ಶಾಲಾ ಕಾಲೇಜು, ವಿಶ್ವವಿದ್ಯಾನಿಲಯಗಳಿಂದ ವಿದ್ಯಾರ್ಥಿ ರಾಜಕೀಯ ಸಂಘಟನೆಗಳನ್ನು ಕಳೆದುಕೊಂಡ ನಾವು ಈಗ ವಿಚಿತ್ರ, ವಿಕ್ಷಿಪ್ತ ಕಾಲಘಟ್ಟಕ್ಕೆ ಬಂದು ತಲುಪಿದ್ದೇವೆ. ಈ ಬೆಳವಣಿಗೆಗಳಿಗೆ ನಾವೆಲ್ಲರೂ ಕಾರಣರಾಗಿದ್ದೇವೆ, ಅದನ್ನು ಅವಲೋಕಿಸುವ ಜವಾಬ್ಧಾರಿ ನಮ್ಮೆಲ್ಲರ ಮೇಲೂ ಇದೆ.
ಎಪ್ಪತ್ತು ಮತ್ತು ಎಂಭತ್ತರ ದಶಕದಲ್ಲಿ ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ರಾಜಕೀಯ ಪಕ್ಷಗಳ ತಾತ್ವಿಕ, ಸೈದ್ಧಾಂತಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಸ್ಟೂಡೆಂಟ್ ಯೂನಿಯನ್ಗಳು ಇರುತ್ತಿದ್ದವು. ಅವುಗಳು ಆಯಾಯ ಪಾರ್ಟಿಯ ಸೈದ್ದಾಂತಿಕ ನಿಲುವುಗಳಿಗೆ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದ್ದವು. ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ರಾಜಕೀಯ ಅರಿವನ್ನು ಮೂಡಿಸುವುದರೊಂದಿಗೆ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಮಾನತೆಯ ಪ್ರಜ್ಞೆಯನ್ನು ಮೂಡಿಸುತ್ತಿದ್ದವು. ಪಾರ್ಟಿಗಳಿಗೆ ಸಂಬಂಧಿಸಿದ ಕೆಲವು ಜನ ಪ್ರಜ್ಞಾವಂತರು ಬೇರೆ ಬೇರೆ ಕಾಲೇಜಿನ/ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳೊಂದಿಗೆ ಚರ್ಚೆ ಸಂವಾದಗಳನ್ನು ನಡೆಸುತ್ತಿದ್ದರು. ಸಮಾಜದಲ್ಲಿ, ರಾಜ್ಯ, ರಾಷ್ಟ್ರದಲ್ಲಿ ಆಳುವ ವರ್ಗಗಳಿಂದಾಗುತ್ತಿದ್ದ ಅನ್ಯಾಯಗಳನ್ನು ಪ್ರತಿಭಟಿಸಲು ವಿದ್ಯಾರ್ಥಿಗಳನ್ನು ಅಣಿಗೊಳಿಸುತ್ತಿದ್ದರು.
