ಮಸ್ಕಿ ತಾಲ್ಲೂಕು ರಂಗಾಪುರ ಗ್ರಾಮದಲ್ಲಿ ದೀರ್ಘಕಾಲದಿಂದ ಮುಂದುವರಿದಿದ್ದ ಸ್ಮಶಾನ ಸಮಸ್ಯೆಗೆ ಪರಿಹಾರ ಸಿಗುವ ಭರವಸೆ ಮೂಡಿದೆ. ಸುಮಾರು 40 ವರ್ಷಗಳಿಂದ ಸ್ಮಶಾನಕ್ಕೆ ನಿಗದಿತ ಜಾಗವಿಲ್ಲದೆ, ಗ್ರಾಮಸ್ಥರು ತಮ್ಮ ಮನೆಗಳ ಮುಂಭಾಗದಲ್ಲೇ ಅಂತ್ಯಕ್ರಿಯೆ ನೆರವೇರಿಸುತ್ತಿದ್ದರು. ಇದರಿಂದ ಗ್ರಾಮಸ್ಥರಲ್ಲಿ ಅಸಮಾಧಾನ ಹೆಚ್ಚಾಗಿತ್ತು.
ಈ ವಿಷಯವನ್ನು ಈದಿನ.ಕಾಂ ಮಾಧ್ಯಮವು “ಸ್ಮಶಾನವಿಲ್ಲದೆ ಮನೆ ಮುಂದೆಯೇ ಅಂತ್ಯಕ್ರಿಯೆ; ನಾಲ್ಕು ದಶಕಗಳ ಸಮಸ್ಯೆಗೆ ಪರಿಹಾರ ಯಾವಾಗ?” ಶೀರ್ಷಿಕೆಯಡಿ ಗುರುವಾರ ವಿಶೇಷ ವರದಿ ಪ್ರಕಟಿಸಿತ್ತು. ಈ ವರದಿಯ ಬಳಿಕ ತಹಶೀಲ್ದಾರರು ಹಾಗೂ ಸಂಬಂಧಿಸಿದ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಗ್ರಾಮಸ್ಥರ ಮನವಿ ಆಲಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದು, ಶೀಘ್ರದಲ್ಲೇ ಸ್ಮಶಾನ ಜಾಗ ನಿಗದಿ ಮಾಡುವ ಕಾರ್ಯ ಪ್ರಾರಂಭವಾಗುವ ಸಾಧ್ಯತೆ ಇದೆ.
ಈ ಸುದ್ದಿ ಓದಿದ್ದೀರಾ? ಸ್ಮಶಾನವಿಲ್ಲದೆ ಮನೆ ಮುಂದೆಯೇ ಅಂತ್ಯಕ್ರಿಯೆ; ನಾಲ್ಕು ದಶಕಗಳ ಸಮಸ್ಯೆಗೆ ಪರಿಹಾರ ಯಾವಾಗ?
ಈ ಗ್ರಾಮದ ಮುಖಂಡ ಅಮ್ಜದ್ ಮಾತನಾಡಿ, “ಹಲವು ವರ್ಷಗಳಿಂದ ತೀವ್ರವಾಗಿ ಎದುರಿಸುತ್ತಿದ್ದ ಈ ಸಮಸ್ಯೆಗೆ ಕೊನೆಗೂ ಪರಿಹಾರ ದೊರೆಯುವ ನಿರೀಕ್ಷೆ ಮೂಡಿದ್ದು, ಸ್ಥಳೀಯರು ಸಂತೋಷ ವ್ಯಕ್ತಪಡಿಸಿದ್ದಾರೆ. ಈದಿನ.ಕಾಮ್ ಮಾಧ್ಯಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು” ಎಂದರು.

