ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ ಮಾಡುತ್ತವೆ. ಉಚಿತ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಪ್ರಧಾನಿ ಮೋದಿಯಿಂದ ಹಿಡಿದು ಬಿಜೆಪಿಯ ಕಾರ್ಯಕರ್ತರವರೆಗೆ ಹಲವರು ಬೊಬ್ಬೆ ಹೊಡೆಯುತ್ತಿದ್ದರು. ಬೊಬ್ಬೆ ಹೊಡೆದವರ ಬಾಯಿಯನ್ನು ಇದೇ ಗ್ಯಾರಂಟಿ ಯೋಜನೆಗಳು ಮುಚ್ಚಿಸಿದ್ದವು. ಮಾತ್ರವಲ್ಲ, ಈಗ ಸ್ವತಃ ಬಿಜೆಪಿಯೇ ಈ ಯೋಜನೆಗಳನ್ನು ಕಾಪಿ ಮಾಡಿ, ತಾನು ಅಧಿಕಾರಿದಲ್ಲಿರುವ ರಾಜ್ಯಗಳಲ್ಲಿಯೂ ಜಾರಿಗೆ ತಂದಿದೆ/ತರುತ್ತಿದೆ.
ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕವು ಮೋದಿ ಅವರ ಆಂಬೋಣದಂತೆ ಆರ್ಥಿಕ ದಿವಾಳಿ ಆಗಿಲ್ಲ. ಬದಲಾಗಿ, ಈ ಯೋಜನೆಗಳು ರಾಜ್ಯದ ಆರ್ಥಿಕತೆಯನ್ನು ಬಲಪಡಿಸಲು ನೆರವಾಗಿವೆ. ಭಾರತದಲ್ಲೇ ಅತ್ಯಧಿಕ ತಲಾ ಆದಾಯ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆದುಕೊಂಡಿದೆ. ಕಳೆದ 10 ವರ್ಷಗಳಲ್ಲಿ ರಾಜ್ಯದ ತಲಾ ಆದಾಯವು ದುಪ್ಪಟ್ಟು ಅಂದರೆ, 93.6% ಬೆಳವಣಿಗೆ ಸಾಧಿಸಿ ಮುಂದಿದೆ. ಈ ಬೆಳವಣಿಗೆ ಬೆನ್ನಲ್ಲೇ, ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ಹೆಮ್ಮೆಯ ಗರಿ ದೊರೆತಿದೆ. ಶಕ್ತಿ ಯೋಜನೆಯು ʼಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್’ನ ‘ವರ್ಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್’ಗೆ ಸೇರ್ಪಡೆಯಾಗಿದೆ.
ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವುದು ರಾಜ್ಯದ ಮಹಿಳೆಯರ ಸಬಲೀಕರಣಕ್ಕೆ ಒಂದು ಪ್ರಮುಖ ಹೆಜ್ಜೆಯಾಗಲಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು. ಅದರಂತೆ, ಶಕ್ತಿ ಯೋಜನೆಯನ್ನು 2023ರ ಜೂನ್ 11ರಂದು ಜಾರಿಗೊಳಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ 500 ಕೋಟಿ (ಟಿಕೆಟ್) ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣ ಒದಗಿಸಲಾಗಿದೆ. ಈ ಮೈಲಿಗಲ್ಲನ್ನು ಸಾಧಿಸುವ ಮೂಲಕ ‘ವರ್ಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್’ನಲ್ಲಿ ಸ್ಥಾನಪಡೆದುಕೊಂಡಿದೆ. ಇದೇ ಯೋಜನೆಯು ಈ ಹಿಂದೆ, ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆದಿತ್ತು.