ಪ್ರಪಂಚದ ಶ್ರೇಷ್ಠ ಚಿಂತಕರ, ಸಾಹಿತಿಗಳ, ಚಿತ್ರಕಲಾವಿದರ, ನಾಟಕಕಾರರ, ಸಿನೆಮಾ ನಿರ್ದೇಶಕರ ಕೃತಿಗಳನ್ನು ಓದಲು, ನೋಡಲು ಪುಸ್ತಕಗಳನ್ನು ಕೊಟ್ಟು ಪ್ರೇರೇಪಿಸುತ್ತಿದ್ದರು. ಆ ಕಾಲದಲ್ಲಿ ಹೆಚ್ಚಿನ ರಾಜಕಾರಣಿಗಳು ಬರುತ್ತಿದ್ದುದು ಈ ಹಿನ್ನೆಲೆಯಿಂದಲೇ. ಈ ರೀತಿಯ ರಾಜಕೀಯ ಸ್ಟೂಡೆಂಟ್ ಯೂನಿಯನ್ಗಳಿಂದ ಬಂದ ರಾಜಕಾರಣಿಗಳಲ್ಲಿ ದೇಶದ ರಾಜಕೀಯ, ಸಾಮಾಜಿಕ, ಸಾಂಸೃತಿಕ ಮತ್ತು ಆರ್ಥಿಕ ವಿಷಯಗಳ ಬಗ್ಗೆ ಆಳವಾದ ತಿಳಿವಳಿಕೆ ಇರುತ್ತಿತ್ತು. ಈ ಕಾರಣದಿಂದಾಗಿಯೇ ಆಗಿನ ವಿದ್ಯಾರ್ಥಿಗಳು ದೇಶದ ಬೇರೆ ಬೇರೆ ಧರ್ಮ, ಜಾತಿ, ವರ್ಗಗಳ ಜನಗಳ ಬಗ್ಗೆ, ಅವರ ಕುಂದುಕೊರತೆಗಳ ಬಗ್ಗೆ ಆಲೋಚಿಸುತ್ತಿದ್ದರು. ಯಾವುದು ಸರಿ, ಯಾವುದು ತಪ್ಪು ಎಂಬುದರ ಬಗ್ಗೆ ಅವರಿಗೆ ಒಂದು ಬಗೆಯ ನಿರ್ದಿಷ್ಟತೆ ಇರುತ್ತಿತ್ತು. ತಾವು ಓದಿದ, ಚರ್ಚಿಸಿದ, ಸಂವಾದಿಸಿದ ವಿಷಯಗಳು ಅವರ ಸಹಾಯಕ್ಕೆ ಬರುತ್ತಿದ್ದವು.
ಇದನ್ನು ಓದಿದ್ದೀರಾ?: ಭೈರಪ್ಪ ಮತ್ತು ಕುತರ್ಕದ ಉರುಳು
ಹೀಗಾಗಿಯೇ ಗಾಂಧಿ, ಅಂಬೇಡ್ಕರ್ ಪ್ರಣೀತ ವಿದ್ಯಾರ್ಥಿ ಸಂಘಟನೆಗಳಾಗಿರಬಹುದು, ರಾಮಮನೋಹರ ಲೋಹಿಯಾ ಅವರ ಸಮಜವಾದಿ ಪ್ರೇಣಿತ ವಿದ್ಯಾರ್ಥಿ ಸಂಘಟನೆಗಳಾಗಿರಬಹುದು ಅಥವಾ ಜಯಪ್ರಕಾಶ್ ನಾರಾಯಣರಿಂದ ಪ್ರೇರಿತ ವಿದ್ಯಾರ್ಥಿ ಸಂಘಟನೆಗಳಾಗಿರಬಹುದು ಇವುಗಳಿಗೆ ಒಂದು ಬದ್ಧತೆ ಇರುತ್ತಿತ್ತು. ತಮ್ಮ ಹೋರಾಟಕ್ಕೆ ಒಂದು ಸ್ಪಷ್ಟತೆ ಇರುತ್ತಿತ್ತು. ಅದು ಅವರವರ ಹಿನ್ನೆಲೆಯ, ಅನುಭವದ ಮಿತಿಗಳನ್ನು ಒಳಗೊಂಡಿದ್ದರೂ ಅದನ್ನು ವಸ್ತುನಿಷ್ಠವಾಗಿ ಅವಲೋಕಿಸುವ ತಕ್ಕ ಮಟ್ಟಿಗಿನ ಜ್ಞಾನವನ್ನು ಪಡೆದಿದ್ದರು.

ಎಪ್ಪತ್ತು ಮತ್ತು ಎಂಭತ್ತರ ದಶಕದ ವಿದ್ಯಾರ್ಥಿ ರಾಜಕೀಯ ಸಂಘಟನೆಗಳ ಹಿನ್ನೆಲೆಯಿಂದ ಬಂದ ರಾಜಕಾರಣಿಗಳನ್ನು ನೋಡುವುದಾದರೆ, ರಾಜ್ಯ, ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ಗುರುತಿಸಿಕೊಂಡು, ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿಯಾದವರನ್ನು ನಾವು ಕಾಣಬಹುದು. ಅವರೆಲ್ಲರೂ ಉತ್ತಮ ಆಡಳಿತವನ್ನೇ ಕೊಟ್ಟಿದ್ದಾರೆ ಅಂತ ನಾನೇನು ಹೇಳುತ್ತಿಲ್ಲ. ಆದರೆ ಆ ಹಿನ್ನೆಲೆಯಿಂದ ಬಂದವರಲ್ಲಿ ಕೆಲವರಾದರೂ ಗುಣಮಟ್ಟದ ಆಡಳಿತವನ್ನು ಕೊಟ್ಟಿದ್ದಾರೆ ಅಂತ ಹೇಳಬಹುದು.
