ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ನಾಯಕ ವಿಜಯ್ ಅವರು ಬುಧವಾರ ತಮ್ಮ ರಾಜ್ಯವ್ಯಾಪಿ ಪ್ರವಾಸವನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.
ತಮಿಳುನಾಡಿನ ಕರೂರಿನಲ್ಲಿ ನಡೆದ ಅವರ ಸಭೆಯಲ್ಲಿ 41 ಮಂದಿ ಸಾವಿಗೀಡಾದ ದುರಂತದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ಎರಡು ವಾರಗಳವರೆಗೆ ನಡೆಯಬೇಕಿದ್ದ ಸಭೆಗಳು ರದ್ದುಪಡಿಸಲಾಗಿದೆ.
ಈ ದುಃಖಭರಿತ ಸಮಯದಲ್ಲಿ ಜನಪ್ರಿಯ ಸಭಾ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಪಕ್ಷದ ನಾಯಕನ ಅನುಮತಿಯಿಂದ ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಪಕ್ಷವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದೆ.
ವಿಜಯ್ ಅವರು ಶನಿವಾರದಿಂದಲೇ “ಜನ ಸಂಪರ್ಕ ಯಾತ್ರೆ” ಆರಂಭಿಸಿದ್ದರು. ಅವರು ತಿರುಚಿರಪ್ಪಳ್ಳಿ, ನಾಮಕ್ಕಲ್ ಮತ್ತು ಕರೂರು ಜಿಲ್ಲೆಗಳಲ್ಲಿ ಜನರನ್ನು ಭೇಟಿಯಾಗಿದ್ದರು. ಸೆಪ್ಟೆಂಬರ್ 27ರಂದು ಕರೂರಿನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ 41 ಮಂದಿ ಸಾವಿಗೀಡಾಗಿ, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ತೇಲುತ್ತಿರುವ ಉತ್ತರ ಕರ್ನಾಟಕ; ಹಾರಾಡುತ್ತಿರುವ ಅಧಿಕಾರಸ್ಥರು
ಈ ಘಟನೆ ನಂತರ ವಿಜಯ್ ಮತ್ತು ಆಡಳಿತಾರೂಢ ಡಿಎಂಕೆ ಪಕ್ಷದ ನಡುವೆ ರಾಜಕೀಯ ಸಂಘರ್ಷ ತೀವ್ರಗೊಂಡಿದೆ. ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ತಮ್ಮ ಮೇಲೆ “ಪ್ರತೀಕಾರ” ತೀರಿಸಿಕೊಳ್ಳುತ್ತಿದ್ದಾರೆ ಎಂದು ವಿಜಯ್ ಆರೋಪಿಸಿದ್ದಾರೆ. ಸರ್ಕಾರ ತಮ್ಮ ಮೇಲೆ ಏನೇ ಮಾಡಿದರೂ ತಾನು ಹಿಂಜರಿಯುವುದಿಲ್ಲ, ಆದರೆ ತಮ್ಮ ಕಾರ್ಯಕರ್ತರಿಗೆ ತೊಂದರೆ ನೀಡಬೇಡಿ ಎಂದು ವಿಜಯ್ ಎಚ್ಚರಿಕೆ ನೀಡಿದ್ದರು.
ಇದಕ್ಕೆ ಪ್ರತಿಯಾಗಿ, ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಮಾಧ್ಯಮಗಳಿಗೆ ವಿಡಿಯೋ ದೃಶ್ಯಗಳನ್ನು ಬಿಡುಗಡೆ ಮಾಡಿ, ಸಭೆ ಆಯೋಜನೆಗೆ ಸಂಬಂಧಿಸಿದ ನಿಯಮ ಉಲ್ಲಂಘನೆಯೇ ದುರಂತಕ್ಕೆ ಕಾರಣ ಎಂದು ಟಿವಿಕೆ ಪಕ್ಷದ ಮೇಲೆ ಹೊಣೆಹೊರೆಸಿದ್ದಾರೆ.
ಈ ಬೆಳವಣಿಗೆ ಡಿಎಂಕೆ ಮತ್ತು ಟಿವಿಕೆ ನಡುವೆ ಗಂಭೀರ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದ್ದು, ಘಟನೆಯ ತನಿಖೆ ಮುಂದುವರಿದಿದೆ.
