ಸಮೀಕ್ಷೆಯ ಸಮೀಕ್ಷೆ; ನಗರವಾಸಿಗಳ ಜಾತಿ ಮನಸ್ಥಿತಿ ಅನಾವರಣ

Date:

Advertisements
ಸಮೀಕ್ಷೆಯ ಸಮೀಕ್ಷೆ ಮಾಡಿದರೆ ಜಾತಿ ವ್ಯವಸ್ಥೆಯ ಕರಾಳತೆ ಅನಾವರಣವಾಗುತ್ತದೆ. ಇಷ್ಟೆಲ್ಲ ತೊಡಕುಗಳ ನಡುವೆ, ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಸಮೀಕ್ಷೆಯನ್ನು ಸಾಧ್ಯವಾದ ಮಟ್ಟಿಗೆ ಯಶಸ್ವಿಗೊಳಿಸುವತ್ತ ಹೆಜ್ಜೆ ಹಾಕುತ್ತಿರುವ ಆಯೋಗ ಮತ್ತು ಗಣತಿದಾರರ ಪ್ರಾಮಾಣಿಕ ಪ್ರಯತ್ನಗಳು ಅಭಿನಂದನಾರ್ಹ.

ಬರೆಹಗಾರ, ಶೋಷಿತ ಸಮುದಾಯಗಳ ಭಿನ್ನ ಕಥೆಗಾರ ಗುರುಪ್ರಸಾದ್ ಕಂಟಲಗೆರೆ ಅವರು ಇತ್ತೀಚೆಗೆ ಕರೆ ಮಾಡಿ ಮಾತನಾಡುತ್ತಿದ್ದರು. “ದಲಿತ ಸಮುದಾಯದ ಹಿನ್ನೆಲೆಯ ಗಣತಿದಾರರಿಗೆ ಸಮೀಕ್ಷೆಯೂ ಒಂದು ಸವಾಲು. ನಾವು ಮನೆಗಳಿಗೆ ಭೇಟಿ ನೀಡಿ, ಅತಿ ಕಡಿಮೆ ಅವಧಿಯಲ್ಲಿ ಜನರೊಂದಿಗೆ ಆತ್ಮೀಯತೆ ಬೆಳೆದು, ಮನೆಯ ಒಳಗೂ ಹೋಗಿ ಮಾತನಾಡುವಾಗ ನಮಗೂ ಒಂದೆರಡು ಪ್ರಶ್ನೆಗಳು ಎದುರಾಗುತ್ತದೆ. ನಾವು ಅರವತ್ತು ಪ್ರಶ್ನಾವಳಿ ಕೇಳಿದರೆ, ಅವರು ಕೇಳುವ ಒಂದೆರಡು ಪ್ರಶ್ನೆಗಳಿಗೆ ಉತ್ತರಿಸುವುದು ಸಂಕಟದ ಕೆಲಸ. ಸಾಮಾನ್ಯವಾಗಿ ನಮ್ಮ ಜಾತಿಯನ್ನು ಕೇಳುತ್ತಾರೆ. ಹೇಗೆ ಹೇಳುವುದು? ಹೀಗೆ ಜಾತಿ ಕೇಳಬಾರದು ಎಂದು ಕಾನೂನಿನ ಪಾಠ ತಿಳಿಸಲಾಗದಷ್ಟು ಆತ್ಮೀಯತೆ ಅವರೊಂದಿಗೆ ಉಂಟಾಗಿರುತ್ತದೆ” ಎಂದು ಒಳಸಂಕಟ ಹೇಳಿಕೊಂಡರು ಗುರುಪ್ರಸಾದ್. ಇದೇ ವಿಚಾರವನ್ನು ಪ್ರಜಾವಾಣಿ ಪತ್ರಿಕೆಗೂ ಬರೆದು, ಪ್ರಕಟಿಸಿದರು.