ಈ ರೀತಿಯ ಹಿನ್ನೆಲೆಯಿಂದ ಬಂದ ರಾಜಕಾರಣಿಗಳನ್ನು ತೊಂಭತ್ತರ ದಶಕದವರೆಗೂ ನಾವು ಕಾಣಬಹುದು. ಆನಂತರದ ವರ್ಷಗಳಲ್ಲಿ ಅದು ಕ್ಷೀಣಿಸುತ್ತಾ ಹೋಯಿತು. ಈ ರೀತಿಯ ಹಿನ್ನೆಡೆಗೆ ಬಲವಾದ ಕಾರಣಗಳಿವೆ. ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ಞೆಯನ್ನು ಮೂಡಿಸದಂತೆ ಪ್ರಜ್ಞಾಪೂರ್ವಕವಾಗಿ ವಿದ್ಯಾರ್ಥಿಗಳನ್ನು ರಾಜಕೀಯದಿಂದ ದೂರ ಮಾಡುತ್ತಿದ್ದಾರೆ. ಓದುವ ವಿದ್ಯಾರ್ಥಿಗಳಲ್ಲಿ ರಾಜಕೀಯ ಬೆರೆಸಬೇಡಿ, ರಾಜಕೀಯ ಬೇರೆ, ವಿದ್ಯಾ ಬೇರೆ, ವಿದ್ಯೆ ಕಲಿಯಲು ಬಂದವರು ರಾಜಕೀಯ ಮಾಡಬಾರದು, ಎಳೆಯ, ಮುಗ್ಧ ಮನಸ್ಸಿನ ಮಕ್ಕಳಲ್ಲಿ ರಾಜಕೀಯದ ವಿಷದ ಬೀಜವನ್ನು ಬಿತ್ತಬೇಡಿ ಅಂತೆಲ್ಲಾ ಸತ್ಯಕ್ಕೆ ದೂರವಾದ ಸುಳ್ಳುಗಳನ್ನು ವಿದ್ಯಾರ್ಥಿಗಳಲ್ಲಿ, ವಿದ್ಯಾರ್ಥಿಗಳ ಪೋಷಕರಲ್ಲಿ, ಸರ್ಕಾರಿ, ಖಾಸಗಿ ವಿದ್ಯಾ ಸಂಸ್ಥೆಗಳಲ್ಲಿ ಹುಟ್ಟುಹಾಕಿ ತಮ್ಮ ಸ್ವಾರ್ಥದ ರಾಜಕೀಯವನ್ನು ಬಳಸಿ ರಾಜಕೀಯ ಪ್ರಜ್ಞೆಯಿಂದ ವಂಚಿತವಾದ ಒಂದು ಯುವ ಪೀಳಿಗೆಯನ್ನೇ ನಿರ್ಮಿಸಿಬಿಟ್ಟಿದ್ದಾರೆ.
