ಖರ್ಗೆ ಅವರು ದಲಿತ ಸಮುದಾಯದಿಂದ ಬಂದವರು. ಆ ಕಾರಣಕ್ಕಾಗಿಯೇ ಬಿಜೆಪಿ ಮತ್ತು ಭಕ್ತರಿಂದ ಖರ್ಗೆ ಕುಟುಂಬದ ವಿರುದ್ಧ ಬಣ್ಣ, ಜಾತಿ ಆಧಾರದ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಲೇ ಇವೆ. ಇದು ದ್ವೇಷ ಮಾತ್ರವಲ್ಲ, ಸಾಮಾಜಿಕ ನ್ಯಾಯದ ವಿರುದ್ಧದ ವಿಕೃತಿಯೂ ಆಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉಸಿರಾಟದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಪೇಸ್ಮೇಕರ್ ಅಳವಡಿಸುವ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದ್ದು, ಮನೆಗೂ ಹೋಗಬಹುದು ಎಂದು ವೈದ್ಯರು ಹೇಳಿದ್ದಾರೆ. ಇದೇ ಹೊತ್ತಿನಲ್ಲಿ, ಬಿಜೆಪಿಗರ ರಾಜಕೀಯ ವಿಕೃತಿ, ನಂಜಿನ ಮನಸ್ಥಿತಿ ಮತ್ತೊಮ್ಮೆ ದೇಶದ ಎದುರು ಅನಾವರಣಗೊಂಡಿದೆ. ಅನಾರೋಗ್ಯವನ್ನೂ ಅಪಹಾಸ್ಯ ಮಾಡುವ, ಸಾವನ್ನೂ ಬಯಸುವ ಬಿಜೆಪಿ ಬೆಂಬಲಿಗರು ದೇಶದ ಮುಂದೆ ಬೆತ್ತಲಾಗಿದ್ದಾರೆ.
ದ್ವೇಷವೆಂಬ ನಂಜು ಭಾರತದ ರಾಜಕಾರಣದ ರಕ್ತದಲ್ಲಿಯೇ ಬೆರೆತುಹೋಗಿದೆ ಎಂಬ ಮಾತುಗಳು ಆಗಾಗ್ಗೆ ಕೇಳಿಬರುತ್ತವೆ. ಅದು, ಪ್ರಧಾನಿ ಮೋದಿ ಆಡಳಿತದಲ್ಲಿ ಅತ್ಯಂತ ಕೀಳುಮಟ್ಟಕ್ಕೆ ಇಳಿದಿದೆ. ಮೋದಿ ಭಕ್ತರು ಮತ್ತು ಬಿಜೆಪಿ ಬೆಂಬಲಿಗರ ವಿಷಪೂರಿತ ವಿಕೃತಿಯು ಎಲ್ಲ ಎಲ್ಲೆಗಳನ್ನು ಮೀರಿದೆ. ಅದು ಖರ್ಗೆ ಅವರ ಅನಾರೋಗ್ಯದ ವಿಚಾರದಲ್ಲಿ ಬಟಾಬಯಲಾಗಿದೆ.
ಖರ್ಗೆ ಅವರು ಅನಾರೋಗ್ಯಕ್ಕೆ ತುತ್ತಾಗಿರುವುದನ್ನು ಬಿಜೆಪಿಗರು ರಾಜಕೀಯವಾಗಿ ನೋಡುತ್ತಿದ್ದಾರೆ. ‘ಪ್ರಧಾನಿ ಮೋದಿ ಅವರನ್ನು ಕಾಂಗ್ರೆಸ್ ನಾಯಕರು ನಿರಂತರವಾಗಿ ದೂಷಿಸುತ್ತಿದ್ದರು. ಅವರಿಗೆ ನವರಾತ್ರಿಯ ದಿನಗಳಲ್ಲಿ ತಕ್ಕ ಶಾಸ್ತಿಯಾಗಿದೆ. ದುರ್ಗಿಯು ಖರ್ಗೆ ಅವರನ್ನು ತನ್ನಲ್ಲಿಗೆ ಕರೆದೊಯ್ಯುತ್ತಿದ್ದಾಳೆ’ ಎಂಬಂತ ಕೀಳು ಅಭಿರುಚಿಯಿಂದ ಪೋಸ್ಟ್ ಮಾಡುತ್ತಿದ್ದಾರೆ. ವಿಕೃತಿ ಮರೆಯುತ್ತಿದ್ದಾರೆ.
‘ಬೇಗ ಸಿಹಿ ಸುದ್ದಿ ಬರಲಿ ದುರ್ಗಾ ತಾಯಿ’, ‘ದೇವರೇ ಇವನನ್ನು ಬೇಗ ಮೇಲಕ್ಕೆ ಕರೆದೊಕೋ’, ‘ತುಂಬಾ ಸಂತೋಷದ ವಿಷಯ’, ‘ಪವಿತ್ರ ನವರಾತ್ರಿಯಲ್ಲಿ ದುಷ್ಟ ಶಕ್ತಿ ತೊಲಗಲಿ’, ‘ಮೋದಿಗೆ ಯಾರು ಶಾಪ ಹಾಕಬೇಡಿ. ಅವರಿಗೆ ಶಾಪ ಹಾಕಿದರೆ ದುಷ್ಪರಿಣಾಮ ಬೀಳುತ್ತೆ. ನಿಮ್ಮ ಲೈಫ್ ಅಲ್ಲಿ ಇದು. ಅಂತೂ ಸತ್ಯ’, ‘ನವರಾತ್ರಿಯಲ್ಲಿ ಮಹಿಷಾಸುರನ ಸಂಹಾರ ಆಗಿತ್ತು ನವರಾತ್ರಿಯಲ್ಲಿ ಕೆಟ್ಟದ್ದು ಇರಬಾರದು ಅಂತ ತಾಯಿ ಚಾಮುಂಡೇಶ್ವರಿ ಬಯಸಿದ್ದಾಳೆ ಅನ್ನಿಸುತ್ತೆ’ ಎಂದೆಲ್ಲ ಬಿಜೆಪಿ ಬೆಂಬಲಿಗರು ಮತ್ತು ಮೋದಿ ಭಕ್ತರು ತಮ್ಮಲ್ಲಿರುವ ದ್ವೇಷವನ್ನು ಹೊರಹಾಕುತ್ತಿದ್ದಾರೆ.