ಇದು ಗ್ರಾಮೀಣ ಪರಿಸರದ ಸಂದಿಗ್ಧತೆಯಾದರೆ ಬೆಂಗಳೂರಿನಂತಹ ಮಹಾನಗರದ ಸ್ಥಿತಿಯೇ ಬೇರೆ. ಸ್ಲಂ ನಿವಾಸಿಗಳು ಸ್ವಯಂಪ್ರೇರಿತವಾಗಿ ವಿವರಗಳನ್ನು ನೀಡುತ್ತಿದ್ದರೆ, ಮುಂದುವರಿದ ಬಡಾವಣೆಗಳಲ್ಲಿ ಇರುವ ಎಲೀಟ್ ವರ್ಗವು ಗಣತಿದಾರರನ್ನು ಗುಮಾನಿಯಿಂದಲೇ ನೋಡುತ್ತಿರುವುದು ವರದಿಯಾಗಿದೆ. ಗೇಟಿನ ಹೊರಗೆ ನಿಲ್ಲಿಸಿ, ಒಂದು ಲೋಟ ನೀರನ್ನೂ ಕೊಡದ ಮನಸ್ಥಿತಿಗಳನ್ನು ಗಣತಿದಾರರು ಎದುರಿಸುತ್ತಿದ್ದಾರೆ. ಅಪಾರ್ಟ್‌ಮೆಂಟ್‌ಗಳಿಗೆ ಪ್ರವೇಶ ನಿರಾಕರಿಸುವುದು ನಡೆಯುತ್ತಿದೆ. ನಾಯಿಗಳ ಕಾಟವನ್ನು ಅನುಭವಿಸಬೇಕಾಗಿದೆ. ಸೆಕ್ಯುರಿಟಿ ಸಿಬ್ಬಂದಿ ಅಪಾರ್ಟ್‌ಮೆಂಟ್‌ಗಳು ಒಳಗಡೆ ಬಿಡಲು ನಿರಾಕರಿಸುತ್ತಿದ್ದಾರೆ. ಕೆಲವರು ಆದಾಯ, ಸಾಲ, ಆರ್ಥಿಕ ಸ್ಥಿತಿಯ ವಿವರ ನೀಡುವುದಿಲ್ಲ. “ಸಾಲ ಎಷ್ಟಿದೆ ಎಂದು ಹೇಳಿದರೆ, ನೀವು ತೀರಿಸಿಕೊಡುತ್ತೀರಾ?” ಎಂದು ಉದ್ಧಟತನ ಪ್ರದರ್ಶಿಸುತ್ತಿರುವುದನ್ನು ಗಣತಿದಾರರು ಹೇಳಿಕೊಂಡಿದ್ದಾರೆ. ಸಮೀಕ್ಷೆಯ ವಿರುದ್ಧ ಉದ್ದೇಶಪೂರ್ವಕವಾಗಿ ಬಿತ್ತಲಾಗಿರುವ ಅಸಹನೆ, ಅಪನಂಬಿಕೆಯ ಪರಿಣಾಮಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಹೀಗೆ ಎಲೀಟ್ ವರ್ಗವು ಅನಾಗರಿಕತೆಯಿಂದ ವರ್ತಿಸಿ, ಸಮೀಕ್ಷೆ ಎಂದರೆ ತಾತ್ಸಾರದಿಂದ ನೋಡುವುದು ಹೊಸ ಬೆಳವಣಿಗೆಯೇನೂ ಅಲ್ಲ.

