕು ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ರಾಜಪ್ಪ ಪಾಟೀಲ್, ಪ್ರಮುಖರಾದ ಅಶೋಕ ಕುಂಬಾರ, ವಸಂತ ಹುಣಸನಾಳೆ, ಪ್ರಭು ಡಿಗ್ಗೆ, ನಿರಂಜಪ್ಪ ಪಾತ್ರೆ, ಶಿವಕಾಂತ ಬಾಪುರ್ಸೆ, ಅಶೋಕ, ಗದಗೆಪ್ಪ ಪಾಟೀಲ್, ಕೃಷ್ಣ ಲಾಂಚಕರ್, ವೆಂಕಟ ಮಲಗೊಂಡ, ಪ್ರಕಾಶ, ವಿಶ್ವನಾಥ, ಓಂಕಾರ, ಮಲ್ಲಿಕಾರ್ಜುನ ಪಾಟೀಲ್, ದಯಾನಂದ ಕಣಜೆ, ಶಿವಕುಮಾರ ಸೇರಿದಂತೆ ಮುಂತಾದವರು ಇದ್ದರು.