ಆಯುಧ ಪೂಜೆ ಹಬ್ಬದ ದಿನವೇ ತೈಲ ಮಾರುಕಟ್ಟೆ ಕಂಪನಿಗಳು ಗ್ರಾಹಕರಿಗೆ ದರ ಏರಿಕೆಯ ಶಾಕ್ ನೀಡಿವೆ. ವಾಣಿಜ್ಯ ಬಳಕೆಯ 19 ಕೆಜಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ರೂ.15.50 ಹೆಚ್ಚಿಸಿ ಪರಿಷ್ಕೃತ ದರಗಳನ್ನು ಅಕ್ಟೋಬರ್ 1ರಿಂದ ಜಾರಿಗೊಳಿಸಲಾಗಿದೆ.
ಈ ಹೊಸ ದರ ಇಂದಿನಿಂದ (ಅಕ್ಟೋಬರ್ 1, ಬುಧವಾರ) ಜಾರಿಗೆ ಬಂದಿದ್ದು, ಹೋಟೆಲ್, ರೆಸ್ಟೋರೆಂಟ್ ಮತ್ತು ಇತರ ವಾಣಿಜ್ಯ ಸಂಸ್ಥೆಗಳಿಗೆ ಆರ್ಥಿಕ ಒತ್ತಡವನ್ನುಂಟು ಮಾಡಿದೆ. ಆದರೆ, 14.2 ಕೆಜಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲ
ನವದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ನ ಬೆಲೆ 15.50 ರೂ. ಏರಿಕೆಯಾಗಿದ್ದು, ಈಗ 1,595.50 ರೂ.ಗೆ ಲಭ್ಯವಿದೆ. ಕೋಲ್ಕತ್ತಾದಲ್ಲಿ 16.5 ರೂ. ದರ ಹೆಚ್ಚಳದೊಂದಿಗೆ ಸಿಲಿಂಡರ್ ಬೆಲೆ 1,700.50 ರೂ. ಆಗಿದೆ. ಮುಂಬೈನಲ್ಲಿ 15.50 ರೂ. ಏರಿಕೆಯಿಂದ ಸಿಲಿಂಡರ್ ದರ 1,547 ರೂ. ಆಗಿದ್ದರೆ, ಚೆನ್ನೈನಲ್ಲಿ 16.5 ರೂ. ಏರಿಕೆಯೊಂದಿಗೆ 1,754.50 ರೂ.ಗೆ ಲಭ್ಯವಿದೆ. ಸ್ಥಳೀಯ ತೆರಿಗೆ ಮತ್ತು ಸಾಗಾಣಿಕೆ ವೆಚ್ಚಗಳಿಗೆ ತಕ್ಕಂತೆ ಈ ದರಗಳು ಕೆಲವು ನಗರಗಳಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು. ಗೃಹಬಳಕೆಗೆ ಬಳಸುವ 14.2 ಕೆಜಿ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ತೇಲುತ್ತಿರುವ ಉತ್ತರ ಕರ್ನಾಟಕ; ಹಾರಾಡುತ್ತಿರುವ ಅಧಿಕಾರಸ್ಥರು
ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ದರ ಏರಿಕೆಯಿಂದಾಗಿ ಹೋಟೆಲ್, ರೆಸ್ಟೋರೆಂಟ್, ಕೇಟರಿಂಗ್ ಸೇವೆಗಳು ಮತ್ತು ಇತರ ಎಲ್ಪಿಜಿ-ಆಧಾರಿತ ವ್ಯಾಪಾರಗಳ ಕಾರ್ಯಾಚರಣೆ ವೆಚ್ಚ ಹೆಚ್ಚಾಗಲಿದೆ. ಈ ವೆಚ್ಚವನ್ನು ಕೆಲವು ವ್ಯಾಪಾರಿಗಳು ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆ ಇದೆ ಎಂದು ಉದ್ಯಮ ತಜ್ಞರು ತಿಳಿಸಿದ್ದಾರೆ.
ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಆರಂಭದಲ್ಲಿ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಜಾಗತಿಕ ಕಚ್ಚಾ ತೈಲ ಬೆಲೆಗಳು ಮತ್ತು ವಿದೇಶಿ ವಿನಿಮಯ ದರದ ಏರಿಳಿತದ ಆಧಾರದ ಮೇಲೆ ಪರಿಷ್ಕರಿಸುತ್ತವೆ. ಈ ಇತ್ತೀಚಿನ ಏರಿಕೆಯು ಈ ವರ್ಷದ ಆರಂಭದಿಂದ ಕಂಡುಬಂದಿರುವ ಇಂತಹ ಹಲವು ದರ ಪರಿಷ್ಕರಣೆಗಳ ಭಾಗವಾಗಿದೆ. ಆಮದು ಬೆಲೆಗಳು ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯ ಚಲನೆಯನ್ನು ಅವಲಂಬಿಸಿ ಮುಂದಿನ ತಿಂಗಳುಗಳಲ್ಲಿ ಮತ್ತಷ್ಟು ದರ ಪರಿಷ್ಕರಣೆಯಾಗುವ ಸಾಧ್ಯತೆ ಇದೆ. ಈ ದರ ಏರಿಕೆಯಿಂದ ವಾಣಿಜ್ಯ ಬಳಕೆದಾರರಿಗೆ ಆರ್ಥಿಕ ಸವಾಲು ಎದುರಾಗುವ ಸಾಧ್ಯತೆಯಿದೆ.