ಸುಡುವ ಬಿಸಿಲಿನಲ್ಲಿ ಕುರಿತು ಯುವಜನರು ತಮ್ಮ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಅವರ ಜೊತೆ ನಾನಿದ್ದೇನೆ. ಅಗತ್ಯವಿದ್ದರೆ ಯುವಜನರಿಗಗಾಗಿ ನನ್ನ ಜೀವವನ್ನೇ ತ್ಯಾಗ ಮಾಡುತ್ತೇನೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
ಉತ್ತರಾಖಂಡದ ರಾಜ್ಯ ನಾಗರಿಕ ಸೇವೆಗಳ ಆಯ್ಕೆ ಆಯೋಗ (ಯುಕೆಎಸ್‌ಎಸ್‌ಎಸ್‌ಸಿ) ನಡೆಸಿದ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವಂಚನೆಗಳು ನಡೆದಿವೆ ಎಂದು ಆರೋಪಿಸಿ ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರನ್ನು ಧಾಮಿ ಭೇಟಿ ಮಾಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಧಾಮಿ, “ಪ್ರತಿಭಟನಾನಿರತ ಯುವಜನರನ್ನು ನಾನು ಭೇಟಿ ಮಾಡಲು ಹೋಗಬಾರದಿತ್ತು ಮತ್ತು ಸಿಬಿಐ ತನಿಖೆಗೆ ಒತ್ತಾಯಿಸಬಾರದಿತ್ತು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ರಾಜ್ಯದ ಯುವಜನರು ಸುಡುವ ಬಿಸಿಲಿನಲ್ಲಿ ಪ್ರತಿಭಟನೆ ನಡೆಸುವಾಗ, ನಾನು ಅಲ್ಲಿಗೆ ಹೋಗದೇ ಇರಲು ಸಾಧ್ಯವೇ? ಅಗತ್ಯವಿದ್ದರೆ ಯುವಕರಿಗಾಗಿ ನನ್ನ ಪ್ರಾಣವನ್ನೇ ಅರ್ಪಿಸಲು ಸಿದ್ಧನಿದ್ದೇನೆ. ಏಕೆಂದರೆ ಅವರು ನಮ್ಮ ಭವಿಷ್ಯ” ಎಂದು ಹೇಳಿದ್ದಾರೆ.
“ನಮ್ಮ ಮತ್ತು ಪ್ರತಿಭಟನಾಕಾರರ ನಡುವೆ ಸಂವಹನದಲ್ಲಿ ಅಂತರವಿತ್ತು. ನಾವು ಯುವಜನರಿಂದಿಗೆ ಉತ್ತಮ ಸಂವಹನವನ್ನು ನಡೆಸುವ ಮತ್ತು ಸ್ಥಾಪಿಸುವ ಉದ್ದೇಶದಿಂದ ಪ್ರತಿಭಟನಾ ಸ್ಥಳಕ್ಕೆ ವೈಯಕ್ತಿಕವಾಗಿ ಭೇಟಿ ನೀಡಿ, ಅವರ ಬೇಡಿಕೆಗಳಿಗೆ ಒಪ್ಪಿಕೊಂಡಿದ್ದೇನೆ” ಎಂದು ಧಾಮಿ ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಶಾಶ್ವತ ನೀರಾವರಿಗಾಗಿ ʼಜಲಾಗ್ರಹʼ; ʼಮಾಡು ಇಲ್ಲವೇ ಮಡಿʼ ಹೋರಾಟಕ್ಕೆ ಸಜ್ಜಾದ ರೈತರು
ಪರೀಕ್ಷಾ ಅಕ್ರಮದ ತನಿಖೆಯನ್ನು ಸಿಬಿಐಗೆ ಒಪ್ಪಿಸುವ ಶಿಫಾರಸ್ಸಿಗೆ ಧಾಮಿ ಅನುಮೋದನೆ ನೀಡಿದ್ದಾರೆ.
“ಪಾರದರ್ಶಕ ನೇಮಕಾತಿ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಸಂಪೂರ್ಣವಾಗಿ ಬದ್ಧವಾಗಿದೆ. ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ” ಎಂದಿದ್ದಾರೆ.