ರಸ್ತೆಗುಂಡಿಗಳನ್ನು ಸಾರ್ವಜನಿಕಕರು ಗಮನಿಸಿ ಸರ್ಕಾರಕ್ಕೆ ತಿಳಿಸುವ ವ್ಯವಸ್ಥೆ ಇಡೀ ದೇಶದಲ್ಲಿ ಎಲ್ಲಾದರೂ ಇದ್ದರೆ ಅದು ಕರ್ನಾಟಕದಲ್ಲಿ ಮಾತ್ರ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಸದಾಶಿವನಗರದ ನಿವಾಸದ ಬಳಿ ಸುದ್ದಿಗಾಗರರು ‘ನಗರ ಪ್ರದಕ್ಷಿಣೆ, ರಸ್ತೆ ಕಾಮಗಾರಿಗಳ ಗುಣಮಟ್ಟ ಹಾಗೂ ಕಾಮಗಾರಿ ನಡೆದ ಸ್ಥಳಗಳಲ್ಲಿ ರಸ್ತೆಗಳು ಮತ್ತೆ ಹಾಳಾಗಿರುವ ಆರೋಪ’ದ ಬಗ್ಗೆ ಕೇಳಿದಾಗ, “ಇದೆಲ್ಲವೂ ಸುಳ್ಳು ಆರೋಪಗಳು. ರಸ್ತೆಗುಂಡಿಗಳ ದುರಸ್ತಿ ಕೆಲಸ ನಿರಂತರ ಪ್ರಕ್ರಿಯೆ. ಗುಣಮಟ್ಟ ಪರಿಶೀಲನೆ ನಡೆಸುವ ಸಲುವಾಗಿ ನಗರ ಪ್ರದಕ್ಷಿಣೆ ಮಾಡಲಾಗುತ್ತಿದೆ. ಸಾರ್ವಜನಿಕರ ಜೊತೆ ಚರ್ಚೆ ನಡೆಸುವ ಕಾರ್ಯಕ್ರಮದ ಬಗ್ಗೆಯೂ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು” ಎಂದರು.
“ನಾವು ನಮ್ಮ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಕೇವಲ ಗುಂಡಿಗಳನ್ನು ಮಾತ್ರ ಮುಚ್ಚದೇ ಅದರ ಸುತ್ತಲೂ ಅಚ್ಚುಕಟ್ಟಾಗಿ ಡಾಂಬರು ಹಾಕಿ ಗಟ್ಟಿ ಮಾಡಲಾಗುತ್ತಿದೆ. ಕೆಲವೊಂದು ಕಡೆ ಸುತ್ತಲಿನ ಮೇಲ್ಪದರವನ್ನೂ ದುರಸ್ತಿ ಮಾಡಲಾಗುತ್ತಿದೆ” ಎಂದು ಹೇಳಿದರು.
“ನಗರದಲ್ಲಿ 1.20 ಕೋಟಿ ವಾಹನಗಳಿವೆ. ಪ್ರತಿನಿತ್ಯ ಹೊರಗಡೆಯಿಂದ 50 ಲಕ್ಷ ವಾಹನಗಳು ಬರುತ್ತವೆ. ಇಷ್ಟು ಒತ್ತಡವನ್ನು ನಮ್ಮ ರಸ್ತೆಗಳು ತಾಳಿಕೊಳ್ಳುತ್ತಿವೆ. ಹಲವಾರು ಕಡೆ ವೈಟ್ ಟಾಪಿಂಗ್ ಕಾಮಗಾರಿಯೂ ನಡೆಯುತ್ತಿದೆ” ಎಂದರು.
ಕಂಜೆಕ್ಷನ್ ಶುಲ್ಕದ ಬಗ್ಗೆ ಕೇಳಿದಾಗ, “ಇದರ ಬಗ್ಗೆ ಒಂದಷ್ಟು ಜನರು ಸಲಹೆ ನೀಡಿದ್ದಾರೆ ಹೊರತು ಸರ್ಕಾರದ ಮುಂದೆ ಈ ರೀತಿಯ ಯಾವುದೇ ಪ್ರಸ್ತಾವನೆಯಿಲ್ಲ” ಎಂದು ತಿಳಿಸಿದರು.
ಕಾವೇರಿ ಆರತಿ ಬಗ್ಗೆ ಮಾತನಾಡಿ, “ಕಾವೇರಿ ಆರತಿಯೂ ಅತ್ಯಂತ ಸುಗಮವಾಗಿ ನೆರವೇರಿದೆ. ಈ ಕಾರ್ಯಕ್ರಮ ಮುಂದುವರೆಸುವ ಶಕ್ತಿ ನಮಗೆಲ್ಲರಿಗೂ ದೊರಕಲಿ. ಕಾವೇರಿ ನದಿ 3 ಕೋಟಿಗೂ ಅಧಿಕ ಜನರಿಗೆ ಜೀವನಾಡಿ. ಕರ್ನಾಟಕ, ತಮಿಳುನಾಡು ಜನರಿಗೆ ಇದರಿಂದ ಅನುಕೂಲವಾಗುತ್ತಿದೆ. ಪ್ರತಿವರ್ಷ ಇದೇ ರೀತಿ ತುಂಬಿ ಹರಿಯಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ” ಎಂದರು.
“ಕರ್ನಾಟಕದ ಹಾಗೂ ಈ ದೇಶದ ಸರ್ವರಿಗೆ, ರೈತರಿಗೆ ಆ ದುರ್ಗಾ ದೇವಿ ದಸರಾ ಹಬ್ಬದ ಸಂದರ್ಭದಲ್ಲಿ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದರು.
