ಯುವತಿಯೊಬ್ಬರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರ ಯತ್ನಿಸಿ, ಕೊಲೆ ಬೆದರಿಕೆ ಹಾಕಿರುವ ಆರೋಪದ ಮೇಲೆ ಹಿಂದು ಜಾಗರಣ ವೇದಿಕೆಯ ಮುಖಂಡ ಸಮಿತ್ ರಾಜ್ ಧರೆಗುಡ್ಡೆ ವಿರುದ್ಧ ದಕ್ಷಿಣ ಕನ್ನಡ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಜಿಲ್ಲೆಯ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಸಮಿತ್ ರಾಜ್ ಎಂಬಾತ ಮುಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರ ಆಪ್ತನಾಗಿದ್ದಾರೆ. ಆತ ಯುವತಿಯೊಬ್ಬರ ನಗ್ನ ಫೋಟೋಗಳನ್ನು ಇಟ್ಟುಕೊಂಡು, ಆಕೆಗೆ ಬ್ಲಾಕ್‌ಮೇಲ್ ಮಾಡಿದ್ದಾರೆ. ಮಾತ್ರವಲ್ಲದೆ, ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಆಕೆಯ ಮೇಲೆ ಅತ್ಯಾಚಾರಕ್ಕೂ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಸುಮಿತ್ ರಾಜ್ ವಿರುದ್ಧ ಬಜ್ಪೆ ಪೊಲೀಸರು ಬಿಎನ್‌ಎಸ್ ಸೆಕ್ಷನ್ 354(A), 504, 506 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
2023ರಲ್ಲಿ ಸಂತ್ರಸ್ತೆಯ ಸಹೋದರನಿಗೆ ಬಜ್ಪೆಯಲ್ಲಿ ಅಪಘಾತವಾಗಿದ್ದರಿಂದ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ, ಆತನನ್ನು ಭೇಟಿ ಮಾಡಲು ಬಂದಿದ್ದ ವ್ಯಕ್ತಿಯೊಬ್ಬರು, ಸಂತ್ರಸ್ತೆಯ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ನೋಡಿ, ಸಹಾಯಕ್ಕಾಗಿ ಮೂಡಬಿದಿರೆ ಶಾಸರಿಗೆ ಕರೆ ಮಾಡುವಂತೆ, ಸಮಿತ್ ರಾಜ್‌ನ ಮೊಬೈಲ್ ನಂಬರ್ ಕೊಟ್ಟಿದ್ದರು. ಫೋನ್ ನಂಬರ್ ಪಡೆದ ಸಂತ್ರಸ್ತೆ, ಆರೋಪ ಸಮಿತ್ ರಾಜ್‌ಗೆ ಕರೆ ಮಾಡಿದ್ದು, ಶಾಸಕರೊಂದಿಗೆ ಮಾತನಾಡಿದ್ದರು. ಶಾಸಕರು ಆಸ್ಪತ್ರೆಗೆ ಭೇಟಿ ನೀಡಿ, ಆರ್ಥಿಕ ಸಹಾಯ ಮಾಡಿದ್ದರು.
ಆ ನಂತರದಲ್ಲಿ, ಸಮಿತ್ ರಾಜ್ ಸಂತ್ರಸ್ತೆಗೆ ಪದೇ ಪದೇ ಕರೆ ಮಾಡಿ ಮಾತನಾಡಿದ್ದಾರೆ. ಆಕೆಯನ್ನು ಪ್ರೀತಿಸುತ್ತಿರುವುದಾಗಿಯೂ, ಮದುವೆಯಾಗುವುದಾಗಿಯೂ ಯುವತಿಯ ಕುಟುಂಬಸ್ಥರ ಬಳಿ ಪ್ರಸ್ತಾಪ ಇಟ್ಟಿದ್ದಾರೆ. ಆದರೆ, ಆಕೆಯ ಕುಟುಂಬಸ್ಥರು ತಮ್ಮ ಮಗಳಿಗೆ ಇನ್ನೂ ಕೆಲವು ವರ್ಷಗಳ ಕಾಲ ಮದುವೆ ಮಾಡುವುದಿಲ್ಲವೆಂದು ಹೇಳಿದ್ದು, ಆತನ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.
