ಸರ್ವರ್ ಮತ್ತು ನೆಟ್‌ವರ್ಕ್ ಸಮಸ್ಯೆ, ಸರಿಯಾಗಿ ಕಾರ್ಯ ನಿರ್ವಹಿಸದ ಆ್ಯಪ್ ಸೇರಿದಂತೆ ವಿವಿಧ ಕಾರಣಗಳಿಂದ ಮೊದಲ ಐದು ದಿನಗಳ ಕಾಲ ಮಂದಗತಿಯಲ್ಲಿ ಸಾಗಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಿನ್ನೆ ಮತ್ತು ಇಂದು ವೇಗವನ್ನು ಪಡೆದುಕೊಂಡಿದೆ. ಇಂದು ಸಂಜೆಯವರೆಗೆ ಉಡುಪಿ ಜಿಲ್ಲೆಯಲ್ಲಿ ಇರುವ ಒಟ್ಟು 3,55,771 ಮನೆಗಳ ಗಣತಿ ಪೈಕಿ 51,110 ಮನೆಗಳ ಸರ್ವೆ ಕಾರ್ಯವನ್ನು ಗಣತಿದಾರರು ಪೂರ್ಣಗೊಳಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಶೇ.14.36 ರಷ್ಟು ಗಣತಿ ಕಾರ್ಯ ನಡೆದಿದೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ತಿಳಿಸಿದ್ದಾರೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ : ನಿರ್ಲಕ್ಷ್ಯ ತೋರಿದ್ದಲ್ಲಿ ಶಿಸ್ತು ಕ್ರಮ – ಜಿಲ್ಲಾಧಿಕಾರಿ
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದಲ್ಲಿರುವ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪ್ರಾರಂಭಿಸಲಾಗಿದ್ದು, ಸದರಿ ಸಮೀಕ್ಷೆಗೆ ನಿಯೋಜನೆಗೊಂಡ ಗಣತಿದಾರರು ತಮಗೆ ನಿಯೋಜಿಸಲಾಗಿರುವ ಸಮೀಕ್ಷಾ ಬ್ಲಾಕ್ ಗಳಲ್ಲಿ ಸಮೀಕ್ಷೆಯನ್ನು ನಿರ್ವಹಿಲು ಆದೇಶಿಸಲಾಗಿರುತ್ತದೆ. ಯಾವುದೇ ಗಣತಿದಾರರು ಸಮೀಕ್ಷೆಯಲ್ಲಿ ನಿಷ್ಕಾಳಜಿ ತೋರುವಂತಿಲ್ಲ. ಗಣತಿದಾರರು ಸಮೀಕ್ಷೆಯಲ್ಲಿ ನಿರಾಸಕ್ತಿ ಅಥವಾ ಅಸಡ್ಡೆ, ತೋರಿದ್ದಲ್ಲಿ, ಅನಗತ್ಯ ನೆಪಗಳನ್ನು ಹೇಳಿ ಗಣತಿ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಇಲಾಖಾ ವಿಚಾರಣೆ ನಡೆಸಲು ಹಾಗೂ ಸರ್ಕಾರದ ಕೆಲಸದಲ್ಲಿ ನಿಷ್ಕಾಳಜಿ ತೋರಿದ್ದಕ್ಕೆ ಶಿಸ್ತುಕ್ರಮ ಜರುಗಿಸಲು ಸರ್ಕಾರಕ್ಕೆ
ಶಿಫಾರಸ್ಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ : ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಸಹಾಯವಾಣಿ ಸ್ಥಾಪನೆ
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದಲ್ಲಿರುವ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆಯನ್ನು ಪ್ರಾರಂಭಿಸಲಾಗಿದ್ದು, ಸದರಿ ಸಮೀಕ್ಷೆಗೆ ಸಂಬಧಿಸಿದಂತೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ರಾಜ್ಯ ಮಟ್ಟದ ಸಹಾಯವಾಣಿ ಸಂಖ್ಯೆ : 8050770004, ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಆಯೋಗ ಸಹಾಯವಾಣಿ ಸಂಖ್ಯೆ :080-69146723 ಹಾಗೂ ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣಧಿಕಾರಿ ಕಚೇರಿ ಉಡುಪಿ ಇಲ್ಲಿ ಜಿಲ್ಲಾ ಮಟ್ಟದ ಸಹಾಯವಾಣಿ ಸಂಖ್ಯೆ: 0820- 2573596 ಅನ್ನು ಪ್ರಾರಂಭಿಸಲಾಗಿದ್ದು, ಸಾರ್ವಜನಿಕರು ಸದರಿ ಸಹಾಯವಾಣಿಗಳ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.