ಬಿಜೆಪಿಗರ ಇಂತಹ ವಿಕೃತ ಮನೋಭಾವ ಬಹಿರಂಗವಾಗಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ, 2022ರಲ್ಲಿ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಮತ್ತು ಶಾಸಕ ನಂದ್ ಕಿಶೋರ್ ಗುರ್ಜರ್ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಇಂತಹದ್ದೇ ದ್ವೇಷ ಭಾಷಣ ಮಾಡಿದ್ದರು. ಅವರಿಬ್ಬರ ವಿರುದ್ಧ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಇದೇ ರೀತಿ, ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ನಾಯಕ, ಸಚಿವ ರವ್ನೀತ್ ಸಿಂಗ್ ಬಿಟ್ಟು ಅವರು, ”ಪಂಜಾಬ್ನಲ್ಲಿ ಗಾಂಧಿ ಕುಟುಂಬದ ಕಾರಣದಿಂದ ನಮ್ಮ ಪೀಳಿಗೆ ನಾಶವಾಗಿದೆ. ಅವರು ಪಂಜಾಬ್ ಅನ್ನು ದಹಿಸಿದ್ದಾರೆ. ರಾಹುಲ್ ಗಾಂಧಿ ನಂಬರ್ 1 ಆತಂಕವಾದಿ” ಎಂದು ವಾಗ್ದಾಳಿ ನಡೆಸಿದ್ದರು.
ಈ ಲೇಖನ ಓದಿದ್ದೀರಾ?: ಮಹಿಳೆಯರ ಮೇಲೆ ಹೆಚ್ಚಿದ ದೌರ್ಜನ್ಯ, ದೇವತೆ ಸ್ಥಾನ ನೀಡುವ ದೇಶ ಭಾರತ ಎನ್ನುವುದು ಬರೀ ಭ್ರಮೆ!
ಬಿಜೆಪಿ ನಾಯಕರು, ಕಾರ್ಯಕರ್ತರು ಹಾಗೂ ಬೆಂಬಲಿಗರ ದ್ವೇಷಪೂರಿತ ಹೇಳಿಕೆಗಳು, ಕಮೆಂಟ್ಗಳು 2023 ಮತ್ತು 2024ರಲ್ಲಿ ಹೆಚ್ಚಾಗಿವೆ. 2022ರಿಂದ ಈವರೆಗೆ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ಧ 654 ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ.
ಖರ್ಗೆ ಅವರು ದಲಿತ ಸಮುದಾಯದಿಂದ ಬಂದವರು. ಕಾಂಗ್ರೆಸ್ನಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ದುಡಿದವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಲೋಕಸಭೆ/ರಾಜ್ಯಸಭೆಗಳ ವಿಪಕ್ಷ ನಾಯಕನವರೆಗೆ ಬೆಳೆದವರು. ದಲಿತ ಸಮುದಾಯಕ್ಕೆ ಶ್ರಮಿಸಿದವರು. ಅವರ ಬೆಳವಣಿಗೆಯು ಮನುವಾದಿ ಸಿದ್ಧಾಂತವನ್ನೇ ಜೀವಾಳ ಮಾಡಿಕೊಂಡಿರುವ ಬಿಜೆಪಿಗರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಆ ಕಾರಣಕ್ಕಾಗಿಯೇ ಖರ್ಗೆ ಕುಟುಂಬದ ವಿರುದ್ಧ ಬಣ್ಣ, ಜಾತಿ ಆಧಾರದ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಲೇ ಇವೆ. ಇದು ದ್ವೇಷ ಮಾತ್ರವಲ್ಲ, ಸಾಮಾಜಿಕ ನ್ಯಾಯದ ವಿರುದ್ಧದ ವಿಕೃತಿಯೂ ಆಗಿದೆ.
ಇಂತಹ ವಿಕೃತಿಗಳ ವಿರುದ್ಧ ವ್ಯವಸ್ಥೆಯು ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಆದರೆ, ವ್ಯವಸ್ಥೆಯು ಮೌನವಾಗಿದೆ. ವಿಕೃತಿಯನ್ನು ಮೌನವಾಗಿ ಆನಂದಿಸುತ್ತಿದೆ. ವ್ಯವಸ್ಥೆಯು ಎಚ್ಚೆತ್ತುಕೊಂಡು, ಸಾಮಾಜಿಕ ಜಾಲತಾಣದಲ್ಲಿ ಹರಿಯುತ್ತಿರುವ ದ್ವೇಷದ ಹೊಳೆಯನ್ನು ನಿಯಂತ್ರಿಸದಿದ್ದರೆ, ದೇಶದ ಏಕತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆಯಾಗಲಿದೆ.