ಬಳ್ಳಾರಿ ನಗರದ ಹೊಸ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ ಝಡ್ ಜಮೀರ್ ಅಹಮದ್ ಖಾನ್ ಉಪಸ್ಥಿತಿಯೊಂದಿಗೆ ನಡೆದ ಜನತಾದರ್ಶನಕ್ಕೆ ನಗರದ ಹಾಗೂ ಸುತ್ತಮುತ್ತಲ ಪ್ರದೇಶದ ಬಹಳಷ್ಟು ಸಾರ್ವಜನಿಕರು ನೆರೆದಿದ್ದು, ಅರ್ಜಿ ಸಲ್ಲಿಸಲು ನಾ ಮುಂದು ತಾ ಮುಂದು ಎಂದು ವೇದಿಕೆ ಕಡೆ ನುಗ್ಗತೊಡಗಿದರು. ಜನರನ್ನು ತಡೆದು ಸರತಿ ಸಾಲಿನಲ್ಲಿ ನಿಲ್ಲಿಸಲು ಕಂದಾಯ ಇಲಾಖೆಯ ಪರಿವೀಕ್ಷಕರು ಗ್ರಾಮಾಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರು ಪೊಲೀಸರೊಂದಿಗೆ ಸೇರಿ ಹರಸಾಹಸಪಟ್ಟರು.
ಅಹವಾಲು ಸಲ್ಲಿಸಲು ಸೇರಿದ ಜನ ನಾವು ಸಚಿವರಿಗೇ ಮನವಿ ಕೊಡಬೇಕೆಂದು ಪಟ್ಟು ಹಿಡಿದುಕೊಂಡಿದ್ದರಿಂದ ಈ ನೂಕುನುಗ್ಗಲು ಮತ್ತು ಗೊಂದಲಕ್ಕೆ ಕಾರಣವಾಯಿತು. ಜನತಾದರ್ಶನ ಆಯೋಜಿಸಿದ ಜಿಲ್ಲಾಡಳಿತ ವ್ಯವಸ್ಥಿತವಾದ ಸಿದ್ಧತೆಯನ್ನು ಮಾಡಿಕೊಳ್ಳದೇ ಇದ್ದುದರಿಂದ ಈ ಗೊಂದಲಕ್ಕೆ ಕಾರಣವಾಯಿತೆಂದು ಮನವಿ ಕೊಡಲು ಬಂದವರು ದೂರಿದರು. ಇದಕ್ಕೆ ಕೆಲ ಹೊತ್ತು ಮಳೆರಾಯನ ಕಾಟದಿಂದಲೂ ಕಾರ್ಯಕ್ರಮ ಗಲಿಬಿಲಿಯಾಗಲು ಕಾರಣವಾಯಿತು. ಈ ನಡುವೆ ಅಹವಾಲು ಸಲ್ಲಿಸಲು ಬಂದ ಜನತೆ ಹೈರಾಣಾದರು.
ಈ ಸುದ್ದಿ ಓದಿದ್ದೀರಾ? ಗದಗ | ಜಿಲ್ಲೆಯಲ್ಲಿ 1,12,438 ಹೆಕ್ಟೇರ ಪ್ರದೇಶ ಬೆಳೆ ಹಾನಿ; 121.33 ಕೋಟಿ ರೂ ಪರಿಹಾರ ನೀಡಲು ಪ್ರಸ್ತಾವನೆ : ಸಚಿವ ಎಚ್ ಕೆ ಪಾಟೀಲ
ಜಿಲ್ಲಾ ಉಸ್ತುವಾರಿ ಸಚಿವರು, ಗ್ರಾಮೀಣ ಶಾಸಕ ನಾಗೇಂದ್ರ, ನಗರ ಶಾಸಕ ಭರತ್ ರೆಡ್ಡಿಯವರು ಸಾಧ್ಯವಾದಷ್ಟು ಎಲ್ಲರಿಂದಲೂ ಮನವಿ ಪತ್ರಗಳನ್ನು ಪಡೆದುಕೊಂಡು ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.
ವೇದಿಕೆ ಮೇಲೆ ಬರಲು ಸಾಧ್ಯವಾಗದ ಜನರ ಹತ್ತಿರ ಖುದ್ದಾಗಿ ಉಸ್ತುವಾರಿ ಸಚಿವರು ಮತ್ತು ಶಾಸಕರುಗಳು ಹೋಗಿ ಮನವಿ ಪತ್ರವನ್ನು ಪಡೆದುಕೊಂಡು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.