ನೇಮಕಾತಿಯಲ್ಲಿ 3 ವರ್ಷ ವಯೋಮಿತಿ ಸಡಿಲಿಕೆ: ‘Gen-Z’ ಪ್ರತಿಭಟನೆಯ ಭೀತಿ ಕಾರಣವೇ?

Date:

Advertisements
ಸರ್ಕಾರದ ವಯೋಮಿತಿ ಸಡಿಲಿಕೆ ದಿಢೀರ್ ನಿರ್ಧಾರಕ್ಕೆ, ಯುವಜನರ 'ಝೆನ್‌-ಜೆಡ್‌' ಪ್ರತಿಭಟನೆ ಕಾರಣವಾಗಿರಬಹುದೇ? ರಾಜ್ಯದಲ್ಲಿ ಈ ಹೋರಾಟಗಳಿಗೆ ಬಿಜೆಪಿ ಕುಮ್ಮಕ್ಕು ನೀಡುತ್ತಿದೆಯೇ? 

ಕರ್ನಾಟಕದಲ್ಲಿ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ನಾಗರಿಕ ಸೇವಾ ಹುದ್ದೆಗಳಿಗೆ ನಡೆಸುವ ನೇರ ನೇಮಕಾತಿಗಳಲ್ಲಿ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿ ಆದೇಶ ಹೊರಡಿಸಿದೆ. ಈ ವಯೋಮಿತಿ ಸಡಿಲಿಕೆಯು ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿನ ಹುದ್ದೆಗಳಿಗೆ ನಡೆಸುವ ನೇರ ನೇಮಕಾತಿಯಲ್ಲಿ ಭಾಗವಹಿಸುವ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೂ ಒಂದು ಬಾರಿಗೆ ಅನ್ವಯವಾಗುತ್ತದೆ ಎಂದು ಸರ್ಕಾರ ಹೇಳಿದೆ.

ಕಳೆದ ನಾಲ್ಕು ವರ್ಷಗಳಿಂದ ಸರ್ಕಾರಿ ಹುದ್ದೆಗಳಿಗೆ ಯಾವುದೇ ನೇಮಕಾತಿಗಳು ನಡೆಯದ ಕಾರಣ, ಸರ್ಕಾರಿ ಉದ್ಯೋಗದ ಕನಸು ಹೊತ್ತಿದ್ದ ಸಾವಿರಾರು ಯುವಜನರು ತಮ್ಮ ವಯಸ್ಸು ಮೀರಿ ಹೋಗುವ ಆತಂಕದಲ್ಲಿದ್ದರು. ಈಗ, ವಯೋಮಿತಿ ಸಡಿಲಿಕೆ ಕುರಿತ ಸರ್ಕಾರದ ನಿರ್ಧಾರವು, ಸರ್ಕಾರಿ ಉದ್ಯೋಗ ಕನಸಾಗಿಯೇ ಉಳಿದುಹೋಗುವ ಆತಂಕದಲ್ಲಿದ್ದ ಹಲವಾರು ಆಕಾಂಕ್ಷಿಗಳಿಗೆ ನೆರವಾಗಲಿದೆ. ವಯೋಮಿತಿ ಮೀರಿದ್ದ ಆಕಾಂಕ್ಷಿಗಳು ಸಡಿಲಿಕೆಯ ಮೂರು ವರ್ಷಗಳಲ್ಲಿ ಒಂದು ಬಾರಿ ಸರ್ಕಾರಿ ಹುದ್ದೆಗಾಗಿನ ನೇಮಕಾತಿಯಲ್ಲಿ ಭಾಗವಹಿಸಲು ಅವಕಾಶ ದೊರೆತಿದೆ.

