ಬಾಪೂ ಎಂಬ ಪವಾಡದ ಅನ್ವೇಷಣೆ…

Date:

Advertisements
ಇಂದು ರಾಷ್ಟ್ರಪಿತ ಬಾಪೂ ಜನ್ಮದಿನ. ಆ ನೆನಪಿನಲ್ಲಿ ಸದ್ಯದಲ್ಲೇ ಹೊರಬರಲಿರುವ ಎನ್.ಎಸ್.‌ ಶಂಕರ್‌ ಅವರ ‘ಬಾಪೂ’ ನಾಟಕ ಕೃತಿಗೆ ಬರೆದ ಪ್ರಸ್ತಾವನೆ... ಈದಿನ ಓದುಗರಿಗಾಗಿ

ಪ್ರಶ್ನೆ: ನೀವು ಎಲ್ಲ ಯಂತ್ರಗಳ ವಿರೋಧಿಯೇ?

ಗಾಂಧೀಜಿ: ನಾನು ಹೇಗೆ ಎಲ್ಲ ಯಂತ್ರಗಳ ವಿರೋಧಿಯಾದೇನು- ಈ ದೇಹವೇ ಒಂದು ಸೂಕ್ಷ್ಮ ಯಂತ್ರವಾಗಿರುವಾಗ? ಚರಕವೂ ಒಂದು ಯಂತ್ರ; ಹಲ್ಲಿಗೆ ಹಾಕುವ ಕಡ್ಡಿಯೂ ಯಂತ್ರವೇ. ನನ್ನ ಆಕ್ಷೇಪವಿರುವುದು ಯಂತ್ರಗಳ ಕುರಿತ ಹುಚ್ಚು ಮೋಹದ ವಿರುದ್ಧ. ಈ ಮೋಹಭ್ರಾಂತಿ ವ್ಯಕ್ತವಾಗುತ್ತಿರುವುದು ‘ಶಾರೀರಿಕ ಶ್ರಮವನ್ನು ಕಡಿಮೆ ಮಾಡುವ’ ಯಂತ್ರಗಳಿಗಾಗಿ. ಜನ ಯಂತ್ರಗಳನ್ನು ಬಳಸಿ ‘ದುಡಿಮೆಯನ್ನು ಕಡಿಮೆ ಮಾಡುತ್ತಲೇ’ ಹೆಣಗುತ್ತಾರೆ; ಆ ಹಾದಿಯಲ್ಲಿ ಸಹಸ್ರಾರು ಜನ ಕೆಲಸವಿಲ್ಲದೆ ಬೀದಿಗೆ ಬಿದ್ದು ಹಸಿವಿನಿಂದ ಸಾಯುತ್ತಾರೆ. ನನ್ನ ಗುರಿ ಸಮಸ್ತ ಮನುಕುಲದ ಶ್ರಮ ಮತ್ತು ಸಮಯ ಉಳಿಸುವುದೇ ಹೊರತು, ಕೆಲವೇ ಕೆಲವರದ್ದಲ್ಲ. ಸಂಪತ್ತು ಕೇವಲ ಕೆಲವರ ಕೈಯಲ್ಲಿ ಕ್ರೋಡೀಕರಣಗೊಳ್ಳುವುದಲ್ಲ, ಅದು ಸಮಸ್ತರ ಸೊತ್ತಾಗಬೇಕು. ಇಂದು ಬೆರಳೆಣಿಕೆಯ ಮಂದಿ, ಕೋಟ್ಯಂತರ ಜನರ ಮೇಲೆ ಸವಾರಿ ಮಾಡಲು ಯಂತ್ರಗಳು ಅನುಕೂಲ ಮಾಡಿಕೊಟ್ಟಿವೆ. ಅದರ ಹಿಂದಿನ ಚಾಲಕ ತತ್ವ ಲೋಭವೇ ಹೊರತು ಜನೋಪಕಾರವಲ್ಲ… ಮುಖ್ಯವಾಗಿ ನಮ್ಮ ಗಮನಕೇಂದ್ರದಲ್ಲಿ ಇರಬೇಕಾದ್ದು ಮನುಷ್ಯ… ಯಂತ್ರಗಳು ಮನುಷ್ಯನ ಅಂಗಾಂಗಗಳನ್ನು ಕ್ಷೀಣಗೊಳಿಸುವಂತಿರಬಾರದು. ನಾನಿಲ್ಲಿ ಕೆಲವು ಜಾಣ ಅಪವಾದಗಳನ್ನು ನಿದರ್ಶನವಾಗಿ ನೀಡಬಲ್ಲೆ: ಸಿಂಗರ್‌ನ ಹೊಲಿಗೆ ಯಂತ್ರವನ್ನೇ ತೆಗೆದುಕೊಳ್ಳಿ. ಅದು ಮನುಷ್ಯ ಕಂಡು ಹಿಡಿದ ಅತ್ಯಂತ ಉಪಯುಕ್ತ ಯಂತ್ರಗಳಲ್ಲೊಂದು. ಮತ್ತು ಆ ಸಾಧನದ ಸುತ್ತಲೇ ಒಂದು ರಮಣೀಯತೆ ಇದೆ…

ಇದು 1924ರಲ್ಲಿ ದಿಲ್ಲಿಯಲ್ಲಿ ನಡೆದ ಒಂದು ಸಂವಾದ. ಗಾಂಧೀಜಿಯವರ ‘ಹಿಂದ್ ಸ್ವರಾಜ್’ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಿದ ಬಾಪೂಜಿ ಕಾರ್ಯದರ್ಶಿ ಮಹದೇವ ದೇಸಾಯಿ ತಮ್ಮ ಮುನ್ನುಡಿಯಲ್ಲಿ ಈ ವಾಗ್ವಾದವನ್ನು ಉಲ್ಲೇಖಿಸುತ್ತಾರೆ. ಕೊನೆಯಲ್ಲಿ ಗಾಂಧೀಜಿ ಹೇಳುವುದಿಷ್ಟೇ:

ಆತ್ಮದ ಪರಿಪೂರ್ಣ ವಿಮೋಚನೆಗೆ ಮತ್ತು ಮೋಕ್ಷ ಪ್ರಾಪ್ತಿಗೆ ಅಡ್ಡಿಯಾಗುವ ಈ ನನ್ನ ದೇಹವನ್ನು ನಾನು ಹೇಗೆ ನಿರಾಕರಿಸುತ್ತೇನೋ, ಅದೇ ರೀತಿಯಲ್ಲಿ ಎಲ್ಲ ಯಂತ್ರಗಳೂ ಕೊನೆಗೊಳ್ಳಬೇಕು ಎಂದು ಆಶಿಸುತ್ತೇನೆ. ಹಾಗೆ ನಾನು ಎಲ್ಲ ಯಂತ್ರಗಳನ್ನೂ ನಿರಾಕರಿಸುವುದು ಹೌದಾದರೂ, ಯಂತ್ರಗಳು ಅಳಿಯುವುದಿಲ್ಲ ಎಂದೂ ನಾನು ಬಲ್ಲೆ. ಈ ದೇಹದ ಹಾಗೆಯೇ ಅವೂ ಅನಿವಾರ್ಯ. ನಾನು ಮೊದಲೇ ಹೇಳಿದ ಹಾಗೆ ಈ ದೇಹ ಕೂಡ ಒಂದು ಪರಿಶುದ್ಧ ಯಂತ್ರ. ಆದರೆ ಅದು ಆತ್ಮದ ಪರಮೋನ್ನತಿಗೆ ಅಡೆತಡೆಯಾದರೆ ಅದನ್ನೂ ತಿರಸ್ಕರಿಸಬೇಕು ಎಂಬುದು ನನ್ನ ನಿಲುವು…

ಇದು ಬಾಪೂಜಿಯ ಮೂಲ ತಾತ್ವಿಕ ನಿಲುವು. ಇದರಲ್ಲಿ ಗೊಂದಲಕ್ಕೆ ಆಸ್ಪದ ಎಲ್ಲಿದೆ? 1908ರಲ್ಲಿ ‘ಹಿಂದ್ ಸ್ವರಾಜ್’ ಬರೆದಾಗಿನಿಂದ ಯಂತ್ರ ನಾಗರಿಕತೆ ಬಗೆಗಿನ ಅವರ ನಿಲುವುಗಳು ಸಾಕಷ್ಟು ವಿವಾದ ಸೃಷ್ಟಿಸಿವೆ. ಗಾಂಧೀಜಿ ಸಾರಾಸಗಟಾಗಿ ಯಂತ್ರಗಳ ವಿರೋಧಿ, ವೈದ್ಯರು- ವಕೀಲರ ವಿರೋಧಿ, ಆಧುನಿಕ ವಾಹನಗಳ ವಿರೋಧಿ… ಹೀಗೆ ಅವರ ದೃಷ್ಟಿಕೋನವನ್ನು ಗ್ರಹಿಸುವ ಮೊದಲೇ ಅಸಂಖ್ಯಾತ ಅವಸರದ ಪೂರ್ವಗ್ರಹಗಳು ಚೆಲ್ಲಾಡಿವೆ. ಅವರ ಚಿಂತನೆಯೇ ಅಪ್ರಾಯೋಗಿಕ ಗೊಡ್ಡು ಸಂಹಿತೆಯೆಂಬ ಟೀಕಾಬಾಣಗಳು ಹಾರಿ ಬಂದಿವೆ. ಇದೊಂದೇ ವಿಷಯವಲ್ಲ, ಇನ್ನೂ ಎಷ್ಟೋ ಸಂಗತಿಗಳಲ್ಲಿ ಮಹಾತ್ಮನನ್ನೇ ಖಳನಾಯಕನನ್ನಾಗಿ ಮಾಡಿ ಕೂರಿಸಿರುವುದನ್ನು ಕಾಣುತ್ತಿದ್ದೇವೆ. ಉದಾಹರಣೆಗೆ ದೇಶ ವಿಭಜನೆಗೂ ಗಾಂಧೀಜಿಯೇ ಕಾರಣ ಎಂದು ವಾದಿಸುವವರಿಗೆ ಇಲ್ಲಿ ಲೆಕ್ಕವೇ ಇಲ್ಲ. ಇರಲಿ.

ಎರಡನೇ ದುಂಡು ಮೇಜಿನ ಪರಿಷತ್ತು ನಡೆಯುವಾಗ ಲಂಡನ್ನಿನಲ್ಲಿ ಭೇಟಿಯ ಅವಕಾಶ ಕೋರಿ ಬಾಪೂಜಿಯನ್ನು ಕಂಡ ಜಗದ್ವಿಖ್ಯಾತ ನಟ ನಿರ್ದೇಶಕ ಚಾರ್ಲಿ ಚಾಪ್ಲಿನ್ ಎತ್ತಿದ ಪ್ರಶ್ನೆಯೂ ಅದೇ: ‘ಯಂತ್ರಗಳ ಬಗ್ಗೆ ಗಾಂಧೀಜಿ ನಿಲುವೇನು?’

ಆತನಿಗೆ ಬಾಪೂ ನೀಡಿದ ಮಾರುತ್ತರದಿಂದ ಚಾಪ್ಲಿನ್ನನ ದೃಷ್ಟಿಕೋನವೇ ಬದಲಾಯಿತು. ಆ ಸಂವಾದದ ಫಲಶ್ರುತಿಯಾಗಿಯೇ, ಯಂತ್ರಗಳ ಎದುರು ನಿಶ್ಶೇಷವಾಗಿಹೋಗುವ ಮನುಷ್ಯನ ಪಾಡನ್ನು ವೈನೋದಿಕವಾಗಿ ಆದರೆ ಮನೋಜ್ಞವಾಗಿ ಚಿತ್ರಿಸಿದ ಚಾಪ್ಲಿನ್ನನ ಕ್ಲಾಸಿಕ್- ಮಾಡರ್ನ್ ಟೈಮ್ಸ್ ಸಿನಿಮಾ ಬಂತು…

ಗಾಂಧೀಜಿ ಮತ್ತೂ ಬರೆದರು:

ಈಗ ಯಂತ್ರ ನಾಗರಿಕತೆಯ ಚಿಂತನೆಗೆ ಯಾವ ಹಿನ್ನೆಲೆಯಿತ್ತು ಎಂದು ನೋಡಬೇಕು:

ನಾನು (ರೊಮೇಶ್ ಸಿ.) ದತ್ ಬರೆದ ಎಕನಾಮಿಕ್ ಹಿಸ್ಟರಿ ಆಫ್ ಇಂಡಿಯಾ ಓದಿದಾಗ ನನ್ನ ಕಣ್ಣಲ್ಲಿ ನೀರು ಬಂತು. ಈಗಲೂ ಅದರ ಆಲೋಚನೆ ಸುಳಿದಾಗಲೆಲ್ಲ ನನ್ನ ಹೃದಯ ಹಿಂಡುತ್ತದೆ. ಭಾರತದ ಬಡತನಕ್ಕೆ ಈ ಯಂತ್ರವೇ ಕಾರಣ. ಮ್ಯಾಂಚೆಸ್ಟರ್ (ಅಂದರೆ ಯಂತ್ರಾಧಾರಿತ ಉದ್ದಿಮೆಗಳು) ನಮಗೆ ಮಾಡಿರುವ ಹಾನಿ ಅಳತೆಗೇ ಸಿಕ್ಕುವುದಿಲ್ಲ. ಮ್ಯಾಂಚೆಸ್ಟರ್ ಒಂದರ ಕಾರಣಕ್ಕಾಗಿಯೇ ಭಾರತದ ಕರಕುಶಲ ಕಸುಬುಗಳು ಹೆಚ್ಚುಕಮ್ಮಿ ಸಂಪೂರ್ಣವಾಗಿ ಕಣ್ಮರೆಯಾಗಿಹೋಗಿವೆ…

ಇದನ್ನು ಓದಿದ್ದೀರಾ?: ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’ಗೆ ಇತಿಹಾಸಕಾರ ರಾಮಚಂದ್ರ ಗುಹಾ ಆಯ್ಕೆ

ಬಾಪೂಜಿಯವರನ್ನು ಚರಕಾ ಎಂಬ ಅತ್ಯಪೂರ್ವ ಪರಿಹಾರದ ಕಡೆ ಮುನ್ನಡೆಸಿದ್ದು ಇದೇ ಅರಿವು. ಚರಕಾ- ಭಾರತೀಯನ ಸ್ವಾವಲಂಬನೆಯ ಸಂಕೇತ ಮಾತ್ರವಲ್ಲ, ಅದು ನಮ್ಮ ಅರ್ಥವ್ಯವಸ್ಥೆಗೇ ಮರುಜೀವ ನೀಡಿದ ಸಾಧನ; ಭಾರತದ ರಾಷ್ಟ್ರನಾಯಕರನ್ನು ಸಾಮಾನ್ಯ ಜನಸ್ತೋಮದೊಂದಿಗೆ ಬೆಸೆದ ಜೀವತಂತು. ಮತ್ತು ಖಾದಿ ಎಂಬುದು- ದೊರೆಯನ್ನೂ, ದೀನನನ್ನೂ ಒಟ್ಟಿಗೇ ಕೈ ಹಿಡಿದು ಕರೆ ತಂದು ಒಂದೇ ಮಣೆಯ ಮೇಲೆ ಕೂರಿಸಿದ ಮಹಾ ಆಂದೋಲನ. ಗಾಂಧೀಜಿ ಖಾದಿಯನ್ನು ಪ್ರತಿಪಾದಿಸಿ ನೀಡಿದ ಒಂದು ಕರೆಗೆ ಇಂಗ್ಲೆಂಡಿನ ಲಂಕಾಶೈರ್ ಬಟ್ಟೆ ಕಾರ್ಖಾನೆಗಳು ದಿವಾಳಿಯಾಗಿಹೋಗಿದ್ದನ್ನು ಇತಿಹಾಸ ದಾಖಲಿಸಿದೆ…

QT O 3 1024x683 1

ಚರಕಾ ಯಾಕೆ?

ಗಾಂಧಿ ಉತ್ತರ:

ನೂರೈವತ್ತು ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ನಮಗೆ ಬೇಕಾದ ಎಲ್ಲ ಬಟ್ಟೆಯನ್ನೂ ನಾವೇ ತಯಾರಿಸಿಕೊಳ್ಳುತ್ತಿದ್ದೆವು. ಹಳ್ಳಿ ಹೆಂಗಸರು ತಂತಮ್ಮ ಗುಡಿಸಲುಗಳಲ್ಲಿ ನಯವಾದ ಬಟ್ಟೆಯನ್ನು ತಾವೇ ನೇಯ್ದು ಗಂಡಂದಿರೊಟ್ಟಿಗೆ ದುಡಿಮೆಯಲ್ಲಿ ಕೈ ಜೋಡಿಸುತ್ತಿದ್ದರು… ಭಾರತದಲ್ಲಿ ಒಂದು ವರ್ಷಕ್ಕೆ ಒಬ್ಬರಿಗೆ ತಲಾ ಹದಿಮೂರು ಗಜ ಬಟ್ಟೆ ಬೇಕು. ಈಗ ಇದರಲ್ಲಿ ಅರ್ಧಕ್ಕಿಂತ ಕಮ್ಮಿ ಪ್ರಮಾಣದ ಬಟ್ಟೆಯನ್ನು ಮಾತ್ರ ತಯಾರಿಸುತ್ತಿದ್ದೇವೆ. ಕೈ ಮಗ್ಗ ಹಾಗೂ ನೂಲುವ ಚರಕಾ ಬಳಸಿ ನಮಗೆ ಬೇಕಾದ ಅಷ್ಟೂ ಬಟ್ಟೆಯನ್ನು ನಾವೇ ಉತ್ಪಾದಿಸುವ ಸಾಮರ್ಥ್ಯ ನಮಗಿದ್ದರೂ, ವರ್ಷ ವರ್ಷ ಕೋಟ್ಯಂತರ ಲಡಿ ಹತ್ತಿಯನ್ನು ಜಪಾನ್ ಮತ್ತು ಲಂಕಾಶೈರ್‌ಗಳಿಗೆ ರಫ್ತು ಮಾಡಿ ತಯಾರಿಸಿದ ಬಟ್ಟೆಯನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ದೇಶದ ಮುಂದೆ ಚರಕವನ್ನು ಪ್ರಸ್ತುತಪಡಿಸಿದ್ದು- ವರ್ಷದಲ್ಲಿ ಕನಿಷ್ಠ ನಾಲ್ಕು ತಿಂಗಳ ಕಾಲ ಕೆಲಸವಿಲ್ಲದೆ ಕೂರುವ ಕೋಟ್ಯಂತರ ಕೈಗಳಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ… ಬಟ್ಟೆಗಳಿಗಾಗಿ ಭಾರತದಿಂದ ನಾವು ವರ್ಷಂಪ್ರತಿ 60 ಕೋಟಿ ರೂಪಾಯಿ ಹೊರಕ್ಕೆ ಕಳಿಸುತ್ತಿದ್ದೇವೆ…

ಸ್ವದೇಶಿ ಆಂದೋಲನದ ಈ ವಿಶಾಲ ಭೂಮಿಕೆಯನ್ನು ಮರೆತು, ಅದರ ಹಿಂದಿನ ಆರ್ಥಿಕ ವಿವೇಕವನ್ನು ಕಡೆಗಣಿಸಿ ನಾವು ಯಂತ್ರ ನಾಗರಿಕತೆಗೆ ಗಾಂಧಿ ತೋರಿದ ವಿರೋಧದ ಮಹತ್ವವನ್ನು ಗ್ರಹಿಸಲಾರೆವು.

*

ಏನು ಮಾಡುವುದು? ಇತಿಹಾಸದಲ್ಲಿ ಗಾಂಧೀಜಿಯಷ್ಟು ಅಪವ್ಯಾಖ್ಯಾನಗಳಿಗೆ ಒಳಗಾದ ಮಹಾಪುರುಷ ಮತ್ತೊಬ್ಬರಿರಲಾರರು. ಆದ್ದರಿಂದಲೇ ನನ್ನ ಮನಸಿನಲ್ಲಿದ್ದ ರಂಗಪ್ರಯೋಗ ಅಂಥ ತಪ್ಪು ಕಲ್ಪನೆಗಳನ್ನೆಲ್ಲ ತೊಡೆಯುವ ಪ್ರಯತ್ನವಾಗಿ ರೂಪುಗೊಳ್ಳಬೇಕು ಅನಿಸಿದ್ದು ಸಹಜವಾಗಿತ್ತು. ಮತ್ತು ಯಂತ್ರ ನಾಗರಿಕತೆ ಬಗ್ಗೆ ಬಾಪೂಜಿ ನಿಲುವು ವಿವರಿಸುವಾಗ ಚಾಪ್ಲಿನ್ನನ ಮಾಡರ್ನ್ ಟೈಮ್ಸ್ ಸಿನಿಮಾದ ತುಣುಕುಗಳನ್ನೂ ಬಳಸುವುದು ಆಸಕ್ತಿದಾಯಕ ಅನಿಸಿತು. ಇದು ರಂಗಪ್ರಯೋಗ ಮಾತ್ರವಾಗದೆ ಬಹುಮಾಧ್ಯಮ ಪ್ರಸ್ತುತಿಯಾದರೆ ಅದರ ಪ್ರಭಾವ ತೀಕ್ಷ್ಣವಾಗಬಹುದು ಎಂಬ ಹೊಳಹು ಮೂಡಿದ್ದೇ ಆಗ. ಇವೆಲ್ಲ ಆಲೋಚನೆಗಳು ನನ್ನ ತಲೆಯಲ್ಲಿರುವಾಗಲೇ ಒಮ್ಮೆ ಗೆಳೆಯ ವಿಶುಕುಮಾರ್ ‘ಗಾಂಧೀಜಿ ಬಗ್ಗೆ ಏನಾದರೂ ವಿಶೇಷ ಕಾರ್ಯಕ್ರಮ ಮಾಡಬೇಕು, ಯೋಚಿಸಿ ಹೇಳಿ’ ಎಂದರು. ಕೆಲವು ವರ್ಷಗಳ ಹಿಂದಿನ ಮಾತಿದು. ಅವರು ಆಗ ವಾರ್ತಾ ಇಲಾಖೆ ನಿರ್ದೇಶಕರು. (ಆಗಿನ್ನೂ ಇಲಾಖೆ ಕಡೆಯಿಂದ ‘ಪಾಪು ಗಾಂಧಿ, ಬಾಪೂ ಗಾಂಧಿ’ ಇತ್ಯಾದಿ ಯಾವ ಕಾರ್ಯಕ್ರಮಗಳೂ ಆಗಿರಲಿಲ್ಲ.)

