ಏಷ್ಯಾ ಕಪ್ ಟೂರ್ನಿಯಲ್ಲಿ ಭಾನುವಾರ ದುಬೈನ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿದೆ.
ಪಾಕಿಸ್ತಾನ ವಿರುದ್ಧ ಅಮೋಘ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತ ಕ್ರಿಕೆಟ್ ತಂಡಕ್ಕೆ ‘ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ” (ಬಿಸಿಸಿಐ) ₹21 ಕೋಟಿ ಬಹುಮಾನ ಘೋಷಿಸಿದೆ.
“ಇದೊಂದು ಅಸಾಧಾರಣ ಗೆಲುವಾಗಿದೆ… ಇದರ ಸಂಭ್ರಮಾಚರಣೆಯ ಭಾಗವಾಗಿ ಭಾರತ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ₹21 ಕೋಟಿ ನಗದು ಬಹುಮಾನ ಘೋಷಿಸಲಾಗಿದೆ” ಎಂದು ಬಿಸಿಸಿಐ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ತಿಳಿಸಿದೆ.
ರೋಚಕ ಪಂದ್ಯದಲ್ಲಿ ಭಾರತದ ಸ್ಪಿನ್ ಬೌಲರ್‌ಗಳು ಪಾಕಿಸ್ಥಾನದ ಮಧ್ಯಮ ಕ್ರಮಾಂಕವನ್ನು ಧ್ವಂಸಗೊಳಿಸಿದರು. ಪಾಕಿಸ್ಥಾನ 19.1 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲ್‌ಔಟ್ ಆಯಿತು.
ಭಾರತವು ಸಾಧಾರಣ ಗುರಿಯನ್ನ 5 ವಿಕೆಟ್‌ಗಳು ಕಳೆದುಕೊಂಡು 19.4 ಓವರ್‌ಗಳಲ್ಲಿ ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ 9ನೇ ಏಷ್ಯಾಕಪ್ ತನ್ನದಾಗಿಸಿಕೊಂಡಿತು.
ಮೋದಿ ಅಭಿನಂದನೆ
ಭಾರತ ತಂಡದ ಪಾಕಿಸ್ತಾವನ್ನ ಬಗ್ಗುಬಡಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ (ಟ್ವಿಟರ್)ನಲ್ಲಿ ಟ್ವೀಟ್ ಮಾಡಿ ಭಾರತ ತಂಡವನ್ನ ವಿಶೇಷ ರೀತಿಯಲ್ಲಿ ಅಭಿನಂದಿಸಿದ್ದಾರೆ. ಈ ಗೆಲುವನ್ನು “ಆಟದ ಕ್ಷೇತ್ರದಲ್ಲಿ ಆಪರೇಷನ್ ಸಿಂದೂರ್” ಎಂದು ಕರೆದಿದ್ದಾರೆ. ಗೇಮ್ ಫೀಲ್ಡ್ನಲ್ಲೂ ಆಫರೇಷನ್ ಸಿಂಧೂರ್, ” ಫಲಿತಾಂಶ ಎರಡರಲ್ಲೂ ಒಂದೇ – ಭಾರತಕ್ಕೆ ಗೆಲುವು” ಎಂದು ಮೋದಿ ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಪಹಲ್ಗಾಮ್ ಸಂತ್ರಸ್ತರಿಗೆ ದೇಣಿಗೆ ನೀಡಿದ ಸೂರ್ಯಕುಮಾರ್
ಏಷ್ಯಾ ಕಪ್ ಟೂರ್ನಿಯ ಪಂದ್ಯ ಶುಲ್ಕವನ್ನು ಸಶಸ್ತ್ರ ಪಡೆಗಳು ಮತ್ತು ಪಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ನೀಡಲು ನಿರ್ಧರಿಸಿರುವುದಾಗಿ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.
“ನಮ್ಮ ಸಶಸ್ತ್ರ ಪಡೆಗಳು ಮತ್ತು ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಗೆ ಒಳಗಾದ ಕುಟುಂಬಗಳಿಗೆ ಬೆಂಬಲ ನೀಡುವ ಸಲುವಾಗಿ ಈ ಟೂರ್ನಿಯ ಪಂದ್ಯ ಶುಲ್ಕವನ್ನು ದೇಣಿಗೆಯಾಗಿ ನೀಡಲು ನಾನು ನಿರ್ಧರಿಸಿದ್ದೇನೆ. ನಿಮ್ಮೊಂದಿಗೆ ನಾನು ಸದಾ ನಿಲ್ಲುತ್ತೇನೆ. ಜೈ ಹಿಂದ್’ ಎಂದು ಸೂರ್ಯಕುಮಾರ್ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.