ವಯೋಮಿತಿ ಸಡಿಲಿಕೆಯಿಂದಾಗಿ, ಸಾಮಾನ್ಯ ವರ್ಗದ ಆಕಾಂಕ್ಷಿಗಳಿಗಿದ್ದ ವಯೋಮಿತಿಯು 35 ವರ್ಷದಿಂದ 38 ವರ್ಷಕ್ಕೆ, ಒಬಿಸಿಗಳ ವಯೋಮಿತಿಯು 38 ವರ್ಷದಿಂದ 41 ವರ್ಷ ಹಾಗೂ ಎಸ್‌ಸಿ/ಎಸ್‌ಟಿ/ಪ್ರವರ್ಗ-1ರ ವಯೋಮಿತಿಯು 40 ವರ್ಷದಿಂದ 43 ವರ್ಷಕ್ಕೆ ವಿಸ್ತರಣೆಯಾಗಿದೆ. ಈ ವಯೋಮಿತಿ ಸಡಿಲಿಕೆ 2027ರ ಡಿಸೆಂಬರ್ 31ರೊಳಗೆ ಸರ್ಕಾರ ಹೊರಡಿಸುವ ಎಲ್ಲ ನೇರ ನೇಮಕಾತಿಗಳಿಗೂ ಅನ್ವಯಿಸಲಿದೆ ಎಂದು ಸರ್ಕಾರ ತಿಳಿಸಿದೆ. ಅಲ್ಲದೆ, ಸುಮಾರು 2.84 ಲಕ್ಷ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರವು ಶೀಘ್ರವೇ ಅಧಿಸೂಚನೆ ಹೊರಡಿಸುವ ಸಾಧ್ಯತೆಗಳೂ ಇವೆ.

Advertisements

ಸರ್ಕಾರದ ಈ ಕ್ರಮಕ್ಕೆ ರಾಜ್ಯದ ಉದ್ಯೋಗಾಕಾಂಕ್ಷಿಗಳು ಸ್ವಾಗತಿಸಿದ್ದಾರೆ. ಆದಾಗ್ಯೂ, ಸರ್ಕಾರವು ದಿಢೀರನೆ ಇಂತಹದೊಂದು ನಿರ್ಧಾರ ತೆಗೆದುಕೊಂಡಿದ್ದರ ಬಗ್ಗೆ ಚರ್ಚೆಗಳೂ ನಡೆಯುತ್ತಿವೆ. ಇತ್ತೀಚೆಗೆ ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ನಡೆಸಿದ್ದ ಪ್ರತಿಭಟನೆಯೇ ಇದಕ್ಕೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಧಾರವಾಡ ಪ್ರತಿಭಟನಾಕಾರರು ನೇಮಕಾತಿಯಲ್ಲಿ 5 ವರ್ಷ ವಯೋಮಿತಿ ಸಡಿಲಿಕೆ ಮಾಡಬೇಕು. ಅಲ್ಲದೆ, ಪಿಎಸ್‌ಐ/ಕಾನ್‌ಸ್ಟೆಬಲ್ ಹುದ್ದೆಗಳಿಗೆ ನೇಮಕಾತಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿ ನಿರಂತರ ಪ್ರತಿಭಟನೆ ನಡೆಸಿದ್ದರು. ಈ ಹೋರಾಟದ ಬೆನ್ನಲ್ಲೇ, ಸರ್ಕಾರದಿಂದ ವಯೋಮಿತಿ ಸಡಿಲಿಕೆಯ ಆದೇಶ ಪ್ರಕಟವಾಗಿದೆ ಎಂಬ ಅಭಿಪ್ರಾಯಗಳಿವೆ.

ಆದರೂ, ಸರ್ಕಾರದ ಮಹತ್ವದ ಬದಲಾವಣೆಗೆ ಮುಂದಾಗಲು ಅದೊಂದೇ ಪ್ರತಿಭಟನೆ ಮಾತ್ರವಲ್ಲ, ಇತ್ತೀಚೆಗೆ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ‘ಝೆನ್-ಜಡ್‌'(Generation Z) ಪ್ರತಿಭಟನೆಗಳ ಪ್ರಭಾವವೂ ಇದೆ ಎನ್ನಲಾಗುತ್ತಿದೆ.

ಕಳೆದ ಕೆಲವ ವರ್ಷಗಳಿಂದ ಭಾರತದ ನೆರೆಹೊರೆಯ ಹಲವು ರಾಷ್ಟ್ರಗಳಲ್ಲಿ ‘ಝೆನ್‌-ಜಡ್‌’ ಪ್ರತಿಭಟನೆಗಳು ನಡೆದಿವೆ. ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಇಂಡೋನೇಷ್ಯಾದಲ್ಲಿ ಯುವಜನರು ‘ಝೆನ್-ಜಡ್’ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಹಲವು ಪ್ರತಿಭಟನೆಗಳು ಹಿಂಸಾರೂಪ ತಳೆದು, ಅಲ್ಲಿನ ಸರ್ಕಾರಗಳನ್ನೇ ಉರುಳಿಸಿವೆ. ಕಳೆದ ವಾರ, ಭಾರತದ ತುತ್ತತುದಿಯಲ್ಲಿರುವ ಲಡಾಖ್‌ನಲ್ಲಿ ನಡೆದ ಪ್ರತಿಭಟನೆಯೂ ‘ಝೆನ್‌-ಜಡ್‌’ ಪ್ರತಿಭಟನೆಯ ರೂಪ ತಳೆದಿದೆ.