ಬಾಪೂಜಿ ತಮ್ಮ ತಾತ್ವಿಕ ನಿಲುವುಗಳನ್ನು ನೇರವಾಗಿ ವಿಶದೀಕರಿಸಲು ಬರೆದ ಏಕೈಕ ಹೊತ್ತಗೆ- ‘ಹಿಂದ್ ಸ್ವರಾಜ್’. 1908ರಲ್ಲಿ ಬರೆದಿದ್ದ ಆ ಕೃತಿಯನ್ನು ರಂಗಕ್ಕೆ ಅಳವಡಿಸಿದರೆ ಹೇಗೆ? ಆಧುನೀಕರಣ, ಪಾಶ್ಚಾತ್ಯ ಸಂಸ್ಕೃತಿ ಮತ್ತು ಯಂತ್ರ ನಾಗರಿಕತೆಗಳನ್ನು ಕುರಿತ ಗಾಂಧೀಜಿ ನಿಲುವುಗಳನ್ನು ಅಪಾರ್ಥ ಮಾಡಿಕೊಳ್ಳಲು ಬಹುಮಟ್ಟಿಗೆ ಕಾರಣವಾದದ್ದು ಈ ‘ಹಿಂದ್ ಸ್ವರಾಜ್’ ಕುರಿತ ತಪ್ಪು ವ್ಯಾಖ್ಯಾನಗಳೇ ಅಲ್ಲವೇ? ಬಾಪೂಜಿಗೆ ‘ಯಂತ್ರವಿರೋಧಿ, ಪ್ರಗತಿ ವಿರೋಧಿ’ ಎಂಬ ಹಣೆಪಟ್ಟಿ ಅಂಟಿದ್ದು ಇದರಿಂದಲೇ ಅಲ್ಲವೇ?… ಒಟ್ಟಾರೆ ನನ್ನ ರಂಗಪ್ರಯೋಗ ಮಹಾತ್ಮನ ತಾತ್ವಿಕ ಚಿಂತನೆಯನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು ಇಂಬು ಕೊಡಬಹುದು ಎಂಬ ನಿರೀಕ್ಷೆ ನನ್ನದಾಗಿತ್ತು. ಜೊತೆಗೆ ಹೊಸದು ಎನ್ನಬಹುದಾದ ದೃಶ್ಯ ಸಾಧ್ಯತೆಯೂ ಮೊಳಕೆಯೊಡೆದಿತ್ತಲ್ಲ, ಆ ರಂಗಪ್ರಸ್ತುತಿಗೆ ಪೂರಕವಾಗಿ ಒಂದಷ್ಟು ಭಾಗಗಳನ್ನು ಸಾಕ್ಷ್ಯಚಿತ್ರದ ಶೈಲಿಯಲ್ಲಿ ಚಿತ್ರೀಕರಿಸಿ, ಕಲಾವಿದರ ಅಭಿನಯದ ಜೊತೆಗೇ ಈ ದೃಶ್ಯ ತುಣುಕುಗಳನ್ನೂ ರಂಗಪ್ರಯೋಗದಲ್ಲಿ ಬೆರೆಸುವ ಮೂಲಕ ಆ ಪ್ರಯತ್ನವನ್ನು ಕೌತುಕಮಯವಾಗಿ ಕಟ್ಟಬಹುದು, ಗಾಂಧಿ ಚರ್ಚೆಯನ್ನು ಪುನರಾರಂಭಿಸಬಹುದು ಎಂಬ ಕಲ್ಪನೆ ಇಟ್ಟುಕೊಂಡು ಹೊರಟೆ. ಆಗ ಆ ಪ್ರಸ್ತುತಿ ವಿವರಣೆ ಮಾತ್ರವಾಗದೆ ಅರ್ಥಪೂರ್ಣ ವಿಶ್ಲೇಷಣೆಯೂ ಆಗುವುದು ಸಾಧ್ಯ ಅನಿಸಿತು. (ಆ ಆಲೋಚನೆ ಮೂಡಿದ ಸಂದರ್ಭದಲ್ಲಿ ಅಂಥ ಬಹುಮಾಧ್ಯಮ ಪ್ರಯೋಗ ಎಲ್ಲೂ ಆಗಿರಲಿಲ್ಲ. ಗಿರೀಶ್ ಕಾರ್ನಾಡರ ‘ಒಡಕಲು ಬಿಂಬ’ ಕೂಡ ನಂತರ ಬಂದಿದ್ದು)… ಆದರೆ ನನ್ನ ಈ ಆಲೋಚನೆಯನ್ನು ವಿಶುಕುಮಾರರ ಮುಂದೆ ಮಂಡಿಸುವ ಹೊತ್ತಿಗೆ, ಅದೇಕೋ ಅವರಿಗೆ ಅದರಲ್ಲಿ ಆಸಕ್ತಿ ಉಳಿದಿರಲಿಲ್ಲ. ನಾನೂ ಗತ್ಯಂತರವಿಲ್ಲದೆ ಹಿಂದೆಗೆದೆ.

ಆದರೆ ನನ್ನ ಕಲ್ಪನೆ ಮುರುಟಿಹೋಗಲಿಲ್ಲ, ಸುಪ್ತವಾಗಿ ಉಳಿದೇ ಇತ್ತು, ನನ್ನ ಎದೆಯ ತೇವದಲ್ಲಿ.

ಮತ್ತೆ ‘ಗಾಂಧಿ- 150’ ಆಚರಣೆಗಳು ಶುರುವಾಗುವ ವೇಳೆಗೆ ಒಂದಷ್ಟು ವರ್ಷಗಳು ಉರುಳಿದ್ದವು. ಆಗ ಇದೇ ಪರಿಕಲ್ಪನೆಯನ್ನು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರೂ, ಗೌರವಾನ್ವಿತ ಸನ್ಮಿತ್ರರೂ ಆದ ನಾಡೋಜ ಡಾ. ವೂಡೇ ಪಿ. ಕೃಷ್ಣರ ಬಳಿಗೊಯ್ದೆ. ನನ್ನ ಅದೃಷ್ಟಕ್ಕೆ ಡಾ. ಕೃಷ್ಣ ಈ ಪ್ರಯೋಗದತ್ತ ಅಪಾರ ಉತ್ಸುಕತೆ ತೋರಿದರು. ಸಮಸ್ಯೆ ಎಂದರೆ ಗಾಂಧಿಭವನದ ಬಳಿ ದುಡ್ಡಿರಲಿಲ್ಲ! ಹಾಗಾಗಿ ಅವರು ‘ಸರ್ಕಾರಕ್ಕೆ ಬರೆಯೋಣ’ ಎಂದು ಮುಂದಾದರು. ಕಡೆಗೆ ಸರ್ಕಾರದ ಮಟ್ಟದಲ್ಲಿ ಈ ರಂಗಪ್ರಯೋಗಕ್ಕೆ ಅನುಮೋದನೆ ಸಿಕ್ಕುವುದಕ್ಕೆ ಮತ್ತೂ ಎರಡು ವರ್ಷಗಳು ಕಳೆದುಹೋದವು! ಅನುಮೋದನೆ ಸಿಕ್ಕಿತೇನೋ ಸರಿ, ಆದರೆ ನನ್ನ ಕಡೆಯಿಂದ ಯಾವ ತಯಾರಿಯೂ ಆಗಿರಲಿಲ್ಲ. ಒಂದೆಡೆ ರಂಗಪ್ರಯೋಗದ ಪಠ್ಯವನ್ನು ಬರೆದು ಸಿದ್ಧಗೊಳಿಸಬೇಕಿತ್ತು, ಜೊತೆಗೆ ಕಲಾವಿದರ ಆಯ್ಕೆಯೂ ಆಗಬೇಕಿತ್ತು.

ಇದನ್ನು ಓದಿದ್ದೀರಾ?: ನೇಮಕಾತಿಯಲ್ಲಿ 3 ವರ್ಷ ವಯೋಮಿತಿ ಸಡಿಲಿಕೆ: ‘Gen-Z’ ಪ್ರತಿಭಟನೆಯ ಭೀತಿ ಕಾರಣವೇ?

ಆಗ ನೀನಾಸಂ, ರಂಗಾಯಣ ಮುಂತಾದ ಹಲವಾರು ವೃತ್ತಿಪರ ರಂಗಕಲಿಕಾ ಸಂಸ್ಥೆಗಳಿಂದ ತೇರ್ಗಡೆಯಾಗಿ ಬಂದವರನ್ನು ಆಹ್ವಾನಿಸಿ ಒಂದಷ್ಟು ದಿನ ಆಡಿಷನ್‌ಗಳಾದವು. ಗಾಂಧಿ ಪಾತ್ರ ನಿರ್ವಹಿಸಬಲ್ಲ ಕಲಾವಿದ ಸಿಕ್ಕಿರಲಿಲ್ಲವಾದರೂ, ಸಾಕಷ್ಟು ಮಂದಿ ಕಲಾವಿದರು ಆಯ್ಕೆಯೂ ಆದರು. ಆದರೆ ಆ ಹೊತ್ತಿಗೆ ಜಗತ್ತಿನ ಮೇಲೆ ಕೋವಿಡ್ ಬಂದೆರಗಿದ್ದರಿಂದ ಪ್ರಯೋಗಕ್ಕೆ ಮೊದಲ ಬ್ರೇಕ್ ಬಿತ್ತು. ಹೋಗಲಿ, ಇದೇ ಸಮಯವನ್ನು ಬರವಣಿಗೆ ಪೂರ್ಣಗೊಳಿಸುವುದಕ್ಕಾದರೂ ಬಳಸಿಕೊಳ್ಳೋಣ ಎಂದುಕೊಂಡು ಕೂತೆ.

ಆದರೆ, ನಿಜ ಹೇಳುತ್ತೇನೆ, ನನ್ನ ಜೀವನದಲ್ಲೇ ಇನ್ನಾವ ಬರವಣಿಗೆಯೂ ನನಗೆ ಈವರೆಗೆ ಇದರಷ್ಟು ಕಠಿಣವೆನಿಸಲಿಲ್ಲ…!

