ಸರ್ಕಾರ ಕೃಷಿ ಭೂಮಿ, ಬೆಳೆ ಮತ್ತು ಆಸ್ತಿಯ ಹಾನಿಯನ್ನು ಶೀಘ್ರವಾಗಿ ಮೌಲ್ಯಮಾಪನ ಮಾಡಿ ಸಂತ್ರಸ್ತ ರೈತರಿಗೆ ಆರ್ಥಿಕ ನೆರವು ನೀಡಬೇಕು. ಪರಿಹಾರ ಧನ, ಕಡಿಮೆ ಬಡ್ಡಿಯ ಸಾಲ, ರೈತರ ಸಾಲ ಮನ್ನಾ ಮತ್ತು ಬೀಜ-ಗೊಬ್ಬರಕ್ಕೆ ಸಹಾಯಧನ ಒದಗಿಸಬೇಕು.
ಭಾರೀ ಮಳೆಯಿಂದ ಭೀಮಾ ಮತ್ತು ಕೃಷ್ಣಾ ನದಿ ಉಕ್ಕಿ ಹರಿಯುತ್ತಿವೆ. ಮಹಾರಾಷ್ಟ್ರದ ಜಲಾಶಯಗಳಿಂದಲೂ ಅಧಿಕ ಪ್ರಮಾಣದ ನೀರು ಹೊರಬಿಡಲಾಗಿದೆ. ಪರಿಣಾಮ ಪ್ರವಾಹ ಎದುರಾಗಿದ್ದು, ಕಲ್ಯಾಣ ಕರ್ನಾಟಕ ಭಾಗವು ತತ್ತರಿಸಿದೆ. ಭೀಮಾ ಮತ್ತು ಕೃಷ್ಣ ತೀರದಲ್ಲಿರುವ ಹಲವು ಜಿಲ್ಲೆಗಳ ಅನೇಕ ಪ್ರದೇಶಗಳು ಜಲಾವೃತಗೊಂಡಿವೆ. ಕಲಬುರಗಿ ಜಿಲ್ಲೆಯಲ್ಲಿ ಪ್ರವಾಹ ತೀವ್ರವಾಗಿದೆ. ಜಿಲ್ಲೆಯ 53 ಪರಿಹಾರ ಕೇಂದ್ರಗಳಲ್ಲಿ 6,664 ಜನರು ಆಶ್ರಯ ಪಡೆದಿದ್ದಾರೆ. ಇದರಲ್ಲಿ 3,050 ಪುರುಷರು, 2,270 ಮಹಿಳೆಯರು ಮತ್ತು 1,344 ಮಕ್ಕಳು ಸೇರಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರವಾದ ಹಿನ್ನೆಲೆ ರಸ್ತೆಗಳು, ಸೇತುವೆಗಳು ಮತ್ತು ಬೆಳೆಗಳು ಸೇರಿದಂತೆ ಮೂಲಸೌಕರ್ಯಗಳಿಗೆ ಗಣನೀಯ ಹಾನಿಯಾಗಿದೆ. ಜನಜೀವನ ಅಸ್ತವ್ಯಸ್ತವಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಸೆಪ್ಟೆಂಬರ್ 27ರಂದು ಶೇ.48ರಷ್ಟು ಅಧಿಕ ಮಳೆಯಾಗಿದ್ದರೆ, ಬೀದರ್‌ನಲ್ಲಿ ಶೇ.60ರಷ್ಟು ಮತ್ತು ಯಾದಗಿರಿಯಲ್ಲಿ ಶೇ.63ರಷ್ಟು ಅಧಿಕ ಮಳೆಯಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಜೂನ್‌ನಿಂದ ವಾಡಿಕೆಯಂತೆ 552 ಮಿಮೀ ಮಳೆಯಾಗಿದ್ದು, ಈ ಬಾರಿ 987 ಮಿಮೀ ಮಳೆಯಾಗಿದೆ. ಈ ಬಾರಿ ಬೀದರ್‌ನಲ್ಲಿ ವಾಡಿಕೆಯಂತೆ 628 ಮಿಮೀ ಮಳೆಯಾಗಿದೆ. ಈ ಜಿಲ್ಲೆಗಳಲ್ಲಿ 2018ರಿಂದ ಈವರೆಗೆ ಇಷ್ಟೊಂದು ಭಾರೀ ಮಳೆ ಮತ್ತು ಪ್ರವಾಹ ಉಂಟಾಗಿರಲಿಲ್ಲವೆಂದು ಅಧಿಕಾರಿಗಳು ಹೇಳಿದ್ದಾರೆ. ಆದಾರೂ, 2021ರ ಸೆಪ್ಟೆಂಬರ್‌ನಲ್ಲಿ ಕಲಬುರಗಿ ಜಿಲ್ಲೆಯಲ್ಲಿ 817 