ಕಾಡಿನ ತಂಪಾದ ನೆಲದಲ್ಲಿ, ತೆರೆದ ಆಕಾಶದ ಕೆಳಗೆ ಆ ಮಗು ಕೂಗುತ್ತಿತ್ತು. ತನ್ನ ಜೀವನ ಆರಂಭವಾದ ಮೊದಲ ಗಂಟೆಗಳಲ್ಲಿಯೇ ಆ ಮಗುವಿನ ದೇಹದ ಮೇಲೆ ಇರುವೆಗಳು ಹರಿದಾಡುತ್ತಿದ್ದವು – ಇದು ಮಧ್ಯಪ್ರದೇಶದ ಛಿಂದ್ವಾರಾದಲ್ಲಿನ ಮೂರು ದಿನಗಳ ಮಗುವಿನ ಕಥೆ. ಆ ಮಗುವನ್ನು ಹೆತ್ತವರು ಕಲ್ಲಿನ ಕೆಳಗೆ ಎಸೆದು, ಸಾಯಲು ಬಿಟ್ಟುಹೋಗಿದ್ದರು. ಅದೃಷ್ಟವಶಾತ್, ಆ ಶಿಶು ಬದುಕುಳಿದಿದೆ.
ಛಿಂದ್ವಾರಾದ ನಂದನವಾಡಿ ಕಾಡಿನಲ್ಲಿ ಶಿಶುವಿನ ಅಳುವಿಕೆಯನ್ನು ಕೇಳಿದ ಸಮೀಪದ ಗ್ರಾಮಸ್ಥರು ಸ್ಥಳಕ್ಕೆ ಬಂದು ಹುಡುಕಾಟ ನಡೆಸಿದ್ದಾರೆ. ಈ ವೇಳೆ, ಕಲ್ಲಿನ ಕೆಳಗೆ ಮಗು ಇರುವುದನ್ನು ಗಮನಿಸಿದ್ದಾರೆ. ಆ ಮಗು ಶೀತ, ಇರುವೆ ಕಡಿತ ಹಾಗೂ ಉಸಿರುಗಟ್ಟಿಸುವಿಕೆಯಿಂದ ಬಳಲುತ್ತಿತ್ತು. ಹಲವೆಡೆ ಗಾಯಗಳೂ ಆಗಿದ್ದವು.
ಆ ಮಗುವಿನ ತಂದೆ ಬಬ್ಲು ದಾಂಡೋಲಿಯಾ ಅವರು ಸರ್ಕಾರಿ ಶಿಕ್ಷಕರಾಗಿದ್ದಾರೆ. ಅವರಿಗೆ ಈ ಮಗು ನಾಲ್ಕನೇ ಮಗುವಾಗಿದೆ. ಮಧ್ಯಪ್ರದೇಶದಲ್ಲಿ ‘ದ್ವಿಮಕ್ಕಳ ನೀತಿ’ ಜಾರಿಯಲ್ಲಿದ್ದು, ಇಬ್ಬರು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಅವರಿಗೆ ಸರ್ಕಾರಿ ಕೆಲಸವನ್ನು ನಿರ್ಬಂಧಿಸಲಾಗುತ್ತದೆ. ಕೆಲಸದಿಂದ ವಜಾಗೊಳಿಸಲಾಗುತ್ತದೆ.
