ಆರ್‌ಎಸ್‌ಎಸ್ ತನ್ನ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಆರ್‌ಎಸ್‌ಎಸ್‌ಅನ್ನು ಹೊಗಳಿರುವ ಪ್ರಧಾನಿ ಮೋದಿ ಅವರು, “ಸಮಾನತೆ ಮತ್ತು ಸಾಮರಸ್ಯದ ವಿಚಾರದಲ್ಲಿ ಆರ್‌ಎಸ್‌ಎಸ್‌ನ ಬದ್ಧತೆಯನ್ನು ಮಹಾತ್ಮ ಗಾಂಧಿ ಕೂಡ ಬಹಿರಂಗವಾಗಿ ಮೆಚ್ಚಿಕೊಂಡಿದ್ದರು” ಎಂದು ಹೇಳಿದ್ದಾರೆ. ಮೋದಿ ಅವರ ಈ ಹೇಳಿಕೆ ಸುಳ್ಳು ಎಂದು ಕಾಂಗ್ರೆಸ್ ವಾದಿಸಿದೆ. ಮಾತ್ರವಲ್ಲದೆ, “ಆರ್‌ಎಸ್‌ಎಸ್ ಒಂದು ಸರ್ವಾಧಿಕಾರಿ ದೃಷ್ಟಿಕೋನ ಹೊಂದಿರುವ ಕೋಮುವಾದಿ ಸಂಸ್ಥೆಯೆಂದು ಗಾಂಧಿ ಹೇಳಿದ್ದರು” ಎಂದು ಹೇಳಿದೆ.
ಆರ್‌ಎಸ್‌ಎಸ್ ಕುರಿತು ಗಾಂಧಿ ಅವರು ಹೇಳಿದ್ದನ್ನು ಉಲ್ಲೇಖಿಸಿ ಕಾಂಗ್ರೆಸ್ ಸಂವಹನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ. “1947ರ ಸೆಪ್ಟೆಂಬರ್ 16 ರಂದು ಮಾತನಾಡಿದ್ದ ಗಾಂಧಿ ಅವರು, ಸಂಘಪರಿವಾರವು ಹಿಂದು ಧರ್ಮವನ್ನು ಪಂಥೀಯ ಮತ್ತು ವಿಶೇಷ ಧಾರ್ಮಿಕ ಧರ್ಮವಾಗಿ ಪರಿವರ್ತಿಸುತ್ತಿದ್ದಾರೆ. ಇದು ಧಾರ್ಮಿಕ ಬಹುತ್ವ ಮತ್ತು ಸಾಮರಸ್ಯವನ್ನು ಅಪಾಯಕ್ಕೆ ಸಿಲುಕಿಸುತ್ತದೆ. ಅಲ್ಪಸಂಖ್ಯಾತರಲ್ಲಿ ಭಯವನ್ನು ಹರಡುತ್ತದೆ ಎಂದಿದ್ದರು. ಅದೇ ವರ್ಷದ ನವೆಂಬರ್ 16ರಂದು ನಡೆದ ಆರ್‌ಎಸ್‌ಎಸ್ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದ ಗಾಂಧಿ, ಭಾರತದಲ್ಲಿ ಹಿಂದುಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ಜಾಗವಿಲ್ಲವೆಂದು ಹೇಳುವುದು, ವಾದಿಸುವುದು ಸರಿಯಲ್ಲ. ಇಂತಹ ವಾದವು ಹಿಂದೂಯೇತರರು, ವಿಶೇಷವಾಗಿ ಮುಸ್ಲಿಮರು ಇಲ್ಲಿ ಹಿಂದುಗಳ ಗುಲಾಮರಾಗಿ ಬದುಕಬೇಕಾಗುವ ಅಪಾಯವನ್ನು ಹುಟ್ಟುಹಾಕುತ್ತದೆ. ಈ ಸಂಘಟನೆಯು ಅಹಿಂಸೆಯ ಮೇಲೆ ನಂಬಿಕೆಯನ್ನು ಹೊಂದಿಲ್ಲವೆಂದು ಗಾಂಧಿ ಹೇಳಿದ್ದರು” ಎಂದು ರಮೇಶ್ ವಿವರಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ದೆಹಲಿ ಶಾಲೆಗಳಲ್ಲಿ RSS ಬೋಧನೆ: ಮಕ್ಕಳ ಎಳೆ ಮನಸ್ಸಲ್ಲಿ ಕೋಮುದ್ವೇಷ ಬಿತ್ತುವ ಹುನ್ನಾರ!
1948ರ ಜುಲೈ 18ರಂದು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರಿಗೆ ಬರೆದಿದ್ದ ಪತ್ರದ ಚಿತ್ರವನ್ನು ಹಂಚಿಕೊಂಡಿರುವ ರಮೇಶ್, “ಆರ್‌ಎಸ್‌ಎಸ್ ಮತ್ತು ಹಿಂದು ಮಹಾಸಭೆಯ ಚಟುವಟಿಕೆಗಳಿಂದಲೇ ಗಾಂಧಿಜಿಯವರ ಹತ್ಯೆಯಂತಹ ಭೀಕರ ದುರಂತಕ್ಕೆ ಕಾರಣವಾದ ವಾತಾವರಣ ನಿರ್ಮಾಣವಾಯಿತು. ಸರ್ಕಾರ ಮತ್ತು ರಾಷ್ಟ್ರದ ಅಸ್ತಿತ್ವಕ್ಕೂ ಆರ್‌ಎಸ್‌ಎಸ್ ಚಟುವಟಿಕೆಗಳು ಸ್ಪಷ್ಟ ಅಪಾಯ ಒಡ್ಡುತ್ತಿವೆ ಎಂಬುದಾಗಿ ಪಟೇಲ್ ಹೇಳಿದ್ದರು” ಎಂದು ತಿಳಿಸಿದ್ದಾರೆ.
“ಗಾಂಧಿ ಅವರ ಹತ್ಯೆಯಾದ ಬಳಿಕ, 1948ರ ಫೆಬ್ರವರಿ 4ರಂದು ಆರ್‌ಎಸ್‌ಎಸ್‌ಅನ್ನು ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ನಿಷೇಧಿಸಿದ್ದರು. 1948ರ ಡಿಸೆಂಬರ್ 19ರಂದು ಜೈಪುರದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಪಟೇಲ್ ಅವರು ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು” ಎಂದು ರಮೇಶ್ ನೆನಪಿಸಿಕೊಂಡಿದ್ದಾರೆ.