ಮಿಮೀ ಮಳೆಯಾಗಿದ್ದು, ಪ್ರವಾಹ ಉಂಟಾಗಿತ್ತು ಎಂಬುದು ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಈ ಜಿಲ್ಲೆಗಳಲ್ಲಿ ಮುಂದಿನ 10 ದಿನಗಳವರೆಗೆ ಧಾರಾಕಾರ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ನಿರಂತರ ಮಳೆ ಮತ್ತು ಪ್ರವಾಹದಿಂದಾಗಿ ಕಲಬುರಗಿ, ಬೀದರ್ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ರಸ್ತೆಗಳು ಹಾಗೂ ಸೇತುವೆಗಳು ಹಾಳಾಗಿವೆ. ಕಲಬುರಗಿ ಜಿಲ್ಲೆಯಲ್ಲಿ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ರಸ್ತೆಗಳ 10 ಕಿಮೀಗೂ ಹೆಚ್ಚು ಹಾನಿಯಾಗಿರುವುದಾಗಿ ಅಧಿಕಾರಿಗಳು ಅಂದಾಜಿಸಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ, 67 ಕಿಮೀ ರಸ್ತೆಗಳು, 29 ಸೇತುವೆಗಳು ಮತ್ತು ರಾಜಕಾಲುವೆಗಳು, ಪೈಸ್ ರಾಜಕಾಲುವೆಗಳು ಮತ್ತು ಏರಿಗಳು ಹಾನಿಗೊಳಗಾಗಿವೆ. ಆದರೆ, ಮೂಲಸೌಕರ್ಯಗಳು ಹಾನಿಯಾಗಿರುವ ಬಗ್ಗೆ ಅಧಿಕಾರಿಗಳು ಇನ್ನೂ ಅಂತಿಮ ಮೌಲ್ಯಮಾಪನ ಮಾಡಿಲ್ಲ. ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳ ಲೋಕೋಪಯೋಗಿ ಅಧಿಕಾರಿಗಳು ರಸ್ತೆಗಳ ತಕ್ಷಣದ ಪುನಃಸ್ಥಾಪನೆಯನ್ನು ಕೈಗೊಳ್ಳಲು 50 ಕೋಟಿ ರೂ.ಗಳನ್ನು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ.
“ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಇತರ ಜಿಲ್ಲೆಗಳು ಪ್ರತಿ ವರ್ಷ ಬರಗಾಲಕ್ಕೆ ಗುರಿಯಾಗುತ್ತವೆ. ಆದರೆ, ಬಂಗಾಳಕೊಲ್ಲಿಯಲ್ಲಿನ ಹವಾಮಾನ ಪರಿಸ್ಥಿತಿ ಹಠಾತ್ ಬದಲಾವಣೆಯಾಗಿದ್ದು, ಒಡಿಶಾ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದ ಉತ್ತರ ಒಳನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ” ಎಂದು ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಡಾ. ಸಿ ಎಸ್ ಪಾಟೀಲ್ ತಿಳಿಸಿದ್ದಾರೆ.

ಪದ್ಧತಿಯಲ್ಲಿನ ಬದಲಾವಣೆಯನ್ನು ಹೊರತುಪಡಿಸಿ ಹವಾಮಾನ ಮುನ್ಸೂಚನೆಗೆ ಅನುಗುಣವಾಗಿ ತಮ್ಮ ಕೃಷಿ ಚಟುವಟಿಕೆಗಳನ್ನು ಯೋಜಿಸುವಂತೆ ಸಲಹೆ ನೀಡಿದ್ದಾರೆ.
“ಕಲಬುರಗಿ ಜಿಲ್ಲೆಯ ಕೃಷಿ ಹೊಲಗಳಲ್ಲಿ ಹೆಚ್ಚಿನ ಪ್ರಮಾಣದ ಸುಣ್ಣದ ಕಲ್ಲು ಇರುವುದರಿಂದ ಮಳೆನೀರು ಹಲವಾರು ದಿನಗಳವರೆಗೆ ನಿಶ್ಚಲವಾಗಿರುತ್ತದೆ. ಆದ್ದರಿಂದ, ಅಧಿಕ ಮಳೆಯ ಸಮಯದಲ್ಲಿ ನೀರು ಸರಾಗವಾಗಿ ಹರಿಯುವಂತೆ ರಚನೆಗಳನ್ನು ನಿರ್ಮಿಸಲು ರೈತರಿಗೆ ಸೂಚಿಸಲಾಗಿದೆ” ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್ ಸಲಹೆ ನೀಡಿದ್ದಾರೆ.
ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅಕ್ಟೋಬರ್ 15ರವರೆಗೆ ಮಧ್ಯಂತರ ಮಳೆ ಮುಂದುವರಿಯುತ್ತದೆಂದು ಬೀದರ್ ಕೃಷಿ ಸಂಶೋಧನಾ ಕೇಂದ್ರದ ಭಾರತ ಹವಾಮಾನ ಇಲಾಖೆಯ ತಾಂತ್ರಿಕ ಅಧಿಕಾರಿ ಬಸವರಾಜ ಬಿರಾದಾರ್ ಹೇಳಿದ್ದಾರೆ.
“ಸೆಪ್ಟೆಂಬರ್ ಅಂತ್ಯದಿಂದ ಈ ಪ್ರದೇಶದಲ್ಲಿ ರಾಬಿ ಋತು ಆರಂಭವಾಗಬೇಕಿತ್ತು. ಆದರೆ, ಹವಾಮಾನ ಬದಲಾವಣೆಯಿಂದಾಗಿ ನಿರಂತರ ಮಳೆಯಾಗುತ್ತಿರುವುದರಿಂದ ಮುಂದಿನ ಬೆಳೆಗೆ ಬಿತ್ತನೆ ಕಾರ್ಯ ವಿಳಂಬವಾಗಿದೆ. 2018ರಿಂದ ಈ ಜಿಲ್ಲೆಗಳು ಇಷ್ಟೊಂದು ಭಾರೀ ಮಳೆ ಮತ್ತು ಪ್ರವಾಹವನ್ನು ಅನುಭವಿಸಿಲ್ಲ” ಎಂದು ಹೇಳಿದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಳೆ ಮುಂದುವರೆದಿದ್ದು, ಕರ್ನಾಟಕ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಿದೆ. ಯಾದಗಿರಿ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಭೀಮಾ ನದಿಯು ತೀವ್ರ ಪ್ರವಾಹದ ಮಟ್ಟದಲ್ಲಿ ಹರಿಯುತ್ತಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ(ಕೆಎಸ್‌ಎನ್‌ಡಿಎಂಸಿ) ವರದಿ ಮಾಡಿದೆ.
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದಲ್ಲಿ ಶುಕ್ರವಾರ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮನೆಯ ಗೋಡೆ ಕುಸಿದು 11 ವರ್ಷದ ಬಾಲಕ ದರ್ಶನ್ ನಾಗಪ ಲಾಥೂರ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಗಾಯಗೊಂಡಿರುವ ಆತನ ಸಹೋದರ ಚಿಕಿತ್ಸೆ ಪಡೆಯುತ್ತಿದ್ದಾನೆ.