ಮೊದಲು ‘ಹಿಂದ್ ಸ್ವರಾಜ್’ ಮಾತ್ರ ಅಂದುಕೊಂಡು ಹೊರಟಿದ್ದೆನಲ್ಲ, ಈಗ ಅದಷ್ಟೇ ಸಾಕೇ, ತೀರಾ ಸೀಮಿತವಾಗುವುದಿಲ್ಲವೇ ಎಂಬ ಅನುಮಾನ ಹುಟ್ಟಿತು. ಈ ಕಾಲಕ್ಕೆ ಜ್ವಲಂತ ಅನಿಸುವಂಥ ಬಾಪೂಜಿ ಚಿಂತನೆಯನ್ನು ಸ್ಥೂಲವಾಗಿಯಾದರೂ ಒಳಗೊಳ್ಳಬೇಕು, ಇಲ್ಲದಿದ್ದರೆ ಏನು ಪ್ರಯೋಜನ ಅನಿಸತೊಡಗಿತು. ಅಲ್ಲಿಗೆ, ನಮಾಜ್‌ ಮಾಡಹೊರಟವನು ಮಸೀದಿಯನ್ನೇ ಮೈ ಮೇಲೆ ಕೆಡವಿಕೊಂಡಂತಾಯಿತು!

ಬಾಪೂಜಿ ಒಂದು ಸಮುದ್ರ. ಆ ಸಮುದ್ರವನ್ನು ಈಗ ನಾನೊಂದು ಬೊಗಸೆಯಲ್ಲಿ ಹಿಡಿಯಬೇಕು! ಸಾಧ್ಯವೇ?…

ಗತ್ಯಂತರವಿಲ್ಲದೆ ಒಂದೇ ಸಮ ಓದಲಾರಂಭಿಸಿದೆ. ಎಷ್ಟು ಓದಿದರೂ, ಬರವಣಿಗೆಗೆ ಕೈ ಹಾಕಲು ಮಾತ್ರ ಇನ್ನೂ ಧೈರ್ಯ ಬರಲಿಲ್ಲ. ಯಾಕೋ ಕೈ ಹಿಡಿಯುತ್ತಿತ್ತು. ಆಳದಲ್ಲೆಲ್ಲೋ ಅಳುಕು… ಓದುತ್ತ ಓದುತ್ತ, ಗಾಂಧಿ ಸಾಹಿತ್ಯದಲ್ಲಿ ಕಂಠಮಟ್ಟ ಮುಳುಗುತ್ತ ನನ್ನ ಬರವಣಿಗೆಯೂ ಮುಂದುಮುಂದಕ್ಕೆ ತಳ್ಳಿಕೊಂಡು ಹೋಯಿತು!

ಮೊದಮೊದಲು ‘ಗಾಂಧೀಜಿ ತಾನೇ? ರಾಷ್ಟ್ರಪಿತನ ಬಗ್ಗೆ ನಮಗೆ ಗೊತ್ತಿಲ್ಲದ್ದೇನಿದೆ?’ ಎಂಬ ಉಡಾಫೆ! ಈಗ ಓದುತ್ತ ‘ಓಹೋ, ನನಗೇನೂ ಗೊತ್ತಿಲ್ಲ’ ಎಂಬುದು ಸ್ಪಷ್ಟವಾಯಿತು! ಎಷ್ಟು ಓದಿದರೂ ಸಾಲದು. ಓದಿದಷ್ಟೂ ಅದು ಮತ್ತಷ್ಟು ಓದಲು, ತಿಳಿಯಲು ಪ್ರೇರಣೆ. ಇಲ್ಲಿ ಒಂದು ಉದಾಹರಣೆ ಕೊಡುತ್ತೇನೆ: 1946-47ರಲ್ಲಿ ಬಂಗಾಳದ ನೌಖಾಲಿ ಪ್ರಾಂತ್ಯದಲ್ಲಿ ಕೋಮು ದ್ವೇಷ ಭುಗಿಲೆದ್ದ ಸಂದರ್ಭದಲ್ಲಿ ಬಾಪೂಜಿ ಹಳ್ಳಿ ಹಳ್ಳಿ ಸುತ್ತುತ್ತ ಪ್ರತಿ ಹಳ್ಳಿಯಲ್ಲೂ ಒಬ್ಬ ಹಿಂದೂ, ಮತ್ತೊಬ್ಬ ಮುಸ್ಲಿಮನನ್ನು ಒಗ್ಗೂಡಿಸಿ ಒಂದೇ ಜೋಪಡಿಯಲ್ಲಿ ಇರಿಸಲು ಒಪ್ಪಿಸುತ್ತಿದ್ದರು; ಹಳ್ಳಿಯಲ್ಲಿ ಮುಸ್ಲಿಮರಿಂದ ಗಲಭೆ ಆರಂಭವಾದರೆ ಆ ಮುಸ್ಲಿಂ ಉಪವಾಸ ಹೂಡಬೇಕು, ಹಿಂದೂಗಳಿಂದಾದರೆ ಆ ಹಿಂದೂ ನಿರಶನ ಕೂರಬೇಕು, ಗಲಾಟೆ ತಣ್ಣಗಾಗುವವರೆಗೆ ಆಹಾರ ಮುಟ್ಟದೆ ಶಾಂತಿ ತರಬೇಕು- ಶಾಂತಿಸಾಧನೆಗೆ ಇದು ಬಾಪೂ ಅನುಸರಿಸಿದ ಉಪಾಯ ಅನ್ನುವುದು ನನ್ನ ತಿಳಿವಳಿಕೆಯಾಗಿತ್ತು. ಆದರೆ ನೌಖಾಲಿ ಯಾತ್ರೆಯನ್ನು ಅಧ್ಯಯನ ಮಾಡುತ್ತ ಹೋದಾಗ ಗೊತ್ತಾಯಿತು, ಇಲ್ಲ,- ಅದು ಬಾಪೂಜಿ ಮುಸ್ಲಿಂ ಲೀಗ್ ಮುಖಂಡರಿಗೆ ಸೂಚಿಸಿದ ಮಾರ್ಗ ಮಾತ್ರ; ಲೀಗ್ ಸದಸ್ಯರ ಅಸಹಕಾರದಿಂದ ಆ ಸೂತ್ರ ಕಡೆಗೂ ಕೈಗೂಡಲೇ ಇಲ್ಲವೆಂದು ಸ್ಪಷ್ಟವಾಯಿತು… (ತುಸು ಮುಂದಕ್ಕೆ ಸ್ವತಃ ಗಾಂಧೀಜಿ ಬಂಗಾಳದ ಮುಖ್ಯಮಂತ್ರಿ- ಮುಸ್ಲಿಂ ಲೀಗಿನ ಶಹೀದ್ ಸುಹ್ರವರ್ದಿಯವರನ್ನು ಜೊತೆ ಸೇರಿಸಿಕೊಂಡು ಅವರಿಬ್ಬರೇ ಕಲ್ಕತ್ತಾದಲ್ಲಿ ಒಂದೇ ಮನೆಯಲ್ಲಿ ಯಾವ ರಕ್ಷಣೆಯೂ ಇಲ್ಲದೆ ಉಳಿದುಕೊಂಡು ಇದೇ ಪ್ರಯೋಗ ಮಾಡಿದರು. ಬಂಗಾಳದ ಕೋಮು ಬೆಂಕಿಯನ್ನು ನಂದಿಸಲು ಬಾಪೂ ಅಲ್ಲಿ ಉಪವಾಸವನ್ನೂ ಹೂಡಬೇಕಾಯಿತು.)

ಹೀಗೆ ಹಂತ ಹಂತವಾಗಿ ನನ್ನದೇ ಅಜ್ಞಾನವನ್ನು ಕಳೆದುಕೊಳ್ಳುತ್ತ, ಓದಿನಲ್ಲೇ ಭರ್ತಿ ಎರಡು ವರ್ಷ ಕಳೆದುಹೋದವು. ಸ್ವತಃ ಗಾಂಧೀಜಿ ಬರೆದಿದ್ದು, ಅವರ ಬಗ್ಗೆ ಇತಿಹಾಸಕಾರರು ದಾಖಲಿಸಿದ್ದು…

ಜೊತೆಜೊತೆಗೇ ಮತ್ತೊಮ್ಮೆ ಕಲಾವಿದರ ಆಯ್ಕೆ ಮಾಡಿ ತಾಲೀಮು ಆರಂಭಿಸುವಷ್ಟರಲ್ಲಿ ಕೋವಿಡ್ ಎರಡನೇ ಅಲೆ ಬಂದು ಮತ್ತೆ ಬ್ರೇಕ್ ಬಿತ್ತು. ಆದರೆ ಓದು ಮಾತ್ರ ಬ್ರೇಕ್ ಇಲ್ಲದೆ ಮುಂದುವರೆದೇ ಇತ್ತು. ಆಗ ಮಾಡಿಕೊಂಡ ಟಿಪ್ಪಣಿಗಳೇ ಮುನ್ನೂರು ಪುಟಕ್ಕೂ ಮಿಕ್ಕಿ ಬೆಳೆದಿತ್ತು!

Gandhi in Noakhali

ಇಷ್ಟಾದರೂ ಈ ನಾಟಕದ ಹಂದರ, ರೂಪು ರೇಷೆ- ಯಾವುದೂ ಮನಸ್ಸಿನಲ್ಲಿ ಸ್ಪಷ್ಟ ಆಕಾರ ತಳೆದಿರಲಿಲ್ಲ. ಮೇಲಾಗಿ ಇದು ನಾನು ಬರೆಯಹೊರಟಿರುವ ಮೊದಲ ನಾಟಕ ಬೇರೆ! ನಾಟಕ ಮೂಲತಃ ನನ್ನ ಮಾಧ್ಯಮವೂ ಅಲ್ಲ. ಅಂತೂ ನನಗೆ ನಾನೇ ಜುಲುಮೆ ಮಾಡಿಕೊಂಡು ಎಷ್ಟು ಪ್ರಯತ್ನ ಮಾಡಿದರೂ, ಎಲ್ಲ ‘ಹುಸಿ ಆರಂಭ’ಗಳಾದವು! ಒಟ್ಟು ಸಮಾಧಾನವಿಲ್ಲ. ಹಾಗೆಂದು ರಂಗಪ್ರಯೋಗದ ತಿರುಳೇ ನನ್ನ ಮಟ್ಟಿಗೆ ಮಬ್ಬುಮಬ್ಬಾಗಿತ್ತು ಎಂದೇನಲ್ಲ. ಅದನ್ನಂತೂ ಮೊದಲೇ ನಿಶ್ಚಯಿಸಿ ಇಟ್ಟಿದ್ದೆ. ರಂಗದ ಮೇಲೆ ಬಾಪೂಜಿ ಸಮಗ್ರ ಚಿಂತನೆಯನ್ನು ತರುವುದಂತೂ ಅಸಾಧ್ಯ. ಹಾಗಾಗಿ ನಮ್ಮ ಕಾಲದ ಪ್ರಶ್ನೆಗಳಿಗೆ ಗಾಂಧೀಜಿ ಉತ್ತರವೇನು ಎನ್ನುವ ಕಡೆ ಮಾತ್ರ ಗಮನ ಕೇಂದ್ರೀಕರಿಸುವುದು ವಿವೇಕದ ಹೆಜ್ಜೆಯಾಗಿ ಕಂಡಿತು.