ಆದ್ದರಿಂದ, ಬಬ್ಲು ದಾಂಡೋಲಿಯಾ ಅವರ ಸರ್ಕಾರಿ ಕೆಲಸವನ್ನು ಉಳಿಸಿಕೊಳ್ಳಲು ಬಬ್ಲು ಮತ್ತು ಆತನ ಪತ್ನಿ ರಾಜಕುಮಾರಿ ದಾಂಡೋಲಿಯಾ ಅವರು ತಮ್ಮ 4ನೇ ಮಗುವನ್ನು ಕೊಲ್ಲಲು ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ಯೋಗ ಕಳೆದುಕೊಳ್ಳುವ ಭಯದಿಂಧ ದಂಪತಿಗಳು ಗರ್ಭಧಾರಣೆಯನ್ನು ರಹಸ್ಯವಾಗಿಟ್ಟಿದ್ದರು. ಸೆಪ್ಟೆಂಬರ್ 23ರ ಮುಂಜಾನೆ, ರಾಜಕುಮಾರಿ ಅವರಿಗೆ ಮನೆಯಲ್ಲಿಯೇ ಹೆರಿಗೆಯಾಯಿತು. ಇದಾದ ಕೆಲವೇ ಗಂಟೆಗಳಲ್ಲಿ, ಮಗುವನ್ನು ಕಾಡಿಗೆ ಕೊಂಡೊಯ್ದು, ಕಲ್ಲಿನಡಿಯಲ್ಲಿ ಬಿಟ್ಟುಹೋಗಿದ್ದಾರೆ ಎಂದು ವರದಿಯಾಗಿದೆ.
ಈ ಲೇಖನ ಓದಿದ್ದೀರಾ?: ಜಾತಿ ಸಮೀಕ್ಷೆಗೆ ವಿರೋಧ: OBCಗಳನ್ನು ವಂಚಿಸುವ ತಂತ್ರ
ನಂದನವಾಡಿ ಗ್ರಾಮದಲ್ಲಿ ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದ ಗ್ರಾಮಸ್ಥರಿಗೆ ಮಗು ಅಳುವ ಕೂಗು ಕೇಳಿಸಿದೆ. “ಅದು ಪ್ರಾಣಿ ಎಂದು ನಾವು ಭಾವಿಸಿದ್ದೇವೆ. ಆದರೆ, ಹತ್ತಿರಕ್ಕೆ ಹೋದಾಗ, ಸಣ್ಣ ಕೈಗಳು ಕಲ್ಲಿನ ಕೆಳಗೆ ಕಾಣಿಸಿದವು. ನಾವು ಮಗುವನ್ನು ರಕ್ಷಿಸಿದ್ದೇವೆ. ಎಂತಹ ಪೋಷಕರೇ ಆದರೂ, ಇಂತಹ ಕೃತ್ಯವನ್ನು ಮಾಡಬಾರದು” ಎಂದು ಗ್ರಾಮಸ್ಥರು ಹೇಳಿದ್ದಾರೆ.
ಮಗುವನ್ನು ಛಿಂದ್ವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. “ಮಗು ಬದುಕುಳಿದಿರುವುದೇ ಪವಾಡದಂತಿದೆ. ಕೊರೆವ ಚಳಿ, ಇರುವೆ ಕಡಿತವನ್ನು ಸಹಿಸಿ ಮಗು ಬದುಕಿದೆ. ಶಿಶುವಿನ ಪರಿಸ್ಥಿತಿ ಈಗ ಸುಧಾರಿಸಿದೆ” ಎಂದು ವೈದ್ಯರು ತಿಳಿಸಿದ್ದಾರೆ.
ಮಗುವಿನ ಪೋಷಕರ ವಿರುದ್ಧ ಪೊಲೀಸರು ಬಿಎನ್‌ಎಸ್ ಸೆಕ್ಷನ್ 93, 109 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದತ್ತಾಂಶದ ಪ್ರಕಾರ, ಮಧ್ಯಪ್ರದೇಶವು ಭಾರತದಲ್ಲಿಯೇ ಅತೀ ಹೆಚ್ಚು ನವಜಾತ ಶಿಶುಗಳನ್ನು ತ್ಯಜಿಸುವ ರಾಜ್ಯವಾಗಿದೆ. ಬಡತನ, ಸಾಮಾಜಿಕ ಕಳಂಕ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ಭಯದಿಂದ ಇಂತಹ ಘಟನೆಗಳು ಪದೇ-ಪದೇ ನಡೆಯುತ್ತಿವೆ.