ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿನ ಕಟ್ಟಡಗಳು ಹಾಗೂ ರಾಜ್ಯದ ಇತರೆ ಭಾಗಗಳಲ್ಲಿ ನಿರ್ಮಿತವಾದ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಲ್ಪಿಸುವ ಸಂಬಂಧ ಉಂಟಾದ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅಕ್ಟೋಬರ್ 8 ರಂದು ಮಹತ್ವದ ಸಭೆ ನಡೆಯಲಿದೆ.
2024 ಡಿಸೆಂಬರ್ 17ರಂದು ಸರ್ವೋಚ್ಚ ನ್ಯಾಯಾಲಯ ನೀಡಿದ ಆದೇಶದ ನಂತರ, ಸಿಸಿ (Completion Certificate) ಹಾಗೂ ಓಸಿ (Occupancy Certificate) ಇಲ್ಲದೇ ನಿರ್ಮಾಣಗೊಂಡಿರುವ ಕಟ್ಟಡಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ತೊಂದರೆಗಳು ಎದುರಾಗಿವೆ. ಈ ಹಿನ್ನೆಲೆಯಲ್ಲಿ ಇಂದು ನಡೆದ ಸಭೆಯಲ್ಲಿ ವಿಷಯ ಕುರಿತಂತೆ ಮುಖ್ಯಮಂತ್ರಿಗಳು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಹಿಂದುಳಿದ ವರ್ಗಗಳ ಹಿತಕ್ಕೆ ಕೊಳ್ಳಿ ಇಡಲು ಹೊರಟ ಬಿಜೆಪಿ
ಸುಪ್ರೀಂ ಕೋರ್ಟ್ ಆದೇಶ ಭಾರತದ ಎಲ್ಲ ರಾಜ್ಯಗಳಿಗೆ ಅನ್ವಯವಾಗುತ್ತಿರುವುದರಿಂದ, ಇತರ ರಾಜ್ಯಗಳು ಅದನ್ನು ಹೇಗೆ ಅನುಷ್ಠಾನಗೊಳಿಸುತ್ತಿವೆ ಎಂಬುದನ್ನು ಪರಿಶೀಲಿಸಲು ಮುಖ್ಯಮಂತ್ರಿಗಳು ಸೂಚಿಸಿದರು. ನಿಯಮ ಉಲ್ಲಂಘಿಸಿ ನಿರ್ಮಿತವಾಗಿರುವ ಕಟ್ಟಡಗಳನ್ನು ನೆಲಸಮಗೊಳಿಸುವುದು ಅಸಾಧ್ಯವಾಗಿರುವುದರಿಂದ, ಜನರಿಗೆ ತೊಂದರೆ ಆಗದಂತೆ ಒಂದು ಬಾರಿಗೆ ಅನ್ವಯವಾಗುವ ನಿಯಮಿತಗೊಳಿಸುವ ಕ್ರಮಕ್ಕೆ ಕಾನೂನಾತ್ಮಕ ಅವಕಾಶಗಳ ಬಗ್ಗೆ ಚರ್ಚೆ ನಡೆಯಿತು.
ಅದೇ ರೀತಿ, ಈಗಾಗಲೇ ಮನೆ ನಿರ್ಮಿಸಿ ವಾಸಿಸುತ್ತಿರುವವರಿಗೆ ಸೌಲಭ್ಯ ಕಲ್ಪಿಸಲು ಮಾರ್ಚ್ 2025ರವರೆಗಿನ ಅರ್ಜಿಗಳನ್ನು ಪರಿಗಣಿಸಿ, ಸಿಸಿ ಮತ್ತು ಓಸಿ ವಿನಾಯಿತಿಯಿಂದ ವಿದ್ಯುತ್ ಮತ್ತು ನೀರಿನ ಸಂಪರ್ಕ ನೀಡುವ ವಿಷಯವನ್ನು ಸರ್ಕಾರ ಪರಿಶೀಲಿಸಲಿದೆ. ಈ ಕುರಿತು ಸರ್ಕಾರದ ಮುಖ್ಯಕಾರ್ಯದರ್ಶಿಗಳು, ಸಂಬಂಧಿಸಿದ ಸಚಿವರು, ಅಡ್ವೋಕೇಟ್ ಜನರಲ್, ಮುಖ್ಯಮಂತ್ರಿ ಕಾನೂನು ಸಲಹೆಗಾರರು ಹಾಗೂ ಇಲಾಖಾ ಅಧಿಕಾರಿಗಳೊಂದಿಗೆ ಅಕ್ಟೋಬರ್ 8ರಂದು ಸಭೆ ನಡೆಯಲಿದ್ದು, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.