‘ವರ್ಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್’ಗೆ ಶಕ್ತಿ ಯೋಜನೆ ಸೇರ್ಪಡೆಗೊಂಡ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, “ರಾಜ್ಯದ ಮಹಿಳೆಯರು ಆರ್ಥಿಕ, ಸಾಮಾಜಿಕ ಹಾಗೂ ಔದ್ಯೋಗಿಕವಾಗಿ ಸಬಲರಾಗಲು ಶಕ್ತಿ ಯೋಜನೆ ನೆರವಾಗಿದೆ. ಕರ್ನಾಟಕದಲ್ಲಿ ಯೋಜನೆ ಯಶಸ್ವಿಯಾದ ಬಳಿಕ, ದೇಶದ ವಿವಿಧ ರಾಜ್ಯಗಳಲ್ಲಿ ಯೋಜನೆಯನ್ನು ಅಲ್ಲಿನ ಸರ್ಕಾರಗಳು ಅನುಷ್ಠನಕ್ಕೆ ತರುತ್ತಿವೆ. ಈಗಾಗಲೇ, ಯೋಜನೆಯು ‘ಗೋಲ್ಡನ್ ಬುಕ್ ಆಫ್ ವರ್ಡ್ ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆದಿದೆ. ಈಗ, ಯೋಜನೆಗೆ ಮತ್ತೊಂದು ಗರಿ ದೊರೆತಿದೆ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಕರ್ನಾಟಕದ ಮಹಿಳೆಯರಿಗೆ ಶಕ್ತಿ ತುಂಬಿವೆ 5 ಗ್ಯಾರಂಟಿಗಳು: ಹೊಸ ಅಧ್ಯಯನ ವರದಿ
2023ರಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರ ಬಂದಾಗ, ಹಂತ-ಹಂತವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿತು. ಈ ಯೋಜನೆಗಳು ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿ, ಸಾಮಾಜಿಕ ನ್ಯಾಯವನ್ನು ಒದಗಿಸುತ್ತವೆ ಎಂದು ಕಾಂಗ್ರೆಸ್ ಪ್ರತಿಪಾದಿಸಿತ್ತು.
ಆದರೂ, ಪ್ರಧಾನಿ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಾಜ್ಯದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕತೆಗೆ ಹೊರೆಯಾಗುತ್ತವೆ. ರಾಜ್ಯವನ್ನು ದಿವಾಳಿ ಮಾಡುತ್ತವೆ. ಸಾಲದ ಸುಳಿಗೆ ಸಿಲುಕಿಸುತ್ತವೆ ಎಂದು ಆರೋಪಿಸಿದ್ದರು. ‘ಗ್ಯಾರಂಟಿಗಳಿಂದ ಕರ್ನಾಟಕದಲ್ಲಿ ಲೂಟಿ ನಡೆಯುತ್ತಿದೆ’ ಎಂಬ ಗಂಭೀರ ಆರೋಪವನ್ನೂ ಬಿಜೆಪಿಗರು ಮಾಡಿದ್ದರು. ಬಿಜೆಪಿಯ ಮುಮ್ಮೇಳಕ್ಕೆ ಹಿಮ್ಮೇಳ ಬಾರಿಸಿದ್ದ ರಾಜ್ಯ ಗೃಹ ಸಚಿವ ಡಾ. ಜಿ ಪರಮೇಶ್ವರ್ ಕೂಡ ‘ಗ್ಯಾರಂಟಿ ಯೋಜನೆಗಳು ರಾಜ್ಯಕ್ಕೆ ಹೊರೆಯಾಗಿವೆ’ ಎಂದು ಪ್ರತಿಪಾದಿಸಿದ್ದರು.
ಆದರೆ, ಗ್ಯಾರಂಟಿ ಯೋಜನೆಗಳು ಸಮಗ್ರವಾಗಿ ಮತ್ತು ಸಮರ್ಪಕವಾಗಿ ಜಾರಿಯಾಗುತ್ತಿರುವ ಸಂದರ್ಭದಲ್ಲೇ ಕರ್ನಾಟಕವು ತಲಾ ಆದಾಯದಲ್ಲಿ ಉಳಿದೆಲ್ಲ ರಾಜ್ಯಗಳಿಗಿಂತ ಹೆಚ್ಚು ವರಮಾನವನ್ನು ಹೊಂದಿದ ರಾಜ್ಯವಾಗಿ ಹೊರಹೊಮ್ಮಿದೆ. ಇದೀಗ, ‘ಶಕ್ತಿ ಯೋಜನೆ’ಗೆ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಹಾಗೂ ವರ್ಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್ ಅವಾರ್ಡ್ ಸಿಕ್ಕಿದೆ.
ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಭಾಗದ ಮಹಿಳೆಯರ (ಗೃಹಿಣಿಯರು) ಕೈಗೆ ಹಣ ದೊರೆಯುತ್ತಿದೆ. ಉಚಿತ ಪ್ರಯಾಣದಿಂದ ಮಹಿಳೆಯರು ದುಡಿಮೆ ಮತ್ತು ಖರ್ಚಿನಲ್ಲಿ ತೊಡುವ ಮೂಲಕ ಆರ್ಥಿಕ ವಹಿವಾಟುಗಳಲ್ಲಿ ಭಾಗಿಯಾಗುತ್ತಿದ್ದಾರೆ. ಮಹಿಳೆಯರ ಕೈಗೆ ಹಣ ಸಿಗುತ್ತಿರುವುದರಿಂದ ಪುರಷರ ಮೇಲಿನ ಆರ್ಥಿಕ ಅವಲಂಬನೆ ಮತ್ತು ಹೊರೆ ಕಡಿಮೆಯಾಗಿದೆ. ಹಣವನ್ನು ತಮ್ಮ ನಿಯಮಿತ ಖರ್ಚಿನ ಹೊರತಾಗಿ ವಿಭಿನ್ನ ಕ್ಷೇತ್ರಗಳಲ್ಲಿ ವ್ಯಯಿಸಲು ಸಾಧ್ಯವಾಗುತ್ತಿದೆ. ರಾಜ್ಯದ ಆರ್ಥಿಕತೆಯಲ್ಲಿ ಮಹಿಳೆಯರು ಪಾಲ್ಗೊಳ್ಳುವಂತಾಗಿದೆ.
ಈ ಲೇಖನ ಓದಿದ್ದೀರಾ?: ಸಿದ್ದರಾಮಯ್ಯ ಗ್ಯಾರಂಟಿ ಕಾಪಿ: ಬಿಹಾರದ ಮಹಿಳೆಯರ ಮೂಗಿಗೆ ತುಪ್ಪ ಸವರಿದ ಮೋದಿ!
ಗ್ಯಾರಂಟಿಗಳ ಪೈಕಿ ಅತಿ ಹೆಚ್ಚು ಟೀಕೆಗೆ, ವ್ಯಂಗ್ಯಕ್ಕೆ, ಅಪಹಾಸ್ಯಕ್ಕೆ ಗುರಿಯಾಗಿದ್ದು ‘ಶಕ್ತಿ’ ಯೋಜನೆ. ಹೌದು, ‘ಸಿದ್ರಾಮಯ್ಯ ಫ್ರೀ ಕೊಟ್ಟು ಹೆಣ್ಣುಮಕ್ಕಳೆಲ್ಲ ಹಾಳಾದರು, ಹೆಂಗಸರು ಗಂಡಂದಿರ ಮಾತೇ ಕೇಳುತ್ತಿಲ್ಲ, ಸಿಕ್ಕ ಸಿಕ್ಕಲ್ಲಿ ಸುಮ್ಮನೆ ಓಡಾಡ್ತಾರೆ, ಗಂಡ ಮಕ್ಕಳನ್ನು ಬಿಟ್ಟು ಊರು ಸುತ್ತುತ್ತಿದ್ದಾರೆ, ಬಸ್ನಲ್ಲಿ ಗಂಡಸರಿಗೆ ಸೀಟೇ ಸಿಗುತ್ತಿಲ್ಲ, ಗಂಡಸರು ಓಟು ಹಾಕಿಲ್ವಾ? ನಮಗೂ ಫ್ರೀಕೊಡಿ, ಹಿರಿಯರಿಗೆ ಫ್ರೀ ಕೊಡಿ…’ ಎಂದು ಈ ಶಕ್ತಿ ಯೋಜನೆಯನ್ನ ಗೇಲಿ ಮಾಡಿದವರೇ ಹೆಚ್ಚು.