ರಾಜಕೀಯ ಪ್ರಜ್ಞೆಯಿಂದ ವಂಚಿತವಾದ ಈ ಯುವ ಸಮುದಾಯದಿಂದ ಎಂಥಾ ಆಳುವ ವರ್ಗವನ್ನು ನಿರೀಕ್ಷಿಸಲು ಸಾಧ್ಯ? ನಾವು ನಮ್ಮ ಜೀವನದಲ್ಲಿ ಅನುಭವಿಸುವ ಕಷ್ಟ ಸುಖಗಳಿಗೆಲ್ಲಾ, ನಾವು ತಿನ್ನುವ ಆಹಾರದ ಬೆಲೆಯ ಏರಿಳಿತಗಳಿಗೆಲ್ಲಾ, ಸಂಚಾರಿ ನಿಯಮಗಳಿಗೆಲ್ಲಾ, ಆರೋಗ್ಯದ ಗುಣಮಟ್ಟಗಳಿಗೆಲ್ಲಾ- ಈ ಎಲ್ಲವೂ ಆಳುವ ವರ್ಗಗಳ ರಾಜಕಾರಣಿಗಳು ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ಅವಲಂಭಿತವಾಗಿರುತ್ತವೆ ಎಂಬ ಪ್ರಾಥಮಿಕ ಜ್ಞಾನವನ್ನೂ ಕಳೆದುಕೊಂಡಿರುವ ಇಂದಿನ ಸಮಾಜ ಸರ್ವನಾಶದೆಡೆಗೆ ಸಾಗುತ್ತಿರುವ ಒಂದು ಸಮಾಜದ ಸೂಚನೆಯಾಗಿದೆ.
ಚಿತ್ರಕಲಾ ವಿದ್ಯಾರ್ಥಿಯಾದ ನಾನು ಶಾಂತಿನಿಕೇತನದಲ್ಲಿ ಕಲಾ ವ್ಯಾಸಂಗ ಮಾಡುವ ಸಂದರ್ಭದಲ್ಲಿ ಮಾರ್ಕ್ಸ್ ವಾದಿ ಚಿಂತನೆಯ ವಿದ್ಯಾರ್ಥಿ ಸಂಘಟನೆಗಳ ನೇರ ಸಂಪರ್ಕಕ್ಕೆ ಬಂದೆ. ಅಲ್ಲಿ ನಡೆಯುತ್ತಿದ್ದ ಚರ್ಚೆ, ಸಂವಾದಗಳಲ್ಲಿ ಭಾಗವಹಿಸುವುದು ಅಷ್ಟೇ ಅಲ್ಲ, ಅದಕ್ಕೆ ಪೂರಕವಾದ ಪುಸ್ತಕಗಳನ್ನು ಓದುವುದು, ನಾಟಕ, ಸಿನೆಮಾಗಳನ್ನು ನೋಡುವುದು ಚರ್ಚಿಸುವುದು ನಡೆಯುತ್ತಿತ್ತು. ಅಲ್ಲಿಂದ ಪುಣೆಯ ಫ಼ಿಲಂ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಒಂದು ತಿಂಗಳ ಫ಼ಿಲಂ ಅಪ್ರಿಸಿಯೇಷನ್ ಕೋರ್ಸಿಗೆ ಸೇರಿದಾಗ ಮಲಯಾಳಂನ ಪ್ರಮುಖ ನಿರ್ದೇಶಕರಾದ ಜಾನ್ ಅಬ್ರಹಮ್ ಅವರ “ಅಮ್ಮ ಅರಿಯನ್” ಚಿತ್ರ ನೋಡುವ ಅವಕಾಶ ಸಿಕ್ಕಿತು. ಅವರ ಚಿತ್ರಗಳಲ್ಲಿ ವಿದ್ಯಾರ್ಥಿ ಸಂಘಟನೆಗಳ ಪ್ರಾಮುಖ್ಯತೆ ಮತ್ತು ಆ ಸಂಘಟನೆಗಳು ಹೇಗೆ ಒಂದು ಹೋರಾಟದ ಸ್ವರೂಪವನ್ನು ಪಡೆದು ಸಮಾಜದ ಸ್ವಾಸ್ಥತೆಗಾಗಿ ಒಗ್ಗೂಡುತ್ತವೆ ಎಂಬುದನ್ನು ಚಿತ್ರಿಸುತ್ತಾರೆ. ಅವರ ಅಮ್ಮ ಅರಿಯನ್, ವಿದ್ಯಾರ್ಥಿಗಳೇ ಇತಿಲೆ ಇತಿಲೆ, ಅಗ್ರಹಾರತ್ತಿಲ್ ಕಳದ ಈ ಎಲ್ಲಾ ಚಿತ್ರಗಳಲ್ಲಿ ವಿದ್ಯಾರ್ಥಿ ಸಂಘಟನೆಗಳ ಪ್ರಾಮುಖ್ಯತೆಯನ್ನು ತಮ್ಮ ಬಿಂಬಗಳ ಮೂಲಕ ಸ್ಪಷ್ಟಪಡಿಸುತ್ತಾರೆ.
