ಕನ್ನಡ ರಂಗಭೂಮಿ, ಚಲನಚಿತ್ರ ಹಾಗೂ ಕಿರುತೆರೆಯ ಲೋಕದಲ್ಲಿ ವಿಶಿಷ್ಟ ಹೆಸರು ಪಡೆದ ಕಲಾವಿದ ಹುಬ್ಬಳ್ಳಿ ಮೂಲದ ಯಶವಂತ ಸರದೇಶಪಾಂಡೆ (63) ಸೋಮವಾರ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಹಾಸ್ಯನಟ, ನಿರ್ದೇಶಕ, ನಾಟಕಕಾರ, ರಚನೆಕಾರ, ಸಂಭಾಷಣಾಕಾರರಾಗಿ ತಮ್ಮ ಕಲೆಯ ಮೂಲಕ ಲಕ್ಷಾಂತರ ಜನರ ಮನ ಗೆದ್ದಿದ್ದರು. ಅವರ ‘ಆಲ್ ದಿ ಬೆಸ್ಟ್’ ನಾಟಕ ಅಭೂತಪೂರ್ವ ಯಶಸ್ಸು ಕಂಡಿತು. ಕಿರುತೆರೆ ಮತ್ತು ಚಲನಚಿತ್ರಗಳಲ್ಲಿಯೂ ಅವರು ಪಾತ್ರವಹಿಸುತ್ತಿದ್ದರು. ‘ರಾಮ ಶ್ಯಾಮ ಭಾಮಾ’ ನಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು. ಇವರ ಪತ್ನಿ ಕೂಡ ಖ್ಯಾತ ಕಿರುತೆರೆ ನಟಿಯಾಗಿದ್ದಾರೆ. ಕನ್ನಡದ ರಿಯಾಲಿಟಿ ಶೋ ಜೋಡಿ ನಂ.1ನಲ್ಲಿ ಭಾಗವಹಿಸಿದ್ದರು.
ಮುಂಬರುವ ಅಕ್ಟೋಬರ್ 18ರಂದು ಡಾ. ಪ್ರವೀಣ್ ಗೊಡಖಿ೦ಡಿ ರಚನೆಯ ‘ಕೊಳಲು’ ಎಂಬ ಹೊಸ ನಾಟಕದಲ್ಲಿ ಯಶವಂತ ಸರದೇಶಪಾಂಡೆ ಅಭಿನಯಿಸಲು ಮುಂದಾಗಿದ್ದರು. ನಿನ್ನೆ (ಸೆಪ್ಟೆಂಬರ್ 28) ಬೆಳಗ್ಗೆಯಷ್ಟೇ ತಾವು ಮಾಡುತ್ತಿರುವ ಈ ಹೊಸ ಪ್ರಯೋಗದ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಯಶವಂತ ಸರದೇಶಪಾಂಡೆ ಮಾಹಿತಿಯನ್ನು ಕೂಡ ಹಂಚಿಕೊಂಡಿದ್ದರು.
ರಂಗವರ್ತುಲ, ಬೇಂದ್ರೆ ರಂಗಾವಳಿಯ ಮುಖಾಂತರ ಬೇಂದ್ರೆಯವರ ಎಲ್ಲ ನಾಟಕಗಳನ್ನೂ ರಂಗಕ್ಕೆ ತಂದ ಕೀರ್ತಿ ಇವರದ್ದು. ರೇಡಿಯೋ, ದೂರದರ್ಶನಗಳಿಗಾಗಿ ಕಾರ್ಯಕ್ರಮಗಳನ್ನು ಅವರು ಸಿದ್ದಪಡಿಸಿದ್ದರು. ಹಾಸ್ಯ ನಾಟಕಗಳನ್ನು ನಿರ್ದೇಶಿಸಿ, ನಟಿಸಿದ ಯಶವಂತ ಅವರು, ಆಲ್ ದಿ ಬೆಸ್ಟ್, ರಾಶಿ ಚಕ್ರ, ಸಹಿ ರೀ ಸಹಿ, ದಿಲ್ ಮಾಂಗೆ ಮೋರ್ ರಂಗದ ಮೇಲೆ ತಂದ ರಂಗ ಕಲಾವಿದ ಅವರು.
ಬೆಪ್ಪುತಕ್ಕಡಿ ಬೋಳೇ ಶಂಕರ, ತುಂಟ ಮಕ್ಕಳ ತಂಟೆ, ಮಿಡ್‌ಸಮರ್ ನೈಟ್ಸ್ ಡ್ರಿಮ್, ಬಾಡಿಗೆ ಮನೆ, ಕಿತ್ತೂರು ರಾಣಿ ಚೆನ್ನಮ್ಮ, ಅಂಧಯುಗ, ಇನ್‌ಸ್ಪೆಕ್ಟರ್ ಜನರಲ್, ಪುಷ್ಪರಾಣಿ, ಗಲಿವರನ ಯಾತ್ರೆ, ಮಕ್ಕಳೆರಡೇ ಇರಲಿ, ಕುಂಟಾ ಕುಂಟ ಕುರವತ್ತಿ ಮುಂತಾದ ಅರವತ್ತಕ್ಕೂ ಹೆಚ್ಚು ನಾಟಕಗಳನ್ನು ಅವರು ನಿರ್ದೇಶಿಸಿದ್ದಾರೆ.
ಯಶವಂತ ಸರದೇಶಪಾಂಡೆ ಅವರು 1965ರ ಜೂನ್ 13ರಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದಲ್ಲಿ ಜನಿಸಿದರು. ಹುಬ್ಬಳ್ಳಿಯಲ್ಲಿ ಶಿಕ್ಷಣ ಪಡೆದ ಅವರು, ರಂಗಭೂಮಿಯಲ್ಲಿ ಹಾಸ್ಯ ನಾಟಕಗಳ ಮೂಲಕ ಖ್ಯಾತರಾದರು. ಮರಾಠಿ ನಾಟಕಗಳನ್ನು ಕನ್ನಡಕ್ಕೆ ತಂದು, ಅವುಗಳನ್ನು ನಿರ್ದೇಶಿಸಿ-ನಟಿಸಿ ಜನಪ್ರಿಯಗೊಳಿಸಿದ್ದರು. ಈಗ ಇವರ ನಿಧನಕ್ಕೆ ಕುಟುಂಬ ವರ್ಗ, ಅವರ ಅಭಿಮಾನಿಗಳು, ನಾಡಿನ ಗಣ್ಯರು ಕಂಬನಿ ಮಿಡಿದಿದ್ದಾರೆ.
“ಯಶವಂತ ಸರದೇಶಪಾಂಡೆ ಅವರ ನಿಧನಕ್ಕೆ ತುಂಬಲಾರದ ನಷ್ಟ. ಅವರ ಹಾಸ್ಯ ನಾಟಕಗಳು ಕನ್ನಡ ರಂಗಭೂಮಿಯನ್ನು ಶ್ರೀಮಂತಗೊಳಿಸಿದವು. ಅವರ ಕುಟುಂಬಕ್ಕೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಂತಾಪ ಸೂಚಿಸಿದ್ದಾರೆ.