ಮಹಾರಾಷ್ಟ್ರದ ಜಲಾಶಯಗಳಿಂದ ಹೆಚ್ಚುವರಿಯಾಗಿ ಭೀಮಾನದಿಗೆ ನೀರು ಹರಿಸುತ್ತಿರುವುದರಿಂದ ಯಾದಗಿರಿ ಜಿಲ್ಲಾದ್ಯಂತ ಪ್ರವಾಹ ಪರಿಸ್ಥಿತಿ ಉಲ್ಬಣಗೊಂಡಿದೆ. ಸನ್ನತಿ ಹಾಗೂ ಗುರಸುಣಗಿ ಸಮೀಪದ ಬ್ರಿಡ್ಜ್ ಕಂ ಬ್ಯಾರೇಜ್ ನೀರಿನ ಒಳ-ಹೊರ ಹರಿವು 5.10 ಕ್ಯೂಸೆಕ್ ನೀರು ಹರಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ʼಪ್ರಸಕ್ತ ಸಾಲಿನ ನೈಋತ್ಯ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಜಿಲ್ಲಾದ್ಯಂತ ಸೆ.28 ಹಾಗೂ 29ರ ಎರಡು ದಿನಗಳಲ್ಲಿ 93 ಮೀ.ಮೀ ಮಳೆಯಾಗಿದ್ದು, ವಾಡಿಕೆಗಿಂತ 55 ಮಿ.ಮಿ. ಮಳೆ ಹೆಚ್ಚಾಗಿದೆ. ಒಟ್ಟು ಶೇ 122ರಷ್ಟು ಹೆಚ್ಚುವರಿ ಮಳೆಯಾಗಿದೆ.
104 ಮನೆ ಹಾನಿ, 22 ಜಾನುವಾರು ಸಾವು:
ಸೆಪ್ಟೆಂಬರ್ ತಿಂಗಳ 20ರಿಂದ 28ರವರೆಗೆ ಮಳೆಯಿಂದ 22 ಸಣ್ಣ ಜಾನುವಾರು ಸಾವನ್ನಪ್ಪಿದರೆ, 104 ಮನೆಗಳಿಗೆ ಹಾನಿಯಾಗಿದ್ದು, ವ್ಯಾಪಕ ಮಳೆ, ಪ್ರವಾಹದಿಂದ ಜಮೀನು ಜಲಾವೃತಗೊಂಡು ಕೃಷಿ-ತೋಟಗಾರಿಕೆ ಸೇರಿ ಒಟ್ಟು 1.18 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಡಳಿತ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಕಾಳಜಿ ಕೇಂದ್ರಕ್ಕೆ 445 ಕುಟುಂಬ:
ಭೀಮಾನದಿಯ ಪ್ರವಾಹದಿಂದ ಅನೇಕ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿ ಜಿಲ್ಲೆಯ ಐದು ಕಡೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಶಹಾಪುರ ತಾಲ್ಲೂಕಿನ ಹುರಸಗುಂಡಗಿ, ರೋಜಾ ಎಸ್. ಶಿರವಾಳ ಹಾಗೂ ವಡಗೇರಾ ತಾಲ್ಲೂಕಿನ ಶಿವನೂರ, ಮಾಚನಾಳ ಹಾಗೂ ನಾಯ್ಕಲ್ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಕಾಳಜಿ ಕೇಂದ್ರಗಳು ತೆರೆದು, ಐದು ಗ್ರಾಮಗಳ 445 ಕುಟುಂಬಗಳ ಒಟ್ಟು 1,360 ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
10 ಕಡೆ ರಸ್ತೆ ಸಂಚಾರ ಸ್ಥಗಿತ:
ಭೀಮಾನದಿ ಪ್ರವಾಹದಿಂದ ಜಿಲ್ಲೆಯ ನಾನಾ ಕಡೆ ಸೇತುವೆಗಳ ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತವಾಗಿದೆ. ಶಹಾಪುರ ತಾಲ್ಲೂಕಿನ ರೋಜಾ ಎಸ್ ಶಿರವಾಳ-ಹೊಸೂರು, ವಡಗೇರಾ ತಾಲ್ಲೂಕಿನ ಕುಮನೂರು-ಅರ್ಜುಣಗಿ, ಜೋಳದಡಗಿ-ಆನೂರು(ಕೆ), ಬಿಲ್ಹಾರ-ಬೂದಿಹಾಳ, ಯಾದಗಿರಿ ತಾಲ್ಲೂಕಿನ ಠಾಣಾಗುಂದಿ-ಹೆಡಗಿಮುದ್ರಾ, ಆನೂರ(ಬಿ)-ಆನೂರ(ಕೆ) ಸೇರಿ ಒಟ್ಟು 10 ಕಡೆ ವಿವಿಧ ಗ್ರಾಮಗಳಿಗೆ ತೆರಳುವ ರಸ್ತೆ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ.
ಇದನ್ನೂ ಓದಿ : ಬೀದರ್ ಮಹಾಮಳೆ | ಸೆ.30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