ಹೆಣ್ಣು ಮನೆಯಿಂದ ಹೊರಹೋಗುವುದನ್ನು ಸಹಿಸದ ಮನಸ್ಥಿತಿಗಳು, ”ಶಕ್ತಿ ಯೋಜನೆಯಿಂದ ಸಂಸಾರಗಳು ಹಾಳಾಗುತ್ತವೆ, ಹೆಂಗಸರು ದಾರಿ ತಪ್ಪುತ್ತಾರೆ” ಎನ್ನುವಂತಹ ಕ್ಷುಲ್ಲಕ ಟೀಕೆಗಳನ್ನು ಮಾಡಿದವು. ಮಾಧ್ಯಮಗಳು ಇಂತಹ ವಾದಗಳಿಗೆ ಭಾರೀ ಪ್ರಚಾರವನ್ನೂ ನೀಡಿದವು. ಆದರೆ, ಶಕ್ತಿ ಯೋಜನೆಯ ನಿಜ ಶಕ್ತಿ ಪ್ರದರ್ಶನ ನಿಧಾನಕ್ಕೆ ಅನಾವರಣ ಆಗುತ್ತಿದೆ. ಶಕ್ತಿ ಯೋಜನೆಯು ಮಹಿಳೆಯರ ಸ್ವಾವಲಂಬನೆ ಮತ್ತು ಬಲವರ್ಧನೆಗೆ ಕಾರಣವಾಗಿ ನಿಂತಿದೆ.
ಶಕ್ತಿ ಯೋಜನೆ ಜಾರಿಯಾಗಿ ಎರಡೇ ವರ್ಷಗಳಲ್ಲಿ ಉದ್ಯೋಗಕ್ಕೆ ಹೋಗುವ ಮಹಿಳೆಯರ ಪ್ರಮಾಣ ಹೆಚ್ಚಾಗಿದೆ ಎಂದು ಸಮೀಕ್ಷೆಯೊಂದು ಹೇಳಿತ್ತು. Sustainable Mobility Network ಸಮೀಕ್ಷಾ ವರದಿಯ ಪ್ರಕಾರ ಮಹಿಳೆಯರು ಹೆಚ್ಚು ಸ್ವತಂತ್ರವಾಗಿ ದುಡಿದು ಬದುಕುವುದಕ್ಕೆ ಶಕ್ತಿ ಯೋಜನೆ ಪ್ರೇರಣೆಯಾಗಿದೆ. ಶಿಕ್ಷಣ ಉದ್ಯೋಗಕ್ಕೆ ಹೋಗುವವರ ಪ್ರಮಾಣ ಹೆಚ್ಚಿದೆ.
ಶಕ್ತಿ ಯೋಜನೆಯು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಮಹಿಳೆಯರನ್ನು ಸಬಲರನ್ನಾಗಿಸುತ್ತಿದೆ. ಪುರುಷ ಪ್ರಧಾನ ವ್ಯವಸ್ಥೆಯು ಹೆಣ್ಣಿನ ರೆಕ್ಕೆಗಳನ್ನು ಕಿತ್ತು ಬಿಸಾಕಿ, ಆಕೆ ಸದಾ ಅಧೀನದಲ್ಲಿ ಇರುವುದನ್ನು ಬಯಸುತ್ತೆ. ಶಕ್ತಿಯಂತಹ ಯೋಜನೆಗಳಿಗೆ ಬರುವ ಟೀಕೆಗಳ ಹಿಂದೆ ಸ್ಪಷ್ಟವಾಗಿ ಪುರುಷಪ್ರಧಾನ ಮನಸ್ಥಿತಿ ಇರುತ್ತೆ. ಇದ್ಯಾವುದಕ್ಕೂ ಅಂಜದೆ ರಾಜ್ಯ ಸರ್ಕಾರ ಶಕ್ತಿ ಮತ್ತು ಗೃಹಲಕ್ಷ್ಮಿಯಂತಹ ಯೋಜನೆಗಳನ್ನು ಸಾಧ್ಯವಾದ ಮಟ್ಟಿಗೆ ಜಾರಿಗೆ ತಂದಿದ್ದು ಶ್ಲಾಘನೀಯ ವಿಚಾರ. ಇದೀಗ, ಶಕ್ತಿ ಯೋಜನೆಗೆ ಪ್ರಶಸ್ತಿಗಳ ಗರಿ ಲಭಿಸಿರುವುದು ಹೆಮ್ಮೆಯ ವಿಚಾರ.