ವಿಜಯಪುರ ಜಿಲ್ಲೆಯ ತಾಳಿಕೋಟೆ ಬಳಿ ಬಳಿ ಹರಿಯುತ್ತಿರುವ ದೋಣಿ ನದಿ ನೀರಿನಲ್ಲಿ ಇಬ್ಬರು ರೈತರು ಕೊಚ್ಚಿ ಹೋಗಿದ್ದರು. ಒಬ್ಬರು ಪತ್ತೆಯಾಗಿದ್ದು, ಇನ್ನೊಬ್ಬರ ಸುಳಿವು ಸಿಕ್ಕಿಲ್ಲ.
ಭೀಮಾ ನದಿ ಪ್ರವಾಹದಿಂದ ಉಂಟಾದ ಹಾನಿಯು ಭೀಕರ ಪ್ರಮಾಣವನ್ನು ತಲುಪಿದ್ದು, ಮಹಾರಾಷ್ಟ್ರದ ಉಜನಿ, ಸಿನಾ ಮತ್ತು ವೀರ್ ಜಲಾಶಯಗಳಿಂದ 3.5 ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಭೀಮಾ ನದಿ ಉಕ್ಕಿ ಹರಿಯುವುದರಿಂದ ಭಾರೀ ಪ್ರಮಾಣದ ಮೂಲಸೌಕರ್ಯ ಹಾನಿ ಉಂಟಾಗಿದೆ.

ಕಲಬುರಗಿ ಜಿಲ್ಲೆಯಲ್ಲಿ 27 ಸೇತುವೆಗಳು ಮುಳುಗಡೆಯಾಗಿವೆ. ಬೀದರ್‌ನಲ್ಲಿ 179.60 ಕಿಮೀ ರಸ್ತೆಗಳು ಹಾನಿಗೊಳಗಾಗಿದ್ದು, 420 ಶಾಲಾ ಕೊಠಡಿಗಳು, 246 ಅಂಗನವಾಡಿ ಕಟ್ಟಡಗಳು ಹಾನಿಗೊಳಗಾಗಿವೆ. 246 ವಿದ್ಯುತ್ ಕಂಬಗಳು ಮತ್ತು 36 ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೊಳಗಾಗಿವೆ.
ಕೃಷಿ ನಷ್ಟ(ಬೆಳೆ ಹಾನಿ)
ನೂರಾರು ಎಕರೆ ಭತ್ತ, ಹತ್ತಿ, ಕಬ್ಬು ಮತ್ತು ದ್ರಾಕ್ಷಿ ಬೆಳೆಗಳು ಜಲಾವೃತವಾಗಿದ್ದು, ಶೇ.80ರಷ್ಟು ಬೆಳೆಹಾನಿಯಾಗಿದೆ. ಜೆಟ್ಟೂರು ಗ್ರಾಮದ ದನದ ಕೊಟ್ಟಿಗೆಗೆ ನೀರು ನುಗ್ಗಿ 40 ಎತ್ತುಗಳು ಮೃತಪಟ್ಟಿವೆ. ಗೋಡೆ ಕುಸಿತದಿಂದಾಗಿ 22 ಸಣ್ಣ ಜಾನುವಾರುಗಳು(ಕುರಿ ಮತ್ತು ಮೇಕೆಗಳು) ಸಾವನ್ನಪ್ಪಿವೆ.
