ಕಲಬುರಗಿ ಜಿಲ್ಲೆಯಾದ್ಯಂತ ಸತತ ಮಳೆ ಮತ್ತು ಮಹಾರಾಷ್ಟ್ರದಿಂದ ಅಪಾರ ಪ್ರಮಾಣದ ನೀರು ಭೀಮಾ ನದಿಗೆ ಹರಿಬಿಟ್ಟಿದ್ದರಿಂದ ಉಕ್ಕಿ ಹರಿಯುತ್ತಿರುವ ಭೀಮೆಯ ಪ್ರವಾಹಕ್ಕೆ ತುತ್ತಾದ ಗ್ರಾಮಗಳ ಸಂಖ್ಯೆ ಭಾನುವಾರಕ್ಕೆ 85ಕ್ಕೆ ಏರಿಕೆಯಾಗಿದ್ದು, ಇಲ್ಲಿಯವರೆಗೆ 53 ಕಾಳಜಿಕೇಂದ್ರ ತೆರೆದು 6,664 ಜನ ಸಂತ್ರಸ್ತರನ್ನು ರಕ್ಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ʼಅಫಜಲಪೂರ, ಜೇವರ್ಗಿ, ಕಲಬುರಗಿ, ಚಿತ್ತಾಪುರ, ಚಿಂಚೋಳಿ, ಸೇಡಂ, ಕಾಳಗಿ, ಶಹಾಬಾದ ತಾಲೂಕಿನಾದ್ಯಂತ ಒಟ್ಟಾರೆ 3,050 ಪುರುಷರು, 2,270 ಮಹಿಳೆಯರು, 1,344 ಮಕ್ಕಳು ಸೇರಿದಂತೆ 6,664 ಜನರನ್ನು ರಕ್ಷಣೆ ಮಾಡಿ ಹತ್ತಿರದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿ ಅವರಿಗೆ ಊಟೋಪಚಾರ, ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ, ಆರೋಗ್ಯ ಇಲಾಖೆಯಿಂದ ನಿಯಮಿತವಾಗಿ ಆರೋಗ್ಯ ತಪಾಸಣೆ ಸಹ ಮಾಡಲಾಗುತ್ತಿದೆʼ ಎಂದು ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಮಳೆಯ ಮುನ್ಸೂಚನೆ ಇರುವ ಕಾರಣ ಸೊನ್ನ ಮತ್ತು ಬೆಣ್ಣೆತೊರಾ ಬ್ಯಾರೇಜಿಗೆ ಬರುವ ನೀರಿನ ಒಳ ಹರಿವಿನ ಪ್ರಮಾಣದಂತೆ ಹೊರ ಹರಿವು ಸಹ ಹೆಚ್ಚಲಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಸಂತ್ರಸ್ತರನ್ನು ರಕ್ಷಣೆಗೆ ಚಿತ್ತಾಪುರ ತಾಲೂಕಿನ ವಾಡಿಯಲ್ಲಿ 20 ಸಂಖ್ಯೆ ಬಲ ಹೊಂದಿರುವ ಎನ್ಡಿಆರ್ಎಫ್ ತಂಡ ಮತ್ತು ಅಫಜಲಪೂರ ತಾಲೂಕಿನ ಮಣ್ಣೂರನಲ್ಲಿ ಒಂದು ಎಸ್ಡಿಆರ್ಎಫ್ ತಂಡ ನಿಯೋಜಿಸಲಾಗಿದೆ. ಇದಲ್ಲದೆ ಇತರೆ ಪ್ರವಾಹ ಪೀಡಿತ ಪ್ರದೇಶದಲ್ಲಿ ಪೊಲೀಸ್, ಗೃಹ ರಕ್ಷಕದಳ, ಅಗ್ನಿಶಾಮಕ ತಂಡಗಳು ಬೀಡು ಬಿಟ್ಟಿದ್ದು, ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.