1997 ಮತ್ತು 2012ರ ನಡುವೆ ಜನಿಸಿದವರನ್ನು ಜನರೇಷನ್-ಜಡ್‌ (ಝೆನ್‌-ಜಡ್‌) ಎಂದು ಕರೆಯಲಾಗುತ್ತದೆ. ಇತ್ತೀಚೆಗೆ ಹಲವು ರಾಷ್ಟ್ರಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಈ ತಲೆಮಾರಿನ ಯುವಜನರು ನೇತೃತ್ವ ನೀಡಿದ್ದಾರೆ. ಭ್ರಷ್ಟಾಚಾರ, ನಿರುದ್ಯೋಗ ಸೇರಿದಂತೆ ಪ್ರಮುಖ ಸಮಸ್ಯೆಗಳ ವಿರುದ್ಧ ‘ಝೆನ್‌-ಜಡ್‌’ ಪ್ರತಿಭಟನೆಗಳು ನಡೆಯುತ್ತಿವೆ.

ಇದೇ ತಿಂಗಳ ಆರಂಭದಲ್ಲಿ, ನೇಪಾಳದಲ್ಲಿ ಸ್ವಜನ ಪಕ್ಷಪಾತ, ವಂಶಾಡಳಿತ, ಭ್ರಷ್ಟಾಚಾರ, ನಿರುದ್ಯೋಗ ಹಾಗೂ ಸಾಮಾಜಿಕ ಮಾಧ್ಯಮ ನಿಷೇಧಗಳ ವಿರುದ್ಧ ‘ಯುವಜನರು’ ಶಾಂತಿಯುತ ಹೋರಾಟ ಆರಂಭಿಸಿದ್ದರು. ಆದರೆ, ಅವರ ಮೇಲೆ ಸರ್ಕಾರವು ಪೊಲೀಸರಿಂದ ದಾಳಿ ನಡೆಸಿತು. ಪೊಲೀಸ್‌ ದಾಳಿ ವಿರುದ್ಧ ಯುವಜನರು ಸಿಡಿದದ್ದು, ಹಿಂಸಾಚಾರಕ್ಕೆ ಕಾರಣವಾಯಿತು. ಅಲ್ಲಿನ ಪ್ರಧಾನಿ ಕೆ.ಪಿ ಶರ್ಮಾ ಒಲಿ ಅವರ ಸರ್ಕಾರ ಉರುಳಿತು.  

ಇಂಡೋನೇಷ್ಯಾದಲ್ಲಿಯೂ ನಿರುದ್ಯೋಗದ ವಿರುದ್ಧ ಅಲ್ಲಿನ ಯುವಜನರು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಬಾಂಗ್ಲಾದಲ್ಲಿ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ನಡೆದ ಪ್ರತಿಭಟನೆಯು ಅಲ್ಲಿನ ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಕಾರಣವಾಯಿತು.

ಅಂತೆಯೇ, ಭಾರತದ ಲಡಾಖ್‌ನಲ್ಲಿ ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು, 6ನೇ ವಿಧಿಯ ವ್ಯಾಪ್ತಿಗೆ ತರಬೇಕು ಎಂಬುದು ಸೇರಿದಂತೆ ಪ್ರಮುಖ 5 ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟು, ಯುವಜನರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ, ನಾಲ್ವರು ಯುವಕರು ಸಾವನ್ನಪ್ಪಿದ್ದಾರೆ.

ಲಡಾಖ್‌ನಲ್ಲಿ ನಡೆದ ‘ಝೆನ್‌-ಜಡ್‌’ ಪ್ರತಿಭಟನೆಯು ದೇಶಾದ್ಯಂತ ವಿಸ್ತರಿಸಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಧಾರವಾಡದಲ್ಲಿ ನಡೆದ ಯುವಜನರ ಪ್ರತಿಭಟನೆಯು ‘ಝೆನ್‌-ಜೆಡ್‌’ ಪ್ರತಿಭಟನೆಗೆ ಮುನ್ನುಡಿಯಾಗಬಹುದು ಎಂದೂ ಹೇಳಲಾಗುತ್ತಿದೆ.