ವಿದ್ಯಾರ್ಥಿ ರಾಜಕೀಯ ಸಂಘಟನೆಗಳನ್ನು ಕಾಲೇಜು, ವಿಶ್ವವಿದ್ಯಾನಿಲಯಗಳಿಂದ ಕಳೆದುಕೊಂಡ ನಂತರ ನಾವು ನೋಡುವುದಾದರೆ ಇಂದಿನ ರಾಜಕಾರಣಿಗಳು ಬರುತ್ತಿರುವುದು ನಗರಗಳ, ಸಣ್ಣ ಸಣ್ಣ ಪಟ್ಟಣಗಳ ಗಲ್ಲಿಗಳಿಂದ. ಗೂಂಡಾಗಳು, ಪೊರ್ಕಿಗಳು, ತಲೆಹಿಡುಕರು, ಹಫ್ತಾ ವಸೂಲಿ ಮಾಡುವವರು, ಸಿನೆಮಾ ಸ್ಟಾರ್ಗಳ ಫ್ಯಾನ್ಗಳು ರಾಜಕೀಕಿಯಕ್ಕೆ ಬರುತ್ತಿದ್ದಾರೆ. ಅವರಲ್ಲಿ ಹೆಚ್ಚು ಜನ ಹಣ ಮಾಡಲು, ಜನಪ್ರಿಯತೆ ಹೊಂದಲು, ತಮ್ಮ ಹಣವನ್ನು ದುಪ್ಪಟ್ಟು ಮಾಡಿಕೊಳ್ಳಲು, ತಮ್ಮ ತಮ್ಮ ಜಾತಿಗಳ ಮೂಲಕ ರಾಜಕಾರಣ ಮಾಡಲು ಬರುತ್ತಿದ್ದಾರೆ. ಇಂಥಾ ಸ್ವಾರ್ಥದ ಮನಸ್ಥಿತಿಯಿಂದ ತುಂಬಿದ ರಾಜಕಾರಣಿಗಳಿಂದ ಏನುತಾನೇ ನಿರೀಕ್ಷಿಸಲು ಸಾಧ್ಯ? ಶಾಲಾ ಕಾಲೇಜು, ವಿಶ್ವವಿದ್ಯಾನಿಲಯಗಳಿಂದ ವಿದ್ಯಾರ್ಥಿ ರಾಜಕೀಯ ಸಂಘಟನೆಗಳನ್ನು ಕಳೆದುಕೊಂಡ ನಾವು ಈಗ ಇದನ್ನೆಲ್ಲಾ ಅನುಭವಿಸುವ ಒಂದು ಕಾಲಘಟ್ಟಕ್ಕೆ ಬಂದು ತಲುಪಿದ್ದೇವೆ. ಯಾರೂ ಈ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ದನ್ನೂ ಕಾಣಸಿಗುವುದಿಲ್ಲ. ಈ ಎಲ್ಲಾ ಬೆಳವಣಿಗೆಗಳಿಗೆ ನಾವೆಲ್ಲರೂ ಕಾರಣರಾಗಿದ್ದೇವೆ, ಅದನ್ನು ಅವಲೋಕಿಸುವ ಜವಾಬ್ಧಾರಿ ನಮ್ಮೆಲ್ಲರ ಮೇಲೂ ಇದೆ.