*

ಆಗ ನಾನು ಮಾಡಿದ ಒಂದು ಬ್ರೋಷರ್‌ನಲ್ಲಿ ಈ ಪ್ರಯೋಗದ ಪರಿಚಯ ಹೀಗೆ ಮಾಡಿಕೊಟ್ಟಿದ್ದೆ:

ಯಾಕೆ?

ಇಡೀ ಯುಗವನ್ನೇ ತಮ್ಮ ನಡಿಗೆಯಿಂದ ಆವರಿಸಿದ್ದರು ಮಹಾತ್ಮ ಗಾಂಧಿ. ಆದರೆ ಸ್ವಾತಂತ್ರ್ಯ ಹತ್ತಿರವಾದಾಗ ಅವರು ತಮ್ಮ ಅನುಯಾಯಿಗಳ ಪಾಲಿಗೇ ದೂರದ ತತ್ವವಾಗಿಹೋದರು ಎನ್ನುತ್ತದೆ ಚರಿತ್ರೆ. ನಾಡು ಅವರನ್ನು ಪೂಜಿಸಿತು; ಆದರೆ ಅವರ ಹಾದಿಯಲ್ಲಿ ಹೆಜ್ಜೆಯಿಡಲು ನಿರಾಕರಿಸಿತು. ಚರಿತ್ರೆ ಎಷ್ಟೆಂದರೂ ನಿಷ್ಕರುಣಿ…

ಆದರೆ ವರ್ತಮಾನ ಇನ್ನೂ ನಿಷ್ಕರುಣಿ. ಇಂದು ಗಾಂಧೀಜಿ ತಮ್ಮದೇ ನಾಡಿನಲ್ಲಿ ಅಪ್ರಸ್ತುತರಷ್ಟೇ ಅಲ್ಲ, ಅಪರಿಚಿತರೂ ಆಗಿಹೋಗಿದ್ದಾರೆ. ರಸ್ತೆಯ ಮೂಲೆಯಲ್ಲೊಂದು ಪುತ್ಥಳಿ, ಗೋಡೆ ಮೇಲೊಂದು ಫೋಟೋ, ವರ್ಷಕ್ಕೊಮ್ಮೆ ನೆನೆಯುವ ಬಡಿವಾರ… ಅಷ್ಟೇ. ಇದರಾಚೆಗೆ ಯಾರಿಗೂ ಬೇಕಿಲ್ಲ, ಗೊತ್ತೂ ಇಲ್ಲ.

ಆದರೆ…

ಲೋಕವಿಡೀ ಒಂದು ಪ್ರಶ್ನೆಯಾಗಿದ್ದಾಗ ಉತ್ತರವಾಗಿ ಬಂದಿದ್ದು ಗಾಂಧೀಜಿ. ಈಗಲೂ ನಮ್ಮ ಅನೇಕ ಸಂಕಟಗಳಿಗೆ ಬಾಪೂಜಿಯೇ ಉತ್ತರ. ನಮ್ಮ ಕಾಲದ ಮೂಲ ಬಿಕ್ಕಟ್ಟುಗಳೇನು, ಅದಕ್ಕೆ ಗಾಂಧೀಜಿ ಹೇಗೆ ಪರಿಹಾರವಾಗಬಲ್ಲರು ಎಂಬುದೇ ಪ್ರಸಕ್ತ ರಂಗಪ್ರಯೋಗದ ಮೂಲ ಹುಡುಕಾಟ.

ಹೇಗೆ?

ಇದೊಂದು ಅಪರೂಪದ ಬಹುಮಾಧ್ಯಮ ರಂಗಪ್ರಸ್ತುತಿ. ಅಂದರೆ ಕಲಾವಿದರು ರಂಗದ ಮೇಲೆ ಬಂದು, ಗಾಂಧಿಯನ್ನೂ ಒಳಗೊಂಡಂತೆ ಹಲವು ಪಾತ್ರಗಳನ್ನು ದೃಶ್ಯ ರೂಪದಲ್ಲಿ ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸುವುದು ಪ್ರಯೋಗದ ಒಂದು ಭಾಗ. ಇದಲ್ಲದೆ ರಂಗದ ಮೇಲಿರಿಸಿದ ತೆರೆಯ ಮೇಲೆ ಪೂರಕ ದೃಶ್ಯಾವಳಿಗಳೂ ನಡುನಡುವೆ ಮೂಡಲಿವೆ. (Audio visual projection). ಈ ಬಹು ಮಾಧ್ಯಮಗಳ ಮೂಲಕವೇ ಗಾಂಧೀಜಿ ಎಂಬ ‘ಪವಾಡ’ವನ್ನು ಅರ್ಥೈಸುವ ಪ್ರಯತ್ನವಿದು. ಇದು ರಾಷ್ಟ್ರಪಿತನ ಜೀವನಚರಿತ್ರೆಯಲ್ಲ. ‘ಗಾಂಧಿವಾದ’ದ ಪ್ರತಿಪಾದನೆಯೂ ಅಲ್ಲ. ಆದರೆ ನಮ್ಮ ಕಾಲದ ಸವಾಲುಗಳಿಗೆ ಗಾಂಧೀಜಿ ಮಾರ್ಗದಲ್ಲಿ ಉತ್ತರ ಅರಸುವ ಪ್ರಯತ್ನ. ಬಾಪೂ ಬದುಕಿ ತೋರಿದ ಮುಖ್ಯ ತತ್ವಗಳ ವಿಶದೀಕರಣ. ಈ ರಂಗಪ್ರಸ್ತುತಿ ಮುಖ್ಯವಾಗಿ ನಾಲ್ಕು ಕಾಳಜಿಗಳ ಮೂಲಕ ಮಹಾತ್ಮನನ್ನು ನಮ್ಮೆದೆಯೊಳಕ್ಕೆ ಕರೆದುಕೊಳ್ಳಲು ಹವಣಿಸುತ್ತದೆ. ಆ ತತ್ವಗಳೆಂದರೆ:

1. ಅಹಿಂಸೆ ಹಾಗೂ ಸತ್ಯಾಗ್ರಹ

2. ಹಿಂದೂ ಮುಸ್ಲಿಂ ಏಕತೆ

೩. ಅಸ್ಪೃಶ್ಯತೆ ವಿರುದ್ಧ ಹೋರಾಟ

4. ನಿರಾಡಂಬರ ಬದುಕಿನ ಆನಂದ…

ಈ ನಾಲ್ಕು ತತ್ವಗಳನ್ನು ಬಾಪೂಜಿ ಜೀವನ ಹಾಗೂ ಚಿಂತನೆಯ ತುಣುಕುಗಳನ್ನು ಬಳಸಿ ಕಟ್ಟಬೇಕು ಎನ್ನುವುದು ನನಗೆ ನಾನೇ ವಿಧಿಸಿಕೊಂಡ ಚೌಕಟ್ಟು.

*

ಮೊದಲು ಕೋಮು ಬಿಕ್ಕಟ್ಟಿನ ಪ್ರಶ್ನೆಯಿಂದಲೇ ಬರವಣಿಗೆ ಆರಂಭಿಸಲು ಯತ್ನಿಸಿದೆ.

‘ನನ್ನ ಅಹಿಂಸೆಗೆ ಅತಿ ಕಠಿಣ ಪರೀಕ್ಷೆ ಎದುರಾಗುವುದು ಹಿಂದೂ ಮುಸ್ಲಿಂ ಪ್ರಶ್ನೆಯಲ್ಲೇ ಎನ್ನುವುದು ನನಗೆ ದಕ್ಷಿಣ ಆಫ್ರಿಕಾದಲ್ಲಿದ್ದಾಗಲೇ ಗೊತ್ತಾಗಿತ್ತು’ ಎಂದು ಒಂದು ಸಂದರ್ಭದಲ್ಲಿ ಗಾಂಧೀಜಿ ಹೇಳಿದ್ದರು. ಅವರು ಹೇಳಿದ ಹಾಗೆಯೇ ಆಯಿತು. ಆ ಕಠಿಣ ಪರೀಕ್ಷೆ ಎದುರಾದದ್ದು ಕೂಡ ಅವರ ಜೀವಿತದ ಅಂತಿಮ ಘಟ್ಟದಲ್ಲಿ- ಬದುಕಿನ ಕೊನೆಯ ಹದಿನೈದು ತಿಂಗಳುಗಳಲ್ಲಿ. ಅದರ ಮೊದಲ ಹೆಜ್ಜೆ ಬಂಗಾಳದ ನೌಖಾಲಿ ಪ್ರಾಂತ್ಯದಲ್ಲಿ.

ಮಹಮದಾಲಿ ಜಿನ್ನಾ ಪ್ರತ್ಯೇಕ ರಾಷ್ಟ್ರಕ್ಕಾಗಿ 1946ರ ಆಗಸ್ಟ್ 16ರಂದು ‘ನೇರ ಕಾರ್ಯಾಚರಣೆ’ಗೆ- ಅಂದರೆ  ದೊಂಬಿ ದಂಗೆಗೆ ಬಹಿರಂಗ ಕರೆ ಕೊಟ್ಟಾಗ ಕಲ್ಕತ್ತಾದಲ್ಲಿ ಆರಂಭವಾದ ಹಿಂಸಾಚಾರ ಬಂಗಾಳದ ಹಳ್ಳಿಗಾಡುಗಳಿಗೆ ಹಬ್ಬಿಬಿಟ್ಟಿತು. ಅದುವರೆಗೆ ನಗರ ಪಟ್ಟಣಗಳಿಗೆ ಮೀಸಲಾಗಿದ್ದ ಕೋಮು ಕಿಚ್ಚು ಗ್ರಾಮಭಾರತವನ್ನು ಆವರಿಸಿದ್ದು ಅದೇ ಮೊದಲು. ಕೋಮು ದಳ್ಳುರಿ ಹಳ್ಳಿ ಹಳ್ಳಿಗಳಿಗೆ ಹಬ್ಬಿದರೆ ಭಾರತವನ್ನು ಯಾರೂ ಕಾಪಾಡಲಾರರು ಎಂದು ಆತಂಕಕ್ಕೀಡಾದ ಬಾಪೂ 1946ರ ಅಕ್ಟೋಬರ್- ನವೆಂಬರ್ ಸಮಯದಲ್ಲಿ ಯಾರೆಷ್ಟು ತಡೆದರೂ ಕೇಳದೆ ನೌಖಾಲಿಗೆ ಹೊರಟು ನಿಂತುಬಿಟ್ಟರು. ಆಗ ದೇಶ ಸ್ವಾತಂತ್ರ್ಯದ ಹೊಸ್ತಿಲಲ್ಲಿತ್ತು. ಮತ್ತು ಆ ಸ್ವಾತಂತ್ರ್ಯದ ರೂವಾರಿ ಗಾಂಧೀಜಿ ಎಂಬುದು ಜಗತ್ತಿಗೇ ಗೊತ್ತಿತ್ತು. ಅಷ್ಟಾದರೂ ನೌಖಾಲಿಯಲ್ಲಿ ಬಾಪೂಜಿಗೆ ರತ್ನಗಂಬಳಿಯ ಸ್ವಾಗತವೇನೂ ಸಿಗಲಿಲ್ಲ. ಅವರಿಗೆ ಎದುರಾದದ್ದು ದ್ವೇಷದ ಕುಲುಮೆಯಂತಾಗಿದ್ದ ಪೂರ್ವ ಬಂಗಾಳ; ‘ಗಾಂಧಿ, ವಾಪಸು ಹೋಗಿ’ ಎಂಬ ಫಲಕಗಳು!…

