ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿ ಎಂ. ಎಚ್.ಪಟ್ಟಣ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಹಾಗೂ ಆಯುಧಪೂಜೆ ಹಿನ್ನಲೆ ರಂಗೋಲಿ ಸ್ಪರ್ಧೆ ನಡೆಸಿ ಸಿಬ್ಬಂದಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು.
ಪಂಚಾಯಿತಿ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದ ಪಂಚಾಯಿತಿ ಉಪಾಧ್ಯಕ್ಷೆ ಭಾಗ್ಯಮ್ಮ ಮಾತನಾಡಿ ದಸರಾ ಹಬ್ಬ ಹಾಗೂ ಗಾಂಧಿ ಜಯಂತಿ ಎರಡೂ ಒಟ್ಟಿಗೆ ನಡೆದಿರುವುದು ಸಂತಸದ ಕ್ಷಣ. ಗಾಂಧೀಜಿ ಅವರ ಗ್ರಾಮ ಸ್ವರಾಜ್ ಕನಸು ನನಸು ಮಾಡಲು ಗ್ರಾಮ ಪಂಚಾಯಿತಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ದಸರಾ ಹಬ್ಬದ ಹಿನ್ನಲೆ ನಮ್ಮ ಸಿಬ್ಬಂದಿಗಳಿಗೆ ಸಮವಸ್ತ್ರ ವಿತರಣೆ ಮಾಡಲಾಗಿ ಶಾಲಾ ಮಕ್ಕಳಿಗೆ ರಂಗೋಲಿ ಸ್ಪರ್ಧೆ ಆಯೋಜಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೇಖರ್ ಮಾತನಾಡಿ ಸ್ವಚ್ಚೋತ್ಸವ ಹಿನ್ನಲೆ ಕಳೆದ ಹದಿನೈದು ದಿನ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲೂ ಸ್ವಚ್ಛತೆ ಕಾರ್ಯ ನಡೆಸಲಾಯಿತು. ಶಾಲಾ ಮಕ್ಕಳಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಜೊತೆ ದಸರಾ ಹಬ್ಬ ಕೂಡಾ ಆಚರಣೆ ಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪಂಚಾಯಿತಿ ಸಿಬ್ಬಂದಿಗಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು. ನಡೆದ ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಬೋರಯ್ಯ, ಸಿ.ಎಲ್.ಚಂದೇಶೇಖರ್, ಮಹೇಂದ್ರಕುಮಾರ್, ಗೀತ ನಂದೀಶ್, ಜಯಲಕ್ಷ್ಮಮ್ಮ ಶಿವಶಂಕರ್ ಸೇರಿದಂತೆ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.