ವಿಜಯಪುರ | ಪ್ರವಾಹದಲ್ಲಿ ಕೊಚ್ಚಿಹೋದ ಬದುಕು, ಕಣ್ಣೀರೊರೆಸುವುದೇ ಸರ್ಕಾರ?

Date:

Advertisements
ಅಧಿಕಾರಿಗಳ ಸ್ಥಳ ಪರಿಶೀಲನೆ, ಸಾಂತ್ವನ, ಸ್ಪಂದನೆಗಳು ಕೇವಲ ಕಾಗದಕ್ಕೆ ಸೀಮಿತವಾಗದೆ ರೈತರಿಗೆ ಆರ್ಥಿಕವಾಗಿ ನೆರವಾಗಬೇಕು. ರೈತರ ಜೀವನಾಡಿಯಾಗಿರುವ ಕೃಷಿ ಜಮೀನುಗಳನ್ನು ರಕ್ಷಿಸಬೇಕು. ಜನಪ್ರತಿನಿಧಿಗಳು ಸ್ಥಳೀಯ ಮಟ್ಟದಲ್ಲಿ ಒತ್ತಡ ಹಾಕುವ ಮೂಲಕ, ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಸರ್ಕಾರದ ಗಮನ ಸೆಳೆಯುವ ಕೆಲಸವಾಗಬೇಕು. 

ವಿಜಯಪುರ ಜಿಲ್ಲೆಯ ಡೋಣ್ ನದಿ ದಂಡೆಯಲ್ಲಿ, ಬೆಳೆದಿದ್ದ ತೊಗರಿ ಬೆಳೆಗಳು ತಂಗಾಳಿಗೆ ತೂಗಾಡುತ್ತ ಹಸಿರಿನಿಂದ ಕೊಂಗೊಳಿಸುತ್ತಿದ್ದವು. ಅಂತಹ ದಿನಗಳು ಇನ್ನು ದುಸ್ವಪ್ನವಾಗಿವೆ. ಮೂರ್ನಾಲ್ಕು ದಿನಗಳ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಡೋಣ್‌ ನದಿಯಲ್ಲಿ ನೀರು ಹರಿದಿರುವುದಕ್ಕಿಂತ ರೈತರ ಕಣ್ಣಲ್ಲಿ ನೀರು ಹರಿದಿರುವುದೇ ಹೆಚ್ಚು.‌ ಈ ಹಿಂದೆ ‘ಡೋಣಿ ಹರಿದರೆ ಓಣಿಯೆಲ್ಲ ಕಾಳು’ ಎಂಬ ಮಾತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇದು ಸುಳ್ಳಾಗಿದ್ದು, ‘ಡೋಣ್‌ ಹರಿದರೆ ರೈತರ ಬಾಳೇ ಗೋಳು’ ಎನ್ನುವ ದುಃಸ್ಥಿತಿ ಎದುರಾಗಿದೆ.

ವರ್ಷದ ಮುಕ್ಕಾಲು ಭಾಗ ಒಣಗಿರುವ ಡೋಣ್‌ ನದಿ ಮಳೆಗಾಲದ ಕೆಲವು ದಿನಗಳಲ್ಲಿ ಮಾತ್ರ ಭಾರೀ ರಾಜಾರೋಷದಿಂದ ಉಕ್ಕಿ ಹರಿಯುತ್ತದೆ. ಡೋಣ್‌ ನದಿ ತನ್ನ ದಿಕ್ಕನ್ನು ನಿರಂತರವಾಗಿ ಬದಲಾಯಿಸುತ್ತಲೇ ಇರುತ್ತದೆ. ಪ್ರವಾಹದ ಸಮಯದಲ್ಲಿ ಡೋಣ್‌ ತನ್ನ ನದಿಪಾತ್ರವನ್ನು ಬಿಟ್ಟು ಎಡಬಲಗಳ ಫಲವತ್ತಾದ ಮಣ್ಣು, ಬೆಳೆಗಳನ್ನು ಆಪೋಶನ ಮಾಡಿದ್ದೇ ಹೆಚ್ಚು. ಪ್ರವಾಹದ ವೇಳೆ ನದಿಯಲ್ಲಿ ಹರಿಯುವ ಬದಲು ಹುಚ್ಚೆದ್ದು ಅಕ್ಕಪಕ್ಕದ ಹೊಲಗಳಲ್ಲಿ ಹರಿಯುವ ಪರಿಣಾಮ ‘ದಾರಿ ತಪ್ಪಿದ ನದಿ’ ಎಂದೇ ಕುಖ್ಯಾತಿಯಾಗಿದೆ. ಈ ಬಾರಿಯೂ ಕೂಡ ಇದು ಅಕ್ಷರಶಃ ಸತ್ಯವಾಗಿದ್ದು, ಅಕ್ಕಪಕ್ಕದ ಕೃಷಿ ಜಮೀನುಗಳನ್ನು ನುಂಗಿದ್ದು, ರೈತರ ಕಣ್ಣಲ್ಲಿ ನೀರು ತರಿಸಿದೆ.