ನೌಖಾಲಿ ಮತ್ತು ಟಿಪ್ಪೆರಾ ಜಿಲ್ಲೆಗಳು ಮುಸ್ಲಿಂ ಬಾಹುಳ್ಯದ, ಮುಸ್ಲಿಂ ಲೀಗ್ ಹಿಡಿತದಲ್ಲಿದ್ದ ಪ್ರದೇಶ. (ಈ ಪ್ರದೇಶ ಮುಂದಕ್ಕೆ ಪೂರ್ವ ಪಾಕಿಸ್ತಾನವಾಗಿ, ನಂತರ ಬಾಂಗ್ಲಾದೇಶದ ಭಾಗವಾಯಿತು.) ಅಲ್ಲಿ ಶಾಂತಿ ತರಲು ಬಾಪೂ ತಮ್ಮ ತಂಡದೊಂದಿಗೆ ನಾಲ್ಕು ತಿಂಗಳಿಗೂ ಹೆಚ್ಚು ಕಾಲ 49 ಹಳ್ಳಿಗಳಲ್ಲಿ ಕಾಲ್ನಡಿಗೆಯಲ್ಲೇ, ಚಪ್ಪಲಿಯನ್ನೂ ಮೆಟ್ಟದೆ ಬರಿಗಾಲಲ್ಲಿ ಮನೆ ಮನೆ ಸುತ್ತಿದರು. ನೊಂದವರ ಕಣ್ಣೀರು ಒರೆಸಿದರು. ಕೊಲೆಗಡುಕರ ಎದೆಯಲ್ಲಿ ಪಶ್ಚಾತ್ತಾಪದ ಒರತೆ ಒಸರುವಂತೆ ಮಾಡಿದರು. ಮತ್ತು ಆಗ ಅವರು ಸಾಧಿಸಿದ ಸೌಹಾರ್ದ ಶಾಶ್ವತವಾದುದಾಗಿತ್ತು.

ಇದನ್ನು ಓದಿದ್ದೀರಾ?: ಇಂದಿನ ಸಮಾಜಕ್ಕೆ ವಿದ್ಯಾರ್ಥಿ ರಾಜಕೀಯ ಸಂಘಟನೆಗಳ ಅವಶ್ಯಕತೆ ಇದೆಯೇ?

ವಿಭಜನೆ ಸಮಯದಲ್ಲಿ ಪೂರ್ವ ಪಾಕಿಸ್ತಾನ, ಪಶ್ಚಿಮ ಪಾಕಿಸ್ತಾನ ಮತ್ತು ಭಾರತ- ಹೀಗೆ ಮೂರು ಭಾಗಗಳಲ್ಲಿ ದೇಶ ಹಂಚಿಹೋಗಿದ್ದನ್ನು ಎಲ್ಲರೂ ಬಲ್ಲರು. ಪಾಕಿಸ್ತಾನ ಭೂಭಾಗಗಳಿಂದ ಹಿಂದೂಗಳು, ಸಿಕ್ಖರು ತಮ್ಮ ಸರ್ವಸ್ವವನ್ನೂ ತೊರೆದು ಭಾರತಕ್ಕೆ ವಲಸೆ ಬಂದರೆ ಭಾರತದಿಂದ ಮುಸ್ಲಿಮರು ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳಿಗೆ ವಲಸೆ ಹೋದರು. ಆ ಸಂದರ್ಭದಲ್ಲಿ ಎದ್ದ ಕೋಮು ಜ್ವಾಲೆಗಳಿಗೆ ಬಲಿಯಾದವರು ಎಷ್ಟೆಂಬ ನಿಖರ ಸಂಖ್ಯೆ ಇಂದಿಗೂ ಸಿಕ್ಕಿಲ್ಲ. ಕೆಲವರು ಎರಡು ಲಕ್ಷ ಜನ ಎಂದರೆ ಮತ್ತೆ ಕೆಲವರು ಐದು ಲಕ್ಷ ಎನ್ನುತ್ತಾರೆ. ಇಪ್ಪತ್ತು ಲಕ್ಷ ಜನರ ಆಹುತಿಯಾಯಿತು ಎಂದ ಇತಿಹಾಸಕಾರರೂ ಇದ್ದಾರೆ. ಆದರೆ ನಾವು ನೆನಪಿಡಬೇಕಾದ್ದು- ಅಷ್ಟೂ ಜನರ ಮಾರಣಹೋಮವಾದದ್ದು ಪೂರ್ವ ಪಾಕಿಸ್ತಾನದ ದಿಕ್ಕಿನಲ್ಲಿ. ಪಶ್ಚಿಮ ಪಾಕಿಸ್ತಾನ- ಎಂದರೆ ಭಾವೀ ಬಾಂಗ್ಲಾದೇಶ ಪ್ರಾಂತ್ಯದ ವಲಸೆ ಸಂಪೂರ್ಣವಾಗಿ ಹಿಂಸೆಯಿಂದ ಮುಕ್ತವಾಗಿತ್ತು! ಅಷ್ಟೇ ಅಲ್ಲ, ಮುಂದಿನ ಐದು ದಶಕ ಕಾಲ ಅಲ್ಲಿ ಒಂದೂ ಕೋಮು ಗಲಭೆ ನಡೆಯಲಿಲ್ಲ! ಇದು ಗಾಂಧೀಜಿ ಸಾಧಿಸಿದ ಅಪ್ರತಿಮ ಪವಾಡ; ಅವರ ನೌಖಾಲಿ ಯಾತ್ರೆ ಮತ್ತು ಕಲ್ಕತ್ತಾ ಉಪವಾಸದ ಮಹಿಮೆ…

ಗಾಂಧಿ೧

ಚರಿತ್ರೆಯ ಈ ತುಣುಕಿನಿಂದ ನಾಟಕ ಪ್ರಾರಂಭಿಸೋಣವೆಂದು ಆರಂಭಿಸಿದೆ. ಆದರೆ ಬರೆಯುತ್ತ ಬರೆಯುತ್ತ ಸತ್ಯಾಗ್ರಹದ ಹುಟ್ಟಿನಿಂದ ಆರಂಭಿಸುವುದು ಒಳ್ಳೆಯದೆಂದು ಬೋಧೆಯಾಗಿ ದಕ್ಷಿಣ ಆಫ್ರಿಕಾ ಪ್ರವರದಿಂದ ಮೊದಲು ಮಾಡಿದೆ. ಮೊದಲು ಮಧ್ಯಂತರದವರೆಗೆ ಬರೆದು ಮುಗಿದರೂ, ಎರಡನೇ ಭಾಗ ಮತ್ತಷ್ಟು ಸಮಯ ತೆಗೆದುಕೊಂಡಿತು.

 *

ಈ ಮಧ್ಯೆ ನಾಟಕದ ನಡುನಡುವೆ ಬರುವ ದೃಶ್ಯ ಭಾಗಗಳಿಗಾಗಿ ಚಿತ್ರೀಕರಣ ಮಾಡಿಕೊಳ್ಳಬೇಕಾಗಿತ್ತು. ಕರ್ನಾಟಕದ ದಲಿತ, ರೈತ ಚಳವಳಿಗಳು ಹೇಗೆ ಗಾಂಧೀಜಿಯನ್ನೇ ಅನುಸರಿಸಿ ಅಹಿಂಸೆಯ ದೀಕ್ಷೆ ಪಡೆದವು ಎನ್ನಲು ದೇವನೂರ ಮಹಾದೇವ ಮತ್ತು ಕಡಿದಾಳು ಶಾಮಣ್ಣನವರ ಸಂದರ್ಶನಗಳಾದವು. ಗಾಂಧಿ ಹತ್ಯೆ ದಿನದ ವಿದ್ಯಮಾನಗಳನ್ನು ದಿ. ಎಚ್.ಎಸ್. ದೊರೆಸ್ವಾಮಿಯವರು ನೆನಪು ಮಾಡಿಕೊಂಡರು. ಉಪ್ಪಿನ ಸತ್ಯಾಗ್ರಹದಲ್ಲಿ ಬಾಪೂಜಿಯವರೊಂದಿಗೆ ಹೆಜ್ಜೆ ಹಾಕಿದ ಏಕೈಕ ಕನ್ನಡಿಗ- ಹಾವೇರಿ ಜಿಲ್ಲೆಯ ಮೈಲಾರ ಮಹಾದೇವಪ್ಪನವರು ಹುತಾತ್ಮರಾದ ಹೊಸರಿತ್ತಿ ಗ್ರಾಮಕ್ಕೂ ಹೋದೆವು. ಗಾಂಧಿ ಚಿತಾಭಸ್ಮವನ್ನು ಸಂಗ್ರಹಿಸಿಟ್ಟ- ಕರ್ನಾಟಕದ ರಾಜಘಾಟ್ ಎನಿಸಿದ ಅರಸೀಕೆರೆಯ ಕಸ್ತೂರ ಬಾ ಆಶ್ರಮ, ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಸಾಬರಮತಿ ಆಶ್ರಮದ ಪ್ರತಿಕೃತಿ… ಇವನ್ನೆಲ್ಲ ಚಿತ್ರೀಕರಿಸಿಕೊಂಡ ಮೇಲೆ ಅಂತರ್ಜಾಲದಲ್ಲಿ ಒಂದಷ್ಟು ಹುಡುಕಾಟ- ಗಾಂಧೀಜಿಯನ್ನು ರೈಲಿನಿಂದ ಹೊರದಬ್ಬಿದ ಪೀಟರ್‌ಮಾರಿಟ್ಸ್‌ಬರ್ಗ್ ರೈಲು ನಿಲ್ದಾಣ, ಇತ್ಯಾದಿ. ಗಾಂಧಿ ಚಿತ್ರದಿಂದ ಕೆಲವು ದೃಶ್ಯಗಳನ್ನು ಹೆಕ್ಕಿ ಬಳಸಿಕೊಳ್ಳಲು ಅನುಮತಿಗಾಗಿ ಎನ್‌ಎಫ್‌ಡಿಸಿಯೊಡನೆ ಸಂಪರ್ಕ, ‘ಬಾಂಬೆ ಮಿರರ್’ ಎಂಬ ಮನೋಜ್ಞ ಕಿರುಚಿತ್ರ ಉಪಯೋಗಿಸಲು ಅದರ ನಿರ್ದೇಶಕ ಶ್ಲೋಕ್ ಶುಕ್ಲಾ ಅವರಿಂದ ಸಮ್ಮತಿ ಪಡೆದದ್ದು… ಅಂತೂ ತಾಲೀಮು ಆರಂಭವಾಗುವ ಮುನ್ನವೇ ದೃಶ್ಯ ಭಾಗಗಳ ಸಂಕಲನವೂ ಮುಗಿದು ಸಿದ್ಧವಾಯಿತು.