ಕಲ್ಯಾಣ ಕರ್ನಾಟಕ ಪ್ರವಾಹ: ಜಿಲ್ಲಾವಾರು ಪರಿಣಾಮ ವಿಶ್ಲೇಷಣೆ
ಕಲಬುರಗಿ ಜಿಲ್ಲೆ ಪ್ರವಾಹದಿಂದ ಹೆಚ್ಚು ಹಾನಿಗೊಳಗಾಗಿದ್ದು, ಅಫ್ಜಲ್‌ಪುರ, ಜೇವರ್ಗಿ, ಚಿತ್ತಾಪುರ ಮತ್ತು ಸೇಡಂ ತಾಲೂಕುಗಳ ಗ್ರಾಮಗಳು ತೀವ್ರವಾಗಿ ಹಾನಿಗೊಳಗಾಗಿವೆ. ಜೇವರ್ಗಿ ಬಳಿಯ ಕಟ್ಟಿಸಂಗಾವಿ ಸೇತುವೆ ಸಂಪೂರ್ಣವಾಗಿ ಮುಳುಗಿದ್ದು, ಬೀದರ್ ಮತ್ತು ಶ್ರೀರಂಗಪಟ್ಟಣ ನಡುವಿನ ರಾಷ್ಟ್ರೀಯ ಹೆದ್ದಾರಿ 50ರ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಬೀದರ್ ಜಿಲ್ಲೆಯಲ್ಲಿ ಹಾನಿ
ಇಂಚೂರ್ ಸೇತುವೆ ಮುಳುಗಡೆಯಾಗಿದ್ದು, ಮಹಾರಾಷ್ಟ್ರ ಸಂಪರ್ಕ ಕಡಿತಗೊಂಡಿದೆ. ಹುಲಸೂರು ತಾಲೂಕಿನಲ್ಲಿ ಮೂರು ಮನೆಗಳು ಕುಸಿದಿವೆ. 266 ಗ್ರಾಮಸ್ಥರನ್ನು ಪರಿಹಾರ ಕೇಂದ್ರಗಳಲ್ಲಿ ಇರಿಸಲಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ ಹಾನಿ
1,160 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, 5 ಪರಿಹಾರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸೆಪ್ಟೆಂಬರ್ 20 ರಿಂದ 104 ಮನೆಗಳಿಗೆ ಹಾನಿ ಉಂಟಾಗಿದೆ. ಸೆಪ್ಟೆಂಬರ್ 22ರಿಂದ 28ರವರೆಗೆ 122% ಹೆಚ್ಚುವರಿ ಮಳೆ ದಾಖಲಾಗಿದೆ.

ರಾಯಚೂರು ಜಿಲ್ಲೆಯಲ್ಲಿ ಉಂಟಾಗಿರುವ ಹಾನಿ
ಭೀಮಾ ನದಿ ಕೃಷ್ಣಾ ನದಿಯೊಂದಿಗೆ ವಿಲೀನವಾಗಿ ಮಸ್ಕಿಯಲ್ಲಿ 15 ಮನೆಗಳು ಕುಸಿದಿವೆ. ಗುರ್ಜಾಪುರ ಸೇತುವೆ-ಕಮ್-ಬ್ಯಾರೇಜ್ ಮುಳುಗಡೆಯಾಗಿದೆ.
ನಿರಂತರ ಮಳೆ ಮತ್ತು ಉಕ್ಕಿ ಹರಿಯುವ ನದಿಗಳು, ವಿಶೇಷವಾಗಿ ಭೀಮಾ ನದಿ, ಕಲ್ಯಾಣ ಕರ್ನಾಟಕ ಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಸಾಮಾನ್ಯ ಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಅಪಾರ ಪ್ರಮಾಣದ ಬೆಳೆ ಹಾನಿ ಮತ್ತು ಮೂಲಸೌಕರ್ಯಗಳಿಗೆ ಗಮನಾರ್ಹ ಹಾನಿಯನ್ನುಂಟುಮಾಡಿದೆ.

