ಹಿಂದುಳಿದ ವರ್ಗಗಳ ಸಮೀಕ್ಷೆಗೆ ಗೈರಾದ 57 ಅಧಿಕಾರಿಗಳಿಗೆ ನೋಟಿಸ್ ಹಾಗೂ ಸಮೀಕ್ಷೆ ಪ್ರಗತಿ ಕಾಣದ ಹಿನ್ನೆಲೆಯಲ್ಲಿ 6 ಜನ ಅಂಗನವಾಡಿ ಕಾರ್ಯಕರ್ತೆಯರನ್ನು ಅಮಾನತು ಮಾಡಲಾಗಿದೆ.
ಲಿಂಗಸೂಗುರು ತಾಲೂಕಿನಲ್ಲಿ ಸಮೀಕ್ಷೆಗೆ ಹಾಜರಾಗದೇ ಗೈರಾದ 57 ಸಿಬ್ಬಂದಿಗಳಿಗೆ ತಾಲ್ಲೂಕು ಸಮನ್ವಯ ಸಮಿತಿ ಅಧ್ಯಕ್ಷ, ಉಪ ವಿಭಾಗಾಧಿಕಾರಿ ಬಸವಣೆಪ್ಪ ಕಲಶೆಟ್ಟಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಲಿಂಗಸೂಗುರು ತಾಲೂಕಿನಲ್ಲಿ ಸಮೀಕ್ಷೆಗೆ ನೇಮಕಗೊಂಡ ಸಿಬ್ಬಂದಿಗಳ ಪೈಕಿ 57 ಜನರು ಸಮೀಕ್ಷೆಗೆ ಹಾಜರಾಗದೇ ಗೈರಾಗಿದ್ದಾರೆ. ಹಾಜರಾಗುವಂತೆ ಸೂಚಿಸಿದರೂ ಗೈರಾಗಿದ್ದಾರೆ, ಇದರಿಂದ ಸಮೀಕ್ಷಾ ಕಾರ್ಯ ಕುಂಠಿತವಾಗಿದೆ. 24 ಗಂಟೆಯೊಳಗೆ ಸಮಜಾಯಿಷಿ ನೀಡಿ ಎಂದು ಸೂಚಿಸಿದ್ದಾರೆ.
ದೇವದುರ್ಗ ತಾಲ್ಲೂಕಿನ 6 ಜನ ಅಂಗನವಾಡಿ ಕಾರ್ಯಕರ್ತೆಯರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನವೀನ್ ಕುಮಾರ್ ಯು. ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸ್ಮಶಾನವಿಲ್ಲದೆ ಮನೆ ಮುಂದೆಯೇ ಅಂತ್ಯಕ್ರಿಯೆ ಮಾಡುತ್ತಿದ್ದ ರಂಗಾಪುರ ಗ್ರಾಮಕ್ಕೆ ಅಧಿಕಾರಿಗಳ ಭೇಟಿ
ಅಂಜಳ-2 ಕೇಂದ್ರದ ಗುಂಡಮ್ಮ, ನಗರಗುಂಡ-2 ರಂಗಮ್ಮ, ಅಶೋಕ-ನೇತಾಜಿ ಓಣಿಯ ಮುತ್ತಮ್ಮ, ಮಟ್ಟೇರ್‌ದೊಡ್ಡಿಯ ಚಾಂದಬಿ, ದೇವದುರ್ಗದ ನೇತಾಜಿ ಓಣಿಯ ವಿಜಯಲಕ್ಷ್ಮಿ ಹಾಗೂ ಬಾಪೂಜಿ ಓಣಿಯ ರೇಣುಕಾ ಅವರನ್ನು ಅಮಾನತುಗೊಳಿಸಿ ‘ನಾಲ್ಕು ದಿನವಾದರೂ ಸಮೀಕ್ಷೆಯಲ್ಲಿ ಪ್ರಗತಿ ಕಾಣಿಸಿಲ್ಲ. ಗಣತಿ ಕಾರ್ಯಕ್ಕೆ ಹೋಗದಂತೆ ಬೇರೆ ಕಾರ್ಯಕರ್ತೆಯರಿಗೂ ಪ್ರಚೋದಿಸಿದ್ದಾರೆ. ಗಣತಿ ಕಾರ್ಯಕ್ಕೂ ಹಾಜರಾಗಿಲ್ಲ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
