ಭಗತ್ ಸಿಂಗ್ ಕೇವಲ ಸ್ವಾತಂತ್ರ್ಯದ ಕನಸು ಕಾಣಲಿಲ್ಲ, ಬ್ರಿಟಿಷರ ನಂತರ ನಮ್ಮ ದೇಶದಲ್ಲಿ ಎಲ್ಲರಿಗೂ ಸಮಾನತೆಯ ಸಮಾಜ ನಿರ್ಮಿಸುವ ಕನಸು ಕಂಡರವರು ಎಂದು ವಿಜಯಪುರ ಎಐಡಿವೈಒ ರಾಜ್ಯಾಧ್ಯಕ್ಷ ಶರಣಪ್ಪ ಉದ್ದಾಳ ಅಭಿಪ್ರಾಯಪಟ್ಟರು.
ವಿಜಯಪುರ ನಗರದ ಎಸ್ ಬಿ ವಿಜ್ಜಮ್ಮ ಕರಿಯರ್ ಅಕಾಡೆಮಿಯಲ್ಲಿ ವಿಜಯಪುರ ನಗರದ ಎಸ್‌ಬಿ ವಿಜ್ಜಮ್ ಕೆರಿಯರ್ ಅಕಾಡೆಮಿಯಲ್ಲಿ ಎಐಡಿವೈಓ ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಗಾಂಧೀಜಿ ಸಂಧಾನಪರ ಪಂಥದ ನಾಯಕರಾದರೆ, ಭಗತ್ ಸಿಂಗ್, ನೇತಾಜಿ ಅವರು ಸಂಧಾನರಹಿತ ಪಂಥದ ಅಗ್ರಗಣ್ಯ ನಾಯಕರು. ಸಂಧಾನಪರ ಪಂಥದವರು ಕೆಲವು ಸವಲತ್ತುಗಳಿಗಾಗಿ ಬ್ರಿಟಿಷ್ ಸರ್ಕಾರಕ್ಕೆ ಮನವಿ ಕೊಡುವುದಕ್ಕೆ ಸೀಮಿತವಾಗಿದ್ದರು. ಆದರೆ ಸಂಧಾನಾತೀತ ಪಂಥವು ಬ್ರಿಟಿಷರು ದೇಶ ಬಿಟ್ಟು ತೊಲಗಬೇಕು. ನಂತರ ದೇಶದಲ್ಲಿರುವ ಜಾತಿ-ಮತಗಳ ಅಸಮಾನತೆ ಇಲ್ಲದ, ದೇಶದ ಬೆನ್ನೆಲುಬಾದ ರೈತರ ಸಂಕಷ್ಟಗಳನ್ನು ದೂರ ಮಾಡುವ, ಮಹಿಳೆಗೆ ಸಮಾನತೆ ಹಾಗೂ ಭದ್ರತೆ ಖಾತ್ರಿಪಡಿಸುವ, ಎಲ್ಲರಿಗೂ ಉಚಿತ ಶಿಕ್ಷಣ, ಉದ್ಯೋಗ ನೀಡುವ ಸಮಾಜ ನಿರ್ಮಾಣದ ಕನಸು ಕಂಡಿದ್ದರು. ಆದರೆ ಆ ಕನಸು ಇಂದಿನ ನಮ್ಮ ಭ್ರಷ್ಟ ಆಳ್ವಿಕರು ನುಚ್ಚುನೂರು ಮಾಡಿದ್ದಾರೆ. ಭಗತ್ ಸಿಂಗ್ ಅವರ ಉತ್ತರಾಧಿಕಾರಿಗಳಾಗಿ ನಾವು ಸಮಸಮಾಜಕ್ಕಾಗಿ ಎಲ್ಲ ಯುವಜನರನ್ನು ಸಂಘಟಿಸಿ ಹೋರಾಟ ಬೆಳೆಸಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಜಮಖಂಡಿ | ದೀನದಲಿತರ ಉದ್ಧಾರಕ್ಕಾಗಿಯೇ ಗೌತಮ ಬುದ್ಧ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ: ಧಮ್ಮಪಾಲ ಬಂತೇಜಿ
ಆಧ್ಯಕ್ಷತೆ ವಹಿಸಿದ್ದ ಎಐಡಿವೊ ಜಿಲ್ಲಾ ಕಾರ್ಯದರ್ಶಿ ಸಿದ್ರಾಮ ಹಿರೇಮಠ ಮಾತನಾಡಿ, “ಈ ದೇಶದಲ್ಲಿ ಮಾನವನಿಂದ ಮಾನವನ ಶೋಷಣೆ ಕೊನೆಗೊಂಡು ಎಲ್ಲರೂ ಶಿಕ್ಷಣ, ಉದ್ಯೋಗ ಭದ್ರತೆ ಪಡೆಯುವಂತಾಗಲಿ ಎಂಬ ಕನಸನ್ನು ಭಗತ್ ಸಿಂಗ್ ಕಂಡರು. ಅಂತಹ ಒಂದು ಸಮಾಜವಾದಿ ಭಾರತದ ಕನಸನ್ನು ನನಸು ಮಾಡುವ ಜವಾಬ್ದಾರಿ ಇಂದು ನಮ್ಮ ಮೇಲಿದೆ. ಇಂದಿನ ಯುವಜನರು ಭಗತ್ ಸಿಂಗ್ ಅವರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು. ಇಂದು ಸಮಾಜದಲ್ಲಿ ಯುವಜನರು ಆನ್‌ಲೈನ್ ಗೇಮ್, ಅಶ್ಲೀಲ ಸಿನಿಮಾ-ಸಾಹಿತ್ಯಗಳಿಗೆ ಬಲಿಯಾಗುತ್ತಿದ್ದಾರೆ. ಈ ಬಂಡವಾಳಶಾಹಿ ವ್ಯವಸ್ಥೆಯ ಆಳ್ವಿಕರು ಯುವಜನರ ಬೆನ್ನೆಲುಬು ಮುರಿಯುವ ಹುನ್ನಾರಗಳನ್ನು ಮಾಡುತ್ತಿದ್ದಾರೆ. ಯುವಜನರು ಜಾತಿ-ಧರ್ಮಗಳ ಮೂಲಕ ಹಂಚಿಹೋಗದೆ ಒಗ್ಗಟ್ಟಾಗಿ ಈ ವ್ಯವಸ್ಥೆಯ ಹುನ್ನಾರವನ್ನು ಸೋಲಿಸಬೇಕು” ಎಂದು ಕರೆ ನೀಡಿದರು.
ಉಪಾಧ್ಯಕ್ಷ ಅಶೋಕ್ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಅಧ್ಯಕ್ಷ ಶ್ರೀಕಾಂತ್ ಕೊಂಡಗೂಳಿ, ಕಾಂತು ನಾಯಕ ಮುಂತಾದವರು ಕಾರ್ಯಕ್ರಮದಲ್ಲಿ ಇದ್ದರು.