ಪ್ರವಾಹದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಗಳವಾರ ವೈಮಾನಿಕ ಸಮೀಕ್ಷೆ ನಡೆಸಿ, ಪ್ರವಾಹ ಪರಿಸ್ಥಿತಿ ಅವಲೋಕಿಸಿದ್ದಾರೆ. ಬಳಿಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಪ್ರವಾಹದಿಂದಾಗಿ ಭೀಮಾ ತೀರದ ಪ್ರದೇಶಗಳಲ್ಲಿ ಉಂಟಾಗಿರುವ ಹಾನಿ ಬಗ್ಗೆ ವಿಮಾನನಿಲ್ದಾಣದಲ್ಲೇ ಪ್ರಾಥಮಿಕ ಸಭೆ ನಡೆಸಿ ವಿವರವಾದ ಮಾಹಿತಿ ಪಡೆದಿದ್ದಾರೆ. ಕಲಬುರಗಿ, ಬೀದರ್, ಯಾದಗಿರಿ ಹಾಗೂ ವಿಜಯಪುರ ಜಿಲ್ಲಾ ಅಧಿಕಾರಿಗಳು ಮತ್ತು ಉಸ್ತುವಾರಿ ಕಾರ್ಯದರ್ಶಿಗಳು ಸಭೆಯಲ್ಲಿದ್ದು ವಿವರಗಳನ್ನು ನೀಡಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳನ್ನು ಪರಿಶೀಲಿಸುತ್ತಿರುವ ಸರ್ಕಾರ ಮೈಮರೆಯದೆ ಸಂತ್ರಸ್ತ ರೈತರ ನೆರವಿಗೆ ಧಾವಿಸಬೇಕು. ಸಂತ್ರಸ್ತ ರೈತರಿಗೆ ತಕ್ಷಣದ ನೆರವು ನೀಡಬೇಕು. ಇದಕ್ಕಾಗಿ ಕೆಲವು ತಕ್ಷಣದ ಪರಿಹಾರಗಳಾದ ಆಹಾರ, ಔಷಧ ಮತ್ತು ತಾತ್ಕಾಲಿಕ ಆಶ್ರಯದ ವ್ಯವಸ್ಥೆ ಮಾಡಬೇಕು.
ಇದನ್ನೂ ಓದಿದ್ದೀರಾ? ʼವ್ಯವಸಾಯ ಜೂಜಾಟ ಇದ್ದಂಗೆ, ಹೋಗುತ್ತೆ ಬರುತ್ತೆʼ: ಬೆಳೆಹಾನಿ ಸಂತ್ರಸ್ತ ರೈತನ ಅಸಹಾಯಕ ನುಡಿಯಿದು!
ಸರ್ಕಾರ ಕೃಷಿ ಭೂಮಿ, ಬೆಳೆ ಮತ್ತು ಆಸ್ತಿಯ ಹಾನಿಯನ್ನು ಶೀಘ್ರವಾಗಿ ಮೌಲ್ಯಮಾಪನ ಮಾಡಿ ಸಂತ್ರಸ್ತ ರೈತರಿಗೆ ಆರ್ಥಿಕ ನೆರವು ನೀಡಬೇಕು. ಪರಿಹಾರ ಧನ, ಕಡಿಮೆ ಬಡ್ಡಿಯ ಸಾಲ, ರೈತರ ಸಾಲ ಮನ್ನಾ ಮತ್ತು ಬೀಜ-ಗೊಬ್ಬರಕ್ಕೆ ಸಹಾಯಧನ ಒದಗಿಸಬೇಕು. ಅಲ್ಲದೆ ಪ್ರವಾಹ ನಿರ್ವಹಣೆಗೆ ಮೂಲಸೌಕರ್ಯ ಸುಧಾರಣೆ ಮತ್ತು ರೈತರಿಗೆ ಬೆಳೆ ಪರಿಹಾರ ನೀಡಬೇಕು. ಸರ್ಕಾರವು ಸ್ಥಳೀಯ ಸಂಸ್ಥೆಗಳು, ಎನ್‌ಜಿಒಗಳು ಮತ್ತು ಇತರೆ ಸಮುದಾಯಗಳೊಂದಿಗೆ ಸಹಕರಿಸಿ ತ್ವರಿತವಾಗಿ ಕಾರ್ಯನಿರ್ವಹಿಸಬೇಕಾಗಿರುವುದು ಇಂದಿನ ತುರ್ತು ಅನಿವಾರ್ಯವಾಗಿದೆ.