ಡೋಣ್‌ ನದಿಗೆ ಆಳದ ನದಿಪಾತ್ರವಿಲ್ಲ. ಕಪ್ಪುಮಣ್ಣಿಗೆ ಮಳೆನೀರನ್ನು ಹಿಡಿದಿಟ್ಟುಕೊಳ್ಳುವ ಗುಣ ಕಡಿಮೆ ಇರುವುದರಿಂದ ಮಳೆಗಾಲದಲ್ಲಿ ಜೋರಾಗಿ ಮಳೆಯಾದರೆ ನೀರು ಸಂಗ್ರಹವಾಗದೆ ಹರಿಯುವುದರಿಂದ ಪ್ರವಾಹ ಹೆಚ್ಚಾಗುತ್ತದೆ. ಜತೆಗೆ ಹೆಚ್ಚು ತಿರುವುಗಳಿಂದ ಕೂಡಿರುವುದರಿಂದ ಎಡಬಲದ ಜಮೀನುಗಳ ಮಣ್ಣು, ಪೈರುಗಳನ್ನು ಕೊಚ್ಚಿ ಇನ್ನೆಲ್ಲೋ ಎಸೆಯುತ್ತದೆ.

Advertisements
ಡೋಣ್‌ ನದಿ ಪ್ರವಾಹ 1

2009ರಲ್ಲಿ ನದಿ ಉಕ್ಕಿ ಹರಿದ ಪರಿಣಾಮ ವಿಜಯಪುರ ಜಿಲ್ಲೆಯ ಸುಮಾರು 36 ಹಳ್ಳಿಗಳು ಪ್ರವಾಹದಿಂದ ತೀವ್ರ ತೊಂದರೆಗೆ ಒಳಪಟ್ಟಿದ್ದವು. ರಾಜ್ಯ ಸರ್ಕಾರವು ದೋಣಿ ನದಿಯ ಪ್ರವಾಹದಿಂದ ಪ್ರತಿವರ್ಷವೂ ತೊಂದರೆಗೆ ಒಳಪಡುವ ಜಿಲ್ಲೆಯ 9 ಹಳ್ಳಿಗಳನ್ನು ಕಾಯಂ ಆಗಿ ಸ್ಥಳಾಂತರಿಸಲುಕ್ರಮ ತೆಗೆದುಕೊಂಡಿತ್ತು. ಆದಾಗ್ಯೂ ನದಿಯಲ್ಲಿ ಪ್ರವಾಹದ ಭೀತಿ, ಪ್ರವಾಹದಲ್ಲಿ ಸಾವಿರಾರು ಎಕರೆ ಬೆಳೆದು ನಿಂತ ಪೈರುಗಳು ಕೊಚ್ಚಿಹೋಗುವ ಭೀತಿ ಇತ್ತು. ಈಗ ರೈತರು ಅಂತಹ ಭೀತಿಗೆ ತುತ್ತಾಗಿದ್ದಾರೆ.

ಕೃಷ್ಣೆಯ ಉಪ ನದಿ ಡೋಣ್

ಡೋಣ್ ನದಿ ಹರಿವು ತುಂಬಾ ಚಿಕ್ಕದು. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಖೋಜನವಾಡಿ ಗ್ರಾಮದ ಹತ್ತಿರ ಉಗಮಿಸುವ ಈ ನದಿ ಬೆಳಗಾವಿ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಸುಮಾರು 194 ಕಿಮೀ ಸಾಗಿ ನಾರಾಯಣಪುರ ಅಣೆಕಟ್ಟೆ ಸಮೀಪ ಕೋಡೆಕಲ್‌ ಹತ್ತಿರ ಕೃಷ್ಣಾ ನದಿಯನ್ನು ಸೇರ್ಪಡೆಯಾಗುತ್ತದೆ. ಮಹಾರಾಷ್ಟ್ರದಲ್ಲಿ ಕೇವಲ 15 ಕಿಮೀ ಹರಿಯುತ್ತದೆ. ಉಳಿದಂತೆ 179 ಕಿ.ಮೀ.ನಷ್ಟು ಕರ್ನಾಟಕದಲ್ಲಿ ಹರಿಯುತ್ತದೆ.

ಈಗ ನದಿಯ ನೀರು ತನ್ನ ಪ್ರಮಾಣವನ್ನು ಮೀರಿ ಹರಿಯುತ್ತ, ಸುತ್ತಮುತ್ತಲಿನ ಕೃಷಿ ಜಮೀನುಗಳನ್ನು ಸಂಪೂರ್ಣವಾಗಿ ಮುಳುಗಡೆಗೊಳಿಸಿದೆ. ಹತ್ತಿ, ತೊಗರಿ, ಸಜ್ಜೆ, ಸೂರ್ಯಕಾಂತಿ ಸೇರಿದಂತೆ ರೈತರ ಬದುಕಿನ ಆಧಾರವಾಗಿದ್ದ ಬೆಳೆಗಳು ಈಗ ನೀರಿನಲ್ಲಿ ಮುಳುಗಿಹೋಗಿವೆ. ಹಸಿರಾಗಿದ್ದ ತೊಗರಿ ಗಿಡಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ನೆಲಕ್ಕೆ ಉದುರಲಾರಂಭಿಸಿವೆ.

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಡೋಣ್ ದಂಡೆಯ ರೈತ ಗೋಪಾಲ ಕಟ್ಟಿಮನಿ ಎಂಬುವವರು ತನ್ನ ಎರಡು ಎಕರೆ ಜಮೀನಿನಲ್ಲಿ ಬಿತ್ತಿದ್ದ ತೊಗರಿ ಬೆಳೆ ಶೇ.80ರಷ್ಟು ನಾಶವಾಗಿದ್ದು, ಉಳಿದ ಶೇ.20ರಷ್ಟು ಬೆಳೆ ಕೂಡ ಕೈಗೆ ಸಿಗದೆ ನೀರುಪಾಲಾಗುವ ಭೀತಿಯಲ್ಲಿದ್ದಾರೆ.

ಹುಲುಸಾಗಿದ್ದ ತೊಗರಿ

“ಹೊಲವು ಹಸಿರುಭರಿತವಾಗಿ ಕಾಣುತ್ತಿತ್ತು. ಹೂಬಿಡುವ ಹಂತದಲ್ಲಿದ್ದ ಗಿಡಗಳು ಈಗ ನೀರಿನಲ್ಲಿ ತೋಯ್ದು, ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದುರಲಾರಂಭಿಸಿವೆ. ತೊಗರಿಬೆಳೆ ನೆಟ್ಟೆ ರೋಗಕ್ಕೆ ತುತ್ತಾಗುತ್ತಿದೆ. ಹೊಲಕ್ಕೆ ಕಾಲಿಡಲು ಸಾಧ್ಯವೇ ಇಲ್ಲ” ಎಂದು ನೋವಿನಿಂದ ಹೇಳಿಕೊಂಡಿದ್ದಾರೆ.

ತೊಗರಿ ಬೆಳೆಯಲು ಎಕರೆಗೆ ₹20,000 ಖರ್ಚು

ಹೊಲ ಹಸನು ಮಾಡುವುದರಿಂದ ಹಿಡಿದು ಬಿತ್ತನೆ ಬೀಜ, ಗೊಬ್ಬರ, ಟ್ರ್ಯಾಕ್ಟರ್ ಬಾಡಿಗೆ, ನೇಗಿಲು ಹೊಡೆಯುವುದು, ಔಷಧಿ ಸಿಂಪಡಣೆ, ಆಳು-ಕಾಳು ಅಂತ ಎಕರೆಗೆ ಸುಮಾರು 20 ರಿಂದ 25 ಸಾವಿರ ರೂಪಾಯಿ ಖರ್ಚಾಗಿದೆ. ಎರಡು ಎಕರೆಗೆ ₹40,000 ಬಂಡವಾಳ ಹಾಕಿದ್ದು, ಆರು ತಿಂಗಳ ತೊಗರಿ ಬೆಳೆ ಜನವರಿಯಲ್ಲಿ ಕಟಾವಿಗೆ ಬರಬೇಕಿತ್ತು. ಆದರೆ ಈಗ ಅದು ಫಸಲಿಗೂ ಮೊದಲೇ ಜಲಾವೃತವಾಗಿದೆ.

ಈ ದುರಂತದಲ್ಲಿ ಇನ್ನೂ ಒಂದು ಹೃದಯವಿದ್ರಾವಕ ಘಟನೆ: ಪಕ್ಕದ ಹಳ್ಳಿಯ ರೈತ ಹಡಪದ ಎಂಬುವವರು ತಾಳಿಕೋಟೆ ಸಂತೆಗೆ ಬಂದು ಹಿಂದಿರುಗುವಾಗ, ಬ್ರಿಡ್ಜ್‌ ಮೇಲೆ ಹರಿಯುತ್ತಿದ್ದ ತೀವ್ರ ನೀರಿನಲ್ಲಿ ಬೈಕ್ ಸಹಿತ ಕೊಚ್ಚಿಹೋಗಿದ್ದಾರೆ. ಐದು ದಿನಗಳು ಕಳೆದರೂ ಅವರ ಪತ್ತೆಯಾಗಿಲ್ಲ; ಅವರ ಜೊತೆಗಿದ್ದ ಇನ್ನೊಬ್ಬರು ಮಾತ್ರ ಸಿಕ್ಕಿದ್ದಾರೆ. ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿತ್ತು. ಈ ನಡುವೆ ಡೋ‌ಣ್‌ ಹಳ್ಳದ ನೀರನ್ನು ಹೊರಗೆ ಬಿಟ್ಟಿರುವುದೇ ಈ ಅನಾಹುತಕ್ಕೆ ಕಾರಣವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ʼಒಂದು ಚೀಲ ಕಾಳು ಸಿಕ್ಕರೂ ದೊಡ್ಡದೇʼ

“ತೊಗರಿ ಬೆಳೆ ಉತ್ತಮ ಇಳುವರಿ ಬಂದರೆ ಎಕರೆಗೆ ಐದಾರು ಚೀಲ ತೊಗರಿ ಕಾಳು ಬರಬೇಕಿತ್ತು. ಈಗ ಒಂದು ಚೀಲ ಕಾಳು ಸಿಕ್ಕರೂ ದೊಡ್ಡದೇ” ಎಂಬುದು ಗೋಪಾಲ ಕಟ್ಟಿಮನಿ ಅವರ ನಿರೀಕ್ಷೆಯ ಮಾತಾಗಿದೆ.

ಡೋಣ್‌ನಲ್ಲಿ ಮುಳುಗಿದ ತೊಗರಿ

ಐದು ವರ್ಷಗಳಿಂದ ಉಳುಮೆ ಮಾಡುತ್ತ ಬಂದಿರುವ ಅವರು, ಕೃಷಿಯನ್ನೇ ನಂಬಿಕೊಂಡು ತಮ್ಮ ಕುಂಟುಂಬವನ್ನು ಮುನ್ನಡೆಸುತ್ತಿದ್ದರು. ಕುಟುಂಬದಲ್ಲಿರುವ ನಾಲ್ಕೈದು ಜನರು ಇವರಿಗೇ ಅವಲಂಬಿತರಾಗಿದ್ದಾರೆ. ಈಗ ಬೆಳೆಹಾನಿಯಿಂದ ಕೃಷಿಗೆ ಮಾಡಿರುವ ಖರ್ಚೂ ಬರದಾಗಿದ್ದು, ಲಾಭದ ಕನಸು ನುಚ್ಚುನೂರಾಗಿದೆ.

ಈ ಸಂಕಷ್ಟದ ನಡುವೆ ಒಂದು ಆಶಾಕಿರಣ: ಕೃಷಿ ಅಧಿಕಾರಿಗಳು ಬೆಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದು, ತಹಶೀಲ್ದಾರ್‌ರೊಂದಿಗೆ ಡ್ರೋನ್ ಸಹಾಯದಿಂದ ಬೆಳೆಹಾನಿ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.

ತಾಳಿಕೋಟೆ-ಮುದ್ದೇಬಿಹಾಳ ಎಂಎಲ್‌ಎ ಸಿ ಎಸ್ ನಾಡಗೌಡ ಅವರು ಬೆಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ, “ಮುಖ್ಯಮಂತ್ರಿಯವರೊಂದಿಗೆ ಮಾತನಾಡಿ ಸರ್ಕಾರದಿಂದ ಸಾಧ್ಯವಾದಷ್ಟು ಪರಿಹಾರ ಒದಗಿಸಲು ಶ್ರಮಿಸುತ್ತೇನೆ. ಧೃತಿಗೆಡಬೇಡಿ, ವಿಶ್ವಾಸದೊಂದಿಗೆ ದೃಢವಾಗಿರಿ” ಎಂದು ರೈತರಿಗೆ ಸಾಂತ್ವನ ಹೇಳಿದ್ದು, ಭರವಸೆ ನೀಡಿದ್ದಾರೆ.