ಇದನ್ನೂ ಓದಿರಿ: ಜಾತಿ ಸಮೀಕ್ಷೆಗೆ ವಿರೋಧ: OBCಗಳನ್ನು ವಂಚಿಸುವ ತಂತ್ರ

Advertisements

ಕಾಂತರಾಜ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಮೀಕ್ಷೆ ಕೈಗೊಂಡಿದ್ದಾಗಲೂ ಇದೇ ರೀತಿಯ ಸವಾಲುಗಳು ಎದುರಾಗಿದ್ದವು. ನಗರದ ಎಲೀಟ್ ಜನರು ಅಪಾರ್ಟ್‌ಮೆಂಟ್‌ಗಳಿಗೆ ಪ್ರವೇಶ ನಿರಾಕರಿಸುತ್ತಿದ್ದನ್ನು ನೆನಪಿಸಿಕೊಂಡಿದ್ದ ಕಾಂತರಾಜ ಅವರು, “ನೀವು ವಿನಾಕಾರಣ ಸಮೀಕ್ಷೆಗೆ ಅಡ್ಡಿಪಡಿಸಿದರೆ, ನಾವು ಬಿಬಿಎಂಪಿಯಿಂದ ಮೂಲಸೌಕರ್ಯಗಳನ್ನು ನಿಲ್ಲಿಸಬೇಕಾಗುತ್ತದೆ” ಎಂದು ಎಚ್ಚರಿಸಿದ್ದನ್ನು ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿಕೊಂಡಿದ್ದರು. ಸಮೀಕ್ಷೆಗೆ ಕಡ್ಡಾಯವಾಗಿ ಒತ್ತಾಯಿಸಬಾರದೆಂಬುದು ಮೊದಲಿನಿಂದಲೂ ಇರುವ ನಿಯಮ. ಕರ್ನಾಟಕ ಹೈಕೋರ್ಟ್‌ ಕೂಡ ಇದ್ದನ್ನೇ ಎತ್ತಿಹಿಡಿದಿದೆ. ಹಿಂದುಳಿದ ವರ್ಗಗಳ ಆಯೋಗದ ಹಾಲಿ ಅಧ್ಯಕ್ಷ ಮಧುಸೂದನ್ ನಾಯ್ಕ್ ಕೂಡ ಪ್ರಕಟಣೆ ಹೊರಡಿಸಿ, ಈ ವಿಚಾರವನ್ನು ಮತ್ತಷ್ಟು ಸ್ಪಷ್ಟಪಡಿಸಿದ್ದಾರೆ. ದುರಾದೃಷ್ಟವಶಾತ್ ಈ ಮಾರ್ಗಸೂಚಿಯನ್ನೇ ಅವಕಾಶವನ್ನಾಗಿ ಮಾಡಿಕೊಳ್ಳಲು ಮುಂದಾಗಿರುವ ಬಲಾಢ್ಯರು ಜನವಿರೋಧಿ ನಿಲುವು ತಾಳಿದ್ದಾರೆ. “ನಿಮ್ಮ ಮಾಹಿತಿ ದುರುಪಯೋಗವಾಗುತ್ತದೆ, ಸಮೀಕ್ಷೆಗೆ ನಿರಾಕರಿಸಿ, ನಾವೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿಲ್ಲ” ಎಂಬ ಅಪಪ್ರಚಾರವನ್ನು ಮಾಡಿರುವ ಬಿಜೆಪಿ ನಾಯಕರ ಮಾತನ್ನೇ ನಂಬಿಬಿಟ್ಟಿದ್ದಾರೆ. ಇಂತಹ ವಾದಗಳ ಹಿಂದೆ ಇರುವ ಬಲಾಢ್ಯ ಜಾತಿಗಳ, ಹೆಚ್ಚು ಪಾಲುಂಡವರ ಹಿತಾಸಕ್ತಿ ಢಾಳಾಗಿ ಕಾಣುತ್ತದೆ ಎಂದು ಬಿಡಿಸಿ ಹೇಳಬೇಕಿಲ್ಲ.

‘ಈದಿನ’ಕ್ಕೆ ವಿಶೇಷ ಸಂದರ್ಶನ ನೀಡಿರುವ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಅವರು, “ಸಮೀಕ್ಷೆಗೆ ಪಾಲ್ಗೊಳ್ಳಬೇಡಿ ಎಂದು ಜನರನ್ನು ಪ್ರಚೋದಿಸುವುದು ದೇಶದ್ರೋಹದ ಕೆಲಸ. ಹೀಗೆ ಮಾಡುವ ಮೂಲಕ ತಮ್ಮ ಜಾತಿಗಳಲ್ಲಿರುವ ಹಿಂದುಳಿದವರ ವಾಸ್ತವ ಸ್ಥಿತಿಗಳು ಗೊತ್ತಾಗದಂತೆ ತಡೆಯಲಾಗುತ್ತಿದೆ. ಆ ಮೂಲಕ ತಮ್ಮ ಜಾತಿಗಳಿಗೂ ಇವರು ಮೋಸ ಮಾಡುತ್ತಿದ್ದಾರೆ” ಎಂದಿದ್ದರು. ಇದು ನಿಜವೂ ಹೌದು. ಸಾಮಾಜಿಕವಾಗಿ ಅಸ್ಪೃಶ್ಯತೆಯನ್ನು ಅನುಭವಿಸದ ಸಮುದಾಯಗಳಲ್ಲೂ ಬಡವರು ಇದ್ದಾರೆ ಎಂಬುದು ವಾಸ್ತವ. ಅದನ್ನು ತಿಳಿಯುವುದಕ್ಕೂ ಅಡ್ಡಿಪಡಿಸಲಾಗುತ್ತಿದೆ.

ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣಕ್ಕಾಗಿ ಜಸ್ಟಿಸ್ ಎಚ್.ಎನ್.ನಾಗಮೋಹನ ದಾಸ್ ಆಯೋಗವು ಸಮೀಕ್ಷೆ ಕೈಗೊಂಡಾಗಲೂ ಇದೇ ಸವಾಲು ಎದುರಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ ಶೇ.90ಕ್ಕಿಂತ ಹೆಚ್ಚು ಸಮೀಕ್ಷೆ ಯಶಸ್ವಿಯಾದರೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ.60ರಷ್ಟು ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ಬೆಂಗಳೂರು ನಗರದ ಕಾರಣಕ್ಕೆ ಪದೇಪದೇ ಸಮೀಕ್ಷೆಯ ಅವಧಿಯನ್ನು ವಿಸ್ತರಣೆ ಮಾಡಲಾಯಿತು. ಪ್ರತಿಮನೆಗೆ ಸ್ಟಿಕ್ಕರ್ ಅಂಟಿಸಿ, ಅದರಲ್ಲಿ ಕ್ಯೂ ಆರ್ ಕೋಡ್ ಹಾಕಲಾಯಿತು. ಅದರ ಮೂಲಕವಾದರೂ ಸಮೀಕ್ಷೆಯಲ್ಲಿ ಜನರು ಭಾಗಿಯಾಗಲಿ ಎಂಬುದು ಅದರ ಉದ್ದೇಶವಾಗಿತ್ತು. ಆದರೂ ಬೆಂಗಳೂರು ನಿವಾಸಿಗಳು ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸಲಿಲ್ಲ. ಪರಿಶಿಷ್ಟ ಸಮುದಾಯಗಳ ಕಾರಣಕ್ಕೆ ಬಂದಿರುವ ಗಣತಿದಾರರ ಮುಂದೆ ಹೆಚ್ಚು ಹೊತ್ತು ನಿಂತರೆ, ಮನೆಯ ಮಾಲೀಕರು ನಮ್ಮನ್ನು ಅನುಮಾನಿಸಬಹುದು ಎಂದು ದಲಿತರು ಆತಂಕಗೊಂಡರು. ಜಾತಿಯನ್ನು ಮರೆಮಾಚಿ ಬದುಕುವ ಸ್ಥಿತಿ ಧಾರುಣವಾದದ್ದು. ಅಪಾರ್ಟ್‌ಮೆಂಟ್‌ಗಳಿಗೆ ಹೋದಾಗ ಮಾಹಿತಿ ನೀಡದ ಪರಿಶಿಷ್ಟ ಜಾತಿಯವರು, ಗಣತಿದಾರರು ಅಪಾರ್ಟ್‌ಮೆಂಟ್‌ನಿಂದ ದೂರ ಬಂದಾಗ ಅವರನ್ನು ಹಿಂಬಾಲಿಸಿ ಮಾಹಿತಿ ಕೊಟ್ಟಿರುವ ವಿದ್ಯಮಾನಗಳೂ ಜರುಗಿದ್ದವು. ಸಮೀಕ್ಷೆಯ ಸಮೀಕ್ಷೆ ಮಾಡಿದರೆ ಜಾತಿ ವ್ಯವಸ್ಥೆಯ ಕರಾಳತೆ ಅನಾವರಣವಾಗುತ್ತದೆ. ಇಷ್ಟೆಲ್ಲ ತೊಡಕುಗಳ ನಡುವೆ, ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಸಮೀಕ್ಷೆಯನ್ನು ಸಾಧ್ಯವಾದ ಮಟ್ಟಿಗೆ ಯಶಸ್ವಿಗೊಳಿಸುವತ್ತ ಹೆಜ್ಜೆ ಹಾಕುತ್ತಿರುವ ಆಯೋಗ ಮತ್ತು ಗಣತಿದಾರರ ಪ್ರಾಮಾಣಿಕ ಪ್ರಯತ್ನಗಳು ಅಭಿನಂದನಾರ್ಹ.

ಇದನ್ನೂ ಓದಿರಿ: ಗುಮಾನಿ ಹುಟ್ಟುಹಾಕಿದ ‘ವಿಲ್’; ‘ಕೊನೆಗಾಲದಲ್ಲಿ ಭೈರಪ್ಪ ಖಾತೆಯಿಂದ ದುಡ್ಡು ದೋಚಿದ್ದು ಯಾರು?’

