ಕಬ್ಬಿಣದ ಲಾಂಗ್ ನಂತಹ ಮಾರಕ ಆಯುಧವನ್ನು ಹಿಡಿದುಕೊಂಡು ಓಡಾಡಿ ಆರ್‌ಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಭಯ, ಆತಂಕ ಉಂಟು ಮಾಡಿದ್ದ ವ್ಯಕ್ತಿಯನ್ನು ದಾವಣಗೆರೆ ಆರ್‌ಎಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆಯ ಟಿಪ್ಪುನಗರದ ಅಬ್ದುಲ್ ಸಮದ್ ಬಂಧಿತ ಆರೋಪಿಯಾಗಿದ್ದು, ನಗರದ ಆನೆಕೊಂಡ ಬಸವೇಶ್ವರ ದೇವಸ್ಥಾನದಿಂದ ಕಲ್ಲೇಶ್ವರ ಮಿಲ್ ಕಡೆ ಹೋಗುವ ರಸ್ತೆಯಲ್ಲಿ ಲಾಂಗ್ ಹಿಡಿದು ರಾಜಾರೋಷವಾಗಿ ನಡೆದಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇತ್ತೀಚೆಗೆ ಗುಂಪುಗಳ ಮಧ್ಯೆ ಹಲವು ಅಹಿತಕರ ಘಟನೆಗಳು, ವಾಗ್ವಾದ ನಡೆದಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
ಜನರಲ್ಲಿ ಭಯ ಉಂಟುಮಾಡುವಂತೆ ರಸ್ತೆಯಲ್ಲಿ ಆಯುಧ ಹಿಡಿದು, ಭಯ ಅಶಾಂತಿಯನ್ನುಂಟು ಮಾಡುವಂತ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವೀಡಿಯೋ ಆಧರಿಸಿ ಪೊಲೀಸರು ಆರ್‌ಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಾನೂನು ಸಲಹಾ ಕೇಂದ್ರ; ಸಮಾಜದ ಕಡೆಯ ವ್ಯಕ್ತಿಗೂ ಸಮಾನ ನ್ಯಾಯ: ನ್ಯಾ.ರವಿ ವಿ.ಹೊಸಮನಿ
ಘಟನೆ ಸಂಬಂಧ ಎಚ್ಚರಿಕೆ ನೀಡಿರುವ ದಾವಣಗೆರೆ ಪೊಲೀಸರು ಮಾರಕ ಆಯುಧಗಳನ್ನು ಹಿಡಿದು ಸಾರ್ವಜನಿಕವಾಗಿ ಅಡ್ಡಾಡುವುದು, ಸಾರ್ವಜನಿಕರಿಗೆ ಭಯ ಉಂಟು ಮಾಡುವುದು ಹಾಗೂ ಅಶಾಂತಿ ಉಂಟು ಮಾಡುವಂತೆ ವರ್ತಿಸುವುದು ಕಾನೂನು ಬಾಹಿರವಾಗಿದೆ. ಅಂತಹ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.