ಇದನ್ನೂ ಓದಿದ್ದೀರಾ? ಕಲ್ಯಾಣ ಕರ್ನಾಟಕ ಪ್ರವಾಹ: ಭಾರೀ ಅನಾಹುತ-ಅವ್ಯವಸ್ಥೆ; ರೈತರ ನೆರವಿಗೆ ನಿಲ್ಲುವುದೇ ಸರ್ಕಾರ?

ಜಿಪಿಎಸ್ ಫೋಟೋಗಳೊಂದಿಗೆ ಸಮೀಕ್ಷೆ ಮಾಡಿ, ಡಿಸಿ ಮತ್ತು ಸಚಿವರ ಗಮನಕ್ಕೆ ತಂದು ಮುಖ್ಯಮಂತ್ರಿಯಿಂದ ಪರಿಹಾರ ಘೋಷಣೆ ಮಾಡಿಸಲಾಗುವುದೆಂದು ಹೇಳಿದ್ದಾರೆ. ಆದರೆ ಸಂಪೂರ್ಣ ಬೆಳೆ ಜಲಾವೃತವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ಹಸಿ ಬರಗಾಲವೆಂದು ಘೋಷಿಸಿ ರೈತರ ಸಂಕಷ್ಟಕ್ಕೆ ನೆರವಾಗಬೇಕು.

ಅಧಿಕಾರಿಗಳ ಸ್ಥಳ ಪರಿಶೀಲನೆ, ಸಾಂತ್ವನ, ಸ್ಪಂದನೆಗಳು ಕೇವಲ ಕಾಗದಕ್ಕೆ ಸೀಮಿತವಾಗದೆ ರೈತರಿಗೆ ಆರ್ಥಿಕವಾಗಿ ನೆರವಾಗಬೇಕು. ರೈತರ ಜೀವನಾಡಿಯಾಗಿರುವ ಕೃಷಿ ಜಮೀನುಗಳನ್ನು ರಕ್ಷಿಸಬೇಕು. ಜನಪ್ರತಿನಿಧಿಗಳು ಸ್ಥಳೀಯ ಮಟ್ಟದಲ್ಲಿ ಒತ್ತಡ ಹಾಕುವ ಮೂಲಕ, ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಸರ್ಕಾರದ ಗಮನ ಸೆಳೆಯುವ ಕೆಲಸವಾಗಬೇಕು.

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು ವಿವಿಯಿಂದ ಎರಡು ಮಹಾ ಪ್ರಬಂಧಗಳಿಗೆ ಡಾಕ್ಟರೇಟ್: ಕನ್ನಡ ಉಪನ್ಯಾಸಕರಿಗೆ ಗೌರವ

ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳಿಗೆ ಒಡ್ಡಿಕೊಂಡಿರುವ ಇಬ್ಬರಿಗೆ...

ಕಲ್ಯಾಣದಲ್ಲಿ ನೆರೆ | ಪರಿಹಾರದ ವಿವರ ನೀಡುವಂತೆ ಸರಕಾರಕ್ಕೆ ಹೆಚ್.ಡಿ.ದೇವೇಗೌಡ ಗಡುವು

ಕಲ್ಯಾಣ ಕರ್ನಾಟಕದ ನೆರೆಪೀಡಿತ ಜಿಲ್ಲೆಗಳಿಗೆ ಈವರೆಗೆ ಏನೆಲ್ಲಾ ಪರಿಹಾರ ಒದಗಿಸಲಾಗಿದೆ ಎಂಬ...

ಗದಗ | ಲಿಂ. ಡಾ. ಎಂ.ಎಂ. ಕಲಬುರ್ಗಿ ಅವರಿಗೆ ಮರಣೋತ್ತರ ‘ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’

ಲಿಂ. ಡಾ. ಎಂ.ಎಂ. ಕಲಬುರ್ಗಿ ಅವರಿಗೆ ಮರಣೋತ್ತರವಾಗಿ 2025ನೇ ಸಾಲಿನ ಡಾ....

Download Eedina App Android / iOS

X