ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ಕೇವಲ 162 ರನ್ ಗೆ ಆಲೌಟ್ ಆಗಿದೆ.
ಗುಜರಾತ್ ನ ಅಹ್ಮದಾಬಾದ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ ಭಾರತೀಯ ಬೌಲರ್ಗಳು ಮೇಲುಗೈ ಸಾಧಿಸಿದ್ದಾರೆ. ಭಾರತ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಮೊಹಮ್ಮದ್ ಸಿರಾಜ್ 4 ವಿಕೆಟ್ ಪಡೆದು ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ಜಸ್ಟ್ರೀತ್ ಬುಮ್ರಾ 3, ಕುಲದೀಪ್ ಯಾದವ್ 2 ಹಾಗೂ ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದು ಗಮನ ಸೆಳೆದರು.
ಭಾರತದ ಸಂಘಟಿತ ಬೌಲಿಂಗ್ ದಾಳಿಗೆ ವೆಸ್ಟ್ ಇಂಡೀಸ್ ದಾಂಡಿಗರು ಒಬ್ಬೊಬ್ಬರಾಗಿ ಫೆವಿಲಿಯನ್ ಹಾದಿ ಹಿಡಿದರು. ವೆಸ್ಟ್ ಇಂಡೀಸ್ ಅಂತಿಮವಾಗಿ 44.1 ಓವರ್ಗಳಲ್ಲಿ 162 ರನ್ ಗೆ ಆಲೌಟ್ ಆಯಿತು.
ಈ ಮೊದಲು ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ರೋಸ್ಟನ್ ಚೇಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ವಿಂಡೀಸ್ ಆರಂಭಿಕರು ನಿರಾಸೆ ಮೂಡಿಸಿದರು. ಜಾನ್ ಕ್ಯಾಂಪ್ಬೆಲ್ ಎಂಟು ಹಾಗೂ ತೇಜ್ನಾರಾಯಣ್ ಚಂದ್ರಪಾಲ್ ಶೂನ್ಯಕ್ಕೆ ಔಟ್ ಆದರು. ಅಲಿಕ್ ಅಥಾಂಜೆ 12 ಹಾಗೂ ಶಾಯಿ ಹೋಪ್ 26 ರನ್ ಗಳಿಸಿ ಪೆವಿಲಿನ್ಗೆ ಮರಳಿದರು.
ನಂತರ, ನಾಯಕ ರೋಸ್ಟನ್ ಚೇಸ್ 24 ಹಾಗೂ ಜಸ್ಟಿನ್ ಗ್ರೀಮ್ಸ್ 32 ರನ್ ಗಳಿಸಿ ಕೊಂಚ ಹೋರಾಟ ನೀಡಿದರು.