ಪ್ರವಾಹದ ಪರಿಸ್ಥಿತಿ ಸಮರ್ಥವಾಗಿ ಎದುರಿಸಲು ಈಗಾಗಲೇ ಪ್ರವಾಹ ಪೀಡಿತ ಪ್ರದೇಶದಲ್ಲಿ ರಕ್ಷಣೆ ಮತು ಕಾಳಜಿ ಕೇಂದ್ರ ಉಸ್ತುವಾರಿಗೆ 39 ಜನ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದೆ. ಮಾನವ ಹಾನಿ ಮತ್ತು ಪ್ರಾಣಿ ಹಾನಿ ತಡೆಯಲು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪ್ರವಾಹದಿಂದ ಅಲ್ಲಲಿ ರಸ್ತೆ ಹಾನಿ, ಸೇತುವೆ ಮುಳುಗಡೆಯಾಗಿ ರಸ್ತೆ ಸಂಚಾರ ಬಂದ್ ಆಗಿರುವುದರಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ನಿರಂತರ ಮಳೆಯಿಂದ ಅಪಾಯವಿರುವ ಮನೆ ಗೋಡೆ ಸೇರಿದಂತೆ ಇತರೆ ಕಟ್ಟಡಗಳು ಕುಸಿಯುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು. ಜಿಲ್ಲಾಡಳಿತ 24 ಗಂಟೆ ಜನರ ರಕ್ಷಣೆಯಲ್ಲಿ ಕಾರ್ಯನಿರತವಾಗಿದೆ ಎಂದಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಇಒ ಭೇಟಿ:
ಭೀಮಾ, ಕಾಗಿಣಾ ನದಿಯ ಪ್ರವಾಹಕ್ಕೆ ತುತ್ತಾಗಿರುವ ಚಿತ್ತಾಪುರ ತಾಲೂಕಿನ ಚಾಮನೂರ ಮತ್ತು ಕಡಬೂರ ಗ್ರಾಮಗಳ ನೆರೆ ಪೀಡಿತ ಪ್ರದೇಶಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ಭೇಟಿ ನೀಡಿದ ರಕ್ಷಣಾ ಕಾರ್ಯಚರಣೆ ಪರಿಶೀಲಿಸಿದರು.
ಭಾಗಶಃ ಮುಳುಗಡೆಯಾಗಿರುವ ಕಡಬೂರ ಗ್ರಾಮದಲ್ಲಿ ಎನ್.ಡಿ.ಆರ್.ಎಫ್ ತಂಡದ ಜೊತೆಯಲ್ಲಿ ರಬ್ಬರ್ ಬೋಟಿನಲ್ಲಿ ತೆರಳಿದ ಅವರು ರಕ್ಷಣಾ ಕಾರ್ಯಾಚರಣೆ ವೀಕ್ಷಿಸಿದರಲ್ಲದೆ ನೆರೆಗೆ ಒಳಗಾದ ಗ್ರಾಮಸ್ಥರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.

ಇದಲ್ಲದೆ ಕುಂದನೂರ, ವಾಡಿ ಪಟ್ಟಣದಲ್ಲಿ ಸಂತ್ರಸ್ತರಿಗೆ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಉಪಾಹಾರ ಸೇವಿಸುತ್ತಾ ಅವರ ಅಹವಾಲು ಆಲಿಸಿದರು. ಪ್ರವಾಹ ಪೀಡಿತರಿಗೆ ಯಾವುದೇ ತೊಂದರೆಯಾಗದಂತೆ ಸಕಲ ಸೌಕರ್ಯ ಕಲ್ಪಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕತ್ತಲಲ್ಲಿ ಕೊಲ್ಲೂರು:
ಚಿತ್ತಾಪುರ ತಾಲ್ಲೂಕಿನ ಕೊಲ್ಲೂರು ಗ್ರಾಮದ ಸುಮಾರು 180 ಮನೆಗಳಿಗೆ ಭೀಮಾ ನದಿ ನೀರು ನುಗ್ಗಿದ್ದು, ಗ್ರಾಮಸ್ಥರು ಅಕ್ಷರಶಃ ತತ್ತರಿಸಿದ್ದಾರೆ. ವಿದ್ಯುತ್ ಪರಿವರ್ತಕಗಳು ನೀರಿನಲ್ಲಿ ಮುಳುಗಿರುವುದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡು ಭಾಗಶಃ ಗ್ರಾಮ ಕತ್ತಲು ಆವರಿಸಿ ಪರದಾಡಿದರು.
ಗ್ರಾಮದಲ್ಲಿ ಸುಮಾರು 7 ಸಾವಿರ ಜನಸಂಖ್ಯೆ ಇದೆ. ಕೆಲ ಮನೆಗಳು ಅರ್ಧ ಮುಳುಗಿದರೆ, ಇನ್ನೂ ಕೆಲ ಮನೆಗಳ ಬಾಗಿಲುವರೆಗೆ ನೀರು ಬಂದಿದೆ. ಈ ಮನೆಗಳ ನಿವಾಸಿಗಳು ಸಂಬಂಧಿಕರ ಎತ್ತರದ ಮನೆಗಳು ಮತ್ತು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಜೇವರ್ಗಿ ತಾಲ್ಲೂಕಿನ ಮಂದರವಾಡ, ಕೋಬಾಳ, ಕೂಡಿ, ಕೋನ ಹಿಪ್ಪರಗಾ, ಕಲಬುರಗಿ ತಾಲ್ಲೂಕಿನ ಹಾಗರಗುಂಡಗಿ, ಸರಡಗಿ, ಫಿರೋಜಾಬಾದ್, ಸೋಮನಾಥಹಳ್ಳಿ, ಚಿತ್ತಾಪುರ ತಾಲ್ಲೂಕಿನ ಕಡಬೂರು ಗ್ರಾಮಸ್ಥರು ಪ್ರವಾಹ ಎದುರಾಗಿದೆ.
ಪ್ರಾದೇಶಿಕ ಆಯುಕ್ತ ಜಹೀರಾ ನಸ್ಸಿಮ್ ಅವರು ಕಲಬುರಗಿಯಲ್ಲಿ ಭೀಮಾ ಪ್ರವಾಹದಿಂದ ತತ್ತರಿಸಿರುವ ಕಲಬುರಗಿ ತಾಲೂಕಿನ ಫರತಾಬಾದ, ಸರಡಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಹಶೀಲ್ದಾರ ಕೆ.ಅನಂದಶೀಲ ಅವರಿಂದ ಸಂತ್ರಸ್ತರ ಸ್ಥಳಾಂತರ, ಕಾಳಜಿ ಕೇಂದ್ರ ಸೇರಿದಂತೆ ಇನ್ನಿತರೆ ಮಾಹಿತಿ ಪಡೆದ ಅವರು, ಯಾವುದೇ ಮಾನವ ಹಾನಿಯಾಗದಂತೆ ಅಧಿಕಾರಿಗಳು ಸ್ಥಳದಲ್ಲಿದ್ದು, ಜನರನ್ನು ಸಂರಕ್ಷಿಸಬೇಕು ಎಂದು ತಿಳಿಸಿದರು.
ಸಹಾಯವಾಣಿ ಸ್ಥಾಪನೆ:
ತುರ್ತು ಪರಿಹಾರಕ್ಕಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೇ ತುರ್ತು ಸಂದರ್ಭದಲ್ಲಿ ಈ ಸಹಾಯವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬೇಕೆಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮನವಿ ಮಾಡಿದ್ದಾರೆ.
ಜಿಲ್ಲಾ ವಿಪ್ಪತ್ತು ನಿರ್ವಹಣಾ ಕೇಂದ್ರ: 08472-278677 ಅಥವಾ 1077, ಕಲಬುರಗಿ ಮಹಾನಗರ ಪಾಲಿಕೆ-08472-241364 ಮತ್ತು 6363544601, ಆಳಂದ-9448135593, ಅಫಜಲಪೂರ-9972874714, ಚಿತ್ತಾಪುರ-9448652111, ಚಿಂಚೋಳಿ-9591499501, ಕಾಳಗಿ-9980034461, ಕಲಬುರಗಿ-8660218494, ಕಮಲಾಪೂರ-9986324648, ಜೇವರ್ಗಿ-7019270898, ಯಡ್ರಾಮಿ-9538559509, ಶಹಾಬಾದ-8152093789 ಹಾಗೂ ಸೇಡಂ-9972473122.
ನಾಳೆ ಕಲಬುರಗಿಗೆ ಸಿಎಂ ಭೇಟಿ, ಪ್ರವಾಹ ಪರಿಸ್ಥಿತಿ ಪರಿಶೀಲನೆ:
ಪ್ರವಾಹದಿಂದಾಗಿ ಭೀಮಾ ತೀರದ ಪ್ರದೇಶಗಳಲ್ಲಿ ಉಂಟಾಗಿರುವ ಹಾನಿ ಬಗ್ಗೆ ಪರಿಶೀಲನೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ (ಸೆ.30)ರಂದು ಕಲಬುರಗಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಕಲಬುರಗಿಯಲ್ಲಿ ಅಧಿಕಾರಿಗಳ ಸಭೆ ನಡೆಸಲಿರುವ ಮುಖ್ಯಮಂತ್ರಿಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೈಗೊಂಡಿರುವ ಪರಿಹಾರ ಕಾರ್ಯಗಳ ಪರಿಶೀಲನೆ ನಡೆಸಲಿದ್ದಾರೆ.
ಇದನ್ನೂ ಓದಿ : ಭೀಮಾನದಿ ಪ್ರವಾಹ : ಒಂದೇ ವಾರದಲ್ಲಿ 1.18 ಹೆಕ್ಟೇರ್ ಬೆಳೆ ಹಾನಿ, ಹಲವು ಸೇತುವೆ ಮುಳುಗಡೆ
ಕಲಬುರಗಿ, ಬೀದರ್, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುವರು ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.