ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯ ರೈತರಿಂದ ಭತ್ತ ಖರೀದಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಎಲ್ಲಾ ತಾಲೂಕುಗಳಲ್ಲಿ ನೋಂದಣಿ ಕೇಂದ್ರಗಳನ್ನು ತೆರೆಯುವಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.
ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಸರ್ಕಾರವು ಪ್ರಸಕ್ತ ಸಾಲಿಗೆ ಕನಿಷ್ಠ ಬೆಂಬಲ ಬೆಲೆಯಡಿ ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಾಲಿಗೆ ರೂ. 2369 ಹಾಗೂ ಗ್ರೇಡ್–ಎ ಭತ್ತಕ್ಕೆ ರೂ. 2389 ಗಳನ್ನು ನಿಗದಿಪಡಿಸಿದೆ. ರೈತರಿಂದ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಖರೀದಿಸಲು ಅನುಕೂಲವಾಗುವಂತೆ ಎಲ್ಲಾ ತಾಲೂಕುಗಳಲ್ಲಿ ನೋಂದಣಿ ಕೇಂದ್ರಗಳನ್ನು ತೆರೆಯಬೇಕು. ಟಿಎಪಿಸಿಎಂಎಸ್ ಕೇಂದ್ರಗಳ ಮೂಲಕ ಭತ್ತ ಖರೀದಿ ಸೌಕರ್ಯ ಕಲ್ಪಿಸಲು ನೋಂದಣಿ ಕೇಂದ್ರಗಳನ್ನು ತೆರೆಯುವ ಜೊತೆಗೆ ಖರೀದಿ ಕೇಂದ್ರಗಳು ಸೂಕ್ತ ಗೋದಾಮು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಹೊಂದಿರುವುದನ್ನು ಪರಿಶೀಲಿಸಬೇಕು. ಎಫ್‌ಎಕ್ಯೂ ಗುಣಮಟ್ಟವನ್ನು ಖಚಿತಪಡಿಸಲು ಪ್ರತೀ ಖರೀದಿ ಕೇಂದ್ರದಲ್ಲಿ ಗುಣಮಟ್ಟ ಪರೀಕ್ಷಕರನ್ನು ಹಾಗೂ ಖರೀದಿ ಅಧಿಕಾರಿಗಳನ್ನು ನಿಯೋಜಿಸಬೇಕು. ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಾಲ್, ರಿಂದ 50 ಕ್ವಿಂಟಾಲ್ ಭತ್ತವನ್ನು ಖರೀದಿಸುವ ವ್ಯವಸ್ಥೆಯಿದ್ದು, ಖರೀದಿಸಿದ ಭತ್ತದ ಹಣವನ್ನು ಡಿಬಿಟಿ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಪಾವತಿಸಲಾಗುವುದು” ಎಂದು ತಿಳಿಸಿದರು.
ಖರೀದಿ ಕೇಂದ್ರಗಳಿಂದ ಸಂಗ್ರಹವಾಗುವ ಭತ್ತವನ್ನು ಹಲ್ಲಿಂಗ್ ಮಾಡುವ ಗಿರಣಿ ಮಾಲೀಕರನ್ನು ಗುರುತಿಸುವ ಅಗತ್ಯವಿದೆ ಎಂದ ಅವರು, “ಕೃಷಿ ಇಲಾಖೆ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 40,626.30 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಾಗಿದೆ. ಅಂದಾಜು 10,95,058 ಕ್ವಿಂಟಾಲ್ ಭತ್ತ ಇಳುವರಿ ನಿರೀಕ್ಷೆಯಿದ್ದು, ಇದಕ್ಕೆ ಅನುಗುಣವಾಗಿ ನೋಂದಣಿ ಹಾಗೂ ಖರೀದಿ ಕೇಂದ್ರಗಳನ್ನು ತೆರೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು” ಇಲಾಖೆಗಳಿಗೆ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡದ ಮುಂಗಾರು ವರದಿ: ಕೋಟ್ಯಂತರ ಮೌಲ್ಯದ ಸಾರ್ವಜನಿಕ ಆಸ್ತಿಗೆ ಹಾನಿ
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವ ಪ್ರಸಾದ್ ಗಾಂವಕರ್, ಆಹಾರ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ರೇವಣ್‌ಕರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.