ಜಿಲ್ಲಾದ್ಯಂತ ನಿನ್ನೆಯಿಂದ ಮಳೆ ಬಿಡುವು ಕೊಟ್ಟಿದ್ದರಿಂದ ರೈತಾಪಿ ವರ್ಗ ಒಂದಿಷ್ಟು ನಿಟ್ಟುಸಿರು ಬಿಟ್ಟರೂ ಪ್ರವಾಹ ಮಾತ್ರ ಇನ್ನೂ ತಗ್ಗಿಲ್ಲ. ಮಾಂಜ್ರಾ ನದಿ ಪಾತ್ರದ ಗ್ರಾಮಗಳ ಜನರ ಮೊಗದಲ್ಲಿ ನೆರೆ ಭೀತಿಯ ಛಾಯೆ ಆವರಿಸಿದೆ.
ಮಹಾರಾಷ್ಟ್ರದ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹರಿಬಿಟ್ಟಿರುವುದರಿಂದ ಮಾಂಜ್ರಾ ನದಿ ಈಗಲೂ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಜಿಲ್ಲೆಯ ಹುಲಸೂರ, ಭಾಲ್ಕಿ, ಕಮಲನಗರ, ಔರಾದ್ ಹಾಗೂ ಬೀದರ್ ತಾಲ್ಲೂಕಿನ ಹಲವು ಗ್ರಾಮಗಳ ನಡುವೆ ಈಗಲೂ ಸಂಪರ್ಕ ಕಡಿತಗೊಂಡಿದೆ. ಸಾವಿರಾರು ಎಕರೆ ಬೆಳೆ ಜಲಾವೃತಗೊಂಡಿದೆ.
ಭಾನುವಾರದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಲಾಗುತ್ತಿದೆ. ಇದರಿಂದ ಮಾಂಜ್ರಾ ಮತ್ತಷ್ಟು ಭೋರ್ಗರೆಯುತ್ತಿದ್ದು, ಕೆಲವೆಡೆ ಮನೆಗಳಿಗೆ ನುಗ್ಗಿ ನುಗ್ಗಿದರೆ, ಹಲವು ಗ್ರಾಮಗಳಿಗೆ ತೆರಳುವ ರಸ್ತೆ ಸಂಪರ್ಕ ಕಡಿತವಾಗಿದೆ.
ಮಾಂಜ್ರಾ ನದಿಗೆ ಹೆಚ್ಚಿನ ನೀರು ಹರಿಬಿಟ್ಟಿದ್ದರಿಂದ ಭಾಲ್ಕಿ ತಾಲ್ಲೂಕಿನ ನಿಟ್ಟೂರ್(ಬಿ) ಗ್ರಾಮ ಸಮೀಪದ ಸೇತುವೆ ಮೇಲೆ ಸೋಮವಾರ ಬೆಳಿಗ್ಗೆಯಿಂದ ನೀರು ಬರಲಾರಂಭಿಸಿತು. ಸಂಜೆ ಪೊಲೀಸ್ ಇಲಾಖೆಯಿಂದ ಮುಂಜಾಗ್ರತಾ ಕ್ರಮವಾಗಿ ಸೇತುವೆ ಮೇಲಿಂದ ಸಂಚಾರ ಮಾಡದಂತೆ ಮುಳ್ಳು ಕಂಟಿ ಹಚ್ಚಿದ್ದರು. ಮಂಗಳವಾರ ಸೇತುವೆ ಮೇಲಿಂದ ನೀರು ಹರಿಯುತ್ತಿದ್ದು, ಸಂಚಾರ ಸಂಪೂರ್ಣ ಸ್ಥಗಿತವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಬೀದರ್ ತಾಲ್ಲೂಕಿನ ಚಿಲ್ಲರ್ಗಿ ಗ್ರಾಮದ ಕೆಲ ಮನೆಗಳಿಗೆ ಪ್ರವಾಹದ ನೀರು ಹೊಕ್ಕಿದ್ದರಿಂದ ದವಸ ಧಾನ್ಯ, ಸಾಮಾಗ್ರಿಗಳು ನೀರುಪಾಲಾಗಿದೆ. ಮಳೆ ನಿಂತರೂ ಪ್ರವಾಹ ತಗ್ಗಿಲ್ಲ, ಪ್ರವಾಹ ಭೀತಿ ಕಾಡುತ್ತಿದೆ ಎಂದು ಹೇಳುತ್ತಿದ್ದಾರೆ.
ಮಾಂಜ್ರಾ ನದಿ ತೀರದ ಗ್ರಾಮಗಳಾದ ಕೌಠಾ(ಬಿ), ಬಾಬಳಿ, ಚಂದಾಪುರ, ಇಸ್ಲಾಂಪುರ, ಬಳತ, ಸಾವಳಿ, ಹುಲಸೂರ ಕೊಂಗಳ, ಲಖನಗಾಂವ, ನಿಟ್ಟೂರ, ನಾಗರಾಳ, ಚಿಮಕೋಡ, ಗಡಿಕುಶನೂರ, ಖಾನಾಪುರ, ಕಂದಗೂಳ ಸೇರಿದಂತೆ ಹಲವು ಗ್ರಾಮಗಳ ಸಾವಿರಾರು ಎಕರೆ ಭೂಮಿ ಸಂಪೂರ್ಣ ನೀರಿನಲ್ಲಿ ಮುಳುಗಿದೆ.
ಇದನ್ನೂ ಓದಿ : ಬೀದರ್ | ವೀರಶೈವ ʼಲಿಂಗಾಯತ ಧರ್ಮʼದ ಒಂದು ಉಪಪಂಗಡ : ಬಸವಲಿಂಗ ಪಟ್ಟದ್ದೇವರು