2025ರ ಏಷ್ಯಾಕಪ್ ಕ್ರಿಕೆಟ್ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ಮಧ್ಯೆ ಆರಂಭದಿಂದಲೂ ಹಲವು ನಾಟಕೀಯ ಬೆಳವಣಿಗೆಗಳು ನಡೆಯುತ್ತಲೇ ಬಂದಿದ್ದು, ಫೈನಲ್ ಪಂದ್ಯದಲ್ಲೂ ಅದು ಮುಂದುವರಿದಿದೆ.
ಮೊದಲ ಪಂದ್ಯದಲ್ಲಿ ಹ್ಯಾಂಡ್ಶೇಕ್ ನಿರಾಕರಣೆಯೊಂದಿಗೆ ಶುರುವಾದ ಈ ವಿವಾದವು ಇದೀಗ ಪ್ರಶಸ್ತಿ ಸ್ವೀಕಾರ ನಿರಾಕರಣೆಯೊಂದಿಗೆ ಅಂತ್ಯಗೊಂಡಿದೆ.
ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಟೀಮ್ ಇಂಡಿಯಾ 5 ವಿಕೆಟ್ಗಳ ಜಯ ಸಾಧಿಸಿತ್ತು. ಈ ಗೆಲುವಿನ ಬಳಿಕ ಭಾರತೀಯ ಆಟಗಾರರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ/ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದರು.
ಆದರೆ ಈ ನಿರಾಕರಣೆಯ ಬೆನ್ನಲ್ಲೇ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಏಷ್ಯಾಕಪ್ ಟ್ರೋಫಿಯನ್ನು ತಾವಿರುವ ಹೋಟೆಲ್ಗೆ ತೆಗೆದುಕೊಂಡು ಹೋಗಿದ್ದಾರೆ.
ಭಾನುವಾರ ತಡರಾತ್ರಿ ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪೂರ್ವನಿಗದಿಯಂತೆ ನಖ್ವಿ ಅವರೇ ಟ್ರೋಫಿ ಪ್ರದಾನ ಮಾಡಲು ಸಿದ್ದರಾಗಿದ್ದರು. ಎಸಿಸಿ ಅಧ್ಯಕ್ಷರಾಗಿ ನಖ್ವಿ ಅವರು ಪ್ರಶಸ್ತಿ ಪ್ರದಾನ ಮಾಡುವುದು ಶಿಷ್ಟಾಚಾರ. ಆದರೆ ಅವರು ಪಾಕ್ ಸರ್ಕಾರದಲ್ಲಿ ಸಚಿವರಾಗಿ ಭಾರತ ವಿರೋಧಿ ನಿಲುವು ಹೊಂದಿದ್ದಾರೆ. ಈ ಹಿಂದೆಯೂ ಅವರು ಭಾರತದ ಎದುರು ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಕ್ರೀಡಾ ಮೈದಾನದಲ್ಲೂ ಆಪರೇಷನ್ ಸಿಂಧೂರ: ಪಾಕಿಸ್ತಾನದ ಕಾಲೆಳೆದ ಪ್ರಧಾನಿ ಮೋದಿ
ಟ್ರೋಫಿ ಹಸ್ತಾಂತರಕ್ಕಾಗಿ ವೇದಿಕೆ ಸಿದ್ಧವಾಗಿದ್ದರೂ, ನಖ್ವಿ ಸ್ವತಃ ಟ್ರೋಫಿ ನೀಡಬೇಕು ಎಂದು ಹಠ ಹಿಡಿದ ಕಾರಣ ಸಮಾರಂಭವು ಒಂದು ಗಂಟೆಗೂ ಹೆಚ್ಚು ಕಾಲ ವಿಳಂಬವಾಯಿತು. ಭಾರತೀಯ ತಂಡವು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷ ಖಾಲಿದ್ ಅಲ್ ಜರೂನಿ ಅವರಿಂದ ಟ್ರೋಫಿ ಪಡೆಯಲು ಸಿದ್ಧವಾಗಿದ್ದರೂ, ಮೊಹ್ಸಿನ್ ನಖ್ವಿ ಅವರು ಅಡ್ಡಿಪಡಿಸಿದ್ದರಿಂದ ಗೊಂದಲವಾಯಿತು. ಕೊನೆಗೆ ಟ್ರೋಫಿ ವಿತರಣೆ ನಡೆಯದೇ, ಆಟಗಾರರು ಕೇವಲ ವೈಯಕ್ತಿಕ ಪ್ರಶಸ್ತಿಗಳನ್ನು ಸ್ವೀಕರಿಸಿ ಮೈದಾನ ತೊರೆದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೂರ್ಯಕುಮಾರ್ ಯಾದವ್, “ಟ್ರೋಫಿ ವಿತರಣೆ ಇಲ್ಲದೆ ಟೂರ್ನಮೆಂಟ್ ಮುಗಿಯುವುದು ಅಪರೂಪದ ಘಟನೆ. ಆದರೆ ನನ್ನ ನಿಜವಾದ ಟ್ರೋಫಿ ನನ್ನ 14 ಸಹ ಆಟಗಾರರು” ಎಂದು ಭಾವುಕವಾಗಿ ಹೇಳಿದರು.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಕೋಚ್ ಮತ್ತು ನಿರೂಪಕ ರವಿಶಾಸ್ತ್ರಿ, “ಜಯದ ನಂತರ ಆಟಗಾರರು 45 ನಿಮಿಷಗಳ ಕಾಲ ವೇದಿಕೆಯಲ್ಲಿ ನಿರರ್ಥಕವಾಗಿ ಕಾಯಬೇಕಾದ ಪರಿಸ್ಥಿತಿ ಹಾಸ್ಯಾಸ್ಪದ” ಎಂದು ಟೀಕಿಸಿದರು.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ನಡೆಗೆ ಬಿಸಿಸಿಐ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಭಾರತೀಯ ತಂಡವು ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ಬಯಸದಿದ್ದರೆ, ಅದನ್ನು ಅವರು ತಮ್ಮ ಹೋಟೆಲ್ಗೆ ತೆಗೆದುಕೊಂಡು ಹೋಗಬೇಕು ಎಂದು ಅರ್ಥವಲ್ಲ. ಹಾಗೆ ಮಾಡುವುದು ಕ್ರೀಡೆಯ ಉತ್ಸಾಹಕ್ಕೆ ವಿರುದ್ಧ ಎಂದಿದ್ದಾರೆ.