ಶಿವಮೊಗ್ಗ, ಸ್ವಾತಂತ್ರ್ಯ ಹೋರಾಟದ ಧೃವತಾರೆಯಾಗಿದ್ದ ಭಗತ್ ಸಿಂಗ್ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಯುವಕರನ್ನು ಒಗ್ಗೂಡಿಸಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಶಿವಮೊಗ್ಗ ಶಾಸಕ ಚನ್ನಬಸಪ್ಪ ಹೇಳಿದ್ದಾರೆ.
ಶಿವಮೊಗ್ಗದ ಗಾಂಧಿ ಬಜಾರ್ ನ ಉಪ್ಪಾರ ಕೇರಿಯಲ್ಲಿ, ಭಗತ್ ಸಿಂಗ್ ಯುವಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕ್ರಾಂತಿಕಾರಿ ಭಗತ್ ಸಿಂಗ್ ಅವರ 118 ಜನುಮ ದಿನಾಚರಣೆ ಕಾರ್ಯಕ್ರಮಕ್ಕೆ ಭಗತ್ ಸಿಂಗ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಚಾಲನೆ ನೀಡಿ ಅವರು ಮಾತನಾಡಿದರು.

ಭಗತ್ ಸಿಂಗ್ ಎಂಬ ಕಿಚ್ಚು ಎಲ್ಲರಲ್ಲೂ ಅದರಲ್ಲೂ ಯುವಕರ ಮನದಲ್ಲಿ ಮೂಡಬೇಕು. ಅವರ ವಿಚಾರಗಳನ್ನು ವಿದ್ಯಾರ್ಥಿ ಹಾಗೂ ಯುವ ಜನರು ಸ್ಫೂರ್ತಿಯಾಗಿ ತಗೆದುಕೊಳ್ಳಬೇಕು ಎಂದರು.
ಕ್ರಾಂತಿಕಾರಿಯಾಗಿದ್ದ ಭಗತ್ ಸಿಂಗ್ ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ರು. ದೇಶದ ವಿರುದ್ಧವಾಗಿ ಯಾರೆ ಬಂದರೂ ಅವರನ್ನು ಸದೆಬಡಿಯುವಂತೆ ಅಂದಿನ ಕಾಲದಲ್ಲೇ ಕರೆ ನೀಡಿದ್ದರು ಎಂದರು.
ಭಗತ್ ಸಿಂಗ್ ಎಂದರೆ ರೋಮಾಂಚನಗೊಳ್ಳುವ ಒಂದು ದೊಡ್ಡ ಶಕ್ತಿ. ಭಾರತದ ಸ್ವಾತಂತ್ರ್ಯ ಚಳವಳಿಗೆ ಯುವಕರ ಪಡೆಯನ್ನು ಒಗ್ಗೂಡಿಸಿ ಪ್ರಮುಖ ಪಾತ್ರವಹಿಸಿದ ಭಗತ್ ಸಿಂಗ್ ಇಂದಿನ ಅವ್ಯವಸ್ಥೆ, ಅನ್ಯಾಯದ ವಿರುದ್ಧವಾಗಿ ಸ್ಫೂರ್ತಿಯಾಗಬೇಕಿದೆ ಎಂದು ತಿಳಿಸಿದರು.

ಆ ನಿಟ್ಟಿನಲ್ಲಿ ವಿದ್ಯಾರ್ಥಿ-ಯುವಜನರ ಆಲೋಚನೆ ಮಾಡಬೇಕು ಎಂದು ಚನ್ನಬಸಪ್ಪ ಹೇಳಿದರು.
ಕಾರ್ಯಕ್ರಮದಲ್ಲಿ ಭಗತ್ ಸಿಂಗ್ ಜನುಮ ದಿನಾಚರಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್ ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಬಳಿಕ ನೂರಾರು ಜನರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಪಶ್ಚಿಮ ಸಂಚಾರಿ ಠಾಣೆಯ ಪಿಎಸ್ಐ ತಿರುಮಲೇಶ್, ಮಾಜಿ ಸೈನಿಕರಾದ ಬಾನೇಶ್ ನಾಯ್ಕ್, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಮುಖಂಡರಾದ ಅರುಣಗಿರಿ, ಮಂಜು ಆರ್.ಟಿ.ಆರ್. ರಘು ಗೌಡ, ಸಂಜು, ಶಶಿ ಕುಮಾರ್ ಸೇರಿದಂತೆ ಹಲವರಿದ್ದರು.