ತಮ್ಮಿಂದಲೇ ಆದ ಅನ್ಯಾಯವನ್ನು ಸರಿಪಡಿಸುವ ಇಚ್ಛಾಶಕ್ತಿ ರಾಜ್ಯ ಸರ್ಕಾರಕ್ಕೆ ಇದ್ದಿದ್ದರೆ ದಿಕ್ಕಿಲ್ಲದ ಅಲೆಮಾರಿಗಳು ಹಣ ಖರ್ಚು ಮಾಡಿಕೊಂಡು ದೆಹಲಿ ಚಲೋ ಮಾಡುವುದನ್ನು ತಪ್ಪಿಸಬಹುದಿತ್ತು. ಈಗ ಅವರು ದೆಹಲಿಯ ದಣಿಗಳಿಂದ ನ್ಯಾಯದ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ನ ನಾಯಕರಿಗೆ ಈ ವಿಚಾರ ಗೊತ್ತಿಲ್ಲವೆಂದಲ್ಲ. ಎಐಸಿಸಿ ಅಧ್ಯಕ್ಷರೇ ಕರ್ನಾಟಕದವರು. ಹಾಗಿರುವಾಗ ರಾಹುಲ್ ಗಾಂಧಿಯವರು ಅಲೆಮಾರಿಗಳಿಗೆ ಯಾವ ರೀತಿಯಲ್ಲಿ ನೆರವಾಗುವರು ನೋಡಬೇಕಿದೆ.
ಕರ್ನಾಟಕ ಸರ್ಕಾರ ಘೋಷಣೆ ಮಾಡಿರುವ ಒಳ ಮೀಸಲಾತಿ ಹಂಚಿಕೆಯಲ್ಲಿ ಆಗಿರುವ ಘೋರ ಅನ್ಯಾಯವನ್ನು ವಿರೋಧಿಸಿ ತಿಂಗಳ ಕಾಲ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಲೆಮಾರಿ ಸಮುದಾಯಗಳು ನಡೆಸುತ್ತಿದ್ದ ಪ್ರತಿಭಟನೆ ದೆಹಲಿಯ ಜಂತರ್ ಮಂತರ್‌ಗೆ ಶಿಫ್ಟ್ ಆಗಿದೆ. ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶ ಮಾಡಿ ಆಗಿರುವ ತಪ್ಪನ್ನು ಸರಿಪಡಿಸಬೇಕು ಎಂದು ಒತ್ತಾಯಿಸಲು ಕರ್ನಾಟಕದಿಂದ ನೂರಾರು ಅಲೆಮಾರಿಗಳು- ಕಲಾವಿದರು ಅ. 2ರಂದು ದೆಹಲಿಯ ಜಂತರ್ ಮಂತರಿನಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಮೊದಲ ದಿನವೇ ಕಾಂಗ್ರೆಸ್ ಕಚೇರಿಗೆ ತೆರಳಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ದತ್ತ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ರಾಹುಲ್ ಗಾಂಧಿಯವರು ವಿದೇಶ ಪ್ರವಾಸದಲ್ಲಿದ್ದು ಅವರು ಬಂದ ನಂತರವಷ್ಟೇ ಖಚಿತ ತೀರ್ಮಾನ ಮಾಡುವ ಭರವಸೆ ನೀಡಿದ್ದಾರೆ. ಅವರು ಇನ್ನೇನು ಹೇಳಲು ಸಾಧ್ಯ?