*

ಕಡೆಗೆ ಕಲಾವಿದರನ್ನೆಲ್ಲ ಗುಡ್ಡೆ ಹಾಕಿಕೊಂಡು, ಅವರನ್ನೆಲ್ಲ ಗಾಂಧೀಭವನದ ಡಾರ್ಮಿಟರಿಗಳಲ್ಲಿ ತಂಗಿಸಿ ಅಲ್ಲೇ ನಿತ್ಯ ತಾಲೀಮು ಶುರುವಾಯಿತು. ಸುಮಾರು ಇಪ್ಪತ್ತೈದು ಜನರ ತಂಡ. ತಾಲೀಮಿನ ಜೊತೆ ಜೊತೆಗೆ ಆಟಗಳು, ‘ತಂಡ ಪ್ರಜ್ಞೆ’ ಜಾಗೃತಗೊಳಿಸುವ ಕಸರತ್ತುಗಳು… ಈ ಎಲ್ಲ ಚಟುವಟಿಕೆಗಳು, ನಿರ್ಮಾಣ ಸಂಯೋಜನೆಯ ಹೊಣೆ ಹೊತ್ತಿದ್ದ ನುರಿತ ರಂಗಕರ್ಮಿ- ದಾವಣಗೆರೆಯ ಎಸ್.ಎಸ್. ಸಿದ್ದರಾಜು ನೇತೃತ್ವದಲ್ಲಿ ಸಾಂಗವಾಗಿ ಜರುಗತೊಡಗಿದವು. ಈ ನಡುವೆ ಗಾಂಧಿ ಪಾತ್ರಕ್ಕೆಂದು ಒಬ್ಬಿಬ್ಬರನ್ನು ಹುಡುಕಿ, ಅವರು ಹೊಂದಿಕೆಯಾಗದೆ, ಕಡೆಗೆ ಈ ಗುಂಪಿನಲ್ಲೇ ಒಬ್ಬರನ್ನು ಆರಿಸಿ ಅಂತಿಮಗೊಳಿಸಿದರೆ ಆ ಕಲಾವಿದ ‘ತಲೆ ಬೋಳಿಸಬೇಕಾ?’ ಎಂದು ಉದ್ಗಾರವೆಳೆದು ಚಿಂತಾಕ್ರಾಂತರಾದರು!

ಆದರೆ ಪ್ರತಿ ದಿನ ಬೆಳಗ್ಗೆಯಿಂದ ಸಂಜೆವರೆಗೆ ಪ್ರಯತ್ನಪಟ್ಟರೂ, ಒಂದು ತಿಂಗಳಿನಲ್ಲಿ ಮುಗಿಯಬೇಕಾದ ತಾಲೀಮು ಎರಡು ತಿಂಗಳವರೆಗೆ ಎಳೆದುಕೊಂಡುಹೋಯಿತು. ಆ ವಿಳಂಬ ತಂದೊಡ್ಡಿದ ತಲೆನೋವುಗಳನ್ನು ಹೇಳಹೊರಟರೆ ಅದೇ ದೊಡ್ಡ ಹರಿಕಥೆಯಾದೀತು, ಇಲ್ಲಿ ಬೇಡ. ಅಂತೂ 2021ರ ಡಿಸೆಂಬರ್ 10ರಂದು ಎಡಿಎ ರಂಗಮಂದಿರದಲ್ಲಿ ಹರಿಬರಿಯಲ್ಲೇ ಮೊದಲ ಪ್ರದರ್ಶನ ನಡೆಯಿತು. ಹೇಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಗಳು ಆರಂಭವಾಗಿದ್ದವು, ಅದರ ಅಂಗವಾಗಿ ಈ ಪ್ರದರ್ಶನ ಎಂದು ಸಮಾಧಾನಪಟ್ಟುಕೊಂಡೆವು. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ ಅವರ ಆಹ್ವಾನದ ಮೇರೆಗೆ ಬಂದಿದ್ದ ವಿಧಾನ ಪರಿಷತ್ ಸದಸ್ಯ ಮರಿಗೌಡರು ‘ಈ ನಾಟಕ ಎಲ್ಲ ಶಾಲಾ ಕಾಲೇಜುಗಳಲ್ಲಿ ಆಗಬೇಕು’ ಎಂದು ಆಶಿಸಿ ಹೋದರು. ಮತ್ತೆ ಮೈಸೂರಿನ ನಟನ ರಂಗಮಂದಿರದಲ್ಲಿ ಒಂದು ಪ್ರದರ್ಶನವಾದ ಮೇಲೆ ಡಿಸೆಂಬರ್ 14ರಂದು ಎಡಿಎ ರಂಗಮಂದಿರದಲ್ಲೇ ಮೂರನೇ ಪ್ರದರ್ಶನ. ಅದೇ ಕಡೆ ಪ್ರದರ್ಶನವೂ ಆಯಿತು.

ನಾಟಕ ನೋಡಿದ ಗೆಳೆಯ ಡಾ. ಎಚ್.ಆರ್. ಸ್ವಾಮಿ ‘ಎಲ್ಲಣ್ಣ, ಅಂಬೇಡ್ಕರ್ ಪ್ರಸ್ತಾಪವೇ ಇಲ್ಲ?’ ಎಂದು ರಾಗ ಎಳೆದರು. ನಾನು ಹಾಕಿಕೊಂಡ ಚೌಕಟ್ಟಿನಲ್ಲಿ ಅಂಬೇಡ್ಕರರನ್ನು ತರುವುದು ಸಾಧ್ಯವಿರಲಿಲ್ಲ ಎಂದು ಅವರಿಗೆ ಮನವರಿಕೆ ಮಾಡಿಕೊಡಲು ಮಾತ್ರ ನನ್ನ ಕೈಯಲ್ಲಿ ಆಗಲೇ ಇಲ್ಲ! ಇನ್ನು ಲೇಖಕ ಮಿತ್ರ ಹನುಮಂತ ಹಾಲಿಗೇರಿ ಹಾಗೂ ನಾಟಕವನ್ನು ವೀಕ್ಷಿಸಿದ ಜಮಾತೆ ಇಸ್ಲಾಮಿ ಹಿಂದ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ- ನನ್ನ ಪ್ರಿಯ ಮಿತ್ರ ಮಹಮದ್ ನವಾಜ್- ಇಬ್ಬರೂ ಒಂದು ಗಹನವಾದ ತಕರಾರು ಎತ್ತಿದರು:

ಪೂರ್ವ ಬಂಗಾಳದ ನೌಖಾಲಿ ಹಾಗೂ ಟಿಪ್ಪೆರಾ ಜಿಲ್ಲೆಗಳು ಮುಸ್ಲಿಂ ಜನಸಂಖ್ಯೆ ಹೆಚ್ಚಿದ್ದ ಪ್ರದೇಶಗಳು. ಸಹಜವಾಗಿಯೇ ಅಲ್ಲಿನ ದೌರ್ಜನ್ಯಗಳು ಮುಸ್ಲಿಮರಿಂದ ಹಿಂದೂಗಳ ಮೇಲೆ ನಡೆದಂಥವು. ಗಾಂಧೀಜಿ ಈ ಪ್ರದೇಶಗಳಿಂದ ನೇರವಾಗಿ ಬಿಹಾರಕ್ಕೆ ತೆರಳುತ್ತಾರೆ. ಅಲ್ಲಿಯೂ ಇದೇ ಬಗೆಯ ಶಾಂತಿ ಯಾತ್ರೆ ನಡೆಸುತ್ತಾರೆ. ಬಿಹಾರದಲ್ಲಿ, ಬಾಪೂಜಿಯೇ ಉದ್ಗರಿಸಿದ ಹಾಗೆ ‘ಬಿಹಾರದ ಹಿಂದೂಗಳು ಮುಸ್ಲಿಮರ ಮೇಲೆ ತೋರಿದ ಕ್ರೌರ್ಯ, ನೌಖಾಲಿಗಿಂತ ನೂರು ಪಟ್ಟು ಹೆಚ್ಚು’.

ನಾಟಕದಲ್ಲಿ ಇದರ ಉಲ್ಲೇಖ ಬರುವುದಾದರೂ, ‘ನೌಖಾಲಿ ಪ್ರಯೋಗದಷ್ಟು ವಿಶದವಾಗಿ ಬಿಹಾರದ ಭಾಗ ಬಂದಿಲ್ಲ; ಆದ್ದರಿಂದ ಇದು ಹಿಂದೂ ಪಕ್ಷಪಾತಿಯಾಗಿ ಕಾಣಬಹುದು’ ಎಂಬ ಆಕ್ಷೇಪ ಅವರಿಬ್ಬರದು. ಹೌದು, ಹೀಗೂ ಭಾಸವಾಗಲು ಸಾಧ್ಯ!… ಆದರೆ ಮತ್ತೆ ನಾಟಕವನ್ನು ವಿಸ್ತರಿಸಿ ಬರೆಯುವಷ್ಟು ಚೈತನ್ಯ ನನ್ನಲ್ಲಿ ಉಳಿದಿರಲಿಲ್ಲವಾದ್ದರಿಂದ, ಅಷ್ಟಕ್ಕೇ ನಿಲ್ಲಿಸಿದ್ದೇನೆ. ಈ ನಾಟಕದ ಒಟ್ಟು ಧಾಟಿ ಗ್ರಹಿಸಿದವರಿಗೆ ಇಂಥ ಅನುಮಾನಗಳು ಉಳಿಯಲಾರವು ಎಂದುಕೊಳ್ಳುತ್ತೇನೆ…

