ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳಿಗೆ ಒಡ್ಡಿಕೊಂಡಿರುವ ಇಬ್ಬರಿಗೆ ಬೆಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್(Ph.D.) ಪದವಿ ನೀಡಿದೆ. ಇವರು ತಮ್ಮ ಮಹಾಪ್ರಬಂಧಗಳ ಮೂಲಕ ʼಸಮಕಾಲೀನ ಮಹಿಳಾ ನಾಟಕಗಳಲ್ಲಿ ಸ್ತ್ರೀ ಸಂವೇದನೆಯ ಹೊಸ ವಿನ್ಯಾಸಗಳುʼ ಮತ್ತು ʼಮಠ ಸಂಸ್ಕೃತಿ: ಒಂದು ಸಮಾಜೋ-ರಾಜಕೀಯ ಅಧ್ಯಯನʼ(ಕನ್ನಡ ಕಡತಗಳನ್ನು ಅನುಲಕ್ಷಿಸಿ) ಎಂಬ ಕನ್ನಡ ಸಂಶೋಧನೆಗೆ ಹೊಸ ಆಯಾಮ ನೀಡಿದ್ದಾರೆ.
ʼಸಮಕಾಲೀನ ಮಹಿಳಾ ನಾಟಕಗಳಲ್ಲಿ ಸ್ತ್ರೀ ಸಂವೇದನೆಯ ಹೊಸ ವಿನ್ಯಾಸಗಳುʼ ಎಂಬ ವಿಷಯಕ್ಕೆ ರಮ್ಯಾ ಕೆ ಎಂ ಅವರು ಡಾಕ್ಟರೇಟ್ ಪದವಿ ಪಡೆದಿರುವ ಇವರು, ಕೊಡಗು ಜಿಲ್ಲೆಯ ಬಲಮುರಿ ಗ್ರಾಮದ ಕೊಟ್ಟಕೇರಿಯನ ಮೀನಾಕ್ಷಿ, ಮಾದಪ್ಪ ದಂಪತಿಯ ಪುತ್ರಿ.
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಡಾ. ವಡ್ಡೆ ಹೇಮಲತಾ ಅವರ ಮಾರ್ಗದರ್ಶನದಲ್ಲಿ ನಡೆಸಿದ ತಮ್ಮ ಮಹಾಪ್ರಬಂಧದಲ್ಲಿ ‘ಸಮಕಾಲೀನ ಮಹಿಳಾ ನಾಟಕಗಳಲ್ಲಿ ಸ್ತ್ರೀ ಸಂವೇದನೆಯ ಹೊಸ ವಿನ್ಯಾಸಗಳು’ ಎಂಬ ವಿಷಯವನ್ನು ಆಳವಾಗಿ ವಿಶ್ಲೇಷಿಸಿದ್ದಾರೆ. ಈ ಸಂಶೋಧನೆಯ ಮೂಲಕ ಆಧುನಿಕ ಕನ್ನಡ ನಾಟಕಗಳಲ್ಲಿ ಮಹಿಳಾ ಪಾತ್ರಗಳ ಹೊಸ ಆಯಾಮಗಳು ಮತ್ತು ಸಾಮಾಜಿಕ ಪರಿವರ್ತನೆಯನ್ನು ಚಿತ್ರಿಸಲಾಗಿದೆ.

ರಮ್ಯಾ ಕೆ ಎಂ ಅವರು ಪ್ರಸ್ತುತ ಬೆಂಗಳೂರಿನ ನಾಗರಭಾವಿಯಲ್ಲಿರುವ ಕೆಎಲ್‌ಇ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಇವರಿಗೆ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
ʼಮಠ ಸಂಸ್ಕೃತಿ: ಒಂದು ಸಮಾಜೋ-ರಾಜಕೀಯ ಅಧ್ಯಯನʼ(ಕನ್ನಡ ಕಡತಗಳನ್ನು ಅನುಲಕ್ಷಿಸಿ) ಎಂಬ ವಿಷಯಕ್ಕೆ ಮೋಹನ್ ಕುಮಾರ್ ಕೆ ಎಸ್ ಅವರು ಡಾಕ್ಟರೇಟ್ ಪಡೆದಿರುವ ಇವರು, ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯ ಅಣಬೇರು ಗ್ರಾಮದ ವಿಜಯ ಮತ್ತು ಬಿ. ಸಿದ್ದಪ್ಪ ದಂಪತಿಯ ಪುತ್ರ.

ವಿಜಯನಗರದ ಕನ್ನಡ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ. ಲಲಿತಾಂಬ ಎನ್ ಆರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆದಿದೆ. ಈ ಸಂಶೋಧನೆಯಲ್ಲಿ ಕರ್ನಾಟಕದ ಮಠಗಳ ಸಾಂಸ್ಕೃತಿಕ ಮಹತ್ವ, ಸಾಮಾಜಿಕ ಪಾತ್ರ ಮತ್ತು ರಾಜಕೀಯ ಪ್ರಭಾವಗಳನ್ನು ಕನ್ನಡ ದಾಖಲೆಗಳ ಆಧಾರದಲ್ಲಿ ಪರಿಶೀಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಗದಗ | ಲಿಂ. ಡಾ. ಎಂ.ಎಂ. ಕಲಬುರ್ಗಿ ಅವರಿಗೆ ಮರಣೋತ್ತರ ‘ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’
ಮೋಹನ್ ಕುಮಾರ್ ಅವರು ಬೆಂಗಳೂರಿನ ಹನುಮಂತನಗರದಲ್ಲಿರುವ ಪಿಇಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಎರಡೂ ಮಹಾಪ್ರಬಂಧಗಳು ಕನ್ನಡ ಭಾಷೆಯ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆ ನೀಡಿವೆ. ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಜಗದೀಶ್ ಪ್ರಸಾದ್ ಎಂ ಅವರು ಈ ಸಾಧನೆಯನ್ನು ಅಭಿನಂದಿಸಿ, ಯುವ ಸಂಶೋಧಕರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುವುದಾಗಿ ತಿಳಿಸಿದ್ದಾರೆ.