ಆದಾಗ್ಯೂ, ಸಂತ್ರಸ್ತೆಗೆ ಕರೆಮಾಡುವುದನ್ನು ಸಮಿತ್ ರಾಜ್ ಮುಂದುವರೆಸಿದ್ದಾರೆ. ಆತನ ಕರೆಗೆ ಉತ್ತರಿಸುವುದನ್ನು ಯುವತಿ ನಿಲ್ಲಿಸಿದ್ದರು. ಹೀಗಾಗಿ, ಆತ ಕಾಲೇಜು ಮತ್ತು ಮನೆಯ ಬಳಿ ಬಂದು ಆಗ್ಗಾಗ್ಗೆ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಲೇಖನ ಓದಿದ್ದೀರಾ?: ಗ್ರೌಂಡ್ ರಿಪೋರ್ಟ್ |ತೆವಳುತ್ತಿರುವ ಜಾತಿವಾರು ಸಮೀಕ್ಷೆ- ಸಮಸ್ಯೆಗಳ ಸುರಿಮಳೆ, ಶೇ.2ರಷ್ಟು ಗುರಿ ಮುಟ್ಟಲೂ ವಿಫಲ!
2023ರ ಮಾರ್ಚ್ 23ರಂದು ಕಾಲೇಜಿನಿಂದ ಯುವತಿ ತನ್ನ ಮನೆಗೆ ತೆರಳುತ್ತಿದ್ದಾಗ, ಆಕೆಯನ್ನು ತನ್ನ ಕಾರಿನಲ್ಲಿ ಅಪಹರಿಸಿದ್ದ ಆರೋಪಿ ಸಮಿತ್ ರಾಜ್, ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಕಾರಿನಲ್ಲಿ ಬಲವಂತವಾಗಿ ಆಕೆಯನ್ನು ವಿವಸ್ತ್ರಗೊಳಿಸಿ, ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಆಕೆಯ ನಗ್ನ ಚಿತ್ರಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ. ಅಲ್ಲದೆ, ವಿಚಾರವನ್ನು ಯಾರಿಗೂ ಹೇಳದಂತೆ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯ ಬಳಿಕ ಹಲವು ಬಾರಿ ತನ್ನೊಂದಿಗೆ ಬರುವಂತೆ ಸಂತ್ರಸ್ತೆಗೆ ಸಮಿತ್ ರಾಜ್ ಪೀಡಿಸಿದ್ದಾರೆ. ಆದರೆ, ಆಕೆ ಹೋಗಲು ನಿರಾಕರಿಸಿದ್ದರಿಂದ, ಆಕೆಯ ನಗ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲಾಕ್‌ಮೇಲ್ ಮಾಡಿದ್ದಾನೆ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ವಿವರಿಸಿದ್ದಾರೆ.
ಬೇರೊಂದು ಪ್ರಕರಣದಲ್ಲಿ ಆರೋಪಿ ಸಮೀತ್ ರಾಜ್‌ನನ್ನು ಮೂಡಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಬಂಧಿಸಿದ್ದರು. ಈ ವೇಳೆ ಆತನ ಮೊಬೈಲ್‌ಅನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ, ಆತನ ಮೊಬೈಲ್‌ನಲ್ಲಿ 40-50 ಅಶ್ಲೀಲ ವೀಡಿಯೊಗಳಿದ್ದವು ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದರು. ಆ ವಿಡಿಯೋಗಳಲ್ಲಿ ಸಮಿತ್ ರಾಜ್ ಮಹಿಳೆಯೊಬ್ಬರೊಂದಿಗೆ ಲೈಂಗಿಕ ಕೃತ್ಯದಲ್ಲಿ ತೊಡಗಿದ್ದ ವಿಡಿಯೋಗಳು ಕೂಡ ಇದ್ದವು ಎಂದು ವರದಿಯಾಗಿದೆ. ಆ ಪ್ರಕರಣದಲ್ಲಿ ಜಾಮೀನು ಪಡೆದು ಸಮಿತ್ ರಾಜ್ ಜೈಲಿನಿಂದ ಹೊರಬಂದಿದ್ದರು.