ರಾಜ್ಯ ಸರ್ಕಾರ ಒಳಮೀಸಲಾತಿಯನ್ನು ತಕ್ಷಣ ಜಾರಿ ಮಾಡಬೇಕು ಎಂದು ರಾಜ್ಯದಾದ್ಯಂತ ಹೊಲೆಯ- ಮಾದಿಗ ಸಮುದಾಯದವರು ನಡೆಸಿದ ಹೋರಾಟ ಐತಿಹಾಸಿಕ. ಬೆಂಗಳೂರಿನ ಫ್ರೀಡಂಪಾರ್ಕ್‌ನ ಒಳಮೀಸಲಾತಿ ಹೋರಾಟದ ಪೆಂಡಾಲ್ ಅಡಿಯಲ್ಲಿಯೇ, ಒಳಮೀಸಲಾತಿ ಘೋಷಣೆಯಾದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಮಾಡಿದ ಮುಖಂಡರು ಮರುದಿನವೇ ಅಲೆಮಾರಿಗಳಿಗಾದ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಧರಣಿ ಕೂತಿದ್ದರು. ಸರಿಪಡಿಸುವ ಇಚ್ಛಾಶಕ್ತಿ ರಾಜ್ಯ ಸರ್ಕಾರಕ್ಕೆ ಇದ್ದಿದ್ದರೆ ದಿಕ್ಕಿಲ್ಲದ ಅಲೆಮಾರಿಗಳು ಹಣ ಖರ್ಚು ಮಾಡಿಕೊಂಡು ದೆಹಲಿ ಚಲೋ ಮಾಡುವುದನ್ನು ತಪ್ಪಿಸಬಹುದಿತ್ತು. ಈಗ ಅವರು ದೆಹಲಿಯ ‘ಧಣಿ’ಗಳಿಂದ ನ್ಯಾಯದ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ನ ದೆಹಲಿಯ ನಾಯಕರಿಗೆ ಈ ವಿಚಾರ ಗೊತ್ತಿಲ್ಲವೆಂದಲ್ಲ. ಎಐಸಿಸಿ ಅಧ್ಯಕ್ಷರೇ ಕರ್ನಾಟಕದವರು. ದಮನಿತ ಸಮುದಾಯಗಳ ಕುರಿತು ಕಳಕಳಿ ಹೊಂದಿರುವ ರಾಹುಲ್ ಗಾಂಧಿಯವರು ಅಲೆಮಾರಿಗಳಿಗೆ ಯಾವ ರೀತಿಯಲ್ಲಿ ನೆರವಾಗುವರು ಕಾದು ನೋಡಬೇಕಿದೆ.
ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶ ಮಾಡಿ ಒಳಮೀಸಲಾತಿ ಹಂಚಿಕೆಯಲ್ಲಿ ಆಗಿರುವ ಸಮಸ್ಯೆ ಬಗೆಹರಿಸುವ ತನಕ ದೆಹಲಿಯಲ್ಲೇ ಉಳಿಯುತ್ತೇವೆ. ಪರಿಹಾರ ಪಡೆದೇ ಹಿಂತಿರುಗುತ್ತೇವೆ ಎಂಬ ದೃಢ ನಿರ್ಧಾರವನ್ನು ಅಲೆಮಾರಿಗಳು ಮಾಡಿದ್ದಾರೆ. ಅದು ಸಾಧ್ಯವಾಗದಿದ್ದರೆ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದರೆ, ಒಳಮೀಸಲಾತಿ ಜಾರಿಯಾಗುವುದು ಇನ್ನಷ್ಟು ವಿಳಂಬವಾಗಲಿದೆ. ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಪಾಲಿಸದ ಕಾರಣ ಒಳಮೀಸಲಾತಿ ಜಾರಿಗೆ ತೊಡಕಾಗಬಹುದು. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎಐಸಿಸಿ) ಅಧ್ಯಕ್ಷರೇ ಕರ್ನಾಟಕದ ಅದರಲ್ಲೂ ಬಲಗೈ ಸಮುದಾಯದ ದೊಡ್ಡ ನಾಯಕ ಮಲ್ಲಿಕಾರ್ಜುನ ಖರ್ಗೆ, ಅವರಿಗೆ ಒಳಮೀಸಲಾತಿಯಲ್ಲಿ ಯಾರಿಗೂ ಅನ್ಯಾಯವಾಗಬಾರದು ಎಂಬ ಧೋರಣೆ ಇದ್ದಿದ್ದರೆ, ಅಲೆಮಾರಿಗಳಿಗೂ ಒಂದು ಪರ್ಸೆಂಟ್ ಮೀಸಲಾತಿ ಕೊಡುವ ಪರವಾಗಿ ನಿಲ್ಲಬೇಕಿತ್ತು. ಅವರಿದ್ದೂ ಇಂತಹ ತಾರತಮ್ಯ ನಡೆದಿರುವುದು ಕಲ್ಪನಾತೀತ. ಮೂವತ್ತು ವರ್ಷಗಳ ನಿರಂತರ ಹೋರಾಟದ ಫಲವಾಗಿ ಸಿಕ್ಕಿದ ಒಳಮೀಸಲಾತಿ ಜಾರಿಯಾಗುವಾಗ ಹೀಗೆ ಗೊಂದಲ, ಅಸಮಾನತೆಯ ಗೂಡಾಗಿ ಪರಿಣಮಿಸಲು ಬಿಡಬಾರದಿತ್ತು. ಆ ಜವಾಬ್ದಾರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಇಬ್ಬರೂ ನ್ಯಾಯವಾಗಿ ನಿರ್ವಹಿಸಿಲ್ಲವೆಂದು ತೋರುತ್ತಿದೆ. ಈಗಲಾದರೂ ಆದ ತಪ್ಪುಗಳನ್ನು ಸರಿಪಡಿಸಿಕೊಂಡು ಅಲೆಮಾರಿ ಸಮುದಾಯಗಳಿಗೆ ಸಿಗಬೇಕಿರುವ ಪಾಲನ್ನು ಅವರಿಗೆ ನಿಜ ಅರ್ಥದಲ್ಲಿ ದಕ್ಕುವಂತೆ ಬಿಟ್ಟುಕೊಡಬೇಕು. ಶೋಷಿತರ ಪೈಕಿ ಅತಿ ಶೋಷಿತರೆನಿಸಿದವರು ಅಲೆಮಾರಿಗಳು. ಸಮಾಜ ಸಾರಾಸಗಟಾಗಿ ಹೊರಕ್ಕೆ ದಬ್ಬಿರುವ ತಬ್ಬಲಿಗಳು. ರಾಜಕೀಯವಾಗಿಯೂ ಅವಕಾಶವನ್ನು ಪಡೆದಿರುವ ಬಲಗೈ, ಎಡಗೈ ಸಮುದಾಯಗಳೂ ಅಲೆಮಾರಿಗಳ ಕುರಿತು ಸಹಾನೂಭೂತಿ ತೋರಬೇಕಿದೆ. ಅಲೆಮಾರಿಗಳು ಯಾಕೆ ಅಲೆಮಾರಿಗಳಾದರು, ಸ್ವಾತಂತ್ರ್ಯ ಬಂದು 78ವರ್ಷಗಳು ಸವೆದರೂ ಅವರಿಗೊಂದು ನೆಲೆ ಕಲ್ಪಿಸಲು ಸರ್ಕಾರಗಳು ಯಾಕೆ ವಿಫಲಗೊಂಡವು ಎಂದು ಆತ್ಮಮಂಥನ ಮಾಡಿಕೊಳ್ಳಲು ಇದು ಸಕಾಲ.
2024ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಮೀಸಲಾತಿ ವರ್ಗೀಕರಣದ ಹಕ್ಕಿದೆ ಎಂಬ ತೀರ್ಪು ನೀಡಿದ ನಂತರ ಕರ್ನಾಟಕದಲ್ಲಿ ಒಳಮೀಸಲಾತಿಗಾಗಿ ಮೂರು ದಶಕಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ವೇಗ ಸಿಕ್ಕಿತ್ತು. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿತ್ತು. ಒಳ ಮೀಸಲಾತಿ ಹಂಚಿಕೆಗೆ ಇಚ್ಛಾಶಕ್ತಿ ಪ್ರದರ್ಶಿಸಿದ ಸಿದ್ದರಾಮಯ್ಯನವರು ನಿವೃತ್ತ ನ್ಯಾ. ನಾಗಮೋಹನ್ ದಾಸ್ ಆಯೋಗದಿಂದ ಶೈಕ್ಷಣಿಕ ಆರ್ಥಿಕ ಸ್ಥಿತಿಗತಿ ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚಿಸಿತ್ತು. ಒಳಮೀಸಲಾತಿ ಸಮೀಕ್ಷೆ ಬಹಳ ಗಂಭೀರವಾಗಿ ನಡೆದಿತ್ತು. ನಾಗಮೋಹನ್‌ದಾಸ್ ಸಮಿತಿ ಪ್ರವರ್ಗ 1ರಲ್ಲಿ ಸೂಕ್ಷ್ಮ ಜಾತಿ ಎಂದು ಅಲೆಮಾರಿಗಳನ್ನು ಗುರುತಿಸಿ 1% ಮೀಸಲಾತಿ ಹಂಚಿಕೆ ಮಾಡಬೇಕು ಎಂದು ಶಿಫಾರಸು ಮಾಡಿತ್ತು. ಆದರೆ, ಕಾಂಗ್ರೆಸ್‌ನಲ್ಲಿರುವ ದಲಿತ ಮುಖಂಡರ ಒತ್ತಡಕ್ಕೆ ಮಣಿದ ಸಿದ್ದರಾಮಯ್ಯ ಅವರು ನಾಗಮೋಹನ್ ದಾಸ್ ಸಮಿತಿಯ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿ ಮೂರೇ ಪ್ರವರ್ಗ ಮಾಡಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿಯೂ ಮುಂದಿರುವ ಭೋವಿ, ಲಂಬಾಣಿ ಮುಂತಾದ ಸಮುದಾಯಗಳ ಜೊತೆಗೆ ಪ್ರವರ್ಗ ಮೂರಕ್ಕೆ ಅಲೆಮಾರಿಗಳನ್ನೂ ಸೇರಿಸಿರುವುದು ಅಕ್ಷಮ್ಯ ಅಪರಾಧ. ನಾಗಮೋಹನದಾಸ್ ಅಲೆಮಾರಿಗಳಿಗೆ ಶೇ 1 ಮೀಸಲಾತಿ ನೀಡಿರುವುದು ಅವರ ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಅಧ್ಯಯನ ಮಾಡಿಯೇ ಅಲ್ಲವೇ? ಹಾಗಿದ್ದರೆ ಸಿದ್ದರಾಮಯ್ಯನವರು ಹೇಳುವ ಸಾಮಾಜಿಕ ನ್ಯಾಯ ಅಲೆಮಾರಿಗಳಿಗೆ ಯಾಕಿಲ್ಲ?
ಸ್ಪೃಶ್ಯ ಪರಿಶಿಷ್ಟ ಜಾತಿಗಳ ಜೊತೆಗೆ ಅಲೆಮಾರಿ ಸಮುದಾಯವನ್ನೂ ಸೇರಿಸಿ ಶೇ 5 ಮೀಸಲಾತಿ ಹಂಚಿಕೆ ಮಾಡಿದೆ. ಇದು ಅಲೆಮಾರಿ ಸಮುದಾಯಗಳಿಗೆ ಬಗೆದಿರುವ ಘೋರ ಅನ್ಯಾಯ. ಅಲೆಮಾರಿಗಳಿಗೆ ಪ್ರತ್ಯೇಕವಾಗಿ ಶೇ 1 ಹಂಚಿಕೆ ಮಾಡಬೇಕು ಎಂದು ನಾಗಮೋಹನ ದಾಸ್ ಆಯೋಗ ಶಿಫಾರಸು ಮಾಡಿದ್ದರೂ ಅದನ್ನು ತಿರಸ್ಕರಿಸಿ ಸಿದ್ದರಾಮಯ್ಯ ಸರ್ಕಾರ ಎಡವಟ್ಟು ಮಾಡಿಕೊಂಡಿದೆ. ಯಾರದ್ದೋ ಒತ್ತಡಕ್ಕೆ ಮಣಿದು ಎಸಗಿರುವ ಅನ್ಯಾಯವನ್ನು ಸರಿಪಡಿಸಿ ಅಲೆಮಾರಿಗಳನ್ನು ಮುಖ್ಯವಾಹಿನಿಗೆ ತಂದು “ಇವನಾರವ ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆಣಿಸಿರಯ್ಯ” ಎಂಬ ಬಸವಣ್ಣನ ವಚನವನ್ನು ಸಾಕಾರಗೊಳಿಸಬೇಕಿದೆ. ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ಸಿದ್ದರಾಮಯ್ಯನವರು ಅಲೆಮಾರಿಗಳಿಗಾಗಿ ಇಷ್ಟು ಮಾಡದಿದ್ದರೆ ಇತಿಹಾಸ ಕ್ಷಮಿಸದು.