ಇದನ್ನು ಓದಿದ್ದೀರಾ?: ಪಹಲ್ಗಾಮ್ ದಾಳಿ, ಯುದ್ಧ ಮತ್ತು ಕ್ರಿಕೆಟ್- ಮೋದಿ ಅಸಹ್ಯ ರಾಜಕಾರಣಕ್ಕೆ ಎಲ್ಲವೂ ಬಲಿ
ವಿದ್ಯಾರ್ಥಿ ರಾಜಕೀಯ ಸಂಘಟನೆಗಳ ಅಗತ್ಯತೆ ಹಿಂದೆಂದಿಗಿಂತಲೂ ಈಗ ಇದೆ. ಹೀಗಾಗಿಯೇ ಈ ರೀತಿಯ ರಾಜಕೀಯ ಭಕ್ತ ಭಜನಾ ಮಂಡಳಿಗಳನ್ನು ಎಲ್ಲೆಡೆ ಕಾಣಬೇಕಾಗಿ ಬಂದಿದೆ. ಅದರ ಮುಂದುವರೆದ ಭಾಗವಾಗಿ ದೇಶದ ಇಂದಿನ ಆಳುವ ವರ್ಗದ ರಾಜಕಾರಣ ತನ್ನ ರಾಜಕೀಯ ಸೈದ್ಧಾಂತಿಕತೆಯನ್ನು, ಜನವಿರೋಧಿ ನೀತಿಯನ್ನು, ಜಾತಿ ವೈಷಮ್ಯವನ್ನು, ಧಾರ್ಮಿಕ ಅಸಮಾನತೆಯನ್ನು ಶಾಲಾ ಕಾಲೇಜುಗಳ ಪಠ್ಯಗಳಲ್ಲಿ ತುಂಬಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ದ್ವೇಷದ ವಿಷವನ್ನು ಬಿತ್ತುತ್ತಿದೆ. ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾಲಯಗಳ ಸಾಲಿನಲ್ಲಿ ನಿಲ್ಲುವಂತಹ ನಮ್ಮ ವಿಶ್ವವಿದ್ಯಾನಿಲಯಗಳನ್ನು ನಾಶದ ಅಂಚಿಗೆ ತಂದು ನಿಲ್ಲಿಸಲಾಗಿದೆ. ಅವುಗಳಲ್ಲಿ ಮುಖ್ಯವಾಗಿ, ಜೆಎನ್ಯು, ಹೈದರಾಬಾದ್ ಸೆಂಟ್ರಲ್ ಯುನಿವರ್ಸಿಟಿ, ವಿಶ್ವಭಾರತಿ ಯುನಿವರ್ಸಿಟಿ, ಬರೋಡ ಯುನಿವರ್ಸಿಟಿ, ಅಷ್ಟೇ ಅಲ್ಲ ಪ್ರಸಿದ್ಧ ಕಲಾ ಸಂಸ್ಠೆಗಳಾದ ಫ಼ಿಲಂ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಎನ್ಎಫ್ಡಿಸಿ, ಭಾರತ್ ಭವನ್, ರಾಷ್ಟೀಯ ನಾಟಕ ಶಾಲೆ, ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಹೀಗೆ ಪಟ್ಟಿ ದೊಡ್ಡದಾಗುತ್ತಾ ಸಾಗುತ್ತದೆ. ಅಷ್ಟೇಕೆ ನ್ಯಾಯಾಲಯಗಳನ್ನೂ ತಮ್ಮ ಹತೋಟಿಗೆ ತೆಗೆದುಕೊಂಡಿರುವ ಇಂದಿನ ಆಳುವ ವರ್ಗದ ನಡೆ ಒಂದು ಸಮಾಜವು ಅಧೋಗತಿಯೆಡೆಗೆ ಸಾಗುತ್ತಿರುವುದರ ಸೂಚನೆಯಾಗಿದೆ. ಇನ್ನಾದರೂ ಈ ವಿಸ್ಮೃತಿಯಿಂದ ಆಚೆಗೆ ಬಂದು ಒಂದು ಪ್ರಜ್ಞಾವಂತ ಸಮಾಜವನ್ನು ನಿರ್ಮಿಸುವ ಅಗತ್ಯವಿದೆ.

ಎಂ.ಎಸ್. ಪ್ರಕಾಶ್ ಬಾಬು
ಚಲನಚಿತ್ರ ನಿರ್ದೇಶಕರು, ಕಲಾವಿದರು, ಲೇಖಕರು