ಪ್ರಸ್ತುತ, ಕರ್ನಾಟಕದಲ್ಲಿ ನಿರುದ್ಯೋಗ ದರವು 8-10% ಇದೆ. ಈ ನಿರುದ್ಯೋಗಿಗಳಲ್ಲಿ ಸುಮಾರು 20% ಯುವಜನರು 18ರಿಂದ 29 ವರ್ಷ ವಯೋಮಾನದವರಾಗಿದ್ದಾರೆ. ನಿರುದ್ಯೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ನಿರುದ್ಯೋಗದ ವಿರುದ್ಧದ ಅಸಹನೆ ಮಡುಗಟ್ಟುತ್ತಿದೆ. ಈ ಅಸಹನೆಯು ಯಾವುದಾದರೂ ಒಂದು ಸಂದರ್ಭದಲ್ಲಿ ಸ್ಪೋಟಿಸಬಹುದು ಎಂಬ ಆತಂಕ ಆಳುವವರನ್ನು ಕಾಡುತ್ತಿದೆ.

ಅದಕ್ಕೆ ಪೂರಕವಾಗಿ, ಕರ್ನಾಟಕದಲ್ಲಿ ‘ಝೆನ್-ಜಡ್’ ಮಾದರಿಯ ಹೋರಾಟಗಳಿಗೆ ಬಿಜೆಪಿ ಕುಮ್ಮಕ್ಕು ನೀಡುತ್ತಿದೆ. ಯುವಜರನ್ನು ಪ್ರಚೋದಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ರಾಜ್ಯದಲ್ಲಿ ಕೋಮುವಾದಿ ವಿಚಾರವನ್ನು ಬಳಸಿಕೊಂಡು ರಾಜ್ಯದ ಯಾವುದಾದರೊಂದು ಭಾಗವು ಉದ್ವಿಗ್ನತೆಯಲ್ಲಿ ಇರುವಂತೆ ನೋಡಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಇದೀಗ, ಕೋಮುವಾದಿ ವಿಚಾರಗಳನ್ನು ದಾಟಿ, ಜನರ ವಿಚಾರಗಳನ್ನೂ ತನ್ನ ದ್ವೇಷ-ದುಷ್ಟ ರಾಜಕಾರಣಕ್ಕೆ ಬಳಸಿಕೊಳ್ಳಲು ಹವಣಿಸುತ್ತಿದೆ ಎಂಬ ಗಂಭೀರ ಆರೋಪಗಳಿವೆ.

ಈ ಲೇಖನ ಓದಿದ್ದೀರಾ?: ಜಾತಿ ಸಮೀಕ್ಷೆ: ಒಬಿಸಿಗಳಿಗೆ ವಂಚಿಸಲು ಬಿಜೆಪಿ ನಾಯಕರ ಯತ್ನ?

ಬಿಜೆಪಿ ತನ್ನ ಪ್ರಚೋದನಾಕಾರಿ ರಾಜಕೀಯಕ್ಕೆ ನಿರುದ್ಯೋಗವನ್ನು ಬಳಸಿಕೊಳ್ಳಲು ಮುಂದಾಗಿದೆ ಎನ್ನಲಾಗಿದೆ. ನಿರುದ್ಯೋಗದ ವಿರುದ್ಧದ ಯುವಜನರ ಆಕ್ರೋಶವನ್ನು ಬಿಜೆಪಿ ತನ್ನ ‘ರಾಮ ರಾಜ್ಯ’ ಮತ್ತು ‘ಮುಸ್ಲಿಮರಿಂದಲೇ ಹಿಂದುಗಳಿಗೆ ಉದ್ಯೋಗಗಳು ದೊರೆಯುತ್ತಿಲ್ಲ’, ‘ಮೀಸಲಾತಿಯಿಂದ ಪ್ರಬಲ ಜಾತಿಗಳ ಯುವಜನರು ವಂಚಿತರಾಗುತ್ತಿದ್ದಾರೆ’ ಎಂಬ ದ್ವೇಷ ನಿರೂಪಣೆಗೆ ಹೊಂದಿಸಲು ಯತ್ನಿಸುತ್ತಿದೆ.

