ಅಪ್ರಾಪ್ತೆ ಹೆಣ್ಣುಮಕ್ಕಳನ್ನು ಅಪಹರಿಸಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರೇ ಹಿಡಿದು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ ಘಟನೆ ಮಾನ್ವಿ ತಾಲ್ಲೂಕು ಕುರ್ಡಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿ ರಾಯಚೂರು ತಾಲೂಕಿನ ದಿನ್ನಿ ಗ್ರಾಮದವನು ಎಂದು ತಿಳಿದುಬಂದಿದೆ. ಸಂಜೆ ವೇಳೆ ಕುರ್ಡಿ ಗ್ರಾಮದ ಕುರಿಗಾಹಿಯೊಬ್ಬರ 5ನೇ ತರಗತಿ ಹಾಗೂ 2ನೇ ತರಗತಿ ಓದುತ್ತಿರುವ ಇಬ್ಬರು ಹೆಣ್ಣುಮಕ್ಕಳ ಬಳಿ ಅಪರಿಚಿತ ವ್ಯಕ್ತಿ ಬಂದು “ನಿಮ್ಮ ತಂದೆ ಕರೆದಿದ್ದಾರೆ” ಎಂದು ಹೇಳಿ ಬೈಕ್ ಮೇಲೆ ಕೂರಿಸಿಕೊಂಡು ಹೋಗಿದ್ದಾನೆ.
ಮಕ್ಕಳು ಅನುಮಾನಗೊಂಡು, “ತಂದೆ ಕುರಿ ಮೇಯಿಸುವ ದಾರಿಯಲ್ಲಿ ಹೋಗುತ್ತಿಲ್ಲ” ಎಂದು ಕೇಳಿದರೂ ಆರೋಪಿ ಸ್ಪಂದಿಸದೆ ಮುಂದುವರಿದಿದ್ದಾನೆ. ಈ ವೇಳೆ ಕಂಬಲತ್ತಿ ಗ್ರಾಮ ತಲುಪಿದಾಗ, ಬಾಲಕಿಯರಲ್ಲಿ ಒಬ್ಬಳು ಕಿರುಚಿ ಬೈಕ್ನಿಂದ ಜಿಗಿದು ತಪ್ಪಿಸಿಕೊಂಡಿದ್ದಾಳೆ. ಬಳಿಕ ಸ್ಥಳೀಯರ ಸಹಾಯದಿಂದ ತಂದೆಯನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾಳೆ.
ಘಟನೆಯ ಬಗ್ಗೆ ಮಾಹಿತಿ ದೊರೆತ ತಕ್ಷಣ ಬಾಲಕಿಯ ತಂದೆ ಸಂಬಂಧಿಕರನ್ನು ವಿಷಯ ತಿಳಿಸಿದಾಗ ಆರೋಪಿಯನ್ನು ಹಿಡಿದು ಮತ್ತೊಬ್ಬ ಬಾಲಕಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಬಳಿಕ ಗ್ರಾಮಸ್ಥರ ಆಕ್ರೋಶ ತಾಳಲಾರದಂತಾಗಿದ್ದು ಆರೋಪಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಬಗ್ಗೆ ಮಾನ್ವಿ ಠಾಣೆಯ ಪಿಎಸ್ ಐ ಅವರಿಗೆ ಕೇಳಿದಾಗ ಅಪಹರಣದ ಯತ್ನ ಸುಳ್ಳು, ಬಾಲಕಿಯರೇ ಡ್ರಾಪ್ ಕೇಳಿದ್ದರಿಂದ ಬೈಕ್ ಹತ್ತಿಸಿಕೊಂಡಿದ್ದ, ಸಾರ್ವಜನಿಕರಿಗೆ ಅನ್ಯಥಾ ಭಾವಿಸಿ ಥಳಿಸಿ ಠಾಣೆಗೆ ಕರೆತಂದಿದ್ದಾರೆ. ವಿಚಾರಣೆ ಮಾಡಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮೂರು ದಿನದಲ್ಲಿ ಸಮೀಕ್ಷೆ ಮುಕ್ತಾಯ : ಶಿಕ್ಷಕನ ಕಾರ್ಯಕ್ಕೆ ಜಿಲ್ಲಾಡಳಿತ ಪ್ರಶಂಸೆ
ಈ ಕುರಿತು ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಕುಡಿದ ಮತ್ತಿನಲ್ಲಿ ಇದ್ದ ಎನ್ನಲಾಗಿದ್ದು ದಿನ್ನಿ ಗ್ರಾಮಸ್ಥರು ಹಾಗೂ ಬಾಲಕಿಯ ತಂದೆ,ಸಂಬಂಧಿಕರ ಸಮ್ಮುಖದಲ್ಲಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಬಿಡಲಾಗಿದೆ ಎಂದು ಕುರ್ಡಿ ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.
