ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಕ್ರಿಯೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಚುರುಕು ಪಡೆದುಕೊಂಡಿದೆ. ಜಿಲ್ಲೆ ಪ್ರಸ್ತುತ ರಾಜ್ಯದಲ್ಲಿ 6ನೇ ಸ್ಥಾನದಲ್ಲಿದೆ.
ಸೆಪ್ಟೆಂಬರ್ 22 ರಂದು ಸಮೀಕ್ಷೆಗೆ ಚಾಲನೆ ದೊರೆತಿದ್ದರೂ ಮೊದಲ ದಿನದಲ್ಲಿ ಕೇವಲ 134 ಮನೆಗಳ ಸಮೀಕ್ಷೆ ನಡೆದಿತ್ತು. ಮೊದಲ ಮೂರು ದಿನ ಶಿಕ್ಷಕರ ಪ್ರತಿಭಟನೆ, ತಾಂತ್ರಿಕ ಅಡಚಣೆ ಮತ್ತು ನಿಯೋಜನೆ ಸಂಬಂಧಿತ ಗೊಂದಲಗಳಿಂದ ಕಾರ್ಯ ನಿರೀಕ್ಷಿತ ಪ್ರಗತಿ ಕಾಣಲಿಲ್ಲ.
ಆದರೆ ಕಳೆದ ಕೆಲವು ದಿನಗಳಿಂದ ಸಮೀಕ್ಷೆ ವೇಗ ಪಡೆದುಕೊಂಡಿದ್ದು, ಇವತ್ತಿನವರೆಗೆ ಜಿಲ್ಲೆಯಲ್ಲಿ 1,68,046 ಮನೆಗಳ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಜಿಲ್ಲೆಯಲ್ಲಿ ದಿನಕ್ಕೆ ಸರಾಸರಿ 12 ರಿಂದ 15 ಸಾವಿರ ಮನೆಗಳ ಸಮೀಕ್ಷೆ ನಡೆಯುತ್ತಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶಿವಕ್ಕ ಮಾದರ ತಿಳಿಸಿದ್ದಾರೆ.
ಒಟ್ಟು 3,26,860 ಮನೆಗಳ ಸಮೀಕ್ಷೆಯ ಗುರಿ ಹೊಂದಲಾಗಿದ್ದು, ಇದುವರೆಗೆ 51 ಪ್ರತಿಶತ ಕಾರ್ಯ ಮುಗಿದಿದೆ. ಈ ಕಾರ್ಯಕ್ಕಾಗಿ 2,916 ಬ್ಲಾಕ್‌ಗಳು ರಚಿಸಲ್ಪಟ್ಟಿದ್ದು, 3,923 ಗಣತಿದಾರರು ನಿಯೋಜಿಸಲ್ಪಟ್ಟಿದ್ದಾರೆ. ಸಮೀಕ್ಷೆ ಪ್ರಕ್ರಿಯೆಗೆ ಆರಂಭದಲ್ಲಿ ಅನೇಕ ಅಡಚಣೆಗಳಿದ್ದರೂ, ಅವು ಬಹುತೇಕ ಬಗೆಹರಿದು ಕಾರ್ಯಸುಗಮವಾಗಿದೆ. ಆದರೆ ಸಮೀಕ್ಷೆ ವೇಳೆ ಮನೆ ಮಾಲೀಕರು ಅಗತ್ಯ ದಾಖಲೆಗಳನ್ನು ಹುಡುಕುವಲ್ಲಿ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ.
ಇದರ ಪರಿಣಾಮವಾಗಿ, ಒಂದೇ ಮನೆಗೆ ಸಮೀಕ್ಷೆ ಪೂರ್ಣಗೊಳಿಸಲು ಗಂಟೆಗಳ ಕಾಲ ಬೇಕಾಗುತ್ತಿದೆ. ಸರ್ಕಾರ ಸಮೀಕ್ಷಾ ಅವಧಿಗೆ ವಿಸ್ತರಣೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿರುವುದರಿಂದ, ಶಿಕ್ಷಕರು ತಮ್ಮ ರಜೆ ಮುಗಿಯುವ ಮೊದಲು ಸಮೀಕ್ಷೆ ಮುಗಿಸಲು ಹೆಚ್ಚಿನ ಶ್ರಮವಹಿಸುತ್ತಿದ್ದಾರೆ. ಸಮೀಕ್ಷೆಗೆ ನಿಯೋಜನಾ ಆದೇಶ ಪಡೆದಿರುವ ಶಿಕ್ಷಕರು ಮತ್ತು ಇತರ ಇಲಾಖೆಯ ಗಣತಿದಾರರು ಕಾರ್ಯದಲ್ಲಿನ ಲೋಪದೋಷಗಳ ಕುರಿತು ಬಹಿರಂಗವಾಗಿ ಹೇಳಿಕೆ ನೀಡುವಂತಿಲ್ಲ ಎಂಬ ಕಟ್ಟುನಿಟ್ಟಿನ ಆದೇಶ ಜಾರಿಯಲ್ಲಿದೆ. ಪ್ರತಿಭಟನೆ ನಡೆಸುವುದು ಅಥವಾ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಕಾರ್ಯವನ್ನು ಸಹ ಅನುಮತಿಸಿಲ್ಲ ಎಂದು ಸಮೀಕ್ಷೆಗೆ ನಿಯೋಜಿಸಲಾಗಿರುವ ಶಿಕ್ಷಕರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡದ ಮುಂಗಾರು ವರದಿ: ಕೋಟ್ಯಂತರ ಮೌಲ್ಯದ ಸಾರ್ವಜನಿಕ ಆಸ್ತಿಗೆ ಹಾನಿ!
ಗೋವಾ ರಾಜ್ಯದಲ್ಲಿ ಸಮೀಕ್ಷೆ.
ರಾಜ್ಯದ ಕೊನೆಯ ಹಳ್ಳಿಯಾದ ಕಾರವಾರ ತಾಲ್ಲೂಕಿನ ಕಮ್ಮರ್‌ಗಾಂವ್‌ನಲ್ಲಿ ರಸ್ತೆ, ಪಡಿತರ ಹಾಗೂ ಸಮರ್ಪಕ ವಿದ್ಯುತ್ ಸೌಲಭ್ಯಗಳ ಕೊರತೆಯಿದ್ದರೂ, ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ಸ್ವತಃ ಆಸಕ್ತಿ ತೋರಿದ್ದು, ಅಲ್ಲಿಗೂ ಸಹ ಅಧಿಕಾರಿಗಳು ಭೇಟಿ ನೀಡಿ ನೇಟ್ವರ್ಕ ಸಿಗುವ ಜಾಗಕ್ಕೆ ವಾಹನದ ವ್ಯವಸ್ಥೆ ಮಾಡಿ ಸಮೀಕ್ಷೆ ಕಾರ್ಯವನ್ನು ನೀಡಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.