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 80,79,919 ಕುಟುಂಬಗಳ ಸಮೀಕ್ಷೆಯು ನಿನ್ನೆಯವರೆಗೆ ಪೂರ್ಣಗೊಂಡಿದೆ. ಗುರುವಾರ ಒಂದೇ ದಿನ 10,61,556 ಕುಟುಂಬಗಳ ಸಮೀಕ್ಷೆಯನ್ನು ಮಾಡಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆ 2,04,795, ಬೆಂಗಳೂರು ನಗರ 1,40,660, ಬೀದರ್ 1,88,103, ಚಾಮರಾಜನಗರ 1,65,835, ಚಿಕ್ಕಬಳ್ಳಾಪುರ 2,01,136, ಚಿಕ್ಕಮಗಳೂರು 1,97,062, ಚಿತ್ರದುರ್ಗ 3,00,210, ದಕ್ಷಿಣ ಕನ್ನಡ 2,18,815, ದಾವಣಗೆರೆ 3,20,438, ಧಾರವಾಡ 2,83,448, ಗದಗ 2,00,554, ಹಾಸನ 3,44,723, ಹಾವೇರಿ 3,25,078, ಕಲಬುರಗಿ 3,35,816, ಕೊಡಗು 73,084, ಕೋಲಾರ 2,43,556, ಕೊಪ್ಪಳ 2,48,423, ಮಂಡ್ಯ 3,30,249, ಮೈಸೂರು 3,86,913, ರಾಯಚೂರು 2,53787, ಶಿವಮೊಗ್ಗ 2,99,725, ತುಮಕೂರು 4,33,687, ಉಡುಪಿ 1,30,724, ಉತ್ತರ ಕನ್ನಡ 1,92,076, ವಿಜಯನಗರ 1,91,085, ವಿಜಯಪುರ 2,89,353 ಮತ್ತು ಯಾದಗಿರಿ ಜಿಲ್ಲೆಯಲ್ಲಿ 1,43,003 ಕುಟುಂಬಗಳು ಸಮೀಕ್ಷೆಗೆ ಒಳಪಟ್ಟಿವೆ ಎಂದು ಆಯೋಗ ಹೇಳಿದೆ. ವಿಜಯದಶಮಿ ಹಬ್ಬದ ಕಾರಣ ಕೆಲವು ಕಡೆ ನಿರೀಕ್ಷಿತ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿದುಬಂದಿದೆ. ನಿಗದಿತ ಸಮಯದಲ್ಲಿ ಸಮೀಕ್ಷೆಯು ಪೂರ್ಣಪ್ರಮಾಣದಲ್ಲಿ ಮುಗಿದರೆ ಹಿಂದುಳಿದ ವರ್ಗಗಳ ಭವಿಷ್ಯಕ್ಕೆ ಒಂದು ಮಾರ್ಗಸೂಚಿ ಸಿಕ್ಕಂತಾಗುತ್ತದೆ.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಂಗ್ರೆಸ್ ಸರಕಾರ ಸಂವೇದನೆ ಕಳೆದುಕೊಂಡಿದೆ: ಸಿ ಟಿ ರವಿ ಟೀಕೆ

ರಾಜ್ಯದ ಕಾಂಗ್ರೆಸ್ ಸರಕಾರ ಸಂವೇದನೆಯನ್ನೇ ಕಳೆದುಕೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ...

ಬೆಂಬಲ ಬೆಲೆಯಲ್ಲಿ ಸೋಯಾಬಿನ್, ಶೇಂಗಾ ಖರೀದಿ; ಏಕಕಾಲದಲ್ಲಿ ನೋಂದಣಿ, ಖರೀದಿಗೆ ಸರ್ಕಾರ ನಿರ್ಧಾರ

ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಸೋಯಾಬಿನ್ ಮತ್ತು ಶೇಂಗಾ ಖರೀದಲು ರಾಜ್ಯ...

ಹವಾಮಾನ ವರದಿ | ಕರ್ನಾಟಕದಲ್ಲಿ ಇನ್ನೂ 6 ದಿನ ಭಾರೀ ಮಳೆ

ಕರ್ನಾಟಕದಲ್ಲಿ ಇನ್ನೂ ಒಂದು ವಾರಗಳ ಕಾಲ ಮಳೆಯಾಗಲಿದ್ದು, ಅಕ್ಟೋಬರ್ 9ರವರೆಗೆ ಭಾರೀ...

Download Eedina App Android / iOS

X