*

ಈ ನಾಟಕದ ಮೊದಲ ಪ್ರದರ್ಶನಕ್ಕೇ ಬಂದಿದ್ದ ಗೆಳೆಯ ಸಿರಿಗೇರಿ ಯರ‍್ರಿಸ್ವಾಮಿ ಇದನ್ನು ಪುಸ್ತಕ ರೂಪದಲ್ಲಿ ತರುವ ಉತ್ಸುಕತೆ ತೋರಿದರು. ನಾನು ಸಂತೋಷದಿಂದ ಒಪ್ಪಿಕೊಂಡೆನಾದರೂ, ತಕ್ಷಣ ಪ್ರಕಟಣೆಗೆ ಸಿದ್ಧಗೊಳಿಸಿ ಕೊಡಲಿಲ್ಲ. ಮತ್ತೊಬ್ಬ ಗೆಳೆಯ- ಪ್ರತಿಭಾವಂತ ಗಾಯಕ ರಂಗಕರ್ಮಿ ಪಿಚ್ಚಳ್ಳಿ ಶ್ರೀನಿವಾಸ್ ಮತ್ತೂ ಒಂದು ಸಲಹೆ ಕೊಟ್ಟರು:

ನಾಟಕದ ನಡುನಡುವೆ ಬರುವ ದೃಶ್ಯ ಭಾಗಗಳಿಂದಾಗಿ, ಅಂದರೆ ಇದರ ಬಹುಮಾಧ್ಯಮ ಸ್ವರೂಪದಿಂದಾಗಿ, ಯಾರು ಬೇಕಾದರೂ ನಾಟಕ ಆಡಲು ಆಗುವುದಿಲ್ಲ. ಅವರ ಕೈಯಲ್ಲಿ ಈ ದೃಶ್ಯ ಭಾಗಗಳು ಇರುವುದಿಲ್ಲವಲ್ಲ! ಹಾಗಾಗಿ ಕೇವಲ ರಂಗಪ್ರಯೋಗಕ್ಕೆ ಒಗ್ಗುವ ರೀತಿಯಲ್ಲಿ ನಾನು ಮತ್ತೊಂದು ಆವೃತ್ತಿ ಬರೆದರೆ ಒಳ್ಳೆಯದು ಎಂಬುದು ಅವರ ಸಲಹೆ. ನಾನು ‘ಹ್ಞೂಂ’ ಎಂದವನು ನನ್ನ ಸೋಂಭೇರಿತನದಿಂದ ದಿನ ತಳ್ಳುತ್ತ ಬಂದೆ. ಆದರೆ ‘ಪ್ರಜಾವಾಣಿ’ ಸಂಸ್ಥೆ ದಶಕಗಳ ನಂತರ ನಾಟಕ ರಚನಾ ಸ್ಪರ್ಧೆ ನಡೆಸಲು ಮುಂದಾದಾಗ ಅವಸರವಸರವಾಗಿ ಪಿಚ್ಚಳ್ಳಿ ಸೂಚಿಸಿದ ರೀತಿ- ದೃಶ್ಯ ಸಾಂಗತ್ಯವಿಲ್ಲದೆ ಕಲಾವಿದರು ಮಾತ್ರ ಪ್ರದರ್ಶನ ನೀಡಬಲ್ಲ ಆವೃತ್ತಿಯೊಂದನ್ನು ಬರೆದು ಕಳಿಸಿದೆ. ಅದಕ್ಕೆ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನವೂ ಬಂತು!

ಗಾಂಧಿ೨

ಈಗ ಈ ಪುಸ್ತಕದಲ್ಲಿ ಆ ಎರಡು ಆವೃತ್ತಿಗಳೂ ಇವೆ.

*

ಮುಖ್ಯವಾಗಿ ನಾನು ಹೇಳಬೇಕಾದ್ದು: ನಾಟಕದಲ್ಲಿ ಗಾಂಧೀಜಿ ಪಾತ್ರದ ಬಾಯಲ್ಲಿ ಬರುವ ಯಾವ ಮಾತೂ ಕಾಲ್ಪನಿಕವಲ್ಲ, ಈ ನಾಟಕಕಾರನದೂ ಅಲ್ಲ; ಪ್ರತಿ ವಾಕ್ಯವೂ ಸ್ವತಃ ಮಹಾತ್ಮ ನುಡಿದ ಅಥವಾ ಬರೆದಿಟ್ಟ ಮಾತುಗಳೇ. ಸನ್ನಿವೇಶಗಳೂ ಅಷ್ಟೇ: ಎಲ್ಲವೂ ಚರಿತ್ರೆಯಿಂದ ಹೆಕ್ಕಿಕೊಂಡ ತುಣುಕುಗಳೇ. ಅದಕ್ಕೇ ಡಾ. ಚಂದ್ರಶೇಖರ ಕಂಬಾರರು ಇದನ್ನು ‘ಡಾಕ್ಯುಮೆಂಟರಿ ಡ್ರಾಮಾ’ ಎಂದು ಬಣ್ಣಿಸಿದರು.

*

ನಾಟಕದ ಎರಡನೇ ಅಂಕದ ಕೊನೆಯಲ್ಲಿ ಬಾಪೂ ಹತ್ಯೆಯ ಸನ್ನಿವೇಶ ಬರುತ್ತದೆ. ಆದರೆ ಅಲ್ಲಿಗೆ ನಾಟಕ ಅಂತ್ಯಗೊಳ್ಳುವುದಿಲ್ಲ, ಮತ್ತೆ ಗಾಂಧೀಜಿ ಬಾಲ್ಯದ ಘಟನೆಯೊಂದಿಗೆ ಮೂರನೇ ಅಂಕ ಪ್ರಾರಂಭವಾಗುತ್ತದೆ. ಸಾವಿನ ನಂತರ ಮತ್ತೆ ಬದುಕಿನ ಭಾಗಗಳೇ?!… ಇದರಲ್ಲಿ ವಿಚಿತ್ರವೇನೂ ಇಲ್ಲ. ಇದರ ಹಿಂದಿನ ತರ್ಕ ಇಷ್ಟೇ: ಗಾಂಧೀಜಿಗೆ ಸಾವಿಲ್ಲ.

ನಾಟಕದ ಅವಧಿ ದೀರ್ಘವಾಯಿತು ಅನಿಸಿದರೆ, ಎರಡನೇ ಅಂಕಕ್ಕೇ ಪ್ರದರ್ಶನ ಕೊನೆಗೊಳಿಸಿಕೊಳ್ಳಬಹುದು. ಹಾಗೆ ಮಾಡಿದರೂ, ನಾಟಕವೇನೂ ಅಪೂರ್ಣ ಅನಿಸುವುದಿಲ್ಲ.

ಎನ್.ಎಸ್. ಶಂಕರ್
‍ಎನ್.ಎಸ್. ಶಂಕರ್
+ posts

ಪತ್ರಕರ್ತ, ಲೇಖಕ, ಚಿತ್ರನಿರ್ದೇಶಕ. ಪ್ರಜಾವಾಣಿ, ಮುಂಗಾರು, ಸುದ್ದಿ ಸಂಗಾತಿ, ಲಂಕೇಶ್ ಪತ್ರಿಕೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದವರು. ಲಂಕೇಶರ 'ಮುಟ್ಟಿಸಿಕೊಂಡವರು' ಕತೆಯನ್ನು ಕಿರು ಚಿತ್ರವನ್ನಾಗಿಸಿ ದೃಶ್ಯಮಾಧ್ಯಮಕ್ಕೂ ಹೆಜ್ಜೆ ಇಟ್ಟವರು. ಅವರ 'ಮಾನಸೋಲ್ಲಾಸ' ಕಿರು ಚಿತ್ರ ಅಂತಾರಾಷ್ಟ್ರೀಯವಾಗಿ ಸದ್ದು ಮಾಡಿದೆ. 'ಉಲ್ಟಾ ಪಲ್ಟಾ' ಚಿತ್ರ ಜನಪ್ರಿಯತೆಯನ್ನೂ ತಂದುಕೊಟ್ಟಿದೆ. ಅರಸು ಯುಗ, ಚಂಚಲೆ, ರೂಢಿ, ಉಸಾಬರಿ, ಫೂಲನ್ ದೇವಿ, ಮಾಯಾಲೋಕ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

‍ಎನ್.ಎಸ್. ಶಂಕರ್
‍ಎನ್.ಎಸ್. ಶಂಕರ್
ಪತ್ರಕರ್ತ, ಲೇಖಕ, ಚಿತ್ರನಿರ್ದೇಶಕ. ಪ್ರಜಾವಾಣಿ, ಮುಂಗಾರು, ಸುದ್ದಿ ಸಂಗಾತಿ, ಲಂಕೇಶ್ ಪತ್ರಿಕೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದವರು. ಲಂಕೇಶರ 'ಮುಟ್ಟಿಸಿಕೊಂಡವರು' ಕತೆಯನ್ನು ಕಿರು ಚಿತ್ರವನ್ನಾಗಿಸಿ ದೃಶ್ಯಮಾಧ್ಯಮಕ್ಕೂ ಹೆಜ್ಜೆ ಇಟ್ಟವರು. ಅವರ 'ಮಾನಸೋಲ್ಲಾಸ' ಕಿರು ಚಿತ್ರ ಅಂತಾರಾಷ್ಟ್ರೀಯವಾಗಿ ಸದ್ದು ಮಾಡಿದೆ. 'ಉಲ್ಟಾ ಪಲ್ಟಾ' ಚಿತ್ರ ಜನಪ್ರಿಯತೆಯನ್ನೂ ತಂದುಕೊಟ್ಟಿದೆ. ಅರಸು ಯುಗ, ಚಂಚಲೆ, ರೂಢಿ, ಉಸಾಬರಿ, ಫೂಲನ್ ದೇವಿ, ಮಾಯಾಲೋಕ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

Bihar SIR | ಬಿಜೆಪಿ-ಚುನಾವಣಾ ಆಯೋಗದ ಕುತಂತ್ರಕ್ಕೆ 47 ಲಕ್ಷ ಮತದಾರರು ಬಲಿ

ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ...

ಇಂದಿನ ಸಮಾಜಕ್ಕೆ ವಿದ್ಯಾರ್ಥಿ ರಾಜಕೀಯ ಸಂಘಟನೆಗಳ ಅವಶ್ಯಕತೆ ಇದೆಯೇ?

ಶಾಲಾ ಕಾಲೇಜು, ವಿಶ್ವವಿದ್ಯಾನಿಲಯಗಳಿಂದ ವಿದ್ಯಾರ್ಥಿ ರಾಜಕೀಯ ಸಂಘಟನೆಗಳನ್ನು ಕಳೆದುಕೊಂಡ ನಾವು ಈಗ...

ನೇಮಕಾತಿಯಲ್ಲಿ 3 ವರ್ಷ ವಯೋಮಿತಿ ಸಡಿಲಿಕೆ: ‘Gen-Z’ ಪ್ರತಿಭಟನೆಯ ಭೀತಿ ಕಾರಣವೇ?

ಸರ್ಕಾರದ ವಯೋಮಿತಿ ಸಡಿಲಿಕೆ ದಿಢೀರ್ ನಿರ್ಧಾರಕ್ಕೆ, ಯುವಜನರ 'ಝೆನ್‌-ಜೆಡ್‌' ಪ್ರತಿಭಟನೆ ಕಾರಣವಾಗಿರಬಹುದೇ?...

Download Eedina App Android / iOS

X