ವಾಲ್ಮೀಕಿ ಭವನ, ಆಂಜನೇಯ ದೇವಸ್ಥಾನ, ನೀರಿನ ತೊಟ್ಟಿ, ಊರಿನ ಚರಂಡಿಗಳು ಸೇರಿದಂತೆ ಸ್ವಚ್ಛತೆ ಇಲ್ಲದೇ ನೈರ್ಮಲ್ಯದ ಕೊರತೆ ಎದುರಿಸುತ್ತಿರುವ, ದುರ್ವಾಸನೆಯಿಂದ ಬೇಸತ್ತಿರುವ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದೊಡ್ಡಉಳ್ಳಾರ್ತಿ ಗ್ರಾಮಸ್ಥರು ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಮತ್ತು ತಾಲೂಕು ಪಂಚಾಯತಿಗೆ ಮನವಿ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನವಿ ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ʼʼದೊಡ್ಡ ಉಳಾರ್ತಿ ಗ್ರಾಮದ ವಾಲ್ಮೀಕಿ ಭವನದ ಹತ್ತಿರವಿರುವ ಬಾವಿಯಲ್ಲಿ ಗಿಡ ಬೆಳೆದು ಪಾಳು ಬಿದ್ದಿದ್ದು, ಬಾವಿಯಲ್ಲಿರುವ ನೀರು ಮಲಿನಗೊಂಡು ದುರ್ವಾಸನೆ ಬೀರುತ್ತಿದ್ದು, ಸುತ್ತಮುತ್ತ ಇರುವ ಮನೆಗಳು ವಾಸ ಮಾಡಲು ಕಷ್ಟವಾಗಿದೆ. ಅಲ್ಲದೆ ಗೊಲ್ಲರಹಟ್ಟಿಯ ಆಂಜನೇಯ ದೇವಸ್ಥಾನದಿಂದ ಕುಡಿಯುವ ನೀರಿನ ಘಟಕದ ಹತ್ತಿರದವರೆಗೂ ಚರಂಡಿ ಸ್ವಚ್ಛತೆ ಮಾಡದೆ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು ಇದರಿಂದ ರಸ್ತೆಯಲ್ಲಿ ಕೊಳಚೆ ನೀರು ತುಂಬಿಕೊಂಡಿದ್ದು, ಸಾರ್ವಜನಿಕರಿಗೆ ರೋಗರುಜಿನದ ಭೀತಿ ಎದುರಾಗಿದೆʼʼ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ʼʼಚಳ್ಳಕೆರೆ ರಸ್ತೆಯ ಹೋಟೆಲ್ ಬಳಿ ಇರುವ ನೀರಿನ ತೊಟ್ಟಿ ಮುರಿದು ಬಿದ್ದು ತಿಂಗಳಾಗುತ್ತಾ ಬಂದರೂ ಸರಿ ಮಾಡಿಸದೆ ಪಶುಪಕ್ಷಿ, ದನಕರುಗಳಿಗೆ ಕುಡಿಯಲು ನೀರು ಇಲ್ಲದೆ ಪರದಾಡುವಂತಾಗಿದೆ. ಅಲ್ಲದೆ ಸಾಕಷ್ಟು ದೂರು ನೀಡಿದರೂ, ಗ್ರಾಮದ ಚರಂಡಿಗಳನ್ನು ಸ್ವಚ್ಛತೆ ಮಾಡಿಸದೆ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ್ದು, ಇದರಿಂದ ಗ್ರಾಮದಲ್ಲಿ ಸ್ವಚ್ಛತೆ ಎನ್ನುವುದು ಮರೀಚಿಕೆಯಾಗಿದೆʼʼ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಗ್ರಾಮದ ಮುಖಂಡರು “ಬಾವಿಯನ್ನು ಮತ್ತು ಕುಡಿಯುವ ನೀರಿನ ಘಟಕದ ಬಳಿಯ ಚರಂಡಿ ಹಾಗೂ ಊರಿನ ಚರಂಡಿಗಳನ್ನು ಸ್ವಚ್ಚ ಮಾಡಿಸಲು ಹಲವು ಬಾರಿ ಮನವಿ ನೀಡಿದರೂ, ಗ್ರಾಮ ಪಂಚಾಯಿತಿಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸಿದ್ದಾರೆ. ಸ್ವಚ್ಛತೆಗೆ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಈ ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆ ಮಾಡಿ ಉತ್ತಮ ಅಧಿಕಾರಿಗಳನ್ನು ನೇಮಿಸಬೇಕುʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮಾರಕ ಆಯುಧದೊಂದಿಗೆ ಓಡಾಟ: ಆತಂಕ ಭಯ ಹುಟ್ಟಿಸಿದ ವ್ಯಕ್ತಿ ಬಂಧಿಸಿದ ಪೊಲೀಸರು
ದೊಡ್ಡ ಉಳ್ಳಾರ್ತಿ ಗ್ರಾಮದ ಮಂಜುನಾಥ ಕೆ ಎಲ್, ಶ್ರೀನಿವಾಸ, ಓಬಳೇಶಪ್ಪ, ತಿಪ್ಪೇಸ್ವಾಮಿ, ಬೋರಯ್ಯ, ಶಿವಣ್ಣ, ಅಮಿತ್, ಲೋಹಿತ್ ಕುಮಾರ್, ಅಜಯ್ ಕುಮಾರ್, ರಾಮಣ್ಣ, ನಾಗರಾಜ, ಪಾಲನಾಯಕ, ತಿಪ್ಪೇಶ, ರಾಜಪ್ಪ, ಶಶಿಕುಮಾರ, ಮಂಜುನಾಥ ಬಿ, ಅಪ್ಪು, ನರಸಿಂಹ ವಿನೋದ್ ಶಿವಶಂಕರ್ ರಾಜಣ್ಣ ಎಚ್, ನರಸಿಂಹ ಪಾಟೀಲ್, ತಿಪ್ಪೇಸ್ವಾಮಿ ಟಿ, ರಮೇಶ, ಮಹಾಂತೇಶ, ಭೀಮಪ್ಪ, ಭರತೇಶ್, ಗೌರೀಶ್, ತಿಪ್ಪಯ್ಯ, ಮಂಜುನಾಥ, ರವಿತೇಜ ನಾಯಕ, ದರ್ಶನ್, ಪ್ರಕಾಶ್, ಹೇಮಣ್ಣ ಸೇರಿದಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.