‘ಝೆನ್‌-ಜಡ್‌’ ಪ್ರತಿಭಟನೆ ಮತ್ತು ಬಿಜೆಪಿಯ ದ್ವೇಷಪೂರಿತ ರಾಜಕಾರಣವನ್ನು ನಿಯಂತ್ರಿಸಲು ಕಾಂಗ್ರೆಸ್‌ ಸರ್ಕಾರವು ತಂತ್ರಗಳನ್ನು ಹೆಣೆಯುತ್ತಿದೆ. ಅದರ ಭಾಗವಾಗಿ, ನೇಮಕಾತಿಗಳಲ್ಲಿ ವಯೋಮಿತಿಯನ್ನು 3 ವರ್ಷ ಸಡಿಲಿಕೆ ಮಾಡಿದೆ. ತನ್ನ ಕ್ರಮವನ್ನು ಕಾಂಗ್ರೆಸ್‌ ಯುವ ಸ್ನೇಹಿ ಎಂದು ಕರೆದುಕೊಂಡಿದೆ. ಆದರೆ, ಬಿಜೆಪಿ ‘ಮೋಸದ ರಾಜಕಾರಣ. 2027ರ ನಂತರ ಯುವಜನರ ಪರಿಸ್ಥಿತಿ ಮತ್ತೆ ಯಥಾಸ್ಥಿತಿಗೆ ಬರುತ್ತದೆ’ ಎಂದು ಟೀಕಿಸಿದೆ.

ಅದೇನೇ ಇರಲಿ, ಸರ್ಕಾರದ ಈ ಕ್ರಮವು ಸದ್ಯದ ಪರಿಸ್ಥಿತಿಯಲ್ಲಿ ತಾತ್ಕಾಲಿಕ ಪರಿಹಾರವಾಗಿ ಕಾಣುತ್ತಿದೆ. ಆದರೆ, ಶಾಶ್ವತ ಪರಿಹಾರವಾಗಲಾರದು ಎಂಬುದು ವಾಸ್ತವ. ಆದಾಗ್ಯೂ, ವಯೋಮಿತಿ ಸಡಿಲಿಕೆಯ ಜೊತೆಗೆ, ಸರ್ಕಾರವು ತ್ವರಿತವಾಗಿ ನೇಮಕಾತಿಗಳನ್ನು ಆರಂಭಿಸಬೇಕು. ಆದರೂ, ಖಾಲಿ ಇರುವ ಎಲ್ಲ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ನಡೆದರೂ, ನಿರುದ್ಯೋಗ ಸಮಸ್ಯೆಗೆ ಪರಿಹಾರ ದೊರೆಯದು. ಸರ್ಕಾರಿ ಹುದ್ದೆಗಳ ಭರ್ತಿಯಿಂದ ನಿರುದ್ಯೋಗಿಗಳಲ್ಲಿ 1% ಯುವಜನರಿಗೆ ಮಾತ್ರವೇ ಉದ್ಯೋಗ ದೊರೆಯಲು ಸಾಧ್ಯ. ಹೀಗಾಗಿ, ಕೇವಲ ಸರ್ಕಾರಿ ಹುದ್ದೆಗಳು ಮಾತ್ರವಲ್ಲದೆ, ಖಾಸಗಿ ವಲಯದಲ್ಲಿಯೂ ಹೆಚ್ಚು ಉದ್ಯೋಗ ಸೃಷ್ಟಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಜೊತೆಗೆ, ಸ್ವಯಂ ಉದ್ಯೋಗ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯುವಜನರು ತೊಡಗಿಕೊಳ್ಳಲು ಸರ್ಕಾರವು ಪ್ರೋತ್ಸಾಹ ನೀಡಬೇಕು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

ಸಮಾಜದ ಅಸಮಾನತೆ ಹೋಗಲಾಡಿಸಲು ಸಮೀಕ್ಷೆ ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಮಾಜದಲ್ಲಿ ಅಸಮಾನತೆಯಿದ್ದು, ಅದನ್ನು ಹೋಗಲಾಡಿಸಲು ಸಮೀಕ್ಷೆಯ ಅಂಕಿಅಂಶಗಳು ಅವಶ್ಯಕ. ಯಾವ ಜಾತಿಯ...

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

ರಾಹುಲ್ ಗಾಂಧಿಗೆ ಜೀವ ಬೆದರಿಕೆ; ಮೋದಿ, ಶಾ ಮೌನ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ

ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ನಿರಂತರ ಧ್ವನಿ ಎತ್ತುತ್ತಿರುವ ಲೋಕಸಭೆಯ ವಿರೋಧ...

